ಈದ್ಗಾ ಮೈದಾನ ಕಾಪೌಂಡ್ ವಿವಾದಕ್ಕೆ ತೆರೆ
ಕ.ಪ್ರ.ವಾರ್ತೆ ನಂಜನಗೂಡು ಆ. 13
ಇಲ್ಲಿನ ಎಂಜಿಎಸ್ ರಸ್ತೆ ಬದಿಯಲ್ಲಿನ ತ್ಯಾಗರಾಜ ಕಾಲೋನಿಗೆ ಹೊಂದಿಕೊಂಡಿರುವ ಈದ್ಗಾ ಮೈದಾನ ಕೌಂಪೌಂಡ್ ನಿರ್ಮಾಣ ಕುರಿತ ವಿವಾದ ಮಂಗಳವಾರ ಬಗೆಹರಿಯಿತು.
ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಅವರ ಸೂಚನೆಯಂತೆ ಎಸ್ಪಿ ಅಭಿನವ್ ಕರೆ ಮತ್ತು ಪ್ರಮುಖರಾದ ಯು.ಎನ್. ಪದ್ಮನಾಭರಾವ್ ಮಧ್ಯಸ್ತಿಕೆ ವಹಿಸಿ ಉಭಯತ್ರರಿಗೂ ಒಪ್ಪಿಗೆ ಆಗುವಂತೆ ಸೂತ್ರವೊಂದನ್ನು ಮುಂದಿಟ್ಟು ವಿವಾದಕ್ಕೆ ಇತಿಶ್ರೀ ಹಾಡಿದರು.
ಈದ್ಗಾ ಮೈದಾನದ ಎರಡೂ ಕಡೆಗಳಲ್ಲಿ ಅಂದರೆ ಉತ್ತರ ಮತ್ತು ದಕ್ಷಿಣದ ಕಡೆ 15 ಅಡಿ ರಸ್ತೆಗೆ ಜಾಗಬಿಡುವುದರೊಂದಿಗೆ ಎರಡೂ ಬದಿಯಲ್ಲಿ 3 ಅಥವಾ 4 ಗೇಟ್ ಅಳವಡಿಸಿ ತ್ಯಾಗರಾಜನಗರ ಕಾಲೋನಿ ನಿವಾಸಿಗಳ ಓಡಾಟಕ್ಕೆ ಅನುಕಾಲ ಮಾಡಿಕೊಡಬೇಕು ಎಂಬ ಗಣ್ಯರ ಸಲಹೆಗೆ ಎರಡೂ ಗುಂಪಿನವರು ಸಹಮತ ವ್ಯಕ್ತಪಡಿಸಿದ್ದರಿಂದಾಗಿ ಸುಮಾರು ವರ್ಷಗಳ ವಿವಾದ ಬಗೆಹರಿದಿದೆ.
ಸಭೆಯಲ್ಲಿ ಕೈಗೊಂಡ ತೀರ್ಮಾನದಿಂದ ತ್ಯಾಗರಾಜ ಕಾಲೋನಿ ನಿವಾಸಿಗಳಿಗೆ ಈ ಹಿಂದೆ ಇದ್ದಂತೆ ಎಂಜಿಎಸ್ ರಸ್ತೆಯಿಂದ ತಮ್ಮ ಕಾಲೋನಿಗೆ ಸಂಪರ್ಕ ರಸ್ತೆ ಸೌಲಭ್ಯ ಮುಂದುವರಿದಂತಾಗಿದೆ. ಇದಕ್ಕೂ ಮುನ್ನ ಎಸ್ಪಿ ಸ್ಥಳ ಪರಿಶೀಲಿಸಿದರು. ನಂತರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ ಏರ್ಪಡಿಸಲಾಗಿತ್ತು.
ಕ್ಷುಲ್ಲಕ ಜಗಳದಿಂದ ಯಾವುದೇ ಪ್ರಯೋಜನವಿಲ್ಲ. ಪರಸ್ಪರ ವೈಮನಸ್ಸಿನಿಂದ ಏನನ್ನು ಸಾಧಿಸಲು ಸಾಧ್ಯವಿಲ್ಲ. ಸೋಲು- ಗೆಲವು, ಪ್ರತಿಷ್ಠೆಗಿಂತಲೂ ಎರಡೂ ವರ್ಗದವರು ಶಾಂತಿ ಕಾಪಾಡುವುದು ಮುಖ್ಯ. ಸೋದರತ್ವ, ಪ್ರೀತಿ- ವಿಶ್ವಾಸದಿಂದ ಬದುಕು ನಡೆಸಬೇಕು ಎಂದು ಎಸ್ಪಿ ಅಭಿನವ್ ಖರೆ ಮಾಡಿಕೊಂಡ ಮನವಿಗೆ ಉಭಯತ್ರರೂ ತಮ್ಮ ತಮ್ಮ ಪ್ರತಿಷ್ಠೆಯನ್ನು ಕೈಬಿಟ್ಟರು. ಸಮಾಜ ಸೇವಕ ಯು.ಎನ್.ಪದ್ಮನಾಭರಾವ್ ಮಾತನಾಡಿ, ಹಿಂದು ಮತ್ತು ಮುಸ್ಲಿಂ ಸಮುದಾಯ ಪಟ್ಟಣದಲ್ಲಿ ಹಿಂದಿನಿಂದಲೂ ಉತ್ತಮ ಬಾಂಧವ್ಯ ಹೊಂದಿದೆ. ಶಾಂತಿಗೆ ಹೆಸರಾದ ನಂಜನಗೂಡು ಪಟ್ಟಣದಲ್ಲಿ ಯಾವುದೆ ಅಹಿತಕರ ಘಟನೆ ನಡೆಯಬಾರದು ಎಂದು ಹೇಳಿ, ಉಭಯತ್ರರಿಗೂ ಒಪ್ಪಿಗೆಯಾಗುವ ಸೂತ್ರವನ್ನು ಸಭೆಯ ಮುಂದಿಟ್ಟರು.
ಎರಡೂ ಗುಂಪಿನವರೂ ಪರಸ್ಪರ ಹೂಡಿರುವ ಮೊಕದ್ದಮೆಯನ್ನು ಹಿಂದಕ್ಕೆ ಪಡೆಯಲು ತೀರ್ಮಾನಿಸಿದರು. ಸಭೆ ಬಳಿಕ ಸ್ವತಃ ಎಸ್ಪಿ ಅವರೆ ಎರಡೂ ಗುಂಪಿನ ಪ್ರಮುಖರಿಗೆ ಸಿಹಿ ತಿನ್ನಿಸಿ ಎಲ್ಲರ ಮನ ಗೆದ್ದರು.
ತಹಸೀಲ್ದಾರ್ ಅರುಳ್ಕುಮಾರ್, ಪುರಸಭೆ ಮುಖ್ಯಾಧಿಕಾರಿ ಡಿ. ರಮೇಶ್, ಸಿಪಿಐ ಜಿ.ಎಸ್. ರಘು ಮತ್ತು ಪಿಎಸ್ಐ ರವಿಶಂಕರ್, ಮುಖಂಡರಾದ ನಿಸರಾಹಮ್ಮದ್, ಖಾದರ್, ನಯಾಜ್, ಸುಬ್ಬಣ್ಣ, ವಂಸಂತ, ಮಹೇಶ್, ಬಿಜೆಪಿ ಪಟ್ಟಣಾಧ್ಯಕ್ಷ ಮಹೇಶ್ಕುಮಾರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

