ಮೈಸೂರು

ಅಪೌಷ್ಟಿಕ ತಡೆಗೆ ಕ್ಷೀರಭಾಗ್ಯ ಯೋಜನೆ

Published On :

ಕ.ಪ್ರ.ವಾರ್ತೆ ಟಿ.ನರಸೀಪುರ ಆ. 1
ಮಕ್ಕಳಲ್ಲಿನ ಅಪೌಷ್ಟಿಕತೆ ತಡೆಗಟ್ಟಿ, ವಿದ್ಯೆಯ ಜೊತೆಗೆ ಆರೋಗ್ಯವಂತರನ್ನಾಗಿ ಮಾಡುವ ಸದುದ್ದೇಶದಿಂದ ಶಾಲೆಗಳಲ್ಲಿ ಕ್ಷೀರಭಾಗ್ಯ ಯೋಜನೆ ಜಾರಿಗೆ ತಂದಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಿ. ವೆಂಕಟೇಶ್ ಹೇಳಿದರು.
ಇಲ್ಲಿನ ಹಳೇ ಸಂತೇಮಾಳದಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆಯಲ್ಲಿ ಗುರುವಾರ ಕ್ಷೀರಭಾಗ್ಯ ಯೋಜನೆಯ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಹಾಲು ವಿತರಿಸಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಲ್ಲಿ ಅಪೌಷ್ಟಿಕತೆಯಿಂದ ಬಳಲುವುದು ಪತ್ತೆಯಾದ ಹಿನ್ನೆಲೆ, ಕಬ್ಬಿಣಾಂಶದ ಮಾತ್ರೆ ನೀಡಿದ ಸರ್ಕಾರ, ವಾರದಲ್ಲಿ ಮೂರು ದಿನ ಹಾಲನ್ನು ವಿತರಿಸಲಾಗುತ್ತದೆ ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮರಿಸ್ವಾಮಿ ಮಾತನಾಡಿ, ತಾಲೂಕಿನಲ್ಲಿ ಅನುದಾನಿತ ಹಾಗೂ ಸರ್ಕಾರಿ ಶಾಲೆಗಳು ಸೇರಿ 283 ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 29,871 ವಿದ್ಯಾರ್ಥಿಗಳು ಕ್ಷೀರಭಾಗ್ಯ ಯೋಜನೆ ಪಡೆದುಕೊಳ್ಳಲಿದ್ದಾರೆ. ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಹಾಲನ್ನು ಸೋಮವಾರ, ಬುಧವಾರ ಹಾಗೂ ಶುಕ್ರವಾರ ನೀಡಲಾಗುತ್ತದೆ. ಬಿಸಿಯೂಟ ನಿರ್ವಹಣೆ ಜೊತೆಗೆ ಹಾಲಿನ ವಿತರಣೆ ಹೊರೆ ಎಂದು ಶಿಕ್ಷಕರ ಭಾವಿಸಬಾರದು. ರಾಜ್ಯ ಸರ್ಕಾರದ ಯೋಜನೆಗಳನ್ನು ಶಾಲಾ ಮಕ್ಕಳಿಗೆ ಕಾಲ ಕಾಲಕ್ಕೆ ತಲುಪಿಸಬೇಕು ಎಂದು ಹೇಳಿದರು.
ತಹಸೀಲ್ದಾರ್ ಎಚ್.ಎಸ್. ಅರುಣಪ್ರಭ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಟಿ.ಆರ್. ಜಯರಾಂ, ಪ್ರೌಢಶಾಲೆ ಉಪಪ್ರಾಂಶುಪಾಲ ನಟರಾಜು, ಶಿಕ್ಷಣ ಸಂಯೋಜಕ ಶಂಕರ್, ಸಿಆರ್‌ಪಿ ಕೆ.ಪಿ. ಮಹದೇವಸ್ವಾಮಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹದೇವಸ್ವಾಮಿ, ಸದಸ್ಯ ಸಿದ್ದರಾಮೇಗೌಡ, ಶಿಕ್ಷಕರಾದ ಪ್ರೇಮಾ, ಶಾರದ, ಮರೀಸಾ ಸಿಕ್ವಿರಾ, ವಿಜಯಲಕ್ಷ್ಮೀ, ರವೀಶ್, ಸುನೀಲ್ ಜಸ್ಟಿನ್ ಇದ್ದರು.

ಯೋಜನೆ ಸಮರ್ಪಕ ಜಾರಿಯಾಗಲಿ
ಕ.ಪ್ರ.ವಾರ್ತೆ ಭೇರ್ಯ ಆ. 1
ಸರ್ಕಾರ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಕ್ಷೀರ ಭಾಗ್ಯ ಯೋಜನೆಯು ಗುರುವಾರ ಭೇರ್ಯ ವ್ಯಾಪ್ತಿಯ ವಿವಿಧ ಶಾಲೆ ಮತ್ತು 31 ಅಂಗನವಾಡಿ ಕೇಂದ್ರಗಳಲ್ಲಿ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಜಗದೀಶ್ ಮತ್ತು ಮುಖ್ಯ ಶಿಕ್ಷಕ ನಿಂಗಪ್ಪ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ಹಾಲು ನೀಡುವ ಮುಖಾಂತರ ಕ್ಷೀರ ಯೋಜನೆಗೆ ಚಾಲನೆ ನೀಡಿದರು. ದೈಹಿಕ ಶಿಕ್ಷಣ ಶಿಕ್ಷಕ ಶೇಷಾದ್ರಿಗೌಡ, ಜ್ಞಾನಾನಂದ್ ಇದ್ದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಗಿಡ್ಡುಕುಮಾರ್ ಮಕ್ಕಳಿಗೆ ಹಾಲು ವಿತರಿಸಿ ಮಾತನಾಡಿ, ಸರ್ಕಾರದ ಈ ಯೋಜನೆಯು ಸಮರ್ಪಕವಾಗಿ ಬಳಕೆಯಾಗಲಿ, ಯಾವುದೇ ಲೋಪವಾಗದ ರೀತಿಯಲ್ಲಿ ಶಿಕ್ಷಕರು ಈ ಯೋಜನೆ ಬಗ್ಗೆ ನಿಗಾ ವಹಿಸುಂತೆ ಸೂಚಿಸಿದರು. ಮುಖ್ಯ ಶಿಕ್ಷಕ ವೆಂಕಟೇಶ್, ಶಿಕ್ಷಕಿಯರಾದ ಸುಮಾಮಣಿ, ವನಿತಾ, ಮಂಜುಳಾಂಬ, ಗೋಪಿಕಾಂಬ, ಪವಿತ್ರ ಮತ್ತು ಗ್ರಾಪಂ ಸದಸ್ಯ ವಕೀಲ ಸತೀಶ್ ಇದ್ದರು.
ಅಂಗನವಾಡಿ ಕೇಂದ್ರಗಳು: ಭೇರ್ಯ ಗ್ರಾಮದ ನಾಲ್ಕು ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಲಘು ಉಪಹಾರಕ್ಕೂ ಮುಂಚಿತವಾಗಿ ಹಾಲನ್ನು ಅಂಗನವಾಡಿ ಕಾರ್ಯಕರ್ತೆಯರಾದ ರಾಧಮ್ಮ, ಕುಮಾರಿ, ಪವಿತ್ರ, ಹಸೀನಾಬೇಗಂ ನೀಡಿದರು.
ಕೆಂಚನಹಳ್ಳಿ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಅಂಗನವಾಡಿ ಕಾರ್ಯಕರ್ತೆ ಚಂದ್ರಮ್ಮ ಮಕ್ಕಳಿಗೆ ಹಾಲನ್ನು ನೀಡಿದರು. ಮುಖ್ಯಶಿಕ್ಷಕ ಶಿವರಾಮೇಗೌಡ, ಶಿಕ್ಷಕ ಚಂದ್ರಕುಮಾರ್ ಇದ್ದರು.
ಬಟಿಗನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಅಂಗನಾಡಿ ಕಾರ್ಯಕರ್ತೆ ಕುಮಾರಿ, ಕ್ಷೀರ ಯೋಜನೆಗೆ ಚಾಲನೆ ನೀಡಿದರು. ಹರಂಬಳ್ಳಿಕೊಪ್ಪಲು ಗ್ರಾಮದಲ್ಲಿ ಅಂಗನವಾಡಿ ಕಾರ್ಯಕರ್ತೆ ರೇಣುಕಾ ತಮ್ಮ ಶಾಲೆಯ ಶಿಕ್ಷಕರ ಸಮ್ಮುಖದಲ್ಲಿ ಕ್ಷೀರ ಯೋಜನೆಗೆ ವಿದ್ಯುಕ್ತವಾಗಿ ಚಾಲನೆ ನೀಡಿದರು.

ಪಂಚವಳ್ಳಿಯಲ್ಲಿ ಚಾಲನೆ
ಪಿರಿಯಾಪಟ್ಟಣ: ಸರ್ಕಾರಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಶಿಕ್ಷಕರ ಹಾಗೂ ಪೋಷಕರ ಪಾತ್ರ ಹಿರಿದು ಎಂದು ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ ಗೀತಾ ಹೇಳಿದರು.  ತಾಲೂಕಿನ ಪಂಚವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಹಾಲು ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರ ಬಿಸಿಯೂಟದ ಜೊತೆಗೆ ವಾರಕ್ಕೆ 3 ಬಾರಿ ಒಂದರಿಂದ 10ನೇ ತರಗತಿವರೆಗಿನ ಮಕ್ಕಳಿಗೆ ಹಾಲು ವಿತರಣಾ ಕಾರ್ಯಕ್ರಮ ಪ್ರಾರಂಭಿಸಿದ್ದು, ಮಕ್ಕಳು ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದರು. ಸಂಪನ್ಮೂಲ ವ್ಯಕ್ತಿ ಎಸ್. ರಮೇಶ್ ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ರಮೇಶ್, ಶಿಕ್ಷಕರಾದ ಎಚ್.ಬಿ. ರವಿಕುಮಾರ್, ಸುರೇಶ್, ಶೋಭರಾಣಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.