ಮೈಸೂರು

ಜನಪ್ರತಿನಿಧಿಗಳು ಜನತೆಯ ಮಾಲೀಕರೆಂದುಕೊಂಡಿದ್ದಾರೆ!

Published On :

ಕ.ಪ್ರ.ವಾರ್ತೆ     ಮೈಸೂರು     ಆ. 10
ಜನಪ್ರತಿನಿಧಿಗಳು ತಮ್ಮನ್ನು ಜನತೆಯ ಮಾಲೀಕರು ಎಂದು ತಿಳಿದುಕೊಂಡಿದ್ದಾರೆ ಎಂದು ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ವಿಷಾದಿಸಿದರು.
ನಗರದ ಅಖಿಲ ಭಾರತ ವಾಕ್‌ಶ್ರವಣ ಸಂಸ್ಥೆ ಶುಕ್ರವಾರ ಏರ್ಪಡಿಸಿದ್ದ 48ನೇ ವಾರ್ಷಿಕೋತ್ಸವದಲ್ಲಿ ಭಾಗವಹಿಸಿದ್ದ ಅವರು, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ವಿದ್ಯಾರ್ಥಿ ಶಿವಪ್ರಸಾದ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರ ಎಂದರೆ ಯಾರು ಎಂಬುದೆ ಅರ್ಥ ಆಗುವುದಿಲ್ಲ. ಜನಲೋಕಪಾಲ್ ಕಾಯ್ದೆ ಜಾರಿ ವೇಳೆ ಸಂಸದರೊಬ್ಬರು ಕಾಯ್ದೆ ಮಾಡಲು ನೀವು ಯಾರು ಎಂದು ಪ್ರಶ್ನಿಸಿದ್ದರು.
ಅವರನ್ನು ಅಯ್ಕೆ ಮಾಡಿದ ಪ್ರಜೆಗಳನ್ನೆ ಪ್ರಶ್ನಿಸುತ್ತಾರೆ. ಅವರು ತಮ್ಮನ್ನು ಜನಸೇವಕರು ಎಂದುಕೊಂಡಿಲ್ಲ. ಬದಲಿಗೆ ಮಾಲೀಕರು ಎಂದುಕೊಂಡಿದ್ದಾರೆ. ರಾಜ್ಯಾಂಗ ಅಥವಾ ಶಾಸಕಾಂಗದಲ್ಲಿ ಈಗ ಯಾರೂ ಬೇಕಾದರೂ ಮಂತ್ರಿ ಆಗಬಹುದು. ಆದರೆ ಕಾರ್ಯಾಂಗದಲ್ಲಿ ವಿದ್ಯಾರ್ಹತೆ ಇರುವವರು ಶಾಸಕಾಂಗದ ಆದೇಶ ಪಾಲಿಸಬೇಕು ಎಂದರು.
ಆಹಾರ ವಿತರಣಾ ವ್ಯವಸ್ಥೆ ಸರಿಯಾಗಿ ಜಾರಿಗೆ ಬರಲಿಲ್ಲ. ಬದಲಿಗೆ ಆಹಾರ ಭದ್ರತಾ ಕಾಯ್ದೆಯಾದರೂ ಸರಿಯಾಗಿ ಜಾರಿಗೆ ಬರಲಿ. ಆದರೆ 30 ರು.ಗೆ 5 ಮಂದಿ ಜೀವನ ನಡೆಸಬಹುದು ಎಂಬುದು ಮೂರ್ಖತನ. ಇದರ ಜತೆಗೆ ಸಾರಿಗೆ, ಕುಡಿಯುವ ನೀರು ಮುಂತಾದ ಸಮಸ್ಯೆಗಳೂ ಬಗೆಹರಿಯಬೇಕು ಎಂದು ಅವರು ಹೇಳಿದರು. ಮತ್ತೊಬ್ಬ ವಿದ್ಯಾರ್ಥಿಯ ಪ್ರಶ್ನೆಗೆ ಉತ್ತರಿಸಿದ ಹೆಗ್ಡೆ ಅವರು, ಅಣ್ಣಾ ಹಜಾರೆ ಅವರ ಹೋರಾಟಕ್ಕೆ ಮಧ್ಯಮ ವರ್ಗದವರೆ ಹೆಚ್ಚು ಮಂದಿ ಬೆಂಬಲ ನೀಡಿದ್ದರು. ಎಲ್ಲರೂ ಪ್ರತಿದಿನ ಹೋರಾಟಕ್ಕೆ ಬರಲು ಸಾಧ್ಯವಾಗುತ್ತಿರಲಿಲ್ಲ. ಅಲ್ಲದೆ ಆ ಹೋರಾಟವನ್ನು ಜಿಲ್ಲಾ ಮತ್ತು ತಾಲೂಕು ಮಟ್ಟಕ್ಕೂ ವಿಸ್ತರಿಸಬೇಕಿತ್ತು. ಹೋರಾಟದಲ್ಲಿನ ಕೆಲವರಿಗೆ ರಾಜಕೀಯದ ಆಸೆ ಬಂದ ಕಾರಣ ಹೋರಾಟ ಹೆಚ್ಚು ಶಕ್ತಿ ಪಡೆದುಕೊಳ್ಳಲಿಲ್ಲ ಎಂದರು.
ಇದಕ್ಕೂ ಮುನ್ನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಮಾನವೀಯತೆ ಬೆಳೆಸಬೇಕು. ಮನುಷ್ಯನಿಗೆ ಹಣ ಗಳಿಕೆಯಲ್ಲಿ ತೃಪ್ತಿ ಸಿಗುವುದೆ ಇಲ್ಲ. ಆದರೆ ಮಾನವೀಯತೆ ಮೈಗೂಡಿಸಿಕೊಂಡು ಸೇವೆ ಸಲ್ಲಿಸಿದಾಗ ನಿಜವಾದ ತೃಪ್ತಿ ಸಿಗುತ್ತದೆ. ನಾನು ಲೋಕಾಯುಕ್ತದಲ್ಲಿದ್ದಾಗ ಅನೇಕ ಅಮಾನವೀಯ ಘಟನೆಗಳನ್ನು ನೋಡಿದ್ದೇನೆ. ಕಾಸಿನ ಆಸೆಗಾಗಿ ಸರ್ಕಾರಿ ವೈದ್ಯರೆ ಅಮಾನವೀಯವಾಗಿ ವರ್ತಿಸಿದ್ದಾರೆ. ಇಂತಹ ಘಟನೆ ಕಡಿಮೆಯಾಗಬೇಕಿದ್ದರೆ ಮಾನವೀಯ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಉತ್ತಮ ನೌಕರ ಪ್ರಶಸ್ತಿಯನ್ನು ಡಾ. ಎಚ್.ಪಿ. ಉಮ ಸರಸ್ವತಿ, ರಾಜಕುಮಾರ್ ಅವರಿಗೆ ನೀಡಲಾಯಿತು. ಪೋಸ್ಟ್ ಡಾಕ್ಟರ್ ಪದವಿಯನ್ನು ಡಾ. ಮಹಾಲಕ್ಷ್ಮೀ ಅವರಿಗೆ, ಪಿಎಚ್‌ಡಿ ಪದವಿಯನ್ನು ಕೆ. ಯಶೋಧ, ಪ್ರವೀಣ್‌ಕುಮಾರ್, ಜಯಕುಮಾರ್, ಡಾ. ವಿಜಯಲಕ್ಷ್ಮಿ ಚಿನ್ನದ ಪದಕವನ್ನು ಸೆಬಿ ಮರೀನ ಮ್ಯಾನ್ಯುಲ್, ಕೆ.ವಿ. ನಿಶಾ ಅವರಿಗೆ, ನಗದು ಬಹುಮಾನವನ್ನು ಪ್ರತಿಭಾ ನಾಗಲಕ್ಷ್ಮಿ, ಶೃತಿ ಶಿಜೇಷ್, ವಿದ್ಯಾಶ್ರೀ, ಉತ್ತಮ ಪ್ರಬಂಧ ಮಂಡನೆಗೆ ಅರ್ಚನ ರಂಜನ್, ರಂಜಿನಿ ಅನ್ನಿ ಮ್ಯಾಥೀವ್ ಮತ್ತು ಸ್ವಾತಿ ಅವರಿಗೆ ನೀಡಲಾಯಿತು.
ಇದಕ್ಕೂ ಮುನ್ನ ಸಂತೋಷ್ ಹೆಗ್ಡೆ ಅವರು, ನ್ಯೂರೋ ಸೈಕಾಲಜಿ ಲ್ಯಾಬ್, ನವಜಾತ ಶಿಶುಗಳ ತಪಾಸಣೆಗೆ ಚಾಲನೆ ನೀಡಿದರು.
ಮುಕ್ತ ವಿವಿ ಕುಲಪತಿ ಪ್ರೊ. ಎಂ.ಜಿ. ಕೃಷ್ಣನ್, ಸಂಸ್ಥೆ ನಿರ್ದೇಶಕಿ ಡಾ. ಎಸ್.ಆರ್. ಸಾವಿತ್ರಿ, ಶೈಕ್ಷಣಿಕ ಸಂಯೋಜಕಿ ಡಾ. ಎಂ. ಪುಷ್ಪಾವತಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.