ಗೋ ಹತ್ಯೆ ನಿಷೇಧ ವಾಪಸ್ ವಿರುದ್ಧ ಧರಣಿ
ಮೈಸೂರು: ಗೋಹತ್ಯೆ ನಿಷೇಧ ಕಾಯಿದೆ ಹಿಂತೆಗೆದುಕೊಂಡಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ನಗರ ಮತ್ತು ಜಿಲ್ಲಾ ಬಿಜೆಪಿ ಘಟಕದ ಕಾರ್ಯಕರ್ತರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟಿಸಿದರು.
ಅಧಿಕಾರದ ಗದ್ದುಗೆ ಏರಿದ ಕಾಂಗ್ರೆಸ್ ಸರ್ಕಾರವು, ಈ ಹಿಂದೆ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಗೋಹತ್ಯೆ ನಿಷೇಧ ಕಾಯಿದೆಯ 2010 ಮತ್ತು 2012 ರಲ್ಲಿ ಕೈಗೊಂಡಿದ್ದ ತಿದ್ದುಪಡಿಯನ್ನು ಹಿಂದಕ್ಕೆ ಪಡೆಯುವ ಮೂಲಕ, ಕಾಯಿದೆಯನ್ನು ಹಲ್ಲು ಕಿತ್ತ ಹಾವಿನಂತೆ ಮಾಡಿದೆ. ಕಾಯ್ದೆಯನ್ನು ಉಭಯ ಸದನಗಳಲ್ಲಿಯೂ ಅನುಮೋದಿಸಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿತ್ತು. ಆದರೆ ರಾಜ್ಯಪಾಲರು ಒಪ್ಪಿಗೆ ನೀಡದೆ ತಡೆಹಿಡಿದಿದ್ದರು ಎಂದು ಅವರು ದೂರಿದರು.
ಹೊಸ ಸರ್ಕಾರವು ಗೋ, ಭೂಮಿ ಮತ್ತು ಪ್ರಕೃತಿ ಪ್ರೇಮಿಗಳ ಭಾವನೆಗೆ ಕವಡೆ ಕಾಸಿನ ಕಿಮ್ಮತ್ತು ನೀಡದೆ ಕೇವಲ ತಮ್ಮ ಮತ ಬ್ಯಾಂಕ್ ರಾಜಕಾರಣ ಪೋಷಿಸುವತ್ತ ಗಮನ ನೀಡುತ್ತಿದೆ. ಈ ನಿರ್ಣಯದಿಂದ ಸಾಂಪ್ರದಾಯಿಕ ಕೃಷಿ ಪದ್ಧತಿಗೆ ಬಲವಾದ ಪೆಟ್ಟು ಬೀಳಲಿದೆ. ಹಸು ಮತ್ತು ಎತ್ತುಗಳನ್ನು ಕಸಾಯಿಖಾನೆಗೆ ಕಳುಹಿಸುವ ಈ ನಿರ್ಣಯದಿಂದ ರೈತರು ಹೆಚ್ಚು ರಾಸಾಯನಿಕ ಗೊಬ್ಬರ ಅವಲಂಬಿಸುವಂತೆ ಆಗುತ್ತದೆ. ಈಗಾಗಲೆ ಸಾರ ಕಳೆದುಕೊಂಡು, ಇಳುವರಿ ಕುಂಠಿತವಾಗಿರುವ ಈ ಸಂದರ್ಭದಲ್ಲಿ ಸರ್ಕಾರದ ತೀರ್ಮಾನವು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ ಎಂದು ಅವರು ಆರೋಪಿಸಿದರು.
ಹೆಚ್ಚುತ್ತಿರುವ ಗೋ ಕಳವು: ಗಡಿಭಾಗದಲ್ಲಿ ಗೋವುಗಳ ಕಳವು ಹೆಚ್ಚಾಗುತ್ತಿದೆ. ಹೊಸ ತಿದ್ದುಪಡಿಯಿಂದ ಇಂತಹ ಕೃತ್ಯಕ್ಕೆ ಕಡಿವಾಣ ಹಾಕಲು ಸಾಧ್ಯವಾಗಿತ್ತು. ಆದರೆ ಈಗ ಹಾಲು ಉತ್ಪಾದನೆ ಉತ್ತೇಜಿಸುವ ಯೋಜನೆ ಜಾರಿಗೆ ತಂದಿರುವ ಸರ್ಕಾರ ಅದೆ ಹಾಲು ಕೊಡುವ ಗೋವುಗಳನ್ನು ಕಸಾಯಿಖಾನೆಗೆ ಕಳುಹಿಸುವ ನಿರ್ಧಾರ ಕೈಗೊಂಡಿರುವುದು ನೋವಿನ ಸಂಗತಿ ಎಂದು ಅವರು ಟೀಕಿಸಿದರು.
ರಾಜ್ಯದ ವಿವಿಧ ಎ ಗ್ರೇಡ್ ದೇವಸ್ಥಾನ ಸಮಿತಿಗಳಿಗೆ ನೇಮಕವಾಗಿದ್ದ ದೇವಸ್ಥಾನ ವ್ಯವಸ್ಥಾಪನ ಮಂಡಳಿ ಸದಸ್ಯರನ್ನು ರದ್ದುಗೊಳಿಸಿ, ದೇವಸ್ಥಾನಗಳನ್ನು ಕಾಂಗ್ರೆಸ್ಸೀಕರಣ ಮಾಡಲು ಮುಂದಾಗಿರುವುದು ಖಂಡನೀಯ. ಅಲ್ಲದೆ ನೂರಾರು ಬಿ ಹಾಗೂ ಸಿ ಗ್ರೇಡ್ ದೇವಸ್ಥಾನಗಳ ಸಮಿತಿಗಳನ್ನು ರದ್ದುಗೊಳಿಸಲು ಸರ್ಕಾರ ಮುಂದಾಗಿದೆ. ಕಾಂಗ್ರೆಸ್ನ ಈ ತೀರ್ಮಾನ ಕೆಟ್ಟ ಪರಂಪರೆಗೆ ನಾಂದಿ ಹಾಡಿದಂತಿದೆ ಎಂದು ಅವರು ಆರೋಪಿಸಿದರು.
ವಿಧಾನ ಪರಿಷತ್ ಸದಸ್ಯರಾದ ಸಿ.ಎಚ್. ವಿಜಯಶಂಕರ್, ಗೋ. ಮಧುಸೂದನ್ ಮಾತನಾಡಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಶಾಸಕ ಸಿದ್ದರಾಜು, ಮಾಜಿ ಶಾಸಕ ಸಿ.ರಮೇಶ್, ನಗರ ಬಿಜೆಪಿ ಅಧ್ಯಕ್ಷ ಇ.ಮಾರುತಿರಾವ್ ಪವಾರ್, ಪ್ರಧಾನ ಕಾರ್ಯದರ್ಶಿ ಯಶಸ್ವಿನಿ ಸೋಮಶೇಖರ್, ಜಿಲ್ಲಾಧ್ಯಕ್ಷ ಹೇಮಂತ್ಕುಮಾರ್ ಗೌಡ, ಪ್ರಧಾನ ಕಾರ್ಯದರ್ಶಿ ಡಾ.ಶಿವರಾಂ, ಎಂಡಿಎ ಮಾಜಿ ಅಧ್ಯಕ್ಷ ಎಲ್.ನಾಗೇಂದ್ರ, ಮೃಗಾಲಯ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಂಜುಂಡಸ್ವಾಮಿ, ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಡಿ. ಮಹೇಂದ್ರ, ಪಾಲಿಕೆ ಸದಸ್ಯರಾದ ಎಂ.ಕೆ. ಶಂಕರ್, ವನಿತಾ, ಮಹದೇವಮ್ಮ, ಮುಖಂಡರಾದ ಮಲ್ಲಪ್ಪಗೌಡ, ಶ್ರೀವತ್ಸ, ದೇವನೂರು ಪ್ರತಾಪ್, ಮಹೇಶ್ ಇದ್ದರು.
ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಸಹಿ ಸಂಗ್ರಹ
ಮೈಸೂರು: ಕೇಂದ್ರ ಮತ್ತು ರಾಜ್ಯ ಸರ್ಕಾರದ ಆಡಳಿತ ವೈಖರಿ ಖಂಡಿಸಿ ಭ್ರಷ್ಟಾಚಾರ ವಿರೋಧಿ ಆಂದೋಲನ ವೇದಿಕೆ ಮತ್ತು ಆಮ್ ಆದ್ಮಿ ಕಾರ್ಯಕರ್ತರು ನಗರದ ನ್ಯಾಯಾಲಯ ಎದುರು ಬುಧವಾರ ಸಹಿ ಸಂಗ್ರಹ ಚಳವಳಿ ನಡೆಸಿದರು.
ಆಡಳಿತದಲ್ಲಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮತ್ತು ಅದಕ್ಷತೆಯಿಂದಾಗಿ ದೇಶದ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಆದ್ದರಿಂದ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿರಬೇಕಿದ್ದ ಭಾರತವು ಇಂದು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದ್ದಾರೆ. ಇದೆಲ್ಲದರ ಜತೆಗೆ ಆಗಾಗ್ಗೆ ನಡೆಯುತ್ತಿರುವ ಚುನಾವಣೆ ಮತ್ತು ಅದಕ್ಕಾಗಿ ನಮ್ಮ ಸರ್ಕಾರಗಳು ಜನಸಾಮಾನ್ಯರ ತೆರಿಗೆ ಹಣವನ್ನು ನೀರಿನಂತೆ ಖರ್ಚು ಮಾಡುತ್ತ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರದ ಆಡಳಿತ ವೈಫಲ್ಯಗಳನ್ನು ಸಾರ್ವಜನಿಕರಿಗೆ ತಿಳಿಸಿ ಸಹಿ ಸಂಗ್ರಹಿಸಿದರು. ಭ್ರಷ್ಟಾಚಾರ ವಿರೋಧಿ ಆಂದೋಲನ ವೇದಿಕೆ ನಡೆಸಿದ ಈ ಸಹಿ ಸಂಗ್ರಹ ಚಳವಳಿಯಲ್ಲಿ ಆಮ್ಆದ್ಮಿ ಪಕ್ಷದ ಕಾರ್ಯಕರ್ತರು ಸಹ ಭಾಗವಹಿಸಿ ತಮ್ಮ ಬೆಂಬಲ ಸೂಚಿಸಿದರು.
ಈ ವೇಳೆ ವೇದಿಕೆ ರಾಜಾಧ್ಯಕ್ಷ ಎಚ್.ಎಸ್. ನಂಜುಂಡರಾಜ್, ಪ್ರಭಾಕರ್ ಹುಣಸೂರು, ಶ್ರೀಧರ್ ಬೆಟ್ಟ, ಮಾದೇಶ್, ಶ್ರೀನಿವಾಸ್ ಕಡಕೊಳ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

