62ನೇ ನಾಲೆನಲ್ಲಿ ಹರಿಯದ ನೀರು; ಗುಮ್ಮನಹಳ್ಳಿ ಜನ ಸುಸ್ತು
ಕೆ.ಆರ್. ನಗರ: ಪ್ರಸ್ತುತ ಎಲ್ಲೆಡೆ ಉತ್ತಮವಾಗಿ ಮಳೆಯಾಗುತ್ತಿದ್ದು, ಅಣೆಕಟ್ಟೆಗಳು ತುಂಬಿದ್ದರೂ ಕೂಡ ಅಧಿಕಾರಿಗಳ ಬೇಜವಾಬ್ದಾರಿಯಿಂದ ಹಾರಂಗಿ ಬಲೆದಂಡೆ ವ್ಯಾಪ್ತಿಯ ಗುಮ್ಮನಹಳ್ಳಿ ಗ್ರಾಮದ ಸುತ್ತಮುತ್ತ ಬರುವ ಉಪನಾಲೆಗಳಿಗೆ ನೀರಿನ ಭಾಗ್ಯ ಲಭಿಸದೇ ನೂರಾರು ರೈತರು ಚಿಂತೆಗೀಡಾಗಿದ್ದಾರೆ.
ಹಾರಂಗಿಯ ಎಡದಂಡೆ ನಾಲೆಗೆ ಬರುವ 62ನೇ ಉಪನಾಲೆಯ ವ್ಯಾಪ್ತಿಯ ಗುಮ್ಮನಹಳ್ಳಿ, ಹೊನ್ನೇನಹಳ್ಳಿ, ಕೆಡಗ, ಮಾವನೂರು, ಪಶುಪತಿ, ಬಳ್ಳೂರು, ಲಕ್ಷ್ಮೀಪುರ ಹಾಗೂ ಚಿಕ್ಕನಾಯಕ್ಕನಹಳ್ಳಿ ಸುತ್ತಮುತ್ತಲಿನ ಜಮೀನಿಗೆ ಈ ನಾಲೆಯಿಂದಲೆ ನೀರು ಒದಗಿಸಬೇಕಾಗಿದ್ದು, ಅಧಿಕಾರಿಗಳ ಬೇಜವಾಬ್ದಾರಿಯಿಂದ ಈವರೆವಿಗೂ ನೀರು ಹಾಯಿಸಿಲ್ಲ. ಈ ಭಾಗದ ರೈತರು ಬತ್ತದ ನಾಟಿ ಮಾಡಲು ಚಾತಕ ಪಕ್ಷಿಯಂತೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಜತೆಗೆ ನಾಲೆಯಲ್ಲಿ ಹೂಳು ತೆಗೆಯಲು ಹಣ ಬಿಡುಗಡೆಯಾಗಿದ್ದರೂ ಕೂಡ, ಕಾಮಗಾರಿ ಮಾಡದೆ ಉದಾಸೀನ ಮಾಡುತ್ತಿದ್ದು, ನಾಲೆ ದುರಸ್ತಿಗೆ ಟೆಂಡರ್ ಪಡೆದ ಗುತ್ತಿಗೆದಾರ ಮತ್ತು ಅಧಿಕಾರಿಗಳು ನಾಪತ್ತೆಯಾಗಿದ್ದು, ಪ್ರಸ್ತುತ ನಾಲೆಗೆ ನೀರು ಬಿಟ್ಟರೂ ಕೊನೆ ಭಾಗದ ಜಮೀನುಗಳಿಗೆ ನೀರು ತಲುಪುವುದೆ ಎಂದು ರೈತರು ಚಿಂತಿಸುವಂತಾಗಿದೆ.
ಹೂಳು ತುಂಬಿರುವ ನಾಲೆ: 62ನೇ ಉಪನಾಲೆಯಲ್ಲಿ ಸಂಪೂರ್ಣವಾಗಿ ಹೂಳು ತುಂಬಿಕೊಂಡಿದ್ದು, ನೀರು ಸರಾಗವಾಗಿ ಹರಿಯಲಾಗದ ಸ್ಥಿತಿಯಲ್ಲಿದೆ. ಗಿಡಗಂಟೆಗಳು, ಜೊಂಡು ಬೆಳೆದು ನಿಂತಿದ್ದು, ಟೆಂಡರ್ ಆಗಿದ್ದರೂ ಕೂಡ ಅಧಿಕಾರಿಗಳು ಕಾಮಗಾರಿ ಮಾಡಿ ನಾಲೆಗೆ ನೀರು ಹರಿಸುವಲ್ಲಿ ವಿಫಲವಾಗಿದ್ದಾರೆ ಎಂದು ರೈತರ ಆರೋಪ. ಕಳೆದ ಬಾರಿಯೂ ನಾಲೆಯಲ್ಲಿ ಹೂಳು ತೆಗೆಯಲು ಒಂದು ಲಕ್ಷ ರು. ಹಣ ಬಿಡುಗಡೆಯಾಗಿತ್ತು. ಆದರೆ ಕಾಮಗಾರಿ ಮಾಡದೆ ಅಧಿಕಾರಿಗಳು ಬಿಲ್ ಪಾವತಿ ಮಾಡಿಕೊಂಡಿದ್ದರು. ಆ ವೇಳೆ ರೈತರು ಎಂಜಿನಿಯರ್ಗಳನ್ನು ವಿಚಾರಣೆ ಮಾಡಿದ ನಂತರ, ಸಂಪೂರ್ಣವಾಗಿ ಹೂಳು ತೆಗೆಯದೆ ಎರಡು ದಿನ ಜೆಸಿಬಿಯಲ್ಲಿ ತ್ವರಿತವಾಗಿ ಕೆಲಸ ನಿರ್ವಹಿಸಿ ಹಿಂತಿರುಗಿದ್ದರು. ಈಗಲೂ ಅದೇ ಪರಿಸ್ಥಿತಿ ನಾಲೆಗೆ ಬಂದೊದಗಿದೆ ಎನ್ನುತ್ತಾರೆ ಅವರು. ವರುಣನ ಅವಕೃಪೆಯಿಂದ ಎರಡು ವರ್ಷ ನೀರಾವರಿ ಫಸಲು ತೆಗೆಯು ಆಸೆ ಕೈಬಿಟ್ಟಿದ್ದ ಈ ಭಾಗದ ರೈತರು, ಈ ಬಾರಿ ಉತ್ತಮವಾಗಿ ಮಳೆಯಾಗಿದ್ದು, ಅಧಿಕಾರಿಗಳು ನಾಲೆಗಳಲ್ಲಿ ಹೂಳು ತೆಗೆಸಿ ನೀರು ಸಮರ್ಪಕವಾಗಿ ಹರಿಸುತ್ತಾರೆ ಎಂಬ ವಿಶ್ವಾಸದಿಂದ ಬತ್ತದ ನಾಟಿ ಮಾಡಲು ಬೇಕಾದ ಸಿದ್ದತೆಗಳನ್ನು ಮಾಡಿಕೊಂಡು ನೀರಿಗಾಗಿ ಪ್ರತಿಯೊಬ್ಬ ರೈತರು ಕಾಯುವಂತಾಗಿದೆ.
ನಾಲೆಗೆ ನೀರಿಲ್ಲದ ಸಮಸ್ಯೆಗೆ ಅಧಿಕಾರಿಗಳ ನಿರ್ಲಕ್ಷ್ಯ
ನಾಲೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯ ರೈತ ಸಮುದಾಯ ಸಕಾಲದಲ್ಲಿ ಬೆಳೆ ತೆಗೆಯಲು ಸಾಧ್ಯವಾಗದೇ ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಾಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಳೇಮಿರ್ಲೆ ಸುನಯ್ಗೌಡ ಆರೋಪಿಸಿದರು. ಹಾರಂಗಿಯ ಎಡದಂಡೆ ನಾಲೆಗೆ ಬರುವ 62ನೇ ಉಪನಾಲೆಯ ವ್ಯಾಪ್ತಿಯ ಗುಮ್ಮನಹಳ್ಳಿ ಗ್ರಾಮದ ನಾಲೆಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನಾಲೆಗಳಲ್ಲಿ ಸಂಪೂರ್ಣವಾಗಿ ಹೂಳು ತುಂಬಿದ್ದರೂ ನೀರಾವರಿ ಇಲಾಖೆ ಅಧಿಕಾರಿಗಳು ದುರಸ್ತಿಗೆ ಕ್ರಮ ಕೈಗೊಂಡು ನೀರು ಹರಿಸುವಲ್ಲಿ ವಿಫಲರಾಗಿದ್ದಾರೆ. ನಾಲೆಗಳ ದುರಸ್ತಿಗೆ ಬರುವ ಹಿಂದಿನ ದಿನ ಕಾಲುವೆಗೆ ನೀರು ಬಿಟ್ಟು ಕಾಮಗಾರಿ ನಿರ್ವಹಿಸಲು ಕಳುಹಿಸುತ್ತಿದ್ದಾರೆ. ಇದು ವ್ಯಸ್ಥಿತವಾಗಿ ಅಧಿಕಾರಿಗಳು ಒಳಸಂಚು ನಡೆಸುತ್ತಿದ್ದಾರೆ ಎಂಬ ಗುಮಾನಿ ಹುಟ್ಟಿಸುತ್ತಿದೆ. ಇದರಿಂದ ರೈತ ಸಮುದಾಯ ಸಕಾಲದಲ್ಲಿ ಬೆಳೆ ತೆಗೆಯಲು ಸಾಧ್ಯವಾಗದೇ ಸಂಕಷ್ಟದಲ್ಲಿ ಸಿಲುಕುತ್ತಿದ್ದಾರೆ ಎಂದು ಟೀಕಿಸಿದರು. ಕೃಷಿ ಚಟುವಟಿಕೆಗಳು ಪ್ರಾರಂಭದ ದಿನಗಳಲ್ಲಿ ಸರ್ಕಾರ ವೈಯಕ್ತಿಕ ಹಿತಾಸಕ್ತಿಗೆ ನೀರಾವರಿ ಇಲಾಖೆ ಅಧಿಕಾರಿಗಳನ್ನು ವರ್ಗಾವಣೆ ಮಾಡುವುದನ್ನು ನಿಲ್ಲಿಸಬೇಕು. ಜತೆಗೆ ನಾಲೆಗಳ ದುರಸ್ತಿಗೆ ಟೆಂಡರ್ ಪಡೆದ ಗುತ್ತಿಗೆದಾರರು ಶರತ್ತುಬದ್ಧ ನಿಯಮಗಳನ್ನು ಅನುಸರಿಸುವಂತಿರಬೇಕು. ಬೆಳೆ ತೆಗೆಯುವ ಸಮಯದಲ್ಲಿ ನಾಲೆಗಳಲ್ಲಿ ಹೂಳು ತೆಗೆಯದೆ ನೀರು ಹರಿಸಲು ನಿರ್ಲಕ್ಷ್ಯವಹಿಸಿದ್ದಲ್ಲಿ ಈ ವೇಳೆ ರೈತರಿಗೆ ಆಗುವ ನಷ್ಟವನ್ನು ತುಂಬಿಸಲು ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದರು. ಬಳ್ಳೂರು ಪ್ರಸನ್ನ, ಶಿವಣ್ಣ, ಚಂದ್ರೇಗೌಡ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

