ಮೈಸೂರು

ನಾಲ್ಕು ತಾಲೂಕುಗಳಲ್ಲಿ ಬರದ ಛಾಯೆ

Published On :

ಕ.ಪ್ರ.ವಾರ್ತೆ   ಮೈಸೂರು   ಆ. 7
ಜಿಲ್ಲೆಯಲ್ಲಿ ಆಗಸ್ಟ್ನ ಈವರೆಗಿನ ಸಂಚಿತ ವಾಡಿಕೆ ಮಳೆ 413.3 ಮಿಮೀ ಇದ್ದು, ವಾಸ್ತವವಾಗಿ 468.2 ಮಿಮೀ ಮಳೆಯಾಗಿದೆ.
ಆಗಸ್ಟ್ನ ಈವರೆಗಿನ ವಾಡಿಕೆ ಮಳೆ 13.6 ಮಿ.ಮೀ. ಇದ್ದು, ವಾಸ್ತವವಾಗಿ 33.(ಶೇ. 243) ಮಿ.ಮೀ. ಮಳೆಯಾಗಿರುತ್ತದೆ. ಒಟ್ಟಾರೆ ಎಚ್.ಡಿ.ಕೋಟೆ, ನಂಜನಗೂಡು ಮತ್ತು ಪಿರಿಯಾಪಟ್ಟಣ ತಾಲೂಕು ಹೊರತುಪಡಿಸಿ ಉಳಿದ ತಾಲೂಕುಗಳಲ್ಲಿ ಅಂದರೆ ಮೈಸೂರು, ಟಿ. ನರಸೀಪುರ, ಕೆ.ಆರ್. ನಗರ ಹಾಗೂ ಹುಣಸೂರು ತಾಲೂಕುಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.
ಮುಂಗಾರಿಗೆ 4,20,195 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆ ಬೆಳೆಯುವ ಗುರಿ ಇದ್ದು, ಈವರೆಗೆ ಈ ಪ್ರದೇಶದಲ್ಲಿ 2,46,387 ಹೆಕ್ಟೇರ್(ಶೇ.59) ಬಿತ್ತನೆಯಾಗಿದೆ. ಮಳೆ ಆಶ್ರಯದಲ್ಲಿ 3,01,960 ಹೆಕ್ಟೇರ್ ಗುರಿಯಿದ್ದು, ಈ ಪ್ರದೇಶದಲ್ಲಿ 2,37,219 ಹೆಕ್ಟೇರ್ (ಶೇ. 79) ಬಿತ್ತನೆಯಾಗಿದೆ. ನೀರಾವರಿಯಲ್ಲಿ 1,18,235 ಹೆಕ್ಟೇರ್ ಗುರಿ ಇದ್ದು, ಈ ಪ್ರದೇಶದಲ್ಲಿ 9,168 ಹೆಕ್ಟೇರ್ (ಶೇ. 8) ಬಿತ್ತನೆಯಾಗಿದೆ.
ಮುಂಗಾರಿನಲ್ಲಿ ಮಳೆಯಾಗಿರುವ ಪ್ರದೇಶದಲ್ಲಿ ಭೂಮಿ ತಯಾರಿ ಮತ್ತು ಮುಖ್ಯ ಭೂಮಿ ಸಿದ್ಧತೆ ಕಾರ್ಯ ಮುಂದುವರೆದಿದೆ. ಬತ್ತದಲ್ಲಿ ಅಲ್ಲಲ್ಲಿ ಸಸಿಮಡಿ ಕಾರ್ಯ ಹಾಗೂ ನಾಟಿ ಕಾರ್ಯ ಮುಂದುವರೆದಿದೆ. ಹೈಬ್ರಿಡ್ ಜೋಳ ಬೆಳವಣಿಗೆ ಹೊಡೆ, ಹಾಲು ತುಂಬುವ ಮತ್ತು ಕಾಳು ಬಲಿಯುವ ಹಂತ, ಎಳ್ಳು ಹೂ, ಕಾಳು ಬಲಿಯುವ ಮತ್ತು ಕಟಾವು, ದ್ವಿದಳ ದಾನ್ಯಗಳು, ಕಾಳು ಮತ್ತು ಕಟಾವು ನಡೆಯುತ್ತಿದೆ. ಹತ್ತಿ ಬೆಳವಣಿಗೆ, ಮೊಗ್ಗು, ಹೂವು ಮತ್ತು ಕಾಯಿ ಬಲಿಯುವ ಹಂತದಲ್ಲಿದೆ.  ರಾಗಿ ಸಸಿಮಡಿ, ನಾಟಿ ಮತ್ತು ಬೆಳವಣಿಗೆ ಹಾಗು ಹೊಡೆ ಹಂತ, ಮುಸುಕಿನಜೋಳ ಬಿತ್ತನೆ, ಬೆಳವಣಿಗೆ, ಮೋತೆ ಮತ್ತು ಕಾಳು ಬಲಿಯುವ ಹಂತ, ನೆಲಗಡಲೆ ಬಿತ್ತನೆ, ಬೆಳವಣಿಗೆ, ಬೀಳು ಬಿಡುವ ಹಾಗು ಕಾಯಿ ಬಲಿಯುವ ಹಂತ, ಸೂರ್ಯಕಾಂತಿ ಹೂ, ಕಾಳುಕಟ್ಟುವ ಮತ್ತು ಕಾಳು ಮಾಗುವ ಹಂತ, ಹರಳು ಬೆಳವಣಿಗೆ, ಹೂ ಮತ್ತು ಗೊನೆ ಬಲಿಯುವ ಹಂತದಲ್ಲಿದೆ.  ಹೊಗೆಸೊಪ್ಪು ಬೆಳವಣಿಗೆ, ಹೂ, ಎಲೆ ಕಟಾವು ಮತ್ತು ಹದ ಮಾಡುವ ಹಂತದಲ್ಲಿದೆ. ಕಬ್ಬು ವಿವಿಧ ಹಂತದಲ್ಲಿದೆ.
ಬೆಳೆಗೆ ಹಾನಿ: ಎಚ್.ಡಿ.ಕೋಟೆ ತಾಲೂಕಿನ ಅಂತರಸಂತೆ ಹೋಬಳಿ ಪೂರ್ಣ, ಬಿ.ಮಟಕೆರೆ(ಕಂದಲಿಕೆ) ಮತ್ತು ಕಸಬಾ ಹೋಬಳಿಯ ಕಾಡಂಚಿನ ಪ್ರದೇಶದಲ್ಲಿ ಅಧಿಕ ಮಳೆಯಿಂದ ಭೂಮಿಯಲ್ಲಿ ನೀರಿನ ತೇವಾಂಶ ಅಧಿಕಗೊಂಡು ಹಾಲಿ ಕಟಾವು ಹಂತದಲ್ಲಿರುವ ದ್ವಿದಳ ಧಾನ್ಯ ಬೆಳೆಗಳು, ಹೂವು ಮತ್ತು ಎಳೆ ಕಾಯಿಗಳ  ಹಂತದಲ್ಲಿರುವ ಹತ್ತಿ ಬೆಳೆಗಳಲ್ಲಿ ಶೇ. 25-30 ಭಾಗ ಇಳುವರಿ ನಷ್ಟವಾಗುವ ಸಂಭವವಿರುತ್ತದೆ. ಇದೆ ರೀತಿ ಮಳೆ ಆಗುತ್ತಿರುವ ಪಕ್ಷದಲ್ಲಿ ಹೆಚ್ಚಿನ ನಷ್ಟವಾಗುವ ಸಾಧ್ಯತೆ ಇದೆ.
ಪಿರಿಯಾಪಟ್ಟಣ ತಾಲೂಕಿನಲ್ಲೂ ಹಾರನಹಳ್ಳಿ ಹೋಬಳಿ ಪೂರ್ತ, ಕಸಬಾ ಮತ್ತು ಬೆಟ್ಟದಪುರ ಹೋಬಳಿಯ ಕೆಲವು ಗ್ರಾಮಗಳಲ್ಲಿ ಅಧಿಕ ಮಳೆಯಿಂದ ಭೂಮಿಯಲ್ಲಿ ನೀರಿನ ತೇವಾಂಶ ಅಧಿಕಗೊಂಡು ಹಾಲಿ ಇರುವ ಹೊಗೆಸೊಪ್ಪು ಮತ್ತು ಮುಸುಕಿನ ಜೋಳದ ಬೆಳೆಗಳಲ್ಲಿ ಶೇ.25-30 ಭಾಗ ಇಳುವರಿಯಲ್ಲಿ ನಷ್ಟವಾಗುವ ಸಂಭವವಿರುತ್ತದೆ.
ಮೈಸೂರು ತಾಲೂಕಿನ ಇಲವಾಲ ಹೋಬಳಿಯ ದೊಡ್ಡಮಾರಗೌಡನಹಳ್ಳಿ ಪಂಚಾಯಿತಿಯ ಕೆಲವು ಗ್ರಾಮಗಳನ್ನು ಹೊರತುಪಡಿಸಿ ಉಳಿದ ಪಂಚಾಯಿತಿಯ ಎಲ್ಲ ಗ್ರಾಮಗಳಲ್ಲಿ ತೇವಾಂಶದ ಕೊರತೆಯಿಂದಾಗಿ ಪೂರ್ವ ಮುಂಗಾರಿನಲ್ಲಿ ಬಿತ್ತನೆ ಮಾಡಿದ್ದ ಜೋಳ, ಮುಸುಕಿನ ಜೋಳ, ಅಲಸಂದೆ, ಉದ್ದು, ಹೆಸರು ಮತ್ತು ಎಳ್ಳು ಬೆಳೆಗಳು ಬೆಳವಣಿಗೆ ಕುಂಠಿತಗೊಂಡು ಶೇ.50-60 ಭಾಗ ಇಳುವರಿಯಲ್ಲಿ ನಷ್ಟವಾಗಿರುತ್ತದೆ. ಈ ಬಗ್ಗೆ ವರದಿಯನ್ನು ಜಂಟಿ ಸಮೀಕ್ಷೆ ನಡೆಸಿ ಸಲ್ಲಿಸಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಅಲ್ಲಲ್ಲಿ ದ್ವಿದಳ ಧಾನ್ಯ ಬೆಳೆಗಳಲ್ಲಿ ಹೇನು ಮತ್ತು ಹಳದಿ ನಂಜುರೋಗ ಬಾಧೆ, ಹತ್ತಿ ಬೆಳೆಗಳಲ್ಲಿ ರಸ ಹೀರುವ ಕೀಟ ಬಾಧೆ, ಬತ್ತದ ಸಸಿಮಡಿಯಲ್ಲಿ ಬೆಂಕಿರೋಗ ಹಾಗು ಜಂತುರೋಗ (ನೆಮಟೋಡ್) ಬಾಧೆ ಕಂಡು ಬಂದಿದ್ದು, ಹತೋಟಿಗೆ ಸೂಕ್ತ ಸಿಂಪರಣೆ ಕೈಗೊಳ್ಳಲು ಕ್ರಮ ವಹಿಸಿದೆ.
ಮುಂಗಾರು ಹಂಗಾಮಿನಲ್ಲಿ (ಎಸ್ಆರ್ಆರ್ ಪ್ರಕಾರ) 30,421 ಕ್ವಿಂಟಲ್ ಬಿತ್ತನೆ ಬೀಜ ವಿತರಿಸಲು ಗುರಿ ಹೊಂದಿದ್ದು, ಬತ್ತ, ಹೈ.ಜೋಳ ಮತ್ತು ದ್ವಿದಳಧಾನ್ಯ ಧೃಡೀಕೃತ ಬಿತ್ತನೆ ಬೀಜಗಳು 29,440 ಕ್ವಿಂ. ಸರಬರಾಜಾಗಿದ್ದು, ಒಟ್ಟಾರೆ 17,698 ಕ್ವಿಂ. ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಣೆಯಾಗಿದೆ. ಕೆಎಸ್ಎಸ್ಸಿ, ಎನ್ಎಸ್ಸಿ ಮತ್ತು ಖಾಸಗಿಯವರಲ್ಲಿ ಒಟ್ಟಾರೆ ವಿವಿಧ ಬಿತ್ತನೆ ಬೀಜಗಳ ಲಭ್ಯತೆ 19,981 ಕ್ವಿಂ. ಇದೆ.
ರಸಗೊಬ್ಬರ: ಮುಂಗಾರು ಹಂಗಾಮಿಗೆ 96,300 ಮೆ.ಟನ್ ರಸಗೊಬ್ಬರ ವಿತರಿಸುವ ಗುರಿ ಹೊಂದಿದ್ದು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ಮತ್ತು ಖಾಸಗಿಯವರಿಂದ ಒಟ್ಟಾರೆ ಪ್ರಾರಂಭಿಕ ದಾಸ್ತಾನು ಸೇರಿ 71,254 ಮೆ.ಟನ್ ಸರಬರಾಜಾಗಿದೆ. ಈವರೆಗೆ 47,369 ಮೆ.ಟನ್ ರಸಗೊಬ್ಬರ ವಿತರಣೆಯಾಗಿದೆ. ಒಟ್ಟಾರೆ 23,885 ಮೆ.ಟನ್ ರಸಗೊಬ್ಬರ ದಾಸ್ತಾನಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.