ಮೈಸೂರು

ಗ್ರಾಮೀಣ ಪದ ಸಂಪತ್ತು ಸಂಗ್ರಹವಾಗಲಿ: ಡಾ. ಮಳಲಿ

Published On :


ಕ.ಪ್ರ.ವಾರ್ತೆ    ಮೈಸೂರು    ಆ. 13
ಗ್ರಾಮೀಣ ಪದ ಸಂಪತ್ತನ್ನು ಸಂಗ್ರಹಿಸಿ ದಾಖಲಿಸುವ ಅಗತ್ಯವಿದೆ ಎಂದು ಸಾಹಿತಿ ಡಾ. ಮಳಲಿ ವಸಂತಕುಮಾರ್ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸಂವಹನ ಸಂಯುಕ್ತಾಶ್ರಯದಲ್ಲಿ ಕಲಾಮಂದಿರದ ಮನೆಯಂಗಳದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕೆಂಪಾಚಾರ್ ಕುಪ್ಯ ಅವರ ಮಂಥನ ಮತ್ತು ಕೆ.ಕೆ. ಚಂದ್ರಕಾಂತ ಕುಪ್ಯ ಅವರ ಶಬರಿಮಲೈ ಶ್ರೀ ಅಯ್ಯಪ್ಪಸ್ವಾಮಿ ಎಂಬ ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಜನರ ಆಡುಭಾಷೆ ಅದ್ಭುತವಾಗಿದ್ದು, ಇದನ್ನು ಯಾವುದೇ ಕಾರಣಕ್ಕೂ ಇಂಗ್ಲಿಷ್ನಲ್ಲಿ ಅನುವಾದ ಮಾಡಲು ಸಾಧ್ಯವಿಲ್ಲ. ಗ್ರಾಮೀಣ ಭಾಗದ ಇಂತಹ ಪದ ಸಂಪತ್ತನ್ನು ಸಂಗ್ರಹಿಸುವ ಕೆಲಸವನ್ನು ಕನ್ನಡ ಸಾಹಿತ್ಯ ಪರಿಷತ್ ಮಾಡಬೇಕು. ಈ ಸಂಬಂಧ ಅಧ್ಯಕ್ಷರಾದ ಪುಂಡಲೀಕ ಹಾಲಂಬಿ ಅವರಲ್ಲಿ ಒತ್ತಾಯಿಸಿದ್ದೇನೆ. ಅಧಿಕಾರಕ್ಕೆ ಬಂದು ಒಂದು ವರ್ಷವಾಗುತ್ತಿದ್ದು, ಕೂಡಲೇ ಈ ಕೆಲಸಕ್ಕೆ ಮುಂದಾಗಬೇಕು ಎಂದರು.
ರಾಗೌ, ಸುಧಾಕರ, ಬೋರೇಗೌಡ ಹಾಗೂ ಜಿಶಂಪ ಅವರು ಜನಪದ ಕಥೆಗಳನ್ನು ಅದ್ಭುತವಾಗಿ ರಚಿಸಿದ್ದಾರೆ. ಅಂತಯೇ ಎಚ್.ಎಲ್. ನಾಗೇಗೌಡ, ದೇಜಗೌ ಮುಂತಾದವರು ಜನಪದದ ಬೆಳವಣಿಗೆಗೆ ಅಪಾರವಾಗಿ ಶ್ರಮಿಸಿದ್ದಾರೆ. ಪ್ರಾಚೀನ ಕಾಲದಲ್ಲಿಯೇ ಜನಪದ ಹಾಗೂ ಶಾಸ್ತ್ರೀಯ ಪರಂಪರೆಯ ಸಾಹಿತ್ಯ ಕೃತಿಗಳಲ್ಲಿ ತಂತ್ರಗಾರಿಕೆ ಕಾಣಬಹುದಾಗಿದೆ ಎಂದು ತಿಳಿಸಿದರು. ದೇಶದ ಹೆಸರಾಂತ ಬಹುತೇಕ ಪುಣ್ಯಕ್ಷೇತ್ರಗಳು ಪ್ರಕೃತಿಯ ಮಡಿಲಿನಲ್ಲಿ ಇರುವುದನ್ನು ಕಾಣಬಹುದು. ವಿದೇಶಗಳಿಗೆ ಹೋಗಲು ಹಾತೊರೆಯುವ ನಾವು ಮೊದಲು ನಮ್ಮ ದೇಶದ ಹಾಗೂ ಕರ್ನಾಟಕದ ಸುಂದರ ತಾಣಗಳನ್ನು ನೋಡಬೇಕು. ಲೇಖಕರ ಈ ಎರಡು ಕೃತಿಗಳಲ್ಲಿ ಧಾರ್ಮಿಕ  ವಿಚಾರಗಳೊಂದಿಗೆ ವೈಚಾರಿಕ ಪ್ರಜ್ಞೆ ಅನಾವರಣಗೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.   
ಕೃತಿಗಳನ್ನು ಕುರಿತು ಮೈಸೂರು ವಿವಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ. ಮಹೇಶ್ ಚಂದ್ರಗುರು ಮಾತನಾಡಿದರು.
ಸಂಸ್ಕೃತಿ ಪೋಷಕ ಕೆ. ರಘುರಾಂ, ಕೆ.ಆರ್. ಆಸ್ಪತ್ರೆ  ಪ್ರಾಧ್ಯಾಪಕ ಡಾ.ಕೆ.ಎಂ. ಗೋವಿಂದೇಗೌಡ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಮುಖ್ಯ ಅತಿಥಿಗಳಾಗಿದ್ದರು. ಸಂವಹನ ಪ್ರಕಾಶನ ಮಾಲೀಕ ಡಿ.ಎನ್. ಲೋಕಪ್ಪ ಇದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ. ಚಂದ್ರಶೇಖರ್ ಪ್ರಾಸ್ತಾವಿಕ ಮಾತುಗಳಾಡಿದರು. ಗೌರವ ಕಾರ್ಯದರ್ಶಿ ಡಾ. ವೈ.ಡಿ. ರಾಜಣ್ಣ ಸ್ವಾಗತಿಸಿದರು. ಕೆ.ಸಿ. ಮಂಜುಳಾ ಭದ್ರೇಗೌಡ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.