'ಯೋಜನಾಬದ್ಧವಾಗಿ ಕೃಷಿ ಚಟುವಟಿಕೆ ನಡೆಸಿ'
ಕ.ಪ್ರ.ವಾರ್ತೆ , ಭೇರ್ಯ , ಆ. 30
ವ್ಯವಸಾಯವನ್ನು ಗೊತ್ತು ಗುರಿ ಇಲ್ಲದೆ ಮಾಡಿದರೆ ನಷ್ಟ ಕಟ್ಟಿಟ್ಟ ಬುತ್ತಿ. ಹೀಗಾಗಿ ರೈತರು ಯೋಜನಾ ಬದ್ಧವಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಮೈಸೂರಿನ ಕೃಷಿ ಸಂಶೋಧನಾ ಕೇಂದ್ರದ ನಿವೃತ್ತ ವಿಜ್ಞಾನಿ ಡಾ. ಅರಸುಮಲ್ಲಯ್ಯ ಹೇಳಿದರು.
ಕೃಷ್ಣರಾಜನಗರ ತಾಲೂಕು ಕರ್ಪೂರವಳ್ಳಿ ಗ್ರಾಮದಲ್ಲಿ ಶುಕ್ರವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಆಯೋಜಿಸಿದ್ದ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬತ್ತ, ಮೆಕ್ಕೆಜೋಳ ಸೇರಿದಂತೆ ಯಾವುದೇ ಬೆಳೆಯನ್ನಾದರೂ ಕಡಿಮೆ ಸಮಯ ಹಾಗೂ ಖರ್ಚಿನಲ್ಲಿ ಬೆಳೆಯಬೇಕಾದರೆ, ತಾಂತ್ರಿಕತೆ ಅಳವಡಿಕೆ ಅಗತ್ಯ. ಮಣ್ಣು ಸಜೀವ ವಸ್ತು, ಕಾಲ ಕಾಲಕ್ಕೆ ಅದು ತನ್ನ ಸತ್ವ ಕಳೆದು ಕೊಳ್ಳುತ್ತಿರುತ್ತದೆ. ಚೌಳು ಹಾಗೂ ಕ್ಷಾರಯುಕ್ತ ಮಣ್ಣಿನಲ್ಲಿ ಬೆಳೆ ಸೊರಗಲಿದ್ದು, ಇಂಥ ಜಮೀನಿನಲ್ಲಿ ಸಾವಯವ ಗೊಬ್ಬರ ಹೆಚ್ಚಾಗಿ ಬಳಸಿ ಮಣ್ಣಿನ ಫಲವತ್ತತೆ ಕಾಪಾಡಬೇಕು ಎಂದು ಸಲಹೆ ನೀಡಿದರು.
ಮಣ್ಣಿನ ಫಲವತ್ತತೆ ಹಾಗೂ ಫಸಲು ಇಳುವರಿಗೆ ನೇರ ಸಂಬಂಧವಿದೆ. ಸುಮಾರು 20 ಮೂಲಗಳಿಂದ ಸಾವಯವ ಗೊಬ್ಬರ ದೊರಕಲಿದೆ. ಸಸ್ಯಜನ್ಯ ಹಾಗೂ ಪ್ರಾಣಿಜನ್ಯ ಗೊಬ್ಬರ ಬಳಕೆಯಿಂದ ಭೂಮಿ ಬರಡಾಗುವುದು ತಪ್ಪಲಿದ್ದು, ಉತ್ತಮ ಫಸಲು ಸಿಗುತ್ತದೆ. ರಾಸಾಯನಿಕ ಗೊಬ್ಬರ ಬಳಕೆಯಿಂದ ಮಣ್ಣು ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕಳೆದುಕೊಳ್ಳಲಿದ್ದು, ಕೃಷಿ ವಲಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದೇ ವೇಳೆ ಹೂವಿನ ಬೇಸಾಯ, ಮಾರುಕಟ್ಟೆ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಲಾಯಿತು.
ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಬಿ.ಅಶೋಕ್, ಕೃಷಿ ಮಾರಾಟ ಮಂಡಳಿ ಸಹಾಯಕ ನಿರ್ದೇಶಕ ಬೋಂಸ್ಲೆ, ಹಿರಿಯ ಸಹಾಯಕ ಚಿಕ್ಕಣ್ಣ, ಆಕಾಶವಾಣಿಯ ಕೇಶವಮೂರ್ತಿ, ಸಂಸ್ಥೆಯ ಹೈನುಗಾರಿಕಾ ವಿಭಾಗದ ಚಂದ್ರಪ್ಪ, ಮೇಲ್ವಿಚಾರಕ ನಿರಂಜನ್, ಬಸವರಾಜು, ಕಿರು ಆರ್ಥಿಕ ಪ್ರಬಂಧಕ ನಾಗೇಂದ್ರ, ಗ್ರಾಪಂ ಅಧ್ಯಕ್ಷೆ ಸಾವಿತ್ರಮ್ಮ, ಸದಸ್ಯೆ ಶಾಂತಮ್ಮ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

