ಮಂಡ್ಯ

ಮಗಳನ್ನೇ ಅತ್ಯಾಚಾರ ಮಾಡಿದ ತಂದೆ

Published On :

ಕ.ಪ್ರ ವಾರ್ತೆ ಮಂಡ್ಯ  ಮಾ.21
ತಂದೆಯೇ ಮಗಳ ಮೇಲೆ ಅತ್ಯಾಚಾರ ನಡೆಸಿ, ಆಕೆ ಏಳು ತಿಂಗಳು ಗರ್ಭಿಣಿಯಾಗಲು ಕಾರಣವಾದ ಅಮಾನವೀಯ ಘಟನೆ ನಾಗಮಂಗಲ ತಾಲೂಕಿನ ಮಾದಿಹಳ್ಳಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.  
ತನ್ನ 13 ವರ್ಷದ ಮಗಳ ಮೇಲೆ ಅತ್ಯಾಚಾರ ನಡೆಸಿದ ತಂದೆ ಪುಟ್ಟರಾಜು (48) ವಿರುದ್ಧ ದೂರ ದಾಖಲು ಮಾಡಿದ ಆ ಬಾಲಕಿ ಈಗ ಆದಿ ಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಪುಟ್ಟರಾಜು ಜೈಲು ಸೇರಿದ್ದಾನೆ. ಬಿಂಡಗನವಿಲೆ ಹೋಬಳಿ ಮಾದಿಹಳ್ಳಿ ಗ್ರಾಮದ ನಿವಾಸಿ ಪುಟ್ಟರಾಜು ಗಾರೆ ಕೆಲಸಗಾರ. ಈತನಿಗೆ ಇಬ್ಬರು ಹೆಂಡತಿಯರು. ಮೊದಲನೇ ಹೆಂಡತಿಗೆ ಇಬ್ಬರು ಮಕ್ಕಳಿದ್ದಾರೆ. ಅವರೆಲ್ಲರೂ ಪುಟ್ಟರಾಜು ಜತೆ ಬಾಳಲು ಸಾಧ್ಯವಾಗದೇ ಬಹಳ ವರ್ಷಗಳ ಹಿಂದೆಯೇ ಗ್ರಾಮ ಬಿಟ್ಟು ಬೇರೆ ಕಡೆ ವಾಸವಾಗಿದ್ದಾರೆ.  ನಂತರ ಪುಟ್ಟರಾಜು ಜಯಲಕ್ಷ್ಮಮ್ಮ ಎಂಬಾಕೆಯನ್ನು ಮದುವೆ ಮಾಡಿಕೊಂಡು ಬಂದ. ಐವರು ಹೆಣ್ಣು, ಒಂದು ಗಂಡು ಮಗುವಿನ ತಂದೆಯೂ ಆದ. ನಿತ್ಯವೂ ಕುಡಿದು ಬಂದು ಮಕ್ಕಳಿಗೆ, ಹೆಂಡತಿಗೆ ಹೊಡೆದು, ಬಡಿದು ಪುಟ್ಟರಾಜು ಜಗಳವಾಡುತ್ತಿದ್ದ. ಆದರೂ ಎಲ್ಲವನ್ನೂ ಸಹಿಸಿಕೊಂಡು ಹೆಂಡತಿ, ಮಕ್ಕಳು ಆತನೊಂದಿಗೆ ಬಾಳುತ್ತಿದ್ದಾರೆ.
ಈ ನಡುವೆ ತನ್ನ 13 ವರ್ಷದ (ಮೂರನೇ ಮಗಳು) ಮಗಳ ಮೇಲೆ ಒಂದು ವರ್ಷದ ಹಿಂದೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಅತ್ಯಾಚಾರ ನಡೆಸಿ, ಅವಕಾಶ ಸಿಕ್ಕಾಗಲೆಲ್ಲಾ ಆಕೆಯ ಮೇಲೆ ಬಲಾತ್ಕರಿಸಿದ್ದಾನೆ. ಬಾಲಕಿ ಗರ್ಭಿಣಿಯಾದ ನಂತರ ಶಾಲೆಯನ್ನು ಬಿಡಿಸಲಾಗಿದೆ.
ಯಾರಿಗೂ ಹೇಳದಂತೆ ಒತ್ತಾಯ: ತಾಯಿ ಮತ್ತು ಅಜ್ಜಿಗೆ ಈ ಸಂಗತಿ ಗೊತ್ತಾದ ನಂತರ ಈ ವಿಷಯವನ್ನು ಯಾರಿಗೂ ಹೇಳಬೇಡ. ಒಂದು ವೇಳೆ ಹೇಳುವುದಾದರೆ ತನ್ನ ಈ ಸ್ಥಿತಿಗೆ ತಂದೆಯಲ್ಲ, ಬೇರೆಯವರು ಕಾರಣ ಎಂದು ಹೇಳುವಂತೆ ಪುಸಲಾಯಿಸಿದ್ದಾರೆ.
ಮಗಳು ಹಠ ಮಾಡುತ್ತಿರುವ ಸಂಗತಿ ತಿಳಿದ ತಂದೆ, ನನ್ನ ಹೆಸರು ಹೇಳಿದರೆ ಮನೆಯವರನ್ನೆಲ್ಲಾ ಪೆಟ್ರೋಲ್ ಹಾಕಿ ಸುಟ್ಟು ಬಿಡುತ್ತೇನೆ ಎಂಬ ಬೆದರಿಕೆಯನ್ನೂ ಹಾಕಿದ್ದಾನೆ. ಈ ವೇಳೆಗೆ ಬಾಲಕಿಗೆ 7 ತಿಂಗಳು ತುಂಬಿದ್ದರಿಂದ ವಿಷಯವನ್ನು ಗ್ರಾಮದಲ್ಲಿ ಮುಚ್ಚಿಡುವುದು ಕಷ್ಟವಾಗಿದೆ. ನಂತರ ಒಂದೊಂದೇ ವಿಷಯಗಳು ಬೆಳಕಿಗೆ ಬಂದಿವೆ. ಮಾರ್ಚ್ 15ರಂದು ಬಿಂಡಿಗನವಿಲೆ ಪೊಲೀಸ್ ಠಾಣೆಗೆ ತೆರಳಿ ತಂದೆಯ ವಿರುದ್ದವೇ ಅತ್ಯಾಚಾರ, ಕೊಲೆ ಬೆದರಿಕೆ ದೂರು ನೀಡಿದ್ದಾಳೆ. ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದ ನಂತರ ತಂದೆ ಪುಟ್ಟರಾಜುನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಬಾಲಕಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಮುಂದಿನ ತನಿಖೆ ನಡೆಸಲಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.