ಮೈಸೂರು

ರಾಷ್ಟ್ರಧ್ವಜ, ರಾಷ್ಟ್ರಗೀತೆ ಮಾಹಿತಿ ಅಗತ್ಯ

Published On :

ಕ.ಪ್ರ. ವಾರ್ತೆ    ಮೈಸೂರು    ಆ.10
ಪ್ರತಿಯೊಬ್ಬ ಸರ್ಕಾರಿ ಇಲಾಖೆಯ ಅಧಿಕಾರಿಗಳಿಗೆ ನಮ್ಮ ರಾಷ್ಟ್ರಧ್ವಜ, ರಾಷ್ಟ್ರಗೀತೆ ಕುರಿತ ಮಾಹಿತಿ ನೀಡುವುದು ಅಗತ್ಯವಿದೆ ಎಂದು ಮಾಜಿ ಶಾಸಕ ಡಿ. ಮಾದೇಗೌಡ ಅಭಿಪ್ರಾಯಪಟ್ಟರು.
ಭಾರತ ಸೇವಾದಳ ಜಿಲ್ಲಾ ಸಮಿತಿಯು ಶನಿವಾರ ಸರಸ್ವತಿಪುರಂನಲ್ಲಿರುವ ಶಾಖೆಯ ಶಾಲೆಯಲ್ಲಿ ಏರ್ಪಡಿಸಿದ್ದ ರಾಷ್ಟ್ರಧ್ವಜ, ರಾಷ್ಟ್ರಗೀತೆ ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಭಾರತ ಸೇವಾದಳವು ಈ ಶಿಬಿರವನ್ನು ಜಿಲ್ಲಾ, ತಾಲೂಕು ಹಾಗೂ ಗ್ರಾಪಂ ಮಟ್ಟಕ್ಕೂ ವಿಸ್ತರಿಸಬೇಕು. ಈ ಬಗ್ಗೆ ಪರಿಣತಿ ಹೊಂದಿರುವ ಸಂಪನ್ಮೂಲ ವ್ಯಕ್ತಿಗಳಿಂದ ಸಾರ್ವಜನಿಕರಲ್ಲಿ ಪ್ರಜ್ಞೆ ಮೂಡಿಸಬೇಕಿದೆ. ರಾಷ್ಟ್ರಧ್ವಜ, ರಾಷ್ಟ್ರಗೀತೆ ಮಾಹಿತಿ ಮನೆ ಮನೆ, ಮನ ಮನ ತಲುಪಲಿ ಎಂದು ಆಶಿಸಿದರು.
ಇಂದಿಗೆ 90 ವರ್ಷ: ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟಿಷರ ವಿರುದ್ಧ ಸೆಟೆದು ನಿಂತಿದ್ದ ಮಂದಗಾಮಿಗಳು ಹಾಗೂ ತೀವ್ರಗಾಮಿ ಕಾಲವೊಂದಿತ್ತು. ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹಿಂದಿರುಗಿದ ಗಾಂಧಿ ಅವರೂ ಸ್ವಾತಂತ್ರ್ಯ ಚಳವಳಿ ಭಾಗವಹಿಸಲು ಇಚ್ಛಿಸುತ್ತಾರೆ. ಆಗ ಮಂದಗಾಮಿಗಳು ಹಾಗೂ ತೀವ್ರಗಾಮಿಗಳು ದೇಶ ಪರ್ಯಟನೆ ಮಾಡುವಂತೆ ಸಲಹೆ ನೀಡುತ್ತಾರೆ. ಇದನ್ನು ಸ್ವೀಕರಿಸಿದ ಗಾಂಧೀಜಿ ದೇಶದ ಉದ್ದಗಲಕ್ಕೂ ತಿರುಗಾಡಿ ಈ ನೆಲದ ಸಮಸ್ಯೆ ಅರಿಯುತ್ತಾರೆ. ಆಗ ಭಾರತ ಸೇವಾದಳ ಸ್ಥಾಪಿಸಲು ಒಲವು ವ್ಯಕ್ತಪಡಿಸುತ್ತಾರೆ. ಸೇವಾದಳದ ಸಂಸ್ಥಾಪಕರಾಗಿ ಡಾ.ನಾ.ಸು. ಹರ್ಡೀಕರ್, ರಾಷ್ಟ್ರಾಧ್ಯಕ್ಷರಾಗಿ ಜವಹರಲಾಲ್ ನೆಹರು ನೇಮಕವಾಗುತ್ತಾರೆ. ಅಲ್ಲಿಂದ ಆರಂಭವಾದ ಸೇವಾದಳವು ಇಂದಿಗೆ 90 ವರ್ಷ ಪೂರೈಸಿದೆ ಎಂದು ಇತಿಹಾಸದ ಮೇಲೆ ಬೆಳಕು ಚೆಲ್ಲಿದರು.
ಇಷ್ಟು ದೀರ್ಘವಾದ ಇತಿಹಾಸವುಳ್ಳ ಸೇವಾದಳ ಇಂದಿಗೂ ರಾಷ್ಟ್ರಧ್ವಜ, ರಾಷ್ಟ್ರಗೀತೆ ಕುರಿತ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಾ ಬಂದಿದೆ. ರಾಜ್ಯಾದ್ಯಂತ 10 ಸಾವಿರ ಶಾಖೆ ತೆರೆದು, ಶಾಲೆಗಳನ್ನು ನಡೆಸುತ್ತಿದೆ. ಎಷ್ಟೋ ಮಂದಿಗೆ ರಾಷ್ಟ್ರಧ್ವಜದ ಆರೋಹಣ ಹಾಗೂ ಅವರೋಹಣವನ್ನು ಕ್ರಮಬದ್ಧವಾಗಿ ನಿರ್ವಹಿಸದೇ ಗೊತ್ತಿರುವುದಿಲ್ಲ. ಅಂತಹ ಆಭಾಸವನ್ನು ತಡೆಗಟ್ಟುವಲ್ಲಿ ಸೇವಾದಳದ ಕಾರ್ಯ ಶ್ಲಾಘನೀಯ. ಈಗಿನ ಸರ್ಕಾರ ಸ್ಥಳೀಯ ಸಂಸ್ಥೆಗಳ ಕಚೇರಿಯಲ್ಲಿ ಪ್ರತಿದಿನ ರಾಷ್ಟ್ರಧ್ವಜ ಹಾರಿಸಬೇಕೆಂದು ಕಟ್ಟಾಜ್ಞೆ ಹೊರಡಿಸಿರುವುದು ಅಭಿನಂದನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಎಂ.ವಿ. ದೇವಿಪ್ರಸಾದ್ ಮಾತನಾಡಿ, ನಮ್ಮ ಸಮಿತಿಯಿಂದ ಪ್ರತಿ ವರ್ಷ ಎಲ್ಲಾ ಶಾಲೆಗಳ ಶಿಕ್ಷಕರಿಗೆ ರಾಷ್ಟ್ರಧ್ವಜ, ರಾಷ್ಟ್ರಗೀತೆ ಬಗೆಗೆ ಮಾಹಿತಿ ನೀಡುತ್ತೇವೆ. ಐಟಿ ಬಿಟಿಗೆ ಮಾರುಹೋಗಿರುವ ನಾವು ನಮ್ಮ ಸಂಸ್ಕೃತಿಯನ್ನು ಕಳೆದುಕೊಳ್ಳುತ್ತಿದ್ದೇವೆ. ಬೇರೆ ದೇಶಗಳಿಂದ ಕೇವಲ ತಂತ್ರಜ್ಞಾನವನ್ನು ಮಾತ್ರ ಎರವಲು ಪಡೆಯಬೇಕೆ ಹೊರತು ಅಲ್ಲಿನ ಸಂಸ್ಕೃತಿಯನ್ನಲ್ಲ. ನಮ್ಮ ಸಂಸ್ಕೃತಿಯನ್ನು ಪಾಲಿಸಿ, ತಂದೆ, ತಾಯಿಯನ್ನು ಗೌರವಿಸಿ ಉತ್ತಮ ಪ್ರಜೆಗಳಾಗಬೇಕು ಎಂದರು.
ಕರ್ನಾಟಕ ಕಾವಲುಪಡೆ ರಾಜ್ಯಾಧ್ಯಕ್ಷ ಎಂ. ಮೋಹನ್ಕುಮಾರ್ಗೌಡ, ಮಾಜಿ ದಳಪತಿಗಳಾದ ಹ.ಸಂ. ಕಾಶಿನಕುಂಟಿ, ಡಿ. ಮುನಿಯಯ್ಯ, ಜಿ. ಮುನಿಸ್ವಾಮಿ, ಕಾರ್ಯದರ್ಶಿ ಶಂಕರ್, ಕೋಶಾಧ್ಯಕ್ಷ ಕೆ.ಎಂ. ಬಸವೇಗೌಡ, ಶಿವನಗೌಡ, ಚಂದ್ರಶೇಖರಗೌಡ, ದೀಪಕ್ ಇದ್ದರು. ನಾಗೇಶ್ ಸ್ವಾಗತಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.