ನಾವು ಚಿಂತನೆಗಳ ಅನುಷ್ಠಾನದಲ್ಲಿ ಬಡವರು
ಕ.ಪ್ರ.ವಾರ್ತೆ , ಮೈಸೂರು , ಆ. 25
ದಾರ್ಶನಿಕರ ಚಿಂತನೆಯಿಂದ ಭಾರತ ಶ್ರೀಮಂತವಾಗಿದೆ, ಆದರೆ ಚಿಂತನೆಗಳ ಅನುಷ್ಠಾನದಲ್ಲಿ ಬಡವರಾಗಿದ್ದೇವೆ ಎಂದು ಕರ್ನಾಟಕ ಪೊಲೀಸ್ ಅಕಾಡೆಮಿ ಉಪ ನಿರ್ದೇಶಕಿ ಡಾ.ಕೆ. ಧರಣಿದೇವಿ ಮಾಲಗತ್ತಿ ವಿಷಾದಿಸಿದರು.
ಮೈಸೂರು ವಿವಿ ಯುಜಿಸಿ ಶೈಕ್ಷಣಿಕ ಸಿಬ್ಬಂದಿ ಮಹಾವಿದ್ಯಾಲಯವು, ರಾಜ್ಯಶಾಸ್ತ್ರ ಮತ್ತು ಸಾರ್ವಜನಿಕ ಆಡಳಿತ ಅಧ್ಯಯನ ವಿಭಾಗದ ಜೊತೆಗೂಡಿ ಭಾನುವಾರ ಪದವಿ ಮತ್ತು ವಿಶ್ವವಿದ್ಯಾನಿಲಯಗಳ ಸಹಾಯಕ ಪ್ರಾಧ್ಯಾಪಕರಿಗೆ ಆಯೋಜಿಸಿದ್ದ 10ನೆ ಮಾನವ ಹಕ್ಕುಗಳು ಪುನಶ್ಚೇತನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾನವ ಹಕ್ಕುಗಳು ಮತ್ತು ಸಮಕಾಲೀನ ರಾಜಕೀಯ ಕುರಿತು ಮಾತನಾಡಿದರು. ಬುದ್ಧನ ಕಾಲದಿಂದಲೂ ಭಾರತದಲ್ಲಿ ಮಾನವ ಹಕ್ಕುಗಳ ಕುರಿತು ಚಿಂತನೆ ನಡೆದಿದೆ. ವಚನ ಕ್ರಾಂತಿಯ ವೇಳೆ ಈ ಬಗ್ಗೆ ಸಾಕಷ್ಟು ಉಲ್ಲೇಖವಾಗಿದೆ.
ಬುದ್ಧ, ಬಸವಣ್ಣ, ಅಕ್ಕಮಹಾದೇವಿ ಮುಂತಾದ ದಾರ್ಶನಿಕರ ಚಿಂತನೆಗಳು ಭಾರತದಲ್ಲಿ ಸಾಕಷ್ಟಿವೆ. ಈ ವಿಷಯದಲ್ಲಿ ನಾವು ಶ್ರೀಮಂತರೆ. ಆದರೆ, ಅನುಷ್ಠಾನದಲ್ಲಿ ಕಡು ಬಡವರಾಗಿದ್ದೇವೆ.
ಇಂತಹ ಚಿಂತನೆಗಳು ಮತ್ತು ಕಾನೂನುಗಳನ್ನು ಅನುಷ್ಠಾನಕ್ಕೆ ತರಲು ಹದವಾದ ಮನೋಭೂಮಿಕೆ ಕೊರತೆ ಇದೆ ಎಂದು ಹೇಳಿದರು.
ಇತ್ತೀಚೆಗೆ ನಿತ್ಯವೂ ಅತ್ಯಾಚಾರದ ಸುದ್ದಿ ಕೇಳುತ್ತಿದ್ದೇವೆ. ನಮ್ಮ ಜೀವನದಲ್ಲಿ ನಿತ್ಯವೂ ಮಾನವಹಕ್ಕು ಉಲ್ಲಂಘನೆ ಮಾಡುತ್ತಲೆ ಇರುತ್ತೇವೆ. ಅದು ಕುಟುಂಬ ಸದಸ್ಯರೊಂದಿಗೆ ಇರಬಹುದು ಅಥವಾ ನಮ್ಮ ಮಕ್ಕಳ ಹಕ್ಕನ್ನು ಉಲ್ಲಂಘಿಸುವುದೂ ಇರಬಹುದು. ಪೊಲೀಸರು ಹೆಚ್ಚಾಗಿ ಮಾನವ ಹಕ್ಕು ಉಲ್ಲಂಘಿಸುತ್ತಾರೆ ಎಂದು ಆರೋಪಿಸುತ್ತಾರೆ. ಆದರೆ, ಮತ್ತೊಂದು ಹಕ್ಕು ರಕ್ಷಿಸುವಾಗ ಮತ್ತೊಂದೆಡೆ ಉಲ್ಲಂಘನೆ ಆಗುವುದು ಸಹಜ. ಆದರೆ, ರಕ್ಷಣೆ ಮಾಡುವ ಮಾರ್ಗ ಯಾವುದು ಎಂಬುದಷ್ಟೆ ಮುಖ್ಯ ಎಂದರು.
ಸ್ವಾತಂತ್ರ್ಯದ ಜೊತೆಗೆ ಕೆಲವು ನಿರ್ಬಂಧಗಳೂ ಇವೆ. ನಮ್ಮ ಹಕ್ಕು ಪ್ರತಿಪಾದಿಸುವಾಗ ಅಥವಾ ಚಲಾಯಿಸುವಾಗ ಮತ್ತೊಬ್ಬರ ಹಕ್ಕಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಮುಂದಿನ ತಲೆಮಾರಿಗೆ ತಮ್ಮ ಹಕ್ಕು ಮತ್ತು ಕರ್ತವ್ಯ ತಿಳಿಸಿಕೊಡುವ ಜವಾಬ್ದಾರಿ ಶಿಕ್ಷಕರ ಮೇಲೆ ಇರುತ್ತದೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಶಿಬಿರದ ಅನುಭವ ಹಂಚಿಕೊಂಡ ಪ್ರಾಧ್ಯಾಪಕ ಮಲ್ಲಿಕಾರ್ಜುನ ಅವರು, ಶಿಬಿರವನ್ನು ವ್ಯವಸ್ಥಿತವಾಗಿ ಆಯೋಜಿಸಲಾಗಿತ್ತು. ಆದರೆ, ವಸತಿ ವ್ಯವಸ್ಥೆಯಲ್ಲಿ ಸ್ವಚ್ಛತೆ ಸಮಸ್ಯೆ ಮತ್ತು ನೀರಿನ ಪೂರೈಕೆಯಲ್ಲಿ ತೊಂದರೆ ಉಂಟಾಯಿತು ಎಂದು ವಿವರಿಸಿದರು. ಅಂತೆಯೆ ಶಿಬಿರಾರ್ಥಿಗಳಾದ ಗಂಗಾಧರ್, ಡಾ.ವೈ.ಕೆ. ಭಾಗ್ಯ, ವೆಂಕಟಮ್ಮ ಮಾತನಾಡಿದರು.
ಯುಜಿಸಿ- ಶೈಕ್ಷಣಿಕ ಸಿಬ್ಬಂದಿ ಮಹಾವಿದ್ಯಾಲಯದ ನಿರ್ದೇಶಕ ಪ್ರೊ. ಲಿಂಗರಾಜ ಗಾಂಧಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯಶಾಸ್ತ್ರ ಮತ್ತು ಸಾರ್ವಜನಿಕ ಆಡಳಿತ ವಿಭಾಗದ ಅಧ್ಯಕ್ಷ ಪ್ರೊ. ದಯಾನಂದ ಎ. ಮಾನೆ, ಶಿಬಿರ ಸಂಯೋಜಕ ಪ್ರೊ. ಜಿ.ಟಿ. ರಾಮಚಂದ್ರಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

