ಮಳೆಗೆ ಗೋಡೆ ಕುಸಿತ
ಪಿರಿಯಾಪಟ್ಟಣ: ಭಾರಿ ಮಳೆಯಿಂದಾಗಿ ಮನೆಗಳ ಗೋಡೆಗಳು ಕುಸಿದುಬಿದ್ದಿರುವ ಘಟನೆ ಜರುಗಿದೆ. ತಾಲೂಕಿನ ನವಿಲೂರು ಗ್ರಾಮದ ಅಜ್ಜೇಗೌಡ ಎಂಬವರಿಗೆ ಸೇರಿದ ವಾಸದ ಮನೆ ಹಾಗೂ ತಾತನಹಳ್ಳಿ ಗ್ರಾಮದ ಜವರಯ್ಯ ಎಂಬವರಿಗೆ ಸೇರಿದ ವಾಸದ ಮನೆಯ ಗೋಡೆಗಳು ಭಾರಿ ಮಳೆಯಿಂದಾಗಿ ಕುಸಿದುಬಿದ್ದಿವೆ.
ಕಳ್ಳತನ: ಆರೋಪಿ ಸೆರೆ
ಪಿರಿಯಾಪಟ್ಟಣ: ಕಳೆದ 25 ವರ್ಷಗಳ ಹಿಂದೆ ಕಳ್ಳತನ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪಟ್ಟಣ ಪೊಲೀಸರು ಬಂಧಿಸಿದ್ದಾರೆ. ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕು ಹನುಮಂತಪುರ ಗ್ರಾಮದ ನಿವಾಸಿ ರಾಜೇಗೌಡ ಬಂಧಿತ ಆರೋಪಿ. 1989ರಲ್ಲಿ ತಾಲೂಕಿನ ಹುಣಸೇಕುಪ್ಪೆ ಗ್ರಾಮದ ಚಲುವೇಗೌಡ ಎಂಬವರಿಗೆ ಸೇರಿದ ಸೈಕಲ್ ಕಳ್ಳತನ ಮಾಡಿದ ಆರೋಪ ಹೊತ್ತಿದ್ದ ಆರೋಪಿ ರಾಜೇಗೌಡ 25 ವರ್ಷಗಳಿಂದ ತಲೆಮರೆಸಿಕೊಂಡಿದ್ದು, ಅವರನ್ನು ಪಟ್ಟಣದ ಪೊಲೀಸ್ ಠಾಣೆಯ ಎಸ್ಐ ರಫೀಕ್ ಹಾಗೂ ಸಿಬ್ಬಂದಿಯಾದ ಬೀರೇಗೌಡ, ಉಮೇಶ, ತಮ್ಮಣ್ಣ ಅವರೊಂದಿಗೆ ಕಾರ್ಯಾಚರಣೆ ನಡೆಸಿ ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದೇವಿರಮ್ಮ ಜ್ಞಾನ ವಿಕಾಸ ಕೇಂದ್ರ ಉದ್ಘಾಟನೆ
ಕೆ.ಆರ್. ನಗರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆರಂಭವಾಗಿರುವ ದೇವಿರಮ್ಮ ಜ್ಞಾನವಿಕಾಸ ಕೇಂದ್ರವನ್ನು ತಾಲೂಕಿನ ಸಿದ್ಧಾಪುರ ಗ್ರಾಮದಲ್ಲಿ ಬ್ಯಾಡರಹಳ್ಳಿ ಗ್ರಾಪಂ ಅಧ್ಯಕ್ಷ ಶ್ರೀಕಾಂತ್ ಉದ್ಘಾಟಿಸಿದರು. ಇದೇ ವೇಳೆ ವಿಶ್ವ ಸ್ತನ್ಯಪಾನ ದಿನಾಚರಣೆ ಆಚರಿಸಲಾಯಿತು.
ಗ್ರಾಮಾಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ ಬಿ. ಅಶೋಕ್ ಮಾತನಾಡಿ, ಮಕ್ಕಳಿಗೆ ಎದೆಹಾಲು ನೀಡುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದೆ.
ಆದ್ದರಿಂದ ಮಗುವಿಗೆ ಎರಡು ವರ್ಷದವರೆಗೆ ತಾಯಿಯ ಹಾಲು ಕುಡಿಸಬೇಕು ಎಂದರು. ಸದಸ್ಯರಾದ ಧನಲಕ್ಷ್ಮಿ, ರಾಮಕೃಷ್ಣ, ಗೀತಾ, ಮಿನಾಕ್ಷಿ, ಹರಿಣಾಕ್ಷಿ, ಶಿವರಾಜ್ ಶಿಕ್ಷಕಿ ವಿಜಯಲಕ್ಷ್ಮಿ ಇದ್ದರು.
ಯುವತಿ ನಾಪತ್ತೆ
ಮೈಸೂರು: ಮೈಸೂರು ತಾಲೂಕು ಹಳ್ಳಿಕೆರೆಹುಂಡಿ ಗ್ರಾಮದ ಪುಟ್ಟಸ್ವಾಮಿ ಎಂಬವರ ಪುತ್ರಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಅನುಜ (19) ಜು. 24ರಿಂದ ನಾಪತ್ತೆಯಾಗಿದ್ದಾರೆ. ಚಹರೆ- 4.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕೋಲುಮುಖ, ಎಣ್ಣೆಗೆಂಪು ಬಣ್ಣ, ಕನ್ನಡ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ. 0821-2444955 ಸಂಪರ್ಕಿಸಲು ಮೈಸೂರು ದಕ್ಷಿಣ ಠಾಣೆ ಪೊಲೀಸರು ಕೋರಿದ್ದಾರೆ.
ಮನೆಯಲ್ಲಿ ಕಳವು
ಮೈಸೂರು: ಮನೆ ಬಾಗಿಲು ಮುರಿದು 15 ಸಾವಿರ ಮೌಲ್ಯದ ಚಿನ್ನಾಭರಣ ಮತ್ತು ನಗದು ಕಳವು ಮಾಡಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಸಿದ್ದೀಖಿನಗರ ನಿವಾಸಿ ಮುಬಾರಕ್ ಎಂಬವರ ಮನೆಯ ಬಾಗಿಲು ಮುರಿದು 10 ಸಾವಿರ ಹಾಗೂ 2 ಗ್ರಾಂ. ಚಿನ್ನದ ಆಭರಣ ಸೇರಿದಂತೆ 15 ಸಾವಿರ ಮೌಲ್ಯದ ಮಾಲನ್ನು ಕಳವು ಮಾಡಿದ್ದಾರೆ. ಈ ಸಂಬಂಧ ಎನ್.ಆರ್. ಠಾಣೆ ಎಸ್ಐ ಮುಸ್ತಾಕ್ ಪಾಷ ಮತ್ತು ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಸರ್ಕಾರಿ ಕೆಲಸಕ್ಕೆ ಅಡ್ಡಿ: ದೂರು ದಾಖಲು
ಮೈಸೂರು: ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿ, ಪೊಲೀಸ್ ಇನ್ಸ್ಪೆಕ್ಟರ್ ಜೊತೆಗೆ ಅನುಚಿತವಾಗಿ ವರ್ತಿಸಿದ ವ್ಯಕ್ತಿಯೊಬ್ಬನ ಮೇಲೆ ಕೆ.ಆರ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಲನಹಳ್ಳಿ ನಿವಾಸಿ ಮಂಜುನಾಥ್ (35) ಎಂಬಾತನೆ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದವರು. ಚಾಮುಂಡಿಬೆಟ್ಟದಲ್ಲಿ ಆಷಾಢ ಶುಕ್ರವಾರ ನಿಮಿತ್ತ ಕೆ.ಆರ್. ಠಾಣೆ ಇನ್ಸ್ಪೆಕ್ಟರ್ ಸಿ.ಡಿ. ಜಗದೀಶ್ ಮತ್ತು ಸಿಬ್ಬಂದಿ ಭದ್ರತೆ ಕೈಗೊಂಡಿದ್ದರು. ಶುಕ್ರವಾರ ರಾತ್ರಿ 10 ರಷ್ಟರಲ್ಲಿ ಮಂಜುನಾಥ್ ದೇವಸ್ಥಾನದೊಳಗೆ ಅಡ್ಡದಾರಿಯಲ್ಲಿ ಪ್ರವೇಶಿಸಲು ಯತ್ನಿಸಿದ್ದಾರೆ. ಇದನ್ನು ಪ್ರಶ್ನಿಸಿದ ಇನ್ಸ್ಪೆಕ್ಟರ್ ಜಗದೀಶ್ ಅವರೊಂದಿಗೆ ಮಂಜುನಾಥ್ ಅನುಚಿತವಾಗಿ ವರ್ತಿಸಿ, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

