ಆಸ್ತಿಗಾಗಿ ಅಣ್ಣನ ಕೊಲೆ: ಸಾಕು ತಮ್ಮ ಬಂಧನ
ಮೈಸೂರು: ಆಸ್ತಿಗಾಗಿ ಅಣ್ಣನ ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಿದ್ದ ಆರೋಪಿ ಸಾಕು ತಮ್ಮನನ್ನು ಪೊಲೀಸರು ಶನಿವಾರ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಶಾಂತಿನಗರ ಬೀಡಿ ಕಾಲೋನಿ ನಿವಾಸಿ ಆಜಾಂ ಪಾಷ (22) ಬಂಧಿತ ಆರೋಪಿ. ಈತನು ತನ್ನ ಸಹೋದರ ಮುಜಾಹಿದ್ ಪಾಷ (35) ಎಂಬಾತನನ್ನು ಕೊಲೆ ಮಾಡಿದ್ದ. ಕೊಲೆ ನಡೆದ 10 ತಿಂಗಳ ಬಳಿಕ ಆರೋಪಿ ಆಜಾಂ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಮುಜಾಹಿದ್ ಪಾಷ ಹೆಸರಿನಲ್ಲಿ ಗೌಸಿಯಾನಗರದಲ್ಲಿ ಮನೆಯೊಂದಿದೆ. ಈ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಸಿಕೊಡುವಂತೆ ಆಜಾಂ ಕೇಳಿದ್ದ. ಆದರೆ, ಇದಕ್ಕೆ ಮುಜಾಹಿದ್ ಒಪ್ಪಿರಲಿಲ್ಲ. ಈ ಇಬ್ಬರು ಸಹ ಟಿ. ನರಸೀಪುರ ತಾಲೂಕು ಗರ್ಗೇಶ್ವರಿಯ ಯುವತಿಯರನ್ನು ಮದುವೆ ಆಗಿದ್ದರು.
2012 ಆ.27 ರಂದು ಬಕ್ರೀದ್ ಹಬ್ಬಕ್ಕಾಗಿ ಗರ್ಗೇಶ್ವರಿಗೆ ಹೋಗಿದ್ದರು. ಈ ವೇಳೆ ಮುಜಾಹಿದ್ ಪಾಷಗೆ ಆಜಾಂ ಪಾಷ ಮದ್ಯ ಕುಡಿಸಿ, ಗರ್ಗೇಶ್ವರಿ ರೈಸ್ ಮಿಲ್ ಬಳಿ ತಲೆ ಮೇಲೆ ಕಲ್ಲು ಹಾಕಿ ಮುಜಾಹಿದ್ನನ್ನು ಕೊಲೆ ಮಾಡಿದ್ದ. ನಂತರ ತನಗೆ ಏನೂ ಗೊತ್ತಿಲ್ಲ ಎಂಬಂತೆ ಇದ್ದ. ಈ ಸಂಬಂಧ ಟಿ. ನರಸೀಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮೈಸೂರಿನ ಉದಯಗಿರಿ ಠಾಣೆ ಇನ್ಸ್ಪೆಕ್ಟರ್ ಆರ್.ಪಿ. ಅಶೋಕ್ ಮತ್ತು ಸಿಬ್ಬಂದಿ ಕಳವು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆಜಾಂ ಪಾಷನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ, ಸಹೋದರ ಮುಜಾಹಿದ್ ಪಾಷನನ್ನು ಕೊಲೆ ಮಾಡಿದ್ದನ್ನು ಆಜಾಂ ಒಪ್ಪಿಕೊಂಡಿದ್ದಾನೆ.
ಹೀಗಾಗಿ ಆರೋಪಿಯನ್ನು ಟಿ.ನರಸೀಪುರ ಠಾಣೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಟಿ. ನರಸೀಪುರ ಸರ್ಕಲ್ ಇನ್ಸ್ಪೆಕ್ಟರ್ ಸುಂದರರಾಜ್ ಮತ್ತು ಸಿಬ್ಬಂದಿ ಆರೋಪಿಯನ್ನು ಶನಿವಾರ ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪಾಲಿಷ್ ಹಾಕುವ ನೆಪದಲ್ಲಿ ಸರ ಕಳವು
ಮೈಸೂರು: ಪಾಲಿಷ್ ಹಾಕುವ ನೆಪದಲ್ಲಿ ಮಹಿಳೆಗೆ ವಂಚಿಸಿ 40 ಗ್ರಾಂ. ಚಿನ್ನದ ಸರವನ್ನು ಇಬ್ಬರು ವ್ಯಕ್ತಿಗಳು ಕಳವು ಮಾಡಿ ಪರಾರಿಯಾಗಿರುವ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.
ಚಾಮರಾಜ ಮೊಹಲ್ಲಾ ಡಿ.ಸುಬ್ಬಯ್ಯ ರಸ್ತೆ ಕುಂಚಿಟಿಗರ ಬೀದಿ ನಿವಾಸಿ ಶಿವಕುಮಾರ್ ಎಂಬವರ ಪತ್ನಿ ನಂದಿನಿ (24) ಮೋಸ ಹೋದವರು. ಇವರ ಪಕ್ಕದ ಮನೆ ನಿವಾಸಿ ಲಲಿತಮ್ಮ ಎಂಬವರು ಬೆಳ್ಳಿ ವಸ್ತುಗಳಿಗೆ ಪಾಲಿಷ್ ಹಾಕಿಸಿದ್ದು, ಚಿನ್ನಾಭರಣ ಕೊಡಿ ಪಾಲಿಷ್ ಮಾಡುವುದಾಗಿ ಆ ಇಬ್ಬರು ವ್ಯಕ್ತಿಗಳು ಒತ್ತಾಯಿಸಿದ್ದಾರೆ. ಆದರೆ, ಲಲಿತಮ್ಮ ಬೆಳ್ಳಿ ವಸ್ತುವಿಗೆ ಮಾತ್ರ ಪಾಲಿಷ್ ಹಾಕಿಸಿದ್ದು, ಚಿನ್ನಾಭರಣ ಕೊಡಲಿಲ್ಲ.
ನಂದಿನಿ ಇದೇ ವೇಳೆಗೆ ಲಲಿತಮ್ಮ ಮನೆಗೆ ಹೋಗಿದ್ದಾರೆ. ಹಿಂದಿ ಮಾತನಾಡುತ್ತಿದ್ದ ಆ ಇಬ್ಬರು ವ್ಯಕ್ತಿಗಳು ಚಿನ್ನದ ಸರ ಕೊಡಿ ಪಾಲಿಷ್ ಮಾಡಿ ಕೊಡುವುದಾಗಿ ನಂದಿನಿಯನ್ನು ಹಿಡಿದುಕೊಂಡಿದ್ದಾರೆ. ಲಲಿತಮ್ಮ ಎಷ್ಟೇ ಹೇಳಿದರು ಕೇಳದೆ ನಂದಿನಿ ಸರವನ್ನು ಪಾಲಿಷ್ ಮಾಡಿಸಲು ಕೊಟ್ಟಿದ್ದಾರೆ. ಪಾಲಿಷ್ ಮಾಡಲು ಬಿಸಿ ನೀರು ತರಲು ಮನೆಯೊಳಗೆ ಹೋದಾಗ ಇಬ್ಬರು ವ್ಯಕ್ತಿಗಳು ಪರಾರಿಯಾಗಿದ್ದಾರೆ.
ಈ ಸಂಬಂಧ ಲಕ್ಷ್ಮಿಪುರಂ ಠಾಣೆ ಇನ್ಸ್ಪೆಕ್ಟರ್ ಸೂರ್ಯನಾರಾಯಣರಾವ್ ಮತ್ತು ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಟಿಪ್ಪರ್ ಡಿಕ್ಕಿ: ಬೈಕ್ ಸವಾರ ಸಾವು
ಮೈಸೂರು: ಟಿಪ್ಪರ್ ಡಿಕ್ಕಿಯಾಗಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಬೈಕ್ ಸವಾರ ಮೃತಪಟ್ಟಿರುವ ಘಟನೆ ಶನಿವಾರ ನಡೆದಿದೆ.
ಮೈಸೂರು ತಾಲೂಕು ಜಯಪುರ ಹೋಬಳಿ ಉದ್ಬೂರು ನಿವಾಸಿ ಪ್ರಕಾಶ್ ಎಂಬವರ ಪುತ್ರ ನಂಜುಂಡ (30) ಮೃತಪಟ್ಟವರು. ಇವರು ಬೈಕಿನಲ್ಲಿ ಶುಕ್ರವಾರ ರಾತ್ರಿ ಜಯಪುರ ಬಸ್ ನಿಲ್ದಾಣ ಬಳಿ ಹೋಗುತ್ತಿದ್ದಾಗ ಅಪರಿಚಿತ ಟಿಪ್ಪರ್ ವಾಹನ ಡಿಕ್ಕಿಯಾಗಿ ಪರಾರಿಯಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ನಂಜುಂಡ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಶನಿವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ.
ಈ ಸಂಬಂಧ ಜಯಪುರ ಠಾಣೆ ಎಸ್ಐ ನಂಜಪ್ಪ ಮತ್ತು ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

