ಮೈಸೂರು

ಹಕ್ಕುಪತ್ರ ನೀಡಲು ಕಾಲಮಿತಿ ನಿಗದಿಪಡಿಸಿ

Published On :

ಕ.ಪ್ರ.ವಾರ್ತೆ ,  ಹುಣಸೂರು ,  ಆ. 25
ಗಿರಿಜನರಿಗೆ ಮಾತು ತಪ್ಪಿದ ಮೈಸೂರು ಜಿಲ್ಲಾಡಳಿತ, ಹೆಜ್ಜೆ ತಪ್ಪದೆ, ದಸರಾದ ಗಜಪಯಣವನ್ನು ನಡೆಸಿಕೊಂಡು ಬರುತ್ತಿರುವ ಅದಿವಾಸಿಗಳ ಆಸಹಾಯಕ ಸ್ಥಿತಿ ಇಂದಿಗೂ ಜೀವಂತವಾಗಿ ಉಳಿದಿದೆ. ಕಾಡು ಕುರುಬರ ಈ ಶೋಚನೀಯ ಸ್ಥಿತಿ ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿಯೂ ಮುಂದುವರೆಯಬೇಕೆ?
ಪ್ರತಿವರ್ಷವು ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ಹುಣಸೂರು ತಾಲೂಕಿನ ನಾಗಪುರ ಗಿರಿಜನ ಪುನರ್ವಸತಿ ಕೇಂದ್ರದಿಂದಲೆ ಗಜಪಯಣಕ್ಕೆ ಚಾಲನೆ ಸಿಗುವುದು ಮತ್ತು ಗಿರಿಜನರು ಜಮೀನಿನ ಹಕ್ಕುಪತ್ರಕ್ಕಾಗಿ ಪ್ರತಿಭಟಿಸುವುದು, ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳು ಎಂದಿನಂತೆ ಸುಳ್ಳು ಭರವಸೆ ನೀಡುವುದು ಹಾಗೂ ಮುಗ್ಧ ಗಿರಿಜನರು ಇವರ ಮಾತಿಗೆ ಮರಳಾಗಿ ಸಂತೋಷದಿಂದ ಆನೆಗಳನ್ನು ಬೀಳ್ಕೋಡುವುದು ಈ ವರ್ಷವೂ ಮುಂದುವರಿಯಲಿದೆ. ಕಳೆದ ವರ್ಷ ಗಜಪಯಣದ ದಿನ, ಗಿರಿಜನರ ಹೋರಾಟಕ್ಕೆ ಮಣಿದು ಸಾಂಕೇತಿಕವಾಗಿ ಐದು ಮಂದಿಗೆ ಹಕ್ಕುಪತ್ರ ನೀಡಿ, ಮುಂದಿನ ಒಂದು ತಿಂಗಳೊಳಗಾಗಿ 275 ಉಳಿದ ನಿವಾಸಿಗಳಿಗೆ ಹಕ್ಕುಪತ್ರ ನೀಡುವುದಾಗಿ ಅಂದಿನ ಸಚಿವ ರಾಮದಾಸ್, ಜಿಲ್ಲಾಧಿಕಾರಿ ಪಿ.ಎಸ್.ವಸ್ತ್ರದ್, ಅರಣ್ಯಾಧಿಕಾರಿ ಬಿ.ಜೆ. ಹೊಸಮಠ್, ಶಾಸಕ ಎಚ್.ಪಿ. ಮಂಜುನಾಥ್ ಭರವಸೆ ನೀಡಿ ಪ್ರಚಾರ ಗಿಟ್ಟಿಸಿದ್ದರು. ಇದಕ್ಕೆ ಅಂದಿನ ಗೃಹ ಮಂಡಳಿ ಅಧ್ಯಕ್ಷ, ಈಗಿನ ಹಾಲಿ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಸಾಕ್ಷೀಕರಿಸಿದ್ದರು. ಆದರೆ, ಮುಗ್ಧ ಗಿರಿಜನರ ಅಳಲನ್ನು ಅರ್ಥ ಮಾಡಿಕೊಳ್ಳಲಾಗದ ಜಿಲ್ಲಾಡಳಿತ ಆ. 28ರಂದು ಮತ್ತೊಂದು ಗಜಪಯಣದ ಚಾಲನೆಗೆ ತುದಿಗಾಲಲ್ಲಿ ನಿಂತಿದೆ.
ಗಿರಿಜನರಿಗೆ ಹಕ್ಕುಪತ್ರ ನೀಡುವ ಭರವಸೆ, ಭರವಸೆಯಾಗಿಯೆ ಉಳಿಯಲಿದೆ. ಸರ್ಕಾರ ಬದಲಾಗಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕಂದಾಯ ಮತ್ತು ಜಿಲ್ಲಾ ಉಸ್ತುವಾರಿ ಮಂತ್ರಿ ಶ್ರೀನಿವಾಸಪ್ರಸಾದ್ ಹಾಗೂ ಸಂಸದ ಎಚ್. ವಿಶ್ವನಾಥ್, ಶಾಸಕ ಎಚ್.ಪಿ. ಮಂಜುನಾಥ್ ಅವರು ಮೈಸೂರಿನ ಸ್ಥಳೀಕರು ಹಾಗೂ ಆಡಳಿತರೂಢ ಕಾಂಗ್ರೆಸ್‌ನ ನಾಯಕರಾಗಿದ್ದಾರೆ. ಗಿರಿಜನರು ಸಹ ಮೈಸೂರು ಜಿಲ್ಲೆಯ ವಾಸಿಗಳಾಗಿಯೆ, ಕಾಂಗ್ರೆಸ್ ಪಕ್ಷಕ್ಕೆ ಅತಿ ಹೆಚ್ಚು ಮತಗಳನ್ನು ನೀಡಿದವರು. ಕಳೆದ ವಿಧನಸಭಾ ಚುನಾವಣೆಯಲ್ಲಿ ಕೇವಲ ಎರಡು ಮತಗಳು ಜೆಡಿಎಸ್ ಪಕ್ಷಕ್ಕೆ ನೀಡಿದರೆ, ಉಳಿದ 386 ಮತಗಳು ಕಾಂಗ್ರೆಸ್ ಪಕ್ಷಕ್ಕೆ ನೀಡಿ ತಮ್ಮ ಬದ್ಧತೆ ಮೆರೆದರು. ಇಂತಹ ಗಿರಿಜನರ ಸಮಸ್ಯೆಗಳನ್ನು ಬಗೆಹರಿಸಲು ಇನ್ಯಾವ ರಾಜಕೀಯ ವಾತಾವರಣ ನಿರ್ಮಾಣ ಆಗಬೇಕಿದೆ ಎಂಬ ಪ್ರಶ್ನೆಗಳನ್ನು ಸಚಿವ ಶ್ರೀನಿವಾಸಪ್ರಸಾದ್ ಅವರಿಗೆ ನಾಗಪುರದ ಪ್ರಜ್ಞಾವಂತ ಗಿರಿಜನರು ಕೇಳಿದ್ದಾರೆ.
ಸುಳ್ಳು ಭರವಸೆ: ಕಳೆದ ಹಲವು ವರ್ಷಗಳಿಂದ ಸುಳ್ಳು ಭರವಸೆ ನೀಡುವಲ್ಲಿ ಅಧಿಕಾರಿಗಳು ಹಿಂದೆ ಬಿದ್ದಿಲ್ಲ. ಕೆಲವು ಅಧಿಕಾರಿಗಳ ತಪ್ಪು ಮತ್ತು ಅಪರಾಧ ಮಾರೆಮಾಚಲು, ಅನುಷ್ಠಾನ ಅಧಿಕಾರಿಗಳ ಜೊತೆಗೆ ಈ ಹಿಂದಿನ ಜಿಲ್ಲಾಡಳಿತ ಕೈಜೋಡಿಸಿರುವುದೆ ಈ ವಿಳಂಬಕ್ಕೆ ಕಾರಣ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ಸಮಸ್ಯೆಗೆ ಕಾರಣವೇನು?: ಸರ್ವೇ ಕಾರ್ಯ ಸಮರ್ಪಕವಾಗಿ ನಡೆಸದೆ, ಹಣ ಖರ್ಚು ಮಾಡಿರುವುದು, ಇರದಿರುವ ಭೂಮಿಯನ್ನು ಅಭಿವೃದ್ಧಿಪಡಿಸಿದ್ದೇವೆ ಎಂದು ಖರ್ಚು ತೋರಿಸಿರುವ ಆನೇಕ ಪ್ರಕರಣ ನಡೆದಿದೆ. ಈ ಬಗ್ಗೆ ಅಂದಿನ ವಿಭಾಗಾಧಿಕಾರಿ ಎಚ್. ಭಾಸ್ಕರ್ ಸಮಗ್ರ ವರದಿ ತಯಾರಿಸಿ ಕ್ಯಾಬಿನೆಟ್‌ಗೆ ಮಂಡಿಸಿದ್ದರು. ಇದಾದ ಬಳಿಕ ಇದರ ಅನುಪಾಲನೆಯನ್ನು ಮೈಸೂರು ಜಿಲ್ಲಾಡಳಿತ ಅನುಷ್ಠಾನಗೊಳಿಸದೆ ಇರುವುದೆ, ಈ ಸಮಸ್ಯೆ ಇಷ್ಟು ಸುದೀರ್ಘ ಸಮಯ ಮುಂದುವರಿಯಲು ಕಾರಣವಾಗಿದೆ ಎಂದು ಅದಿವಾಸಿ ಮುಖಂಡ ಮತ್ತು ಪುನರ್ವಸತಿ ಹಕ್ಕುಗಳಿಗೆ ಹೋರಾಟ ನಡೆಸುತ್ತಿರುವ ಎಂ.ಬಿ. ಪ್ರಭು ಅಭಿಪ್ರಾಯಪಟ್ಟಿದ್ದಾರೆ. ರಾಷ್ಟ್ರೀಯ ಪುನರ್ವಸತಿ ನೀತಿ ಅನ್ವಯ ಕೇಂದ್ರ ಸರ್ಕಾರದ ಹುಲಿ ಯೋಜನೆಯಡಿ ನಾಗಪುರ ವ್ಯಾಪ್ತಿಯ 731 ಹೆಕ್ಟೇರ್ ರಕ್ಷಿತಾ ಅರಣ್ಯ ಪ್ರದೇಶವನ್ನು ಇಲ್ಲಿನ ನಿವಾಸಿಗಳಿಗೆ ಪ್ರತಿ ಕುಟುಂಬಕ್ಕೆ 5 ಎಕರೆ ಅಭಿವೃದ್ಧಿಪಡಿಸಿದ ಕೃಷಿ ಭೂಮಿ ನೀಡುವುದು ಮತ್ತು ಸಾಮೂಹಿಕ ಒಡೆತನದ ಹಕ್ಕುಗಳಾದ ರಸ್ತೆಗಳು, ಜನವಸತಿ ಪ್ರದೇಶ, ಕೆರೆಕುಂಟೆ ಹುಲ್ಲುಗಾವಲು, ಸೌಧೆ ಸಂಗ್ರಹ ವನಗಳನ್ನು ಅಳವಡಿಸಿ 1995ರಲ್ಲೆ ಆದೇಶ ಹೊರಡಿಸಿದೆ. ಈ ಆದೇಶವು ಅಂದಿನ ಸರ್ಕಾರದ ಮುಖ್ಯ ಕಾರ್ಯದರ್ಶಿ ಬಿ.ಕೆ. ಭಟ್ಟಾಚಾರ್ಯ ಅವರಿಂದ ಪರಿಶೀಲನೆಗೊಂಡು ಮೈಸೂರಿನ ಅಂದಿನ ಜಿಲ್ಲಾಧಿಕಾರಿ ಶ್ರೀನಿವಾಸಚಾರಿ ಅವರಿಂದ ಅನುಷ್ಠಾನಗೊಂಡಿದೆ. ಇದರ ಎಲ್ಲಾ ಹಣಕಾಸು ಮತ್ತು ವಹಿವಾಟನ್ನು ಹುಣಸೂರಿನ ವನ್ಯಜೀವಿ ಅರಣ್ಯ ವಿಭಾಗದ ಅಧಿಕಾರಿಗಳು ಕ್ಷೇತ್ರದಲ್ಲಿ ಅನುಷ್ಠಾನಗೊಳಿಸಿದ್ದಾರೆ.
ಅಭಿವೃದ್ಧಿ ಮರೀಚಿಕೆ: ವಾಸ್ತವವಾಗಿ ಕೆಲಸಗಳನ್ನು ಆದ್ಯತಾ ಅನುಸಾರ ಮಾಡದಿರುವುದೆ ಈ ಸಮಸ್ಯೆ ಜಟಿಲವಾಗಿರಲು ಕಾರಣ. ಈ ಬಗ್ಗೆ ಅಂದು ವಿರೋಧ ಪಕ್ಷದ ನಾಯಕರಾಗಿದ್ದ, ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡು ವರ್ಷಗಳ ಹಿಂದ ಸದನದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಸಂಸದರಾದ ಎಚ್. ವಿಶ್ವನಾಥ್, ಧ್ರುವನಾರಾಯಣ್, ಸಮಾಜಕಲ್ಯಾಣ ಇಲಾಖೆಯ ಕಾರ್ಯದರ್ಶಿ ಈ ವೆಂಕಟಯ್ಯ ಸೇರಿ ಆನೇಕರು ಸಮಸ್ಯೆಗೆ ಶೀಘ್ರ ಸ್ಪಂದಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿ ವರ್ಷಗಳು ಉರುಳಿದರೂ ನಾಗಪುರ ಗಿರಿಜನರಿಗೆ ಅಭಿವೃದ್ಧಿ ಮರೀಚಿಕೆಯಾಗಿದೆ.
ಈ ಬಗ್ಗೆ ಸಚಿವರು, ಶಾಸಕರು ನಿಖರವಾಗಿ ಎಲ್ಲಾ ಗಿರಿಜನರ ಹಕ್ಕುಪತ್ರ ನೀಡುವ ಬಗ್ಗೆ ಕಾಲಮೀತಿ ನಿಗದಿ ಮಾಡಿ ನಂತರ ಗಜಪಯಣಕ್ಕೆ ಚಾಲನೆ ಕೊಡಲು ಆಗಮಿಸಿ ಎಂದು ನಾಗಪುರ ಗಿರಿಜನರಾದ ಜೆ.ಕೆ. ಮಣಿ, ಜೆ.ಕೆ. ತಿಮ್ಮ, ಜೆ.ಎ. ಹರೀಶ್, ಕಾಳಪ್ಪ ಸೇರಿದಂತೆ ನಾಗಪುರ ಘಟಕ 2, 3 ಮತ್ತು 4,5 ಮತ್ತು 6ರ ಗಿರಿಜನರುಆಗ್ರಹಿಸಿದ್ದಾರೆ.

-ಧರ್ಮಾಪುರ ನಾರಾಯಣ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.