ಓಲೈಕೆ ಕಸರತ್ತು
ಮೈಸೂರು: ಸ್ಥಳೀಯ ಸಂಸ್ಥೆ ಚುನಾವಣೆ ಕಾವು ದಿನೇದಿನೇ ಏರುತ್ತಿದೆ. ಶನಿವಾರವಷ್ಟೇ ನಾಮಪತ್ರ ಸಲ್ಲಿಸಿ ಮೊದಲ ಹಂತ ದಾಟಿರುವ ಅಭ್ಯರ್ಥಿಗಳು ಈಗ ಬಿರುಸಿನ ಪ್ರಚಾರ ಮತ್ತು ಮತದಾರರ ಓಲೈಕೆಗೆ ಮುಂದಾಗಿದ್ದಾರೆ.
ಟಿಕೆಟ್ ಸಿಗದ ಅನೇಕರು ಬೇಸರದಿಂದ ಮನೆ ಸೇರಿದ್ದು, ಪಕ್ಷ ಸಂಘಟನೆಯಲ್ಲಿಯೂ ತೊಡಗದ ಸೂಚನೆಗಳು ಹೆಚ್ಚಾಗಿವೆ. ಅನೇಕ ಮಂದಿ ಬಿ ಫಾರಂ ಸಿಗುತ್ತದೆ ಎಂದು ನಂಬಿ ನಾಮಪತ್ರ ಸಲ್ಲಿಸಿದ್ದವರು ಈಗ ಟಿಕೆಟ್ ವಂಚಿತರಾಗಿ ಬೇಸರಗೊಂಡಿದ್ದಾರೆ. ಇನ್ನೊಂದೆಡೆ ಪಕ್ಷದ ಮುಖಂಡರು ಮತ್ತು ವರಿಷ್ಠರು ಬಂಡಾಯವಾಗಿ ನಾಮಪತ್ರ ಸಲ್ಲಿಸಿರುವವರ ಓಲೈಕೆಗೆ ಕಸರತ್ತು ನಡೆಸಿದ್ದಾರೆ.
ಅಲ್ಲದೆ ಕಾಂಗ್ರೆಸ್ ಮುಖಂಡರು ಸೋಮವಾರದಿಂದ ಚುನಾವಣಾ ಪ್ರಚಾರ ಆರಂಭಿಸುವ ಸಂಬಂಧ ಸಭೆ ನಡೆಸುತ್ತಿದ್ದಾರೆ. ಜೆಡಿಎಸ್ ಮತ್ತು ಬಿಜೆಪಿ ಮುಖಂಡರೂ ಸಹ ಚುನಾವಣಾ ಪ್ರಚಾರದ ಗುಂಗಿನಲ್ಲಿದ್ದಾರೆ. ಫ್ಲೆಕ್ಸ್ ಮಾಡುವವರು, ಆಫ್ಸೆಟ್ ಮುದ್ರಕರ ಅಂಗಡಿಗಳಲ್ಲಿ ಚುನಾವಣಾ ಕರಪತ್ರ, ಬ್ಯಾನರ್, ಬಂಟಿಂಗ್ಸ್ಗಳ ಮುದ್ರಣಕ್ಕೆ ಸಾಲುಗಟ್ಟಿ ನಿಲ್ಲುವಂತಾಗಿದೆ. ಭಾನುವಾರವೂ ಸಹ ಶಿವರಾಂಪೇಟೆಯ ಅನೇಕ ಮುದ್ರಕರು ಅಂಗಡಿ ತೆರೆದು ಕರಪತ್ರ ಮುದ್ರಣದಲ್ಲಿ ತೊಡಗಿದ್ದರು.
ಕೈ ತಪ್ಪಿದ ಟಿಕೆಟ್: ಆದರೆ ಟಿಕೆಟ್ ಕೈತಪ್ಪಿ ಬೇಸರದಿಂದ ಮನೆ ಸೇರಿದವರಲ್ಲಿ ಈ ಹಿಂದೆ ಮೇಯರ್ ಆಗಿದ್ದ ಕಾಂಗ್ರೆಸ್ನ ಎಂ.ಸಿ. ರಾಜೇಶ್ವರಿ ಒಬ್ಬರು. ಅವರಿಗೆ ಕಾಂಗ್ರೆಸ್ನಿಂದ ಟಿಕೆಟ್ ಕೈ ತಪ್ಪಿದೆ. ಪಕ್ಷೇತರರಾಗಿ ಸ್ಪರ್ಧಿಸುವ ಉದ್ದೇಶ ಅವರಿಗಿತ್ತಾದರೂ ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷಕ್ಕೆ ತೊಂದರೆ ಆಗುತ್ತದೆ ಎಂಬ ಕಾರಣಕ್ಕೆ ಚುನಾವಣೆಯಿಂದ ದೂರ ಉಳಿದಿದ್ದಾರೆ.
ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮತ್ತು ಕೆಜೆಪಿ ಪಕ್ಷಗಳಲ್ಲಿ ಟಿಕೆಟ್ ಸಿಗದ ಹಲವರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ. ಪಾಲಿಕೆಯ ಹಣಕಾಸು ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಬಿ.ಎಲ್. ಭೈರಪ್ಪ, ಮಾಜಿ ಸದಸ್ಯೆ ಸುನಂದ ಪಾಲನೇತ್ರ ಅವರು ಈಗ ಕೆಜೆಪಿಯಿಂದ ಸ್ಪರ್ಧಿಸಿದ್ದಾರೆ. ಆದರೆ ಕೆಜೆಪಿಯೊಂದಿಗೆ ಗುರುತಿಸಿಕೊಂಡಿದ್ದ ಪ್ರದೀಪ್ ಕುಮಾರ್ ಅವರಿಗೆ ಕೆಜೆಪಿಯಿಂದ ಟಿಕೆಟ್ ನೀಡಿಲ್ಲ. ಇತ್ತೀಚೆಗಷ್ಟೇ ಜೆಡಿಎಸ್ ತೊರೆದು ಕಾಂಗ್ರೆಸ್ಗೆ ಸೇರ್ಪಡೆಗೊಂಡಿದ್ದ ಮಾಜಿ ಮೇಯರ್ ಶ್ರೀಕಂಠಯ್ಯ ಅವರು ಕಾಂಗ್ರೆಸ್ನಿಂದಲೂ ಟಿಕೆಟ್ ವಂಚಿತರಾಗಿದ್ದಾರೆ.
ಉಳಿದಂತೆ ಕಳೆದ ಬಾರಿ ಪಕ್ಷಾಂತರ ನಿಷೇಧ ಕಾಯ್ದೆ ಉಲ್ಲಂಘಿಸಿ ಜೆಡಿಎಸ್ನಿಂದ ಬಿಜೆಪಿಗೆ ವಲಸೆ ಹೋಗಿದ್ದ ಪಾಲಿಕೆ ಸದಸ್ಯರ ಪೈಕಿ ಹಲವರಿಗೆ ಜೆಡಿಎಸ್ ಮತ್ತೆ ಟಿಕೆಟ್ ನೀಡಿದೆ. ಇತ್ತ ಸದಾ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಕಾಂಗ್ರೆಸ್ನಲ್ಲಿ ಆದಿದ್ರಾವಿಡ ಜನಾಂಗಕ್ಕೆ ಒಂದೇ ಒಂದು ಟಿಕೆಟ್ ಸಹ ನೀಡಿಲ್ಲ. ಬದಲಿಗೆ ಬೆಜೆಪಿ ಮತ್ತು ಜೆಡಿಎಸ್ ಕ್ರಮವಾಗಿ ಪಿ. ಮಂಜುನಾಥ್ ಮತ್ತು ಟಿ. ರಾಮು ಅವರಿಗೆ ಟಿಕೆಟ್ ನೀಡಿದೆ.
ಉಳಿದಂತೆ ಕಾಂಗ್ರೆಸ್ನಿಂದ ಗೆದ್ದು ಈ ಹಿಂದೆ ಉಪ ಮೇಯರ್ ಆಗಿದ್ದ ಪುಷ್ಪಲತಾ ಜಗನ್ನಾಥ್ ಅವರಿಗೆ ಟಿಕೆಟ್ ಕೈ ತಪ್ಪಿದೆ. ಬದಲಿಗೆ ಕಾಂಗ್ರೆಸ್ ಕಾರ್ಯಕರ್ತ ಶಿವಣ್ಣ ಅವರ ಪತ್ನಿ ರಾಜಲಕ್ಷ್ಮಿ ಅವರಿಗೆ ಟಿಕೆಟ್ ನೀಡಲಾಗಿದೆ. ತಮ್ಮ ಪತ್ನಿಗೆ ಟಿಕೆಟ್ ನೀಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಶಿವಣ್ಣ ಬೆದರಿಕೆ ಹಾಕಿದ್ದರು. ಬಳಿಕ ಪಕ್ಷದ ಮುಖಂಡರು ಅವರನ್ನು ಸಮಾಧಾನಪಡಿಸಿ ಕರೆತಂದು ರಾಜಲಕ್ಷ್ಮಿ ಅವರಿಗೆ ಟಿಕೆಟ್ ನೀಡಿದ್ದಾರೆ. ಈ ಹಿಂದೆ ಪಕ್ಷೇತರರಾಗಿ ಗೆದ್ದು ಕಾಂಗ್ರೆಸ್ ಬೆಂಬಲಿಸಿದ್ದ ಸುನಂದಕುಮಾರ್ ಮತ್ತು ಟಿಕೆಟ್ ವಂಚಿತ ಪುಷ್ಪಲತಾ ಜಗನ್ನಾಥ್ ಅವರು ಪಕ್ಷೇತರರಾಗಿಯೇ ಸ್ಪರ್ಧಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

