ಮೈಸೂರು

ಬಿಸಿಯೂಟ, ಕ್ಷೀರಭಾಗ್ಯ ಯಶಸ್ವಿಗೊಳಿಸಿ

Published On :

ಕ.ಪ್ರ.ವಾರ್ತೆ ಟಿ.ನರಸೀಪುರ ಆ. 27
ಗ್ರಾಮೀಣ ಪ್ರದೇಶದ ಮಕ್ಕಳನ್ನು ಶಾಲೆಯಡೆಗೆ ಆಕರ್ಷಿಸಿ, ಶೈಕ್ಷಣಿಕ ಪ್ರಗತಿಯಲ್ಲಿ ಸುಧಾರಣೆ ತರಲು ಶಿಕ್ಷಕರು ಮಧ್ಯಾಹ್ನದ ಬಿಸಿಯೂಟ ಮತ್ತು ಕ್ಷೀರಭಾಗ್ಯ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಿ. ವೆಂಕಟೇಶ್ ಹೇಳಿದರು.
ಇಲ್ಲಿನ ಗುರುಭವನದಲ್ಲಿ ನಡೆದ ಮುಖ್ಯ ಶಿಕ್ಷಕರ ಸಭೆಯಲ್ಲಿ ರಾಜ್ಯ ಸರ್ಕಾರದ ಬಿಸಿಯೂಟ ಹಾಗೂ ಕ್ಷೀರಭಾಗ್ಯ ಯೋಜನೆಗಳ ಅನುಷ್ಠಾನದ ಬಗ್ಗೆ ಶಿಕ್ಷಕರಿಗೆ ವಿವರಣೆ ನೀಡಿ, ಬಿಸಿಯೂಟ ನಿರ್ವಹಣೆಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಗುಣಮಟ್ಟ ಕಾಪಾಡಿಕೊಂಡು ಶಾಲೆಯಲ್ಲಿಯೆ ಎಲ್ಲ ಮಕ್ಕಳು ತಪ್ಪದೆ ಬಿಸಿಯೂಟ ಸೇವಿಸಬೇಕು ಎಂದು ತಿಳಿಸಿದರು.
ಕ್ಷೀರಭಾಗ್ಯ ಯೋಜನೆ ಬಂದ ದಿನದಿಂದ ಶಾಲೆಯತ್ತ ಮಕ್ಕಳು ಹೆಜ್ಜೆಯನ್ನಿಡುತ್ತಿದ್ದಾರೆ. ಕೆಲವೆಡೆ ಹಾಲಿನ ಜೊತೆ ಕಬ್ಬಿಣಾಂಶದ ಮಾತ್ರೆ ಸೇವಿದ್ದಕ್ಕೆ ಮಕ್ಕಳ ಆರೋಗ್ಯದ ಮೇಲೆ ವ್ಯಕ್ತಿರಿಕ್ತ ಪರಿಣಾಮ ಉಂಟಾದ ಬಗ್ಗೆ ದೂರು ಕೇಳಿ ಬಂದಿರುವ ಹಿನ್ನೆಲೆ, ಹಾಲು ನೀಡಿದ ದಿನ ಮಾತ್ರೆ ನೀಡಬಾರದು.
ಶಾಲೆಯಲ್ಲಿ ಯಾವುದೆ ಸಮಸ್ಯೆಗಳಿದ್ದರೂ ತಮಗೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತರಬೇಕು ಎಂದು ಸೂಚಿಸಿದರು.  
ಕ್ಷೇತ್ರ ಶಿಕ್ಷಣಾಧಿಕಾರಿ ಮರಿಸ್ವಾಮಿ ಮಾತನಾಡಿ, ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಶಿಕ್ಷಕರಿಗೆ ಉತ್ತಮ ಸೇವಾ ಪ್ರಶಸ್ತಿ ನೀಡಬೇಕೆಂದು ನಿರ್ಧರಿಸಿದ್ದೇನೆ. ಈ ಗೌರವ ಉತ್ತಮವಾಗಿ ಸೇವೆ ಸಲ್ಲಿಸುವ ಶಿಕ್ಷಕರಿಗೆ ನೀಡಲಾಗುತ್ತದೆ. ಆದರೆ, ಇದನ್ನು ಉತ್ತಮ ಶಿಕ್ಷಕ ಪ್ರಶಸ್ತಿ ಎಂದು ಪರಿಗಣಿಸಬಾರದು. ಅದಕ್ಕಾಗಿ ಅಗತ್ಯವಿರುವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ತಾಲೂಕಿನ ಜನರು ಸೇರಿದಂತೆ ಚುನಾಯಿತ ಪ್ರತಿನಿಧಿಗಳು ಹಾಗೂ ಪ್ರಜ್ಞಾವಂತ ನಾಗರಿಕರೆಲ್ಲರೂ ಶೈಕ್ಷಣಿಕ ಪ್ರಗತಿಗೆ ಪೂರಕವಾದ ಪ್ರೇರಣೆ ನೀಡುತ್ತಿದ್ದಾರೆ ಎಂದು ಹೇಳಿದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ. ಶಿವಶಂಕರಮೂರ್ತಿ ಮಾತನಾಡಿ, ಶಿಕ್ಷಕರ ದಿನಾಚರಣೆ ಪ್ರಯುಕ್ತ ಸೆ. 5 ರಂದು ವಿದ್ಯೋದಯ ಕಾಲೇಜು ಕ್ರೀಡಾಂಗಣದಲ್ಲಿ ಶಿಕ್ಷಕರಿಗೆ ಕ್ರೀಡಾಕೂಟ ಆಯೋಜಿಸಿದೆ. ಅಂದೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ರಾಜಣ್ಣ ಅವರು ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ಆರೋಗ್ಯ ಬಗ್ಗೆ ಅರಿವು ಮೂಡಿಸುವ ಬಗ್ಗೆ ತಿಳಿಸಿಕೊಟ್ಟರು.
ಸಭೆಯಲ್ಲಿ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಕೃಷ್ಣಪ್ಪ, ಬಿಸಿಯೂಟ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್. ಗಂಗಾಧರ, ಉಪಾಧ್ಯಕ್ಷ ಪುಟ್ಟಸ್ವಾಮಿ, ಬಿಆರ್‌ಪಿಗಳಾದ ಜಿ.ಎಸ್. ಮಲ್ಲೇಶ್, ಜ್ಯೋತಿ, ಸಚ್ಚಿತಾನಂದ, ಬಸವರಾಜು, ಶಿಕ್ಷಣ ಸಂಯೋಜಕರಾದ ಶಂಕರ್, ಪ್ರಕಾಶ್, ಶಿವಸ್ವಾಮಿ, ಮಹದೇವಯ್ಯ, ಸಿಆರ್‌ಪಿ ಸೋಸಲೆ ನಾಗೇಶ್ ಹಾಗೂ ತಾಲೂಕಿನ ಎಲ್ಲ ಶಾಲೆಗಳ ಮುಖ್ಯ ಶಿಕ್ಷಕರು ಇದ್ದರು.

ಅಡುಗೆ ಅನಿಲ, ಪಡಿತರಕ್ಕೆ ಪರದಾಟ
ಟಿ. ನರಸೀಪುರ:
ಬಿಸಿಯೂಟಕ್ಕೆ ಅಗತ್ಯವಾಗಿ ಬೇಕಿರುವ ಅಡುಗೆ ಅನಿಲ ಮತ್ತು ಪಡಿತರ ಅಕ್ಕಿಗೆ ಶಿಕ್ಷಕರು ಪರದಾಡಬೇಕಿದೆ ಎಂದು ಸೋಮವಾರ ನಡೆದ ಸಭೆಯಲ್ಲಿ ವಿವಿಧ ಸರ್ಕಾರಿ ಶಾಲೆಗಳ ಮುಖ್ಯ ಶಿಕ್ಷಕರು ಅಲವತ್ತುಕೊಂಡರು. ಸಭೆಯಲ್ಲಿ ಬನ್ನಹಳ್ಳಿಹುಂಡಿ ಶಾಲೆಯ ಶಿಕ್ಷಕ ಸಿದ್ದರಾಜು ಅವರು ಮಾತನಾಡಿ, ಅಡುಗೆ ಅನಿಲ ವಿತರಿಸುವ ಎಸ್.ಆರ್. ಗ್ಯಾಸ್ ಏಜೆನ್ಸಿಯವರು ಸಬೂಬು ಹೇಳಿ ಶಾಲೆಗಳಿಗೆ ಬಿಸಿಯೂಟ ತಯಾರಿಕೆಗೆ ಬೇಕಿರುವ ಸಿಲಿಂಡರ್‌ಗಳನ್ನು ನಿಗದಿತ ಸಮಯಕ್ಕೆ ನೀಡದೆ ಸತಾಯಿಸುತ್ತಾರೆ. ಇತ್ತ ಅಡುಗೆ ಅನಿಲವೂ ಇಲ್ಲದೆ, ಅಲ್ಲಿ ಅಡುಗೆಗೆ ಕಟ್ಟಿಗೆಗಳನ್ನು ಸಿದ್ಧಮಾಡಿಕೊಳ್ಳದೆ ಪರದಾಡಬೇಕಾಗಿದೆ. ಮನೆಯ ಸಿಲಿಂಡರ್ ತಂದು ಅಡುಗೆ ಮಾಡಬೇಕಾಗಿದೆ ಎಂದು ದೂರಿದರು.
ಕಿರಗಸೂರು ಶಾಲೆ ಮುಖ್ಯ ಶಿಕ್ಷಕ ಕುಮಾರ್ ಮಾತನಾಡಿ, ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಉಗ್ರಾಣದಲ್ಲಿ ದಾಸ್ತಾನಿನ ನೆಪದಲ್ಲಿ ಬಿಸಿಯೂಟದ ಪಡಿತರ ಅಕ್ಕಿಯನ್ನು ಸಮರ್ಪಕವಾಗಿ ಒದಗಿಸುವುದಿಲ್ಲ. ಶಾಲೆಯ ಪಡಿತರಕ್ಕೆ ಶಿಕ್ಷಕರು ದಿನವಿಡೀ ಉಗ್ರಾಣಕ್ಕೆ ಅಲೆಯಬೇಕು. ಪರಿಸ್ಥಿತಿ ಹೀಗಾದರೆ ಶಿಕ್ಷಕರು ಪಾಠ ಮಾಡೋದು ಬಿಟ್ಟು, ಬಿಸಿಯೂಟ ಸಿದ್ಧತೆಗಾಗಿ ಅಲೆಯಬೇಕಾಗುತ್ತದೆ ಎಂದು ಹೇಳಿದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಿ. ವೆಂಕಟೇಶ್ ಪ್ರತಿಕ್ರಿಯಿಸಿ, ಸರ್ಕಾರದ ಮಹತ್ವದ ಯೋಜನೆಗಳ ಅನುಷ್ಠಾನಕ್ಕೆ ಗ್ಯಾಸ್ ಏಜೆನ್ಸಿ ಹಾಗೂ ಉಗ್ರಾಣದ ವ್ಯವಸ್ಥಾಪಕರು ತೊಂದರೆ ಕೊಡಬಾರದು. ಸಕಾಲದಲ್ಲಿ ಅನಿಲ ಮತ್ತು ಪಡಿತರ ಒದಗಿಸದಿದ್ದರೆ ಕ್ರಮಕ್ಕೆ ಜಿಲ್ಲಾಧಿಕಾರಿಗಳಿಗೆ ಶಿಫಾರಸು ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.