ಮೈಸೂರು

ನಗರದೆಲ್ಲೆಡೆ ಸಂಭ್ರಮದ ಶ್ರೀಕೃಷ್ಣ ಜನ್ಮಾಷ್ಟಮಿ

Published On :

ಕ.ಪ್ರ.ವಾರ್ತೆ ಮೈಸೂರು ಆ. 28
ಮಹಾಭಾರತದಲ್ಲಿ ಅರ್ಜುನನಿಗೆ ಭಗವದ್ಗೀತೆ ಬೋಧಿಸಿ ತನ್ನ ಲೀಲಾ ವಿನೋದಗಳಿಂದ ಭೂಮಿಗೆ ಒಡೆಯನು ತಾನೆಂದು ಸಾರಿ ಹೇಳಿದ ಶ್ರೀಕೃಷ್ಣನ ಜಯಂತಿಯನ್ನು ಬುಧವಾರ ನಗರದೆಲ್ಲೆಡೆ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.
ಜಯನಗರದಲ್ಲಿರುವ ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ (ಇಸ್ಕಾನ್) ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಬೆಳಗ್ಗೆಯಿಂದಲೇ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶ್ರೀಕೃಷ್ಣ ಮತ್ತು ಬಲರಾಮರ ವಿಗ್ರಹಗಳಿಗೆ ಶೃಂಗಾರ ಆರತಿ ಬೆಳಗಲಾಯಿತು. ನಂತರ ಶ್ರೀಕೃಷ್ಣ ಲೀಲಾವಿನೋದಗಳನ್ನು ಪ್ರದರ್ಶಿಸಲಾಯಿತು. ದಿನವಿಡಿ ಭಕ್ತರು ಸಂಕೀರ್ತನೆಗಳನ್ನು ಜಪಿಸಿದರು.
ಅರಮನೆ ಆವರಣದಲ್ಲಿರುವ ಶ್ರೀ ಪ್ರಸನ್ನ ಕೃಷ್ಣಸ್ವಾಮಿ ದೇವಸ್ಥಾನದಲ್ಲಿ ವಿಶಿಷ್ಟವಾದ ಅಂಬೆಗಾಲು ಶ್ರೀಕೃಷ್ಣ ವಿಗ್ರಹಕ್ಕೆ ಪುಷ್ಪಾಲಂಕಾರ ಮಾಡಲಾಗಿತ್ತು. ಅರ್ಚಕರು ಮಂತ್ರಗಳನ್ನು ಪಠಿಸಿ ಅಭಿಷೇಕ, ನೈವೇದ್ಯ, ಮಹಾಮಂಗಳಾರತಿ ಅರ್ಪಿಸಿದರು. ಭಕ್ತ ಸಮೂಹ ಸರತಿಯಲ್ಲಿ ನಿಂತು ಶ್ರೀಕೃಷ್ಣನ ದರ್ಶನ ಪಡೆದು ಪುಳಕಿತರಾದರು. ತ್ಯಾಗರಾಜ ರಸ್ತೆಯಲ್ಲಿರುವ ಪ್ರಿನ್ಸ್ ಸುಬ್ರಹ್ಮಣ್ಯ ರಾಜೇ ಅರಸ್ ಸ್ಮರಣಾರ್ಥ ನಿರ್ಮಿಸಿದ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನ, ಗೊಲ್ಲಗೇರಿಯ ಶ್ರೀ ಪ್ರಸನ್ನ ನಂಜುಂಡೇಶ್ವರ ಮತ್ತು ಶ್ರೀಕೃಷ್ಣದೇವಾಲಯ, ಗೋಕುಲಂನ ಶ್ರೀಕೃಷ್ಣ ಮಂದಿರ, ಸರಸ್ವತಿಪುರಂನಲ್ಲಿರುವ ಶ್ರೀಕೃಷ್ಣಧಾಮ, ಜೆ.ಪಿ. ನಗರದ ವಿಠ್ಠಲಧಾಮ, ಚಾಮರಾಜ ಜೋಡಿ ರಸ್ತೆಯಲ್ಲಿರುವ ವೆಂಕಟಾಚಲಧಾಮ, ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಬಿಡಾರಂ ಕೃಷ್ಣಪ್ಪ ಶ್ರೀರಾಮ ಮಂದಿರ, ನಾರಾಯಣಶಾಸ್ತ್ರಿ ರಸ್ತೆಯ ಉಡುಪಿ ಶ್ರೀಕೃಷ್ಣ ಮಂದಿರದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು. ಶ್ರೀಕೃಷ್ಣನಗರದ ಶ್ರೀ ಚಾಮುಂಡೇಶ್ವರಿ ಕ್ಷೇಮಾಭಿವೃದ್ಧಿ ಸಂಘ, ಮೈಸೂರು ನಗರ ಯಾದವ ಯುವ ಸಂಘ, ಹ್ಯಾಪಿ ಕಿಡ್ಸ್ ಅಕಾಡೆಮಿ, ಬೋಗಾದಿಯ ಹರಿ ವಿದ್ಯಾಲಯದಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಿಸಿ ಪ್ರಸಾದ ವಿನಿಯೋಗಿಸಲಾಯಿತು. ಹರಿ ವಿದ್ಯಾಲಯದ ಮಕ್ಕಳು ಕೃಷ್ಣ ಮತ್ತು ರಾಧೆ ವೇಷ ಧರಿಸಿ ಗಮನ ಸೆಳೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.