ಮೈಸೂರು

ಸರ್ಕಾರಿ ನೌಕರರ ಸಂಘಕ್ಕೆ ಆಯ್ಕೆ

Published On :

ಹುಣಸೂರು: ರಾಜ್ಯ ಸರ್ಕಾರಿ ನೌಕರರ ಸಂಘದ ಹುಣಸೂರು ತಾಲೂಕು ಶಾಖೆಗೆ ನಡೆದ ನಿರ್ದೇಶಕರ ಸಭೆಯಲ್ಲಿ ನೂತನ ಪದಾಧಿಕಾರಿಗಳಾಗಿ ಕೆ.ಆರ್. ವರದರಾಜು (ನ್ಯಾಯಾಂಗ ಇಲಾಖೆ- ಅಧ್ಯಕ್ಷರು), ಕೆ.ಪಿ. ಶ್ರೀನಿವಾಸ (ಕಂದಾಯ ಇಲಾಖೆ), ಎಚ್.ಪಿ. ವೀರಭದ್ರಪ್ಪ (ಶಿಕ್ಷಣ ಇಲಾಖೆ- ಇಬ್ಬರೂ ಉಪಾಧ್ಯಕ್ಷರು), ಎಸ್.ಪಿ. ಮಾರುತಿ (ಪ್ರಧಾನ ಕಾರ್ಯದರ್ಶಿ, ಶಿಕ್ಷಣ ಇಲಾಖೆ), ಯು.ಡಿ. ವಿಶ್ವನಾಥ್ (ಸಹ ಕಾರ್ಯದರ್ಶಿ, ಆರೋಗ್ಯ ಇಲಾಖೆ), ಎಚ್.ಎಸ್. ಲೋಕೇಶ್ (ಖಜಾಂಚಿ, ಶಿಕ್ಷಣ ಇಲಾಖೆ), ಚಂದ್ರೇಗೌಡ (ಕೈಗಾರಿಕಾ ಇಲಾಖೆ, ಕ್ರೀಡಾ ಕಾರ್ಯದರ್ಶಿ), ಸುಬ್ರಹ್ಮಣ್ಯ (ಸಾಂಸ್ಕೃತಿಕ ಕಾರ್ಯದರ್ಶಿ, ರೇಷ್ಮೆ ಇಲಾಖೆ), ಮಹದೇವ (ತಾಪಂ, ಆಂತರಿಕ ಲೆಕ್ಕಪರಿಶೋದಕ), ಗೌರವ ಸಲಹೆಗಾರರಾಗಿ ರಾಜನ್ (ಕೃಷಿ ಇಲಾಖೆ), ದಯಾನಂದ್ (ಎಪಿಎಂಸಿ), ಸಂಘಟನಾ ಕಾರ್ಯದರ್ಶಿಗಳಾಗಿ ಎಸ್. ಗೋವಿಂದೇಗೌಡ (ಶಿಕ್ಷಣ ಇಲಾಖೆ), ರಾಜನಾಯಕ (ಪಶುಸಂಗೋಪನೆ), ಡಿ. ಶಂಕರ (ಭೂ ಮಾಪನ ಇಲಾಖೆ) ಹಾಗೂ ರಾಜ್ಯ ಪರಿಷತ್ ಸದಸ್ಯರಾಗಿ ಎಚ್.ಪಿ. ಶಿವಲಿಂಗಪ್ಪ (ಕಂದಾಯ ಇಲಾಖೆ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚಿನ್ನಾಭರಣ  ಕಳವು
ಪಿರಿಯಾಪಟ್ಟಣ: ಪಟ್ಟಣದ ಶುಭ್ ಜ್ಯುವೆಲರ್ಸ್ ಚಿನ್ನಾಭರಣ ಅಂಗಡಿಗೆ ಕನ್ನ ಹಾಕಿರುವ ಕಳ್ಳರು, ಲಕ್ಷಾಂತರ ಮೌಲ್ಯದ ಬೆಳ್ಳಿ ಸಾಮಗ್ರಿ ಹಾಗೂ ಮತ್ತಿತರ ವಸ್ತುಗಳನ್ನು ದೋಚಿರುವ ಘಟನೆ ಭಾನುವಾರ ರಾತ್ರಿ ಜರುಗಿದೆ. ಇಲ್ಲಿನ ಬಿ.ಎಂ ರಸ್ತೆಯಲ್ಲಿರುವ ತಾರೇಶ್ ಎಂಬವರಿಗೆ ಸೇರಿದ ಶುಭ್ ಜ್ಯುಯಲರ್ಸ್ ಚಿನ್ನಾಭರಣ ಅಂಗಡಿಗೆ ಹೊಂದಿಕೊಂಡಂತಿರುವ ಶ್ರೀ ವಿನಾಯಕ ಆಫ್‌ಸೆಟ್ ಪ್ರಿಂಟರ್ಸ್ ಅಂಗಡಿಯ ಬಾಗಿಲ ಮೂಲಕ ಒಳನುಗ್ಗಿರುವ ಕಳ್ಳರು ಆಫ್‌ಸೆಟ್ ಪ್ರಿಂಟರ್ಸ್ ಅಂಗಡಿಯ ಒಳಭಾಗದ ಗೋಡೆಗೆ ಕನ್ನ ಹಾಕಿ, ಪಕ್ಕ ಜ್ಯುಯಲರ್ಸ್‌ಗೆ ನುಗ್ಗಿ ಅಂಗಡಿಯಲ್ಲಿದ್ದ ಅಂದಾಜು 2.5 ಲಕ್ಷ ಮೌಲ್ಯದ ಬೆಳ್ಳಿ ಸಾಮಗ್ರಿಗಳನ್ನು ಹಾಗೂ ಎಲ್‌ಸಿಡಿ ಮಾನಿಟರ್ ಮತ್ತಿತರ ಉಪಕರಣಗಳನ್ನು ದೋಚಿದ್ದಾರೆ.

'ಕೈ' ಸೋಲಿಸುವುದೇ ನಮ್ಮ ಗುರಿ
ನಂಜನಗೂಡು: ರಾಷ್ಟ್ರ ರಾಜಕಾರಣದಲ್ಲಿ ರಾಜಕೀಯ ಬದಲಾವಣೆಯ ಗಾಳಿ ಬೀಸುತ್ತಿರುವ ಹಿನ್ನೆಲೆ ನರೇಂದ್ರ ಮೋದಿ ಆದೇಶದಂತೆ, ಕೆಜೆಪಿ, ಜೆಡಿಎಸ್ ಪಕ್ಷದ ಜತೆ ವಿಧಾನ ಪರಿಷತ್ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡು ಕಾಂಗ್ರೆಸ್ ಅನ್ನು ಸೋಲಿಸುವುದೆ ನಮ್ಮ ಪಕ್ಷದ ಮೂಲ ಉದ್ದೇಶ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಚ್. ವಿಜಯಶಂಕರ್ ಹೇಳಿದರು. ರಾಜಕೀಯ ಹಿನ್ನೆಲೆ ಉಪಚುನಾವಣೆಗಳಲ್ಲಿ ಆಡಳಿತ ಪಕ್ಷ ಗೆಲ್ಲುವುದು ಸಹಜ. ಆದರೆ ನಾವು ಕಾಂಗ್ರೆಸ್ ಅನ್ನು ನಿಶ್ಚಿತವಾಗಿ ಸೋಲಿಸಬೇಕೆಂದು ಎರಡು ಲೋಕಸಭೆ ಹಾಗೂ ವಿಧಾನ ಪರಿಷತ್ ಉಪಚುನಾವಣೆಗಳಲ್ಲಿ ಕೆಜೆಪಿ ಹಾಗೂ ಜೆಡಿಎಸ್‌ಗೆ ಬೆಂಬಲ ನೀಡಿರುವುದಾಗಿ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟ ಪಡಿಸಿದರು.

ಇಂದಿನಿಂದ ಮದ್ಯ ನಿಷೇಧ
ಮೈಸೂರು: ಮೈಸೂರು- ಚಾಮರಾಜನಗರ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಧನಾಪರಿಷತ್ತಿಗೆ ಆ.22 ರಂದು ನಡೆಯಲಿರು ಉಪ ಚುನಾವಣೆಯ ಹಿನ್ನೆಲೆಯಲ್ಲಿ ಆ.20ರ ಸಂಜೆ 4 ರಿಂದ ಆ.22ರ ಸಂಜೆ 4 ರವರೆಗೆ ಮೈಸೂರು ಜಿಲ್ಲಾದ್ಯಂತ ಎಲ್ಲ ವಿಧದ ಮದ್ಯದಂಗಡಿ ಮುಚ್ಚಲು, ಮದ್ಯ ಮಾರಾಟ, ಸಾಗಾಣಿಕೆ, ಶೇಖರಣೆಯನ್ನು ನಿಷೇಧಿಸಿ ಒಣ ದಿವಸಗಳೆಂದು ಜಿಲ್ಲಾಧಿಕಾರಿ ಸಿ. ಶಿಖಾ ಘೋಷಿಸಿದ್ದಾರೆ.

ಆಸ್ತಿ ರಕ್ಷಿಸುವಲ್ಲಿ ಪೊಲೀಸರು ವಿಫಲ: ಆರೋಪ
ಮೈಸೂರು: ಕೋಟಿಗೊಬ್ಬ ಶರಣ ಶ್ರೀ ಮಹದೇಶ್ವರಸ್ವಾಮಿ ದೇವಸ್ಥಾನ ಟ್ರಸ್ಟ್‌ಗೆ ಸೇರಿದ ಆಸ್ತಿಯನ್ನು ರಕ್ಷಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ನಂಜನಗೂಡು ತಾಲೂಕು ಬಿದರಗೂಡಿನ ಟಿ. ಶಿವಣ್ಣ ಆರೋಪಿಸಿದರು. ನನಗೆ ಸೇರಿದ ಈ ಟ್ರಸ್ಟ್ ಈಗ ಅನ್ಯರ ಪಾಲಾಗುತ್ತಿದೆ. ಕಾ.ಪು. ಸಿದ್ದಲಿಂಗಸ್ವಾಮಿ ಅವರ ಬೆಂಬಲಿಗರು ನನ್ನ ಮೇಲೆ ಹಲ್ಲೆ ನಡೆಸಿ ಟ್ರಸ್ಟ್‌ಗೆ ಸಂಬಂಧಿಸಿದ ಎಲ್ಲ ದಾಖಲಾತಿಗಳನ್ನು ಕಳ್ಳತನ ಮಾಡಿದ್ದಾರೆ. ಸುಮಾರು 36 ಕಳಸ ಮತ್ತು ಟ್ರಸ್ಟ್‌ಗೆ ಸಂಬಂಧಿಸಿದ ಎಲ್ಲ ಅಸಲಿ ದಾಖಲಾತಿಯನ್ನು ಕದ್ದು ಪರಾರಿಯಾಗಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಪ್ರಾಯೋಜಕರ ಸಭೆ ಇಂದು
ಮೈಸೂರು: ಈ ಬಾರಿಯ ದಸರಾ ಮಹೋತ್ಸವದಲ್ಲಿಯೂ ಸೆಸ್ಕ್ ವಿಶಿಷ್ಟ ದೀಪಾಲಂಕಾರ ಮಾಡಲು ತೀರ್ಮಾನಿಸಿದ್ದು, ಆ.20ರ ಸಂಜೆ 4ಕ್ಕೆ ಪ್ರಾಯೋಜಕರ ಸಭೆ ಕರೆದಿದೆ. ದೀಪಾಲಂಕಾರದ ನಿರ್ವಹಣೆಯಲ್ಲಿ ಪ್ರಾಯೋಜಕತ್ವದ ಕೊಡುಗೆ ಹಾಗೂ ಸಾರ್ವಜನಿಕರ ಸಹಕಾರ ಅಗತ್ಯ. ಈ ಬಗ್ಗೆ ಈ ಸಾಲಿನ ದಸರಾ ದೀಪಾಲಂಕಾರ ವ್ಯವಸ್ಥೆಯನ್ನು ವಿಶಿಷ್ಟ ರೀತಿಯಲ್ಲಿ ಹಾಗೂ ಹೆಚ್ಚು ಆಕರ್ಷಕವಾಗಿ, ವಿನೂತನವಾಗಿ ಮತ್ತು ಅಚ್ಚುಕಟ್ಟಾಗಿ ನಿರ್ವಹಿಸುವ ಸಂಬಂಧ ವಿವರಗಳನ್ನು ಚರ್ಚಿಸುವ ಮೂಲಕ ಅಭಿಪ್ರಾಯ ಸಲಹೆ ಮತ್ತು ಸೂಚನೆ ಸಂಗ್ರಹಿಸಲು ನ್ಯೂ ಕಾಂತರಾಜ ಅರಸ್ ರಸ್ತೆಯ ಸೆಸ್ಕ್ ಕಚೇರಿಯಲ್ಲಿ ಪ್ರಾಯೋಜಕರ ಸಭೆ ಕರೆದಿದೆ. ಆದ್ದರಿಂದ ಆಸಕ್ತ ಪ್ರಾಯೋಜಕರು ಸಭೆಯಲ್ಲಿ ಭಾಗವಹಿಸಿ ತಮ್ಮ ಅಮೂಲ್ಯ ಸಲಹೆ ಸಹಕಾರ ನೀಡುವಂತೆ ಪ್ರಧಾನ ವ್ಯವಸ್ಥಾಪಕರು ಕೋರಿದ್ದಾರೆ.

ಕಾರ್ಮಿಕರಿಗೆ ವೇತನ ಸಹಿತ ರಜೆ
ರಾಜ್ಯದಲ್ಲಿನ ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಚುನಾವಣಾ ಆಯೋಗವು ಲೋಕಸಭಾ ಕ್ಷೇತ್ರಗಳ ಉಪ ಚುನಾವಣೆ ಆ. 21ರಂದು ನಡೆಯುವುದರಿಂದ, ಕಾರ್ಮಿಕರಿಗೆ ವೇತನ ಸಹಿತ ರಜೆ ನೀಡಬೇಕು. ಮತದಾನದ ದಿನದಂದು ಮತ ಕ್ಷೇತ್ರಗಳ ವ್ಯಾಪ್ತಿಯ ಎಲ್ಲಾ ಕಾರ್ಖಾನೆಗಳು, ಕೈಗಾರಿಕಾ ಸಂಸ್ಥೆಗಳು, ಅಂಗಡಿ, ವಾಣಿಜ್ಯ ಸಂಸ್ಥೆಗಳು, ಇತರೆ ಸಂಸ್ಥೆಗಳಲ್ಲಿ, ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳು ಹಾಗೂ ಇತರೆ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಕರ್ನಾಟಕ ಔದ್ಯಮಿಕ ಸಂಸ್ಥೆಗಳ (ರಾಷ್ಟ್ರೀಯ ಮತ್ತು ಹಬ್ಬಗಳ ರಜೆ) ಕಾಯ್ದೆ, 1963ರ ಕಲಂ 3 (ಎ) ಅನ್ವಯ ಆ. 21ರಂದು ಮತದಾನ ಕ್ಷೇತ್ರಗಳಲ್ಲಿ ಸಂವಿಧಾನಾತ್ಮಕ ಹಕ್ಕು ಚಲಾಯಿಸಲು ಕಾರ್ಮಿಕರಿಗೆ ವೇತನ ಸಹಿತ ರಜೆ ನೀಡುವಂತೆ ಮಾಲೀಕರು ಮತ್ತು ನಿಯೋಜಕರಿಗೆ ಸೂಚಿಸಿ ಆದೇಶ ಹೊರಡಿಸಲಾಗಿದೆ.

ರಾಜೀವ್ ಗಾಂಧಿ, ಅರಸು ಜನ್ಮದಿನ
ಮೈಸೂರು: ನಗರ ಕಾಂಗ್ರೆಸ್ ಕಚೇರಿಯಲ್ಲಿ ಆ.20ರ ಬೆಳಗ್ಗೆ 11ಕ್ಕೆ ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಹುಟ್ಟುಹಬ್ಬ ಆಚರಿಸುತ್ತಿರುವುದಾಗಿ ನಗರ ಕಾಂಗ್ರೆಸ್ ಸಮಿತಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಶಿವಮಲ್ಲು ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್ ನೇತೃತ್ವದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಂಸದ ಎಚ್. ವಿಶ್ವನಾಥ್, ಶಾಸಕರಾದ ತನ್ವೀರ್ ಸೇಠ್, ವಾಸು, ಎಂ.ಕೆ. ಸೋಮಶೇಖರ್ ಭಾಗವಹಿಸುವರು ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಬಳಿಕ ಮಧ್ಯಾಹ್ನ 12.30ಕ್ಕೆ ಕರುಣಾ ಟ್ರಸ್ಟ್ ನಿರ್ಗತಿಕ ಮಾನಸಿಕ ಅಸ್ವಸ್ಥ ಮಹಿಳೆಯರ ಆರೈಕೆ ಕೇಂದ್ರದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು. ಮುಖಂಡರಾದ ವೀರರಾಜು, ನಾಗರಾಜು, ಪುಟ್ಟಣ್ಣ, ಬಸವಣ್ಣ ಇದ್ದರು.

ನಾಳೆ ಕಾರ್ಯಾಗಾರ
ಮೈಸೂರು: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್, ಉದಯಗಿರಿಯ ಮೆಜೆಸ್ಟಿಕ್ ಶಾಲೆ ಹಾಗೂ ಪೀಪಲ್ಸ್ ಲೀಗಲ್ ಫೋರಂ ಸಂಯುಕ್ತಾಶ್ರಯದಲ್ಲಿ ಆ.21ರ ಬೆಳಗ್ಗೆ 10 ಕ್ಕೆ ಉದಯಗಿರಿಯ ಮೆಜೆಸ್ಟಿಕ್ ಶಾಲಾ ಆವರಣದಲ್ಲಿ ಮಕ್ಕಳ ಹಕ್ಕುಗಳು ಮತ್ತು ಆಡಳಿತ ವಿಷಯದ ಬಗ್ಗೆ ಒಂದು ದಿನದ ಕಾರ್ಯಾಗಾರ ನಡೆಯಲಿದೆ. ಸೆಸ್ಕ್‌ನ ವ್ಯವಸ್ಥಾಪಕ ನಿರ್ದೇಶಕ ಎ.ಬಿ. ಇಬ್ರಾಹಿಂ ಕಾರ್ಯಕ್ರಮ ಉದ್ಘಾಟಿಸುವರು. ಐಐಪಿಎ ಅಧ್ಯಕ್ಷ ಆರ್.ಎನ್. ಮೂರ್ತಿ ಅಧ್ಯಕ್ಷತೆ ವಹಿಸುವರು.

ಗಮಕ ವಿದ್ವಾನ್ ರಾಜಗೋಪಾಲ್
ಮೈಸೂರು: ಆದರ್ಶ ಸೇವಾರತ್ನ ಪ್ರಶಸ್ತಿ ಪುರಸ್ಕೃತ ಮತ್ತು ಗಮಕ ವಿದ್ವಾನ್ ಆರ್.ಕೆ. ರಾಜಗೋಪಾಲ್ (87) ಭಾನುವಾರ ನಿಧನರಾದರು. ಇವರಿಗೆ ಇಬ್ಬರು ಪುತ್ರರು, ನಾಲ್ವರು ಪುತ್ರಿಯರು ಇದ್ದಾರೆ. ಅವರು ಚಾಮರಾಜನಗರ ಜಿಲ್ಲೆ ರಾಮಸಮುದ್ರದವರು. ಹಾಲಿ ಬೋಗಾದಿಯಲ್ಲಿ ವಾಸವಾಗಿದ್ದರು. ಇವರು 40 ವರ್ಷಗಳ ಕಾಲ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.