ಮೈಸೂರು

'ಹಣ, ಅಧಿಕಾರ ಬಲದಿಂದ ಕಾಂಗ್ರೆಸ್‌ಗೆ ಗೆಲವು'

Published On :

ಕ.ಪ್ರ.ವಾರ್ತೆ ,  ಕೆ.ಆರ್. ನಗರ ,  ಆ. 26
ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯ ಸಾಧಿಸಿರುವುದು ಹಣಬಲ ಮತ್ತು ಅಧಿಕಾರದ ಬಲದಿಂದಲೆ ಹೊರತು ಜನಾಭಿಪ್ರಾಯದಿಂದಲ್ಲ ಎಂದು ಜೆಡಿಎಸ್ ಪರಾಜಿತ ಅಭ್ಯರ್ಥಿ ಸಿ.ಎಸ್. ಪುಟ್ಟರಾಜು ಹೇಳಿದರು. ಚುನಾವಣೆಯಲ್ಲಿ ಸೋಲು- ಗೆಲವು ಸಹಜ. ಈ ಸೋಲನ್ನು ಸವಾಲಾಗಿ ಸ್ವೀಕರಿಸಿ ಸಂಘಟನೆ ಮಾಡುತ್ತೇವೆ. 4 ಲಕ್ಷಕ್ಕೂ ಅಧಿಕ ಮತದಾರರು ಜೆಡಿಎಸ್ ಬೆಂಬಲಿಸಿದ್ದಾರೆ. ಇದು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷ ಸದೃಢವಾಗಿದೆ ಎಂಬುದನ್ನು ತೋರಿಸುತ್ತದೆ ಎಂದು ಸೋಮವಾರ ವರದಿಗಾರರ ಕೂಟದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮುಂದೆ ಮಂಡ್ಯ ಲೋಕಸಭಾ ಕ್ಷೇತ್ರದ ಮತದಾರರ ನಿರಂತರ ಸಂಪರ್ಕದಲ್ಲಿದ್ದು, ಪಕ್ಷದ ವರಿಷ್ಠರು ಸೂಚಿಸಿದರೆ ಮುಂದಿನ ಚುನಾವಣೆಯಲ್ಲಿಯು ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಪುಟ್ಟರಾಜು ತಮ್ಮ ಮನದಾಳದ ಬಯಕೆ ವ್ಯಕ್ತಪಡಿಸಿದರು.
ಚುನಾವಣೆಯಲ್ಲಿ ಸೋತಿರುವ ನೋವಿನಿಂದ ನಮ್ಮ ನಾಯಕರಾದ ಎಚ್.ಡಿ. ಕುಮಾರಸ್ವಾಮಿ ಅವರು ರಾಜಿನಾಮೆ ನೀಡುವ ಮಾತನಾಡಿದ್ದಾರೆ. ಆದರೆ, ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಅವರು ಮನವಿ ಮಾಡಿದರಲ್ಲದೆ, ಪಕ್ಷದ ಎಲ್ಲ ಕಾರ್ಯಕರ್ತರ ಒತ್ತಾಯ ಇದೆ ಆಗಿದೆ ಎಂದು ತಿಳಿಸಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್, ಜಿಪಂ ಮಾಜಿ ಸದಸ್ಯ ಎಂ.ಟಿ. ಕುಮಾರ್, ತಾಲೂಕು ಜೆಡಿಎಸ್ ವಕ್ತಾರ ಕೆ.ಎಲ್. ರಮೇಶ್, ನಗರಾಧ್ಯಕ್ಷ ಡಿ.ಸಿ. ಮಂಜು, ಪುರಸಭಾ ಸದಸ್ಯರಾದ ಕೆ.ಎಲ್. ಜಗದೀಶ್, ಉಮೇಶ್, ಜೆಡಿಎಸ್ ಮುಖಂಡರಾದ ಬಿ.ಇ. ಯೋಗಾನಂದ, ದಾಶೆಟ್ಟಿ ಶ್ರೀನಿವಾಸ್, ಮಿರ್ಲೆ ಅಣ್ಣೇಗೌಡ, ಮಿರ್ಲೆ ಧನಂಜಯ ಇದ್ದರು.
ಸಿದ್ದರಾಮಯ್ಯ ಹರಕೆ ಕುರಿಯಾಗುವ ದಿನ ದೂರವಿಲ್ಲ: ಪುಟ್ಟರಾಜು
ಕೆ.ಆರ್. ನಗರ: ಕಾಂಗ್ರೆಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಹರಕೆಯ ಕುರಿಯಾಗುವ ದಿನಗಳು ದೂರವಿಲ್ಲ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಸಿ.ಎಸ್. ಪುಟ್ಟರಾಜು ಹೇಳಿದರು. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಂಧ್ರದಲ್ಲಿ ಪಕ್ಷ ಕಟ್ಟಿ ಎರಡು ಬಾರಿ ಅಧಿಕಾರದ ಗದ್ದುಗೆ ಏರಿಸಿದ ವೈ.ಎಸ್. ರಾಜಶೇಖರರೆಡ್ಡಿ ಅವರ ಪುತ್ರನನ್ನೆ ಜೈಲಿಗೆ ತಳ್ಳಿದ ಪಕ್ಷಕ್ಕೆ, ಸಿದ್ದರಾಮಯ್ಯ ಯಾವ ಲೆಕ್ಕ. ಅಧಿಕಾರಕ್ಕೆ ಬರಲು ಜಾತಿ, ಜನಾಂಗ ಬಳಸಿಕೊಂಡು ನಂತರ ಬಿಸಾಡುವ ಪರಿಪಾಠ ಬೆಳೆಸಿಕೊಂಡಿರುವ ಕಾಂಗ್ರೆಸ್ ಬಗ್ಗೆ ಸಿದ್ದರಾಮಯ್ಯ ಎಚ್ಚರಿಕೆಯಿಂದ ಇರುವುದು ಒಳಿತು ಎಂದು ಸಲಹೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.