9, 10ರಂದು ಸಾವಯವ ಸಂತೆ
ಮೈಸೂರು: ಮೈಸೂರಿನ ಕರ್ಜನ್ ಉದ್ಯಾನದಲ್ಲಿ ಫೆ.9 ಮತ್ತು 10 ರಂದು ಸಾವಯವ ಸಂತೆ ನಡೆಯಲಿದೆ ಎಂದು ತೋಟಗಾರಿಕೆ ಇಲಾಖೆ ಹೆಚ್ಚುವರಿ ನಿರ್ದೇಶಕ ಹಾಗೂ ಜೈವಿಕ್ ಸೊಸೈಟಿಯ ಗೌರವಾಧ್ಯಕ್ಷ ಡಾ.ಕೆ. ರಾಮಕೃಷ್ಣಪ್ಪ ಹೇಳಿದರು.
ಸಾವಯವ ರೈತರು ತಾವು ಬೆಳೆದ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸಲು, ಸಾವಯವ ಕೃಷಿ ಅನುಸರಿಸುತ್ತಿರುವ ಎಲ್ಲಾ ಸಂಘ ಸಂಸ್ಥೆಗಳು, ರೈತರು ಹಾಗೂ ಮಾರುಕಟ್ಟೆ ಸಂಸ್ಥೆಯವರಿಗೆ ಒಂದೇ ವೇದಿಕೆ ಕಲ್ಪಿಸುವುದು ಇದರ ಉದ್ದೇಶ ಎಂದು ಅವರು ಭಾನುವಾರ ಸುದ್ದಿಗಾರರಿಗೆ ತಿಳಿಸಿದರು. ಸಾವಯವ ಕೃಷಿಕರಿಗೆ ಮತ್ತು ಸಂಘಗಳಿಗೆ ಸಾವಯವ ಪದಾರ್ಥಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗುವುದು. ರೈತರು ಮತ್ತು ಸಂಘಗಳು ತಮ್ಮಲ್ಲಿರುವ ಪದಾರ್ಥಗಳು, ಜ್ಞಾನ ಸಂಪತ್ತನ್ನು ಪರಸ್ಪರ ವಿನಿಯಮ ಮಾಡಿಕೊಳ್ಳಲು ಇದರಿಂದ ಅವಕಾಶವಾಗಲಿದೆ ಎಂದು ಅವರು ಹೇಳಿದರು.
ಸಂತೆಯಲ್ಲಿ ಏನೇನು ಸಿಗುತ್ತವೆ?: ಸಾವಯವ ಸಂತೆಯಲ್ಲಿ ಸಾವಯವ ಪದ್ಧತಿಯಲ್ಲಿ ಬೆಳೆದಿರುವ ತಾಜಾ ತರಕಾರಿಗಳು, ಸೊಪ್ಪು, ಔಷಧಿಯ ಗುಣವುಳ್ಳ ವಿವಿಧ ತರಕಾರಿಗಳು, ನಂಜನಗೂಡು ರಸಬಾಳೆ, ಸೀಡ್ಲೆಸ್ ದ್ರಾಕ್ಷಿ, ಸಪೋಟ, ಬೆಟ್ಟದನೆಲ್ಲಿ, ಸೀಬೆ, ಗಾತ್ರದಲ್ಲಿ ಕಿರಿದಾದ, ಗುಣ ಮತ್ತು ಪೌಷ್ಟಿಕಾಂಶದಲ್ಲಿ ಹಿರಿಯದಾದ ನವಣೆ, ಸಾವೆ, ಸಜ್ಜೆ, ಹಾರಕ, ಕೊರ್ಲೆ, ಬರಗು, ರಾಗಿ, ಜೋಳ ಇತ್ಯಾದಿ ಕಿರು ಧಾನ್ಯಗಳು, ವೈವಿಧ್ಯತೆಯಿಂದ ಕೂಡಿದ ದೊಡ್ಡಬೈರನೆಲ್ಲಿನ ಕೆಂಪಕ್ಕಿ, ಪಾಯಸಕ್ಕೆ ಸೂಕ್ತವಾದ ಬರ್ಮಾ ಕಪ್ಪು ಅಕ್ಕಿಯ ಪ್ರದರ್ಶನ ಹಾಗೂ ಮಾರಾಟ ಇರುತ್ತದೆ. ಸಾವಯವ ಬೆಲ್ಲ, ಪುಡಿಬೆಲ್ಲ ಸಾಂಬಾರ ಪದಾರ್ಥಗಳು, ಸಂಸ್ಕರಿಸಿದ ವಿವಿಧ ಧಾನ್ಯಗಳ ಹಿಟ್ಟುಗಳು, ಉಪ್ಪಿನಕಾಯಿ, ಜಾಮ್ ಸಿಗುತ್ತವೆ. ಎರಡು ದಿನಗಳಲ್ಲಿ ಬೆಳಗ್ಗೆ 10-30 ರಿಂದ ಸಂಜೆ 6ರವರೆಗೆ 50 ರಿಂದ 60 ಟನ್ ಸಾವಯವ ಆಹಾರ ಪದಾರ್ಥಗಳು ಮಾರಾಟಕ್ಕೆ ಲಭ್ಯ. ಸುಮಾರು 20 ಸಾವಿರ ಗ್ರಾಹಕರು ಭೇಟಿ ನೀಡುವ ನಿರೀಕ್ಷೆ ಇದೆ.
ಸಾವಯವ ಮಳಿಗೆಗಳ ಆರಂಭ: ಹಾಪ್ಕಾಮ್ಸ್ ಮಾದರಿಯಲ್ಲಿ 39 ಸಾವಯವ ಕೃಷಿಕರ ಸಂಸ್ಥೆಗಳ ಸೇರಿ ಜೈವಿಕ್ ಕೃಷಿಕ್ ಸೊಸೈಟಿ ರಚನೆಯಾಗಿದೆ. ತಿಂಗಳಿಗೆ 10 ಲಕ್ಷ ವಹಿವಾಟು ನಡೆಯುತ್ತಿದೆ. ಸಾವಯವ ಕೃಷಿ ನೀತಿಯನ್ನು ರಾಜ್ಯ ಸರ್ಕಾರ ಅಳವಡಿಸಿಕೊಂಡಿದೆ. ಈವರೆಗೆ ಕೃಷಿ ಇಲಾಖೆಯ ಅಧೀನದಲ್ಲಿದ್ದ ಸಾವಯವ ಕೃಷಿ ಮಿಷನ್ ಇದೀಗ ತೋಟಗಾರಿಕೆ ಇಲಾಖಾ ವ್ಯಾಪ್ತಿಗೆ ಬಂದಿದೆ. 100 ಕೋಟಿ ಬಜೆಟ್ ಇದೆ. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಲ್ಲಿ ಬೆಂಗಳೂರು ಬಳಿ 1 ಕೋಟಿ ವೆಚ್ಚದಲ್ಲಿ ಸಾವಯವ ಕೃಷಿ ವಸ್ತುಗಳ ಸಂಗ್ರಹ ಕೇಂದ್ರ ಆರಂಭಿಸಲಾಗುವುದು ಎಂದು ಡಾ.ರಾಮಕೃಷ್ಣಪ್ಪ ತಿಳಿಸಿದರು.
ಬೆಂಗಳೂರಿನ ಭರಣ್ ಹೆಲ್ತ್ ಕೇರ್ ಪ್ರಾಡಕ್ಟ್ಸ್, 18 ಹರ್ಬ್ಸ್, ಪ್ರೋ ನೇಚರ್, ಸ್ವಾಮಿ ಅರೋಮಾ ವಂಡರ್ಸ್, ಆರ್ಯ ಫಾರಂ ಪ್ರಾಡಕ್ಟ್ಸ್, ಪ್ರಿಸ್ಟೈನ್ ಆರ್ಗಾನಿಕ್, ರಚನಾ ಫುಡ್ಸ್, ಗ್ರಾಮೀಣ ನ್ಯಾಚುರಲ್, ಫಲಾದ ಆಗ್ರೋ ರಿಸರ್ಚ್ ಫೌಂಡೇಷನ್, ಇಕೋ ಅಗ್ರಿ ಫೌಂಡೇಷನ್ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ಪಾಲ್ಗೊಳ್ಳುತ್ತಿವೆ.
35 ಮಳಿಗೆಗಳ ಸಾವಯವ ಸಂತೆಯಲ್ಲಿ ಫುಡ್ ಕೋರ್ಟ್ ಕೂಡ ಉಂಟು. ಅಲ್ಲಿ ಸಾವಯವ ಬಿಸಿಬೇಳೆ ಬಾತ್, ಉಪ್ಪಿಟ್ಟು, ದೋಸೆ ಮೊದಲಾದ ಆಹಾರ ಪದಾರ್ಥಗಳು ಸಿಗುತ್ತವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

