ತವರಲ್ಲಿ ಸಿದ್ದು ಕಮಾಲ್, ಪ್ರತಿಪಕ್ಷಗಳ ಕಂಗಾಲು
ಕ.ಪ್ರ.ವಾರ್ತೆ , ಮೈಸೂರು , ಆ. 26
ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಮೇಲ್ಮನೆಗೆ ಇದೇ ಪ್ರಥಮ ಬಾರಿಗೆ ನಡೆದ ಉಪ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರ್ಚಸ್ಸು ಕೆಲಸ ಮಾಡಿದೆ. ಅವರ ಕಮಾಲ್ ಎದುರು ಒಗ್ಗೂಡಿ ಹೋರಾಟ ನಡೆಸಿದ ಕೆಜೆಪಿ, ಬಿಜೆಪಿ ಹಾಗೂ ಜೆಡಿಎಸ್ ಸೋತು ಕಂಗಾಲಾಗಿವೆ.
2010ರ ಚುನಾವಣೆಯಲ್ಲಿ ಗೆದ್ದಿದ್ದ ಬಿಜೆಪಿಯ ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ ಅವರು ಕಳೆದ ವಿಧಾನಸಭಾ ಚುನಾವಣೆ ಕಾಲಕ್ಕೆ ಚಾಮರಾಜನಗರದಿಂದ ಕೆಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದರಿಂದ ಉಪ ಚುನಾವಣೆ ನಡೆಯಿತು.
ದ್ವಿಸದಸ್ಯ ಕ್ಷೇತ್ರದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೊದಲಿಗೆ ಜನತಾಪಕ್ಷದ ವಿ.ಎಚ್. ಗೌಡ- ಕಾಂಗ್ರೆಸ್ನ ಟಿ.ಎನ್. ನರಸಿಂಹಮೂರ್ತಿ, 2ನೇ ಬಾರಿಗೆ ಜನತಾದಳದ ವೈ. ಮಹೇಶ್- ಕಾಂಗ್ರೆಸ್ನ ಸಿ. ರಮೇಶ್, 3ನೇ ಬಾರಿಗೆ ಜೆಡಿಎಸ್ನ ಬಿ. ಚಿದಾನಂದ- ಕಾಂಗ್ರೆಸ್ನ ಎನ್. ಮಂಜುನಾಥ್, 4ನೇ ಬಾರಿಗೆ ಜೆಡಿಎಸ್ನ ಸಂದೇಶ್ ನಾಗರಾಜ್- ಬಿಜೆಪಿಯ ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ ಆಯ್ಕೆಯಾಗಿದ್ದರು.
ಉಭಯ ಜಿಲ್ಲೆಗಳ 6314 ಗ್ರಾಪಂ, 256 ತಾಪಂ, 67 ಜಿಪಂ, 74 ಪಪಂ, 122 ಪುರಸಭೆ, 62 ನಗರಸಭೆ, 65 ನಗರಪಾಲಿಕೆ ಸದಸ್ಯರು, 2 ಸಂಸದರು, 15 ವಿಧಾನಸಭಾ ಸದಸ್ಯರು ಹಾಗೂ 5 ವಿಧಾನ ಪರಿಷತ್ ಸದಸ್ಯರು ಮತದಾರರು. ಈ ಪೈಕಿ 6,963 ಮಂದಿ ಮತ ಚಲಾಯಿಸಿದ್ದರು. 487 ಮತಗಳು ತಿರಸ್ಕೃತವಾದವು. ಸ್ವೀಕೃತ 6,466 ಮತಗಳಲ್ಲಿ ಕಾಂಗ್ರೆಸ್- 3,779, ಕೆಜೆಪಿ- 2,611, ಪಕ್ಷೇತರ- 76 ಮತ ಪಡೆದಿದ್ದಾರೆ. ಆರಂಭದಿಂದಲೂ ದ್ವಿಸದಸ್ಯ ಸ್ಥಾನಗಳಿಗೆ ಯಾರೇ ಸ್ಪರ್ಧಿಸಿದರೂ ಕಾಂಗ್ರೆಸ್ ಹಾಗೂ ಜನತಾ ಪರಿವಾರದಿಂದ ತಲಾ ಒಬ್ಬರು ಗೆಲ್ಲುತ್ತಾ ಬರುತ್ತಿದ್ದರು. ಆದರೆ, ಕಳೆದ ಬಾರಿ ಮಾತ್ರ ಜನತಾ ಪರಿವಾರ ತನ್ನ ಸ್ಥಾನ ಉಳಿಸಿಕೊಂಡರೆ ಕಾಂಗ್ರೆಸ್ ಕಳೆದುಕೊಂಡಿತು. ಆ ಸ್ಥಾನ ಬಿಜೆಪಿಯ ಪಾಲಾಗಿತ್ತು. ಈ ಕ್ಷೇತ್ರದಲ್ಲಿ ಯಾವುದೇ ಪಕ್ಷ ಎರಡನೇ ಬಾರಿಗೆ ಟಿಕೆಟ್ ನೀಡುತ್ತಿರಲಿಲ್ಲ. ಆದರೆ, ಕಳೆದ ಬಾರಿ ಕಾಂಗ್ರೆಸ್ ಮಂಜುನಾಥ್ ಅವರಿಗೆ ಮತ್ತೆ ಟಿಕೆಟ್ ನೀಡಿತ್ತು. ಆದರೂ ಸೋತರು.
ದ್ವಿಸದಸ್ಯ ಸ್ಥಾನಗಳಿಗೆ ಒಟ್ಟಿಗೆ ಚುನಾವಣೆ ನಡೆದಾಗ ಕಾಂಗ್ರೆಸ್ ಹಾಗೂ ಜನತಾ ಪರಿವಾರ ತಲಾ ಒಂದು ಸ್ಥಾನ ಗೆಲ್ಲುತ್ತಿದ್ದವು. ಉಭಯ ಜಿಲ್ಲೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಹಾಗೂ ಬೆಂಬಲಿತ ಚುನಾಯಿತ ಪ್ರತಿನಿಧಿಗಳ ಸಂಖ್ಯೆ ಹೆಚ್ಚಿರುವುದರಿಂದ ಆ ಪಕ್ಷಕ್ಕೆ ಅನುಕೂಲ. ಹೀಗಾಗಿ ಆ ಪಕ್ಷದ ಟಿಕೆಟ್ಗೆ ಭಾರಿ ಬೇಡಿಕೆ ಕಂಡು ಬಂದಿತ್ತು. ಅಂತಿಮವಾಗಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್. ಧರ್ಮಸೇನ ಅವರಿಗೆ ಟಿಕೆಟ್ ನೀಡಿತ್ತು.
ಚಾಮರಾಜನಗರ ಜಿಲ್ಲೆಯಲ್ಲಿ ಅಷ್ಟಾಗಿ ನೆಲೆ ಇಲ್ಲದಿದ್ದರೂ ಮೈಸೂರು ಜಿಲ್ಲೆಯಲ್ಲಿ ಕಾಂಗ್ರೆಸ್ಗೆ ಪ್ರಬಲ ಎದುರಾಳಿಯಾಗಿರುವ ಜೆಡಿಎಸ್ ಈ ಬಾರಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಗೋಜಿಗೆ ಹೋಗಲಿಲ್ಲ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ನಿರ್ಗಮನದ ನಂತರ ಜರ್ಜರಿತವಾಗಿರುವ ಬಿಜೆಪಿಯು ಯಶಸ್ವಿ ಎಸ್. ಸೋಮಶೇಖರ್ ಅವರಿಂದ ನಾಮಪತ್ರ ಹಾಕಿಸಿ, ಪ್ರಚಾರ ಆರಂಭಿಸಿತ್ತಾದರೂ ಕೊನೆಯ ದಿನ, ಕೊನೆಯ ಕ್ಷಣ ನಾಮಪತ್ರ ವಾಪಸ್ ತೆಗೆಸಿತ್ತು. ಜೆಡಿಎಸ್, ಬಿಜೆಪಿ ಜೊತೆಗೆ ಮೈತ್ರಿಗಿಂತ ಮುಂಚಿತವಾಗಿಯೇ ರಿಯಲ್ ಎಸ್ಟೇಟ್ ಉದ್ಯಮಿ ಯು.ಎಸ್. ಶೇಖರ್ ಅವರನ್ನು ಅಭ್ಯರ್ಥಿ ಎಂದು ಘೋಷಿಸಿದ ಕೆಜೆಪಿ ರಾಜ್ಯಾಧ್ಯಕ್ಷರಾದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಉಭಯ ಪಕ್ಷಗಳ ಬೆಂಬಲ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ದ್ವಿಸದಸ್ಯ ಸ್ಥಾನಗಳಲ್ಲಿ ಈಗಾಗಲೇ ಒಂದು ಸ್ಥಾನದಲ್ಲಿ ತಮ್ಮ ಪಕ್ಷದ ಸಂದೇಶ್ ನಾಗರಾಜ್ ಇದ್ದಾರೆ ಎಂಬುದನ್ನು ನೆಪ ಮಾಡಿಕೊಂಡು ಕಣದಿಂದ ದೂರ ಉಳಿದ ಜೆಡಿಎಸ್ ತವರು ಜಿಲ್ಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಮುಖಭಂಗ ಮಾಡಲು ಬಿಜೆಪಿ, ಕೆಜೆಪಿ ಜೋಡಿ ಕೈಜೋಡಿಸಿತ್ತು. ಕೆಜೆಪಿ ರಚನೆಯ ನಂತರ ಬಿಜೆಪಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಅಷ್ಟಾಗಿ ಬೆಂಬಲ ಇಲ್ಲ. ಹೀಗಾಗಿ ಅವರು ಕಣದಿಂದ ಹಿಂದೆ ಸರಿದು, ಮುಖ ಉಳಿಸಿಕೊಂಡಿದ್ದರು.
ಕಾಂಗ್ರೆಸ್ ಅಭ್ಯರ್ಥಿ ಧರ್ಮಸೇನ ಪರ ಸ್ವತಃ ಸಿಎಂ ಸಿದ್ದರಾಮಯ್ಯ ಅವರು ಉಭಯ ಜಿಲ್ಲೆಗಳ ಸಚಿವರು, ಶಾಸಕರು, ಮುಖಂಡರ ಸಭೆ ನಡೆಸಿ, ಗೆಲವಿಗೆ ತಂತ್ರ ರೂಪಿಸಿದ್ದರು. ಸಚಿವರಾದ ವಿ. ಶ್ರೀನಿವಾಸಪ್ರಸಾದ್, ಎಚ್.ಎಸ್. ಮಹದೇವಪ್ರಸಾದ್, ಸಂಸದರಾದ ಎಚ್. ವಿಶ್ವನಾಥ್, ಆರ್ . ಧ್ರುವನಾರಾಯಣ ಹಾಗೂ ಎಲ್ಲಾ ಶಾಸಕರು ಪ್ರಚಾರ ನಡೆಸಿದ್ದರು.
ಕೆಜೆಪಿ ಅಭ್ಯರ್ಥಿ ಯು,ಎಸ್. ಶೇಖರ್ ಪರ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಅವರು ಉಭಯ ಜಿಲ್ಲೆಗಳಲ್ಲೂ ಪ್ರಚಾರ ಮಾಡಿದ್ದರು. ಹಲವು ಮಾಜಿ ಶಾಸಕರು ಅವರೊಂದಿಗೆ ಕೈಜೋಡಿಸಿದ್ದರು. ಬಿಜೆಪಿಯ ಮಾಜಿ ಸಿಎಂ. ಡಿ.ವಿ. ಸದಾನಂದಗೌಡ, ಮಾಜಿ ಸಚಿವರಾದ ವಿ. ಸೋಮಣ್ಣ, ಎಸ್.ಎ. ರಾಮದಾಸ್, ಸಿ.ಎಚ್. ವಿಜಯಶಂಕರ್, ಜೆಡಿಎಸ್ನ ಶಾಸಕರಾದ ಜಿ.ಟಿ. ದೇವೇಗೌಡ, ಎಸ್. ಚಿಕ್ಕಮಾದು, ಸಾ.ರಾ. ಮಹೇಶ್, ಮಾಜಿ ಸಚಿವ ಎಂ. ಶಿವಣ್ಣ ಮೊದಲಾದವರು ಪ್ರಚಾರ ನಡೆಸಿದ್ದರು.
ಕಾಂಗ್ರೆಸ್ ಸರ್ಕಾರದ ಸಾಧನೆ ಹಾಗೂ ಮುಂದಿನ ಐದು ವರ್ಷಗಳಲ್ಲಿ ಮಾಡುವ ಕಾರ್ಯಕ್ರಮದ ಬಗ್ಗೆ ಮಾತನಾಡುತ್ತಿದ್ದರೆ, ಪ್ರತಿಪಕ್ಷಗಳು ಪಂಚಾಯತ್ರಾಜ್ ತಿದ್ದುಪಡಿ ವಿಧೇಯಕದ ಮೂಲಕ ಸ್ಥಳೀಯ ಸಂಸ್ಥೆಗಳ ಅಧಿಕಾರ ಮೊಟಕು ಮಾಡಲು ಕಾಂಗ್ರೆಸ್ ಹೊರಟಿದೆ ಎಂದು ಟೀಕಾ ಪ್ರಹಾರ ನಡೆಸಿದ್ದವು.
ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಚುನಾಯಿತ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿರುವುದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದು, ತವರು ಜಿಲ್ಲೆಯ ಸಿದ್ದರಾಮಯ್ಯ ಅವರ ಸಿಎಂ ಆಗಿರುವುದು ಹಾಗೂ ಒಂದೇ ಸ್ಥಾನಕ್ಕೆ ಚುನಾವಣೆ ನಡೆಯುತ್ತಿರುವುದು, ಸಂಪನ್ಮೂಲದ ಕೊರತೆ ಇಲ್ಲದಿರುವುದರಿಂದ ಕಾಂಗ್ರೆಸ್ನ ಧರ್ಮಸೇನ ಅವರಿಗೆ ಪೂರಕವಾದ ವಾತಾವರಣ ಇತ್ತು. ಈಗ ಅವರು ಗೆದ್ದು, ಕಳೆದುಹೋಗಿರುವ ಸ್ಥಾನವನ್ನು ಮತ್ತೆ ಕಾಂಗ್ರೆಸ್ಗೆ ಗಳಿಸಿಕೊಟ್ಟಿದ್ದಾರೆ.
ಜೆಡಿಎಸ್- ಬಿಜೆಪಿ- ಕೆಜೆಪಿ ಒಗ್ಗಟ್ಟಿನ ಹೋರಾಟ ನಡೆಸಿದ್ದರಿಂದ ಅಭ್ಯರ್ಥಿ ಯು.ಎಸ್. ಶೇಖರ್ ಗೆಲವು ನಿಶ್ಚಿತ ಎಂದು ಮೂರು ಪಕ್ಷಗಳ ಮುಖಂಡರು ವಿಶ್ವಾಸದಿಂದ ಇದ್ದರು. ಅದಕ್ಕಾಗಿ ಕಳೆದ ಬಾರಿ ಸಂದೇಶ್ ನಾಗರಾಜ್ ಹಾಗೂ ಪ್ರೊ. ಮಲ್ಲಿಕಾರ್ಜುನಪ್ಪ ಅವರು ಅನುಸರಿಸಿದ ತಂತ್ರಗಾರಿಕೆಯನ್ನೇ ಅನುಸರಿಸಿದ್ದರು. ಆದರೆ, ಕಾಂಗ್ರೆಸ್ ಇದಕ್ಕೆ ಪ್ರತಿತಂತ್ರ ಅನುಸರಿಸಿತು. ಜೊತೆಗೆ ಜಿಲ್ಲೆಯವರೇ ಆದ ಸಿದ್ದರಾಮಯ್ಯ ಅವರು ಸಿಎಂ ಆಗಿರುವುದರಿಂದ, ಮುಂದಿನ ಐದು ವರ್ಷಗಳ ಕಾಂಗ್ರೆಸ್ ಸರ್ಕಾರ ಇರುವುದರಿಂದ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಆ ಪಕ್ಷದ ಪರ ಒಲವು ತೋರಿಸಿದ್ದಾರೆ. ಅಲ್ಲದೆ, ಸಿದ್ದರಾಮಯ್ಯ- ಶ್ರೀನಿವಾಸಪ್ರಸಾದ್- ಮಹದೇವಪ್ರಸಾದ್- ಮಹದೇವಪ್ಪ- ವಿಶ್ವನಾಥ್- ಧ್ರುವನಾರಾಯಣ ಅವರ ಮುಂದೆ ಸದ್ಯಕ್ಕೆ ಪ್ರತಿಪಕ್ಷಗಳ ಆಟ ನಡೆಯುವ ಸಾಧ್ಯತೆ ಕಾಣಿಸುತ್ತಿಲ್ಲ.
-ಅಂಶಿ ಪ್ರಸನ್ನಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

