ಮೈಸೂರು

ರಾಜ್ಯದಲ್ಲಿ ಸಂಘರ್ಷ ರಾಜಕಾರಣ: ಕಾಪುಸಿ ವಿಷಾದ

Published On :

ಟಿ. ನರಸೀಪುರ: ರಾಜ್ಯ ರಾಜಕಾರಣದಲ್ಲಿ ಧರ್ಮ ರಾಜಕಾರಣದ ಬದಲು ಸಂಘರ್ಷದ ರಾಜಕಾರಣ ನಡೆಯುತ್ತಿದೆ ಎಂದು ಕೆಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಕಾ.ಪು. ಸಿದ್ದಲಿಂಗಸ್ವಾಮಿ ಹೇಳಿದರು.
ವರುಣಾ ವಿಧಾನಸಭಾ ಕ್ಷೇತ್ರದ ಕೆಜೆಪಿ ಪಕ್ಷದ ಕಚೇರಿಯಲ್ಲಿ ಶುಕ್ರವಾರ ನಡೆದ ಪ. ಪಂಗಡ ಸಮುದಾಯಗಳ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಒಂದೂವರೆ ದಶಕಗಳ ರಾಜಕಾರಣದಲ್ಲಿ ರಾಜಕಾರಣ ಮಾಡುವವರು, ಮತ ನೀಡುವವರ ನಡುವೆ ಪರಸ್ಪರ ವಿಶ್ವಾಸ, ನಂಬಿಕೆಗಳೆರಡು ಇರುತ್ತಿತ್ತು. ಧರ್ಮಾಧಾರಿತ ಅಂಶಗಳು ಅಡಕವಾಗಿದ್ದವು. ಆದರೆ, ಪ್ರಸ್ತುತ ರಾಜ್ಯ ರಾಜಕಾರಣದಲ್ಲಿ ರಾಜಕೀಯ ಪಕ್ಷಗಳ ನಡುವೆ ಅಧಿಕಾರಕ್ಕಾಗಿ ಕಿತ್ತಾಟ, ಪರಸ್ಪರ ಕೆಸರೆರಚಾಟದಿಂದಾಗಿ ರಾಜಕಾರಣ ಸಂಘರ್ಷದ ಹಾದಿಯಲ್ಲಿದೆ ಎಂದರು.
ತಾವು ಕಳೆದ ನಾಲ್ಕೂವರೆ ವರ್ಷಗಳಿಂದ ವರುಣ ಕ್ಷೇತ್ರದಲ್ಲಿ ತಾವು ಸಂಘಟನೆಗೆ ಸಂಚರಿಸಿದ್ದರಿಂದ ಮಧ್ಯಾಹ್ನದವರೆಗೆ ಮಲಗಿರುತ್ತಿದ್ದ ಅಪ್ಪ- ಮಕ್ಕಳು ತರಾತುರಿಯಲ್ಲಿ ಎದ್ದು ಮಾಜಿ ಸಿಎಂ ಬಿಎಸ್‌ವೈ ಅವರಿಂದ ಮಂಜೂರು ಮಾಡಿಸಿದ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ಸಲ್ಲಿಸುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಅವರ ಪುತ್ರ ರಾಕೇಶ್ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದರು.
ಕೊನೆಯ ಚುನಾವಣೆ ಎಂದು ಹೇಳುತ್ತಿರುವ ಅವರು ಗೆದ್ದ ನಂತರ ಕ್ಷೇತ್ರದತ್ತ ತಿರುಗಿ ನೋಡುವುದೆ ಇಲ್ಲ. ಆದ್ದರಿಂದ ನಿಮ್ಮ ಕೈಗೆ ಸದಾಕಾಲ ಸಿಗುವಂತಹವರನ್ನು ವಿಧಾನಸಭೆಗೆ ಚುನಾಯಿಸಿ ಕಳುಹಿಸಿ ಎಂದು ಅವರು ಮನವಿ ಮಾಡಿದರು.
ಕೆಜೆಪಿ ಎಸ್ಟಿ ವಿಭಾಗದ ಜಿಲ್ಲಾಧ್ಯಕ್ಷ ಎ.ಎನ್. ರಂಗುನಾಯ್ಕ ಮಾತನಾಡಿದರು. ಕೆಜೆಪಿ ಜಿಲ್ಲಾಧ್ಯಕ್ಷ ಬಿ.ಎಂ. ರಾಮು, ಜಿಲ್ಲಾ ವಕ್ತಾರ ಬಿ. ವೀರಭದ್ರಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಸುಧಾ ಜಯಕುಮಾರ್, ಪ್ರಧಾನ ಕಾರ್ಯದರ್ಶಿ ಶೀಲಾ, ವರುಣ ಕ್ಷೇತ್ರಾಧ್ಯಕ್ಷ ಶಿವಕುಮಾರ್, ತಾಯೂರು ಗ್ರಾಪಂ ಅಧ್ಯಕ್ಷ ಸೋಮು, ಎಸ್ಟಿ ಘಟಕದ ಅಧ್ಯಕ್ಷ ಪ್ರಶಾಂತ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.