ಮೈಸೂರು

ಸಮಗ್ರ ಕೃಷಿ ಯೋಜನೆಗೆ ಖಾತ್ರಿ ಬಳಸಿ: ಜಿಪಂ ಸಿಇಒ

Published On :

ಕ.ಪ್ರ.ವಾರ್ತೆ     ಹುಣಸೂರು     ಆ. 12
ಗಿರಿಜನರು ಹೊಂದಿರುವ ಜಮೀನುಗಳಲ್ಲಿ ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ, ಸಮಗ್ರ ಕೃಷಿ ಯೋಜನೆಯನ್ನು ಜಿಪಂ ವತಿಯಿಂದ ಅನುಷ್ಠಾನಗೊಳಿಸಲು ಆದೇಶ ಹೊರಡಿಸಿದ್ದು, ಆದಿವಾಸಿಗಳು ಯೋಜನೆಯ ಸೌಲಭ್ಯ ಪಡೆದುಕೊಳ್ಳುವಂತೆ ಜಿಪಂ ಸಿಇಒ ಪಿ.ಎ.ಗೋಪಾಲ್ ಮನವಿ ಮಾಡಿದರು.
ತಾಲೂಕಿನ ಹನಗೋಡು ಹೋಬಳಿಯ ವಿಜಯಗಿರಿ ಹಾಡಿಯಲ್ಲಿ ಡೀಡ್ ಸಂಸ್ಥೆ ಹಾಗೂ ಜಿಲ್ಲಾ ಜೈವಿಕ ಇಂಧನ ಅಭಿವೃದ್ಧಿ ಉಸ್ತುವಾರಿ ಅಭಿವೃದ್ಧಿ ಸಮಿತಿ ಆಯೋಜಿಸಿದ್ದ ವಿಶ್ವ ಜೈವಿಕ ಇಂಧನ ಹಾಗೂ ವಿಶ್ವ ಆದಿವಾಸಿಗಳ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗಿರಿಜನರು ತಮಗೆ ನೀಡಿರುವ ಜಮೀನುಗಳ ಸಮತಟ್ಟು, ಬದು ನಿರ್ಮಾಣ, ವಾತಾವರಣಕ್ಕೆ ತಕ್ಕಂತೆ ಆಗಬೇಕಾದ ಕೆಲಸಗಳ ಕುರಿತು, ಕ್ರಿಯಾ ಯೋಜನೆ ತಯಾರಿಸಿ ಗ್ರಾಪಂ ಸಭೆಯಲ್ಲಿ ಠರಾವು ಮಾಡಿ ಕಳುಹಿಸಿ ಕೊಟ್ಟಲ್ಲಿ, ಸಮಗ್ರ ನೆರವು ನೀಡಲಾಗುವುದು. ಈಗಾಗಲೇ ಎಚ್.ಡಿ. ಕೋಟೆ ತಾಲೂಕಿನಲ್ಲಿ 8 ಹಾಡಿಗಳನ್ನು ಇದೆ ಮಾದರಿಯಲ್ಲಿ ಆಯ್ಕೆ ಮಾಡಲಾಗಿದೆ. ಈ ಯೋಜನೆಗೆ ಹಣದ ಕೊರತೆ ಇಲ್ಲ. ಮುಂದಿನ ವರ್ಷಗಳಲ್ಲಿ ಇಂಧನ ಕೊರತೆ ಎದುರಾಗಲಿದ್ದು, ನಮ್ಮ ರೈತರು, ಪರ್ಯಾಯ ಇಂಧನ ನೀಡುವ ಗಿಡ-ಮರಗಳನ್ನು ಬೆಳೆಯುವ ಮೂಲಕ ಇಂಧನ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಕಾರ್ಯಕ್ರಮ ರೂಪಿಸಿದ್ದು, ನೆರವು ಪಡೆದು ಪರ್ಯಾಯ ಇಂಧನ ಉತ್ಪಾದನೆಗೆ ಕೈ ಜೋಡಿಸಬೇಕು. ಶಾಲೆಗಳಲ್ಲೂ ಶಿಕ್ಷಕರು ಮಕ್ಕಳಿಗೆ ಪಾಠದ ಜತೆಗೆ ಪರಿಸರ ಪಾಠದ ಬಗ್ಗೆ ಬೋಧಿಸುವ ಮೂಲಕ ಮಕ್ಕಳನ್ನು ಜಾಗೃತಗೊಳಿಸಬೇಕೆಂದು ಸೂಚಿಸಿದರು.
ಸಮಿತಿಯ ಸಂಚಾಲಕ ಸಾಮಾಜಿಕ ಅರಣ್ಯ ಇಲಾಖೆ ವಿಭಾಗದ ಡಿಸಿಎಫ್ ಹುಚ್ಚಯ್ಯ, 460 ಕೋಟಿ ವರ್ಷಗಳ ಇತಿಹಾಸ ಹೊಂದಿರುವ ಭೂಮಿಯಲ್ಲಿನ ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡಿದ್ದೇವೆ. ಭೂಮಿ ಮೇಲೆ ವ್ಯಭಿಚಾರ ನಡೆಸಿದ್ದೇವೆ. ಮುಂದೆ ನಾವು ಪರ್ಯಾಯ ಇಂಧನವನ್ನು ಉತ್ಪಾದಿಸದಿದ್ದಲ್ಲಿ ಸಂಕಟ, ಸಂಕಷ್ಟ ಎದುರಿಸಬೇಕಾಗುವುದು. ಹೀಗಾಗಿ ಪರ್ಯಾಯ ಇಂಧನ ನೀಡುವ ಗಿಡ ಬೆಳೆಯುವ ಮೂಲಕ ಪರಿಸರ ಉಳಿಸುವ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸಬೇಕೆಂದು ಹೇಳಿ, ಈ ಯೋಜನೆಯ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಜತೆಗೆ ಪರಿಸರ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಕ್ಕಳನ್ನು ಜಾಗೃತಗೊಳಿಸಿದರು.
ಕೆರೆ ಅಂಗಳದಲ್ಲಿ ಗಿಡ ನೆಡುವ ಉದ್ದೇಶ: ಡೀಡ್ ಸಂಸ್ಥೆಯ ಶ್ರೀಕಾಂತ್ ಮಾತನಾಡಿ, ದೇಶದಲ್ಲಿ ಇಂಧನ ನೀತಿ ಜಾರಿಗೆ ತಂದಿದ್ದು, ಸುವರ್ಣಭೂಮಿ ಯೋಜನೆಯಡಿ ಇಂಧನ ನೀಡುವ ಹೊಂಗೆ, ಬೇವು, ಕಾಚಿ, ಸಿಮಾರೂಬ ಗಿಡಗಳನ್ನು ವಿತರಿಸಲಾಗುತ್ತಿದೆ. ಭೂಮಿಯ ಬದು, ಶಾಲಾ ಆವರಣ, ಕೆರೆ-ಕಟ್ಟೆಗಳ ಅಂಗಳದಲ್ಲಿ, ಅನುಪಯುಕ್ತ ಭೂಮಿಗಳಲ್ಲಿ ಬೆಳೆಯಬೇಕಿದೆ. ಹೈರಿಗೆ ಕೆರೆ ಸೇರಿದಂತೆ ತಾಲೂಕಿನ 40 ಪ್ರಮುಖ ಕೆರೆ ಅಂಗಳಗಳಲ್ಲಿ ಗಿಡ ನೆಡುವ ಉದ್ದೇಶ ಹೊಂದಿದೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.