ಹೊಗೆಸೊಪ್ಪು ಬೆಳೆ; ರೈತನ ಮೊಗದಲ್ಲಿ ಕಳೆ
ಕ.ಪ್ರ.ವಾರ್ತೆ , ಮೈಸೂರು , ಆ. 20
ಕರ್ನಾಟಕದಲ್ಲಿ ಬೆಳೆಯುವ ಉತ್ಕೃಷ್ಟ ದರ್ಜೆಯ ವರ್ಜೀನಿಯಾ ತಂಬಾಕಿಗೆ ವಿಶ್ವಾದ್ಯಂತ ಬೇಡಿಕೆ. ಪಿರಿಯಾಪಟ್ಟಣ ತಾಲೂಕಿನ ರಾವಂದೂರಿನ ರೈತ ಆರ್.ವಿ. ವಿಶ್ವನಾಥ್ ಅವರು ಕಳೆದ ಮೂರು ದಶಕಗಳಿಂದಲೂ ಮಳೆ ಆಶ್ರಯದಲ್ಲೇ ತಂಬಾಕು ಬೆಳೆಯುತ್ತಾ ಹೆಸರಿನ ಜೊತೆಗೆ ಲಾಭ ಮಾಡುತ್ತಿದ್ದಾರೆ.
ಹೊಗೆಸೊಪ್ಪು ಹಾಗೂ ಹತ್ತಿ ಮೈಸೂರು ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳು. ಪಿರಿಯಾಪಟ್ಟಣ, ಹುಣಸೂರು, ಎಚ್.ಡಿ. ಕೋಟೆ ಹಾಗೂ ಕೆ.ಆರ್. ನಗರ ತಾಲೂಕುಗಳಲ್ಲಿ ಹೊಗೆಸೊಪ್ಪನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಈ ಮೂಲಕ ರೈತರು ಬದುಕು ಕಟ್ಟಿಕೊಂಡಿದ್ದಾರೆ. ಪಿರಿಯಾಪಟ್ಟಣ ತಾಲೂಕಿನಲ್ಲಂತೂ ಶೇ. 80ಕ್ಕೂ ಹೆಚ್ಚು ರೈತರು ಹೊಗೆಸೊಪ್ಪನ್ನೇ ಬೆಳೆಯುತ್ತಿದ್ದಾರೆ. ಹೊಗೆಸೊಪ್ಪಿನ ಆದಾಯದ ಪರಿಣಾಮ ಹಳ್ಳಿಗಳಲ್ಲಿ ಬೈಕು, ಕಾರುಗಳ ಕಾರುಬಾರು ಜೋರಾಗಿದೆ.
ರಾವಂದೂರಿನ ಆರ್.ವಿ. ವಿಶ್ವನಾಥ್ ಅವರಿಗೆ 30 ಎಕರೆ ಜಮೀನಿದೆ. ಈ ಪೈಕಿ 13 ಎಕರೆಯಲ್ಲಿ ಕಳೆದ ಮೂರು ದಶಕಗಳಿಂದಲೂ ಹೊಗೆಸೊಪ್ಪು ಬೆಳೆಯುತ್ತಿದ್ದಾರೆ. ಅವರ ಜಮೀನಿಗೆ ಯಾವುದೇ ನೀರಾವರಿ ಸೌಲಭ್ಯವೂ ಇಲ್ಲ. ಅವರು ಕೊಳವೆ ಬಾವಿಯನ್ನು ಕೊರೆಸಿಲ್ಲ. ಹೊಗೆಸೊಪ್ಪಿಗೆ ಹೆಚ್ಚು ನೀರು ಬೇಕಾಗಿಲ್ಲ. ಕಾಲಕಾಲಕ್ಕೆ ಮಳೆಯಾದರೆ ಸಾಕು, ಬಂಪರ್ ಬೆಳೆ ಬರುತ್ತದೆ. ಹೀಗೆ ಮಳೆಯಾಶ್ರಯದಲ್ಲೇ ಬೆಳೆಯುವುದರಿಂದಲೇ ಈ ಭಾಗದ ತಂಬಾಕಿಗೆ ಭಾರಿ ಬೇಡಿಕೆ ಇದೆ. ಬರಗಾಲ ಕಾಣಿಸಿಕೊಂಡ ವರ್ಷಗಳಲ್ಲಿ ಪಕ್ಕದ ಕೆರೆಯಿಂದ ನೀರು ತಂದು ಹೊಗೆಸೊಪ್ಪಿಗೆ ಹಾಕುವುದು ಉಂಟು.
ಉತ್ತಮ ಗುಣಮಟ್ಟ: ವಿಶ್ವನಾಥ್ ಹೊಗೆಸೊಪ್ಪು ಬೆಳೆಯಲ್ಲಿ ವೈಶಿಷ್ಯತೆ ಮೆರೆದಿದ್ದಾರೆ. ಅತ್ಯುತ್ತಮ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಇವರ ಜಮೀನಿನಲ್ಲಿ ಬೆಳೆಯುವ ಹೊಗೆಸೊಪ್ಪಿನ ಗುಣಮಟ್ಟ ಉತ್ತಮವಾಗಿರುತ್ತದೆ. ಟ್ರೇ ತಂತ್ರಜ್ಞಾನ, ಕೋಕೋಫಿಟ್, ಮಣ್ಣು ಸಂರಕ್ಷಣಾ ಕ್ರಮ, ಸೂಕ್ತವಾಗಿ ರಾಸಾಯನಿಕ ಗೊಬ್ಬರಗಳ ಬಳಕೆ ಅವರ ಯಶಸ್ಸಿನ ಗುಟ್ಟು. ಎಫ್ಸಿವಿ ತಂಬಾಕಿನಲ್ಲಿ ಸಿಎಚ್3 ತಳಿಯನ್ನು ನಾಟಿ ಮಾಡಿ, ಪ್ರತಿ ಹೆಕ್ಟೇರ್ನಲ್ಲಿ 1,994 ಕೆಜಿ ಇಳುವರಿ ಪಡೆದಿದ್ದಾರೆ. ಅದರಲ್ಲಿ ಶೇ. 52 ರಷ್ಟು ಉತ್ತಮ, ಶೇ.33 ರಷ್ಟು ಮಧ್ಯಮ ಹಾಗೂ ಶೇ.15 ರಷ್ಟು ಮಾತ್ರ ಕೆಳ ದರ್ಜೆಯ ತಂಬಾಕು. ಪುರಸ್ಕಾರ: ಹೊಗೆಸೊಪ್ಪು ಬೆಳೆಯುವ ಇತರರ ರೈತರಿಗೆ ಸಲಹೆ- ಸೂಚನೆ ನೀಡುತ್ತಾರೆ. ಹೀಗಾಗಿ ವಿಶ್ವನಾಥ್ ಅವರಿಗೆ ಭಾರತೀಯ ತಂಬಾಕು ಸಂಸ್ಥೆಯು ಅತ್ಯುತ್ತಮ ತಂಬಾಕು ಬೆಳೆಗಾರರಿಗೆ ನೀಡುವ ಜೀವಮಾನ ಸಾಧನೆ ಪ್ರಶಸ್ತಿ ಸಂದಿದೆ.
ಎಕರೆ ಲೆಕ್ಕದಲ್ಲಿ ತೆಗೆದುಕೊಂಡರೆ ವಿಶ್ವನಾಥ್ ಅವರ ಜಮೀನಿನಲ್ಲಿ 800 ರಿಂದ 900 ಕೆಜಿ ಇಳುವರಿ ಬರುತ್ತದೆ. ನಾಟಿಗೆ ಮುನ್ನಾ ಕೆರೆಗೋಡು, ಕುರಿ ಗೊಬ್ಬರ, ಐಟಿಸಿ ಕಂಪನಿ ನೀಡುವ ಬೇವಿನಹಿಂಡಿ ಹಾಕುತ್ತಾರೆ. ನಂತರ ತಂಬಾಕು ಮಂಡಳಿ ನೀಡುವ ಡಿಎಎನ್, ಸಿಎಎನ್, ಎಸ್ಒಪಿ ಮೊದಲಾದ ರಾಸಾಯನಿಕ ಗೊಬ್ಬರ ಹಾಕುತ್ತಾರೆ. ಇವರ ಪ್ರಕಾರ, ಕೆಲವೊಮ್ಮೆ 1 ಕೆಜಿ ಹೊಗೆಸೊಪ್ಪು ಬೆಳೆಯಲು 105 ರಿಂದ 108 ವೆಚ್ಚವಾಗುತ್ತದೆ. ಪ್ರತಿ ಕೆಜಿ 110 ರಿಂದ 120ಗೆ ಮಾರಾಟವಾಗುವುದರಿಂದ ಕೆಜಿಗೆ 15 ರಿಂದ 20 ಲಾಭ ಸಿಗುತ್ತದೆ.
ಕೂಲಿಯಾಳು, ಉರುವಲು ಸಮಸ್ಯೆ
ಹೊಗೆಸೊಪ್ಪು ಹೆಚ್ಚುಕಡಿಮೆ ವಾರ್ಷಿಕ ಬೆಳೆ. ಹೆಚ್ಚು ಕೂಲಿಯಾಳುಗಳು ಬೇಕಾಗುತ್ತದೆ. ಅಲ್ಲದೆ, ಹೊಗೆಸೊಪ್ಪನ್ನು ಹದ ಮಾಡಲು ಉರುವಲು ಹೆಚ್ಚಿನ ಪ್ರಮಾಣದಲ್ಲಿ ಬೇಕಾಗುತ್ತದೆ. ಹೊಗೆಸೊಪ್ಪು ಬೆಳೆಗಾರರಿಗೆ ಯಾವಾಗಲೂ ಕೂಲಿಯಾಳುಗಳು ಹಾಗೂ ಉರುವಲು ಸಮಸ್ಯೆ ಕಾಡುತ್ತದೆ. ಮಹಾತ್ಮಗಾಂಥಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ, ತಿಂಗಳಿಗೆ 1ಕ್ಕೆ 1 ಕೆಜಿ ಅಕ್ಕಿ ಯೋಜನೆ ಜಾರಿಗೆ ಬಂದ ನಂತರಂತೂ ಕೂಲಿಗೆ ಆಳುಗಳೇ ಸಿಗುತ್ತಿಲ್ಲ. ಸ್ವಲ್ಪ ಸ್ಥಿತಿವಂತರು ಯಾಂತ್ರೀಕರಣಕ್ಕೆ ಮೊರೆ ಹೋಗಿದ್ದಾರೆ. ಸದ್ಯಕ್ಕೆ ಕಾಫಿ ಹೊಟ್ಟಿನಿಂದ ತಂಬಾಕು ಹದ ಮಾಡಲಾಗುತ್ತದೆ. ಕಲ್ಲಿದ್ದಲು ತರುವುದಕ್ಕೆ ಸಮಸ್ಯೆ ಇದೆ ಹಾಗೂ ದರವೂ ಹೆಚ್ಚಾಗುತ್ತದೆ. ಹೀಗಾಗಿ ಉರುವಲಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದಿದ್ದಲ್ಲಿ ಮರ ಕಡಿದು, ಪರಿಸರ ಹಾಳಾಗುವುದರದ ಜೊತೆಗೆ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.
ನಿಷೇಧವಲ್ಲ, ನಿಯಂತ್ರಣ
2020ರ ವೇಳೆಗೆ ತಂಬಾಕು ನಿಷೇಧಕ್ಕೆ ಸಹಿ ಮಾಡಿರುವ ರಾಷ್ಟ್ರಗಳಲ್ಲಿ ಭಾರತವೂ ಒಂದು. ಹೀಗಾಗಿ ಆ ವೇಳೆಗೆ ತಂಬಾಕು ಬೆಳೆ ಇನ್ನಿಲ್ಲದಂತೆ ಆಗುತ್ತದೆ ಎಂಬ ಪ್ರಚಾರ ನಡೆದಿದೆ. ಆದರೆ, ತಂಬಾಕು ನಿಷೇಧವಾಗುವುದಿಲ್ಲ. ಬದಲಿಗೆ ಬೆಳೆಯನ್ನು ನಿಯಂತ್ರಿಸಲಾಗುತ್ತದೆ. ಅಂದರೆ ಹೆಚ್ಚು ಬೆಳೆಯುವುದನ್ನು ನಿರ್ಬಂಧಿಸಲಾಗುತ್ತದೆ. ಹಾಲಿ ಬೆಳೆಯುತ್ತಿರುವುದಕ್ಕಿಂತ ಕಡಿಮೆ ಬೆಳೆಯಬೇಕಾಗುತ್ತದೆ ಎನ್ನುತ್ತಾರೆ ವಿಶ್ವನಾಥ್.
- ಅಂಶಿ ಪ್ರಸನ್ನಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

