ಅರಮನೆಯಲ್ಲಿ ಗಜಪಡೆಗೆ ಸಾಂಪ್ರದಾಯಿಕ ಸ್ವಾಗತ
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವಹಿಸಲಿರುವ ಆನೆಗಳ ಮೊದಲ ತಂಡಕ್ಕೆ ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ಶುಕ್ರವಾರ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಆನೆಗಳಿಗೆ ಪೂಜೆ ಸಲ್ಲಿಸಿ, ಬರಮಾಡಿಕೊಂಡರು. ಶಾಸಕರಾದ ಎಂ.ಕೆ. ಸೋಮಶೇಖರ್, ವಾಸು, ಗೋ. ಮಧುಸೂದನ್ ಮೊದಲಾದವರು ಇದ್ದರು.
ದಸರೆಯ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯಲ್ಲಿ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತು ಸಾಗಲಿರುವ ಗಜರಾಜ ದ್ರೋಣ, ಹಿಂದಿನ ಕ್ಯಾಪ್ಟನ್ ಬಲರಾಮ, ಅಭಿಮನ್ಯು, ಸರಳ, ವರಲಕ್ಷ್ಮಿ ಹಾಗೂ ಕೇಂದ್ರ ಆನೆಗಳು ಮೊದಲ ತಂಡದಲ್ಲಿವೆ. ಮೊದಲ ಐದು ಆನೆಗಳು ಹುಣಸೂರು ತಾಲೂಕು ನಾಗರಹೊಳೆ ಸಮೀಪದ ನಾಗಾಪುರ ಗಿರಿಜನ ಹಾಡಿಯಿಂದ ಆ.28ರಂದು ಪಯಣ ಆರಂಭಿಸಿದ್ದವು. ಅದೇ ದಿನ ಲಾರಿಯಲ್ಲಿ ಈ ಆನೆಗಳು ಮೈಸೂರು ತಲುಪಿದ್ದವು. ಗಜೇಂದ್ರ ಆನೆ ಚಾಮರಾಜನಗರದ ಕೆ. ಗುಡಿಯಿಂದ ನೇರವಾಗಿ ಮೈಸೂರಿಗೆ ಬಂದಿತ್ತು. ಈ ಆರು ಆನೆಗಳು ಅರಣ್ಯ ಭವನದಲ್ಲಿ ಬೀಡುಬಿಟ್ಟಿದ್ದವು. ಗುರುವಾರ ಅಲ್ಲಿಯೇ ವಿಶ್ರಾಂತಿ ಪಡೆದವು. ಶುಕ್ರವಾರ ಬೆಳಗ್ಗೆ ಅವುಗಳನ್ನು ಸಿಂಗರಿಸಿ, ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಕುಟುಂಬದವರು ಪೂಜೆ ಸಲ್ಲಿಸಿದರು.
ಅಶೋಕಪುರಂನಲ್ಲಿರುವ ಅರಣ್ಯ ಭವನದಿಂದ ಕಾಲ್ನಡಿಗೆಯಲ್ಲಿ ಹೊರಟ ಆನೆಗಳು ನೂರಡಿ ರಸ್ತೆಯ ಮೂಲಕ ಅರಮನೆ ತಲುಪಿದವು. ರಸ್ತೆಯುದ್ದಕ್ಕೂ ನೂರಾರು ಮಂದಿ ಆನೆಗಳನ್ನು ವೀಕ್ಷಿಸಿದರು. ಆನೆಗಳ ಹಿಂದೆ ಹಾಗೂ ಮುಂದೆ ಬಿಗಿಬಂದೋಬಸ್ತ್ ಏರ್ಪಡಿಸಲಾಗಿತ್ತು.
ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇಗುಲದ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್ ಅವರ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ನೆರವೇರಿದವು. ಮಂಗಳವಾದ್ಯ, ಬ್ಯಾಂಡ್ಸೆಟ್, ಸಶಸ್ತ್ರ ಪೊಲೀಸರು, ಅಶ್ವಾರೋಹಿ ಪೊಲೀಸರು, ಜಾನಪದ ಕಲಾತಂಡಗಳು, ಪೂರ್ಣಕುಂಭ ಹೊತ್ತ ಮಹಿಳೆಯರು ಜಯಮಾರ್ತಾಂಡ ದ್ವಾರದಿಂದ ಅರಮನೆ ಆನೆ ಬಾಗಿಲಿನವರೆಗೆ ಮೆರವಣಿಗೆಯಲ್ಲಿ ಸಾಗಿದರು. ಉಸ್ತುವಾರಿ ಸಚಿವರು ಪೂಜೆ ಸಲ್ಲಿಸುತ್ತಿದ್ದಂತೆಯೇ ಆನೆಗಳ ಮೇಲೆ ಪುಷ್ಪಾರ್ಚನೆ ಮಾಡಲಾಯಿತು. ಅತಿಗಣ್ಯರಿಗೆ ನೀಡಲಾಗುವ ಗೌರವ ರಕ್ಷೆಯನ್ನು (ಗಾರ್ಡ್ ಆಫ್ ಹಾನರ್) ಗಜಪಡೆಗೆ ನೀಡಿದ್ದು ವಿಶೇಷವಾಗಿತ್ತು. ಅರಮನೆಯನ್ನು ತಳಿರು, ತೋರಣಗಳಿಂದ ಸಿಂಗರಿಸಲಾಗಿತ್ತು. ಜಯಮಾರ್ತಾಂಡ ದ್ವಾರದ ಎದುರು ಸ್ವಾಗತ ಕಮಾನು ಹಾಕಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

