ಮೈಸೂರು

ನೆರೆ ಹಾನಿ ಪರಿಹಾರ ಶೀಘ್ರ ವಿತರಿಸಿ

Published On :

ಕ.ಪ್ರ.ವಾರ್ತೆ ಮೈಸೂರು ಆ. 3
ಜಿಲ್ಲೆಯಲ್ಲಿ ಪ್ರವಾಹ ಹಾಗೂ ಪ್ರಕೃತಿ ವಿಕೋಪದಿಂದ ಹಾನಿಗೊಳಗಾದವರಿಗೆ ನಿಯಮಾನುಸಾರ ನೀಡಬೇಕಾದ ಪರಿಹಾರವನ್ನು ಮೂರು ದಿನಗಳ ಒಳಗಾಗಿ ವಿತರಿಸಬೇಕೆಂದು ಜಿಲ್ಲಾ ಉಸ್ತುವಾರಿ ಹಾಗೂ ಇಂಧನ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ಅಮಿತಾಪ್ರಸಾದ್ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಸರ್ಕಾರ ಇತ್ತೀಚಿಗೆ ಜಾರಿಗೊಳಿಸಿದ ಅನ್ನಭಾಗ್ಯ, ಕ್ಷೀರಭಾಗ್ಯ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಪ್ರಗತಿ ಪರಿಶೀಲಿಸಿ, ಪ್ರವಾಹ ಹಾಗೂ ಮಳೆ- ಬೆಳೆ ಪರಿಸ್ಥಿತಿಯ ಮಾಹಿತಿ ಪಡೆದುಕೊಂಡರು. ಜಿಲ್ಲೆಯಲ್ಲಿ ಇತ್ತೀಚಿನ ಅತಿವೃಷ್ಟಿಯಿಂದ 4 ಪಕ್ಕಾ ಮನೆಗಳು ಪೂರ್ಣ ಹಾನಿಗೀಡಾಗಿದ್ದು, 3.35 ಲಕ್ಷ ಹಾನಿ ಅಂದಾಜಿಸಲಾಗಿದೆ. 494 ಮನೆಗಳಿಗೆ ಅಲ್ಪ ಪ್ರಮಾಣದ ಹಾನಿಯಾಗಿದ್ದು, 68.54 ಲಕ್ಷ ಹಾನಿ ಅಂದಾಜಿಸಿದ್ದು, ಒಟ್ಟಾರೆ ಹಾನಿ ಪ್ರಮಾಣ 71.89 ಲಕ್ಷಗಳಾಗಿವೆ ಎಂದು ಜಿಲ್ಲಾಧಿಕಾರಿ ಸಿ. ಶಿಖಾ ಮಾಹಿತಿ ನೀಡಿದರು.
ಸಾರ್ವಜನಿಕ ಆಸ್ತಿಗೆ ಸಂಬಂಧಿಸಿ ಮಳೆಯಿಂದಾಗಿ ಪಿರಿಯಾಪಟ್ಟಣ ತಾಲೂಕಿನಲ್ಲಿ ಒಂದು ಕೆರೆ ಹಾನಿಗೀಡಾಗಿದ್ದು, 6.50 ಲಕ್ಷ ಹಾನಿ ಅಂದಾಜು ಮಾಡಲಾಗಿದೆ. ವಿದ್ಯುತ್ ಸಲಕರಣೆಗಳಿಗೆ ಹೆಚ್ಚಿನ ಹಾನಿಯಾಗಿದ್ದು, 167 ಪ್ರಕರಣಗಳಲ್ಲಿ ಒಟ್ಟಾರೆ 18.75 ಲಕ್ಷ ಹಾನಿಯಾಗಿದೆ.
9 ಕಿಮೀ ರಸ್ತೆ ಹಾಳಾಗಿದ್ದು, 30 ಲಕ್ಷ ಹಾನಿಯಾಗಿದೆ. 17 ಸೇತುವೆ ಹಾನಿಗೀಡಾಗಿದ್ದು, 9.50 ಲಕ್ಷ ನಷ್ಟ ಸಂಭವಿಸಿದೆ. 73 ಖಾಸಗಿ ಕಟ್ಟಡಗಳ ಹಾನಿ ಪ್ರಮಾಣ 35.50 ಲಕ್ಷ, ನೀರು ಪೂರೈಕೆಯ ವ್ಯವಸ್ಥೆಯ 26 ಪ್ರಕರಣಗಳಲ್ಲಿ 6.60 ಲಕ್ಷ ಎಲೆಕ್ಟ್ರಿಕಲ್ ಹಾನಿ 14 ಲಕ್ಷ ಹೀಗೆ ಒಟ್ಟಾರೆ 96.50 ಲಕ್ಷ ಹಾನಿ ಏಪ್ರಿಲ್ ಒಂದರಿಂದ ಸಂಭವಿಸಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಏಪ್ರಿಲ್‌ನಿಂದ ಹುಣಸೂರು ತಾಲೂಕಿನಲ್ಲಿ ಒಬ್ಬರು ಹಾಗೂ ಪಿರಿಯಾಪಟ್ಟಣ ತಾಲೂಕಿನಲ್ಲಿ ಒಬ್ಬರು ಮಳೆ ಸಂಬಂಧ ಸಾವಿಗೀಡಾಗಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಮೃತರ ಸಂಬಂಧಿಕರಿಗೆ ತಲಾ 1.5 ಲಕ್ಷ ಪರಿಹಾರ ವಿತರಿಸಲಾಗಿದೆ. 10 ಜಾನುವಾರುಗಳು ಮೃತಪಟ್ಟಿದ್ದು 5.56 ಲಕ್ಷ ಹಾನಿ ಅಂದಾಜಿಸಿದ್ದು, ಈಗಾಗಲೇ ಕೆಲವು ಪ್ರಕರಣಗಳಲ್ಲಿ ಪರಿಹಾರ ವಿತರಿಸಿದೆ. 145 ಹೆಕ್ಟೇರ್ ತೋಟಗಾರಿಕೆ ಕ್ಷೇತ್ರದ ಹಾನಿ ಅಂದಾಜು 46 ಲಕ್ಷ, 185 ಹೆಕ್ಟೇರ್ ಕೃಷಿ ಕ್ಷೇತ್ರದ ಅಂದಾಜು ಹಾನಿ 7.67 ಲಕ್ಷ ಎಂದು ಜಿಲ್ಲಾಧಿಕಾರಿ ಹೇಳಿದರು.
ಜಾನುವಾರುಗಳ ಸಾವಿನ ಸಂಬಂಧ ನಾಲ್ಕು ಪ್ರಕರಣಗಳಲ್ಲಿ 64 ಸಾವಿರ, ಮನೆಗಳ ಹಾನಿ ಸಂಬಂಧ 1.8 ಲಕ್ಷ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಒಟ್ಟಾರೆ 5.83 ಲಕ್ಷ ಪರಿಹಾರ ವಿತರಿಸಿದೆ ಎಂದು ತಿಳಿಸಿದರು.
ಈ ವರ್ಷದ ಜನವರಿಯಿಂದ ಆ. 2 ರವರೆಗೆ ಜಿಲ್ಲೆಯ ವಾಡಿಕೆ ಮಳೆ 404 ಮಿಮೀ ಇದ್ದು, 457 ಮಿಮೀ ಮಳೆಯಾಗಿದೆ. ಕಳೆದ ಎರಡು ತಿಂಗಳಿಂದ ವಾಡಿಕೆ ಮಳೆಯಲ್ಲಿ ಯಾವುದೆ ಕೊರತೆಯಾಗಿಲ್ಲ. ಜೂನ್ ತಿಂಗಳಲ್ಲಿ 84 ಮಿಮೀ ಬದಲಾಗಿ 114 ಮಿಮೀ, ಜುಲೈ ತಿಂಗಳಲ್ಲಿ 109 ಮಿಮೀ ಬದಲಾಗಿ 157 ಮಿಮೀ ಮಳೆಯಾಗಿದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದರು. ಮುಂಗಾರು ಹಂಗಾಮಿನ ಗುರಿಯಲ್ಲಿ ಶೇ. 58ರಷ್ಟು ಬಿತ್ತನೆ ಪೂರ್ಣಗೊಂಡಿದೆ. ರಸಗೊಬ್ಬರ ಹಾಗೂ ಬಿತ್ತನೆ ಬೀಜಕ್ಕೆ ಯಾವುದೆ ಕೊರತೆ ಇಲ್ಲ ಎಂದು ವಿವರಿಸಿದರು.
ನೂತನ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಾದ ಅನ್ನಭಾಗ್ಯ ಹಾಗೂ ಕ್ಷೀರಭಾಗ್ಯ ಯೋಜನೆಗಳ ಅನುಷ್ಠಾನದಲ್ಲಿ ಯಾವುದೇ ಲೋಪ ಉಂಟಾಗದಂತೆ ಎಚ್ಚರಿಕೆ ವಹಿಸಲು ಅಮಿತಾಪ್ರಸಾದ್ ಸೂಚಿಸಿದರು.
ಡೆಂಘೀ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದ್ದರೂ, ಪ್ರಕರಣಗಳು ವರದಿಯಾಗುತ್ತಿರುವ ಬಗ್ಗೆ ವಿಶೇಷ ಗಮನಹರಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಕಾರ್ಯದರ್ಶಿಗಳು ಸೂಚನೆ ನೀಡಿದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ನಾಗಾನಾಯಕ್, ಜಿಪಂ ಸಿಇಒ ಪಿ.ಎ. ಗೋಪಾಲ್, ಹುಣಸೂರು ಹಾಗೂ ಮೈಸೂರು ಉಪವಿಭಾಗಾಧಿಕಾರಿಗಳು, ಎಲ್ಲ ತಹಸೀಲ್ದಾರರು, ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.

ಹಾನಿ ಪ್ರಮಾಣ ಅಂದಾಜು ಮಾಡುವ ಕ್ರಮ ಸರಳಗೊಳಿಸಿ ನಮೂನೆ ನಿಗದಿಪಡಿಸಿ ವಿಕೇಂದ್ರೀಕರಿಸುವ ಮೂಲಕ ಮಾಹಿತಿಯನ್ನು ತ್ವರಿತವಾಗಿ ಪಡೆದುಕೊಂಡು, ನಿಗದಿಪಡಿಸಿದ ಪರಿಹಾರವನ್ನು ತಕ್ಷಣವೇ ವಿತರಿಸಬೇಕು.
  ಡಾ. ಅಮಿತಾಪ್ರಸಾದ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.