ವಲಸಿಗರಿಗೆ ಏಡ್ಸ್ ಬಗ್ಗೆ ತಿಳಿವಳಿಕೆ
ಮೈಸೂರು: ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಸಂಸ್ಥೆಯು ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಟಿಐ ಮೈಗ್ರೆಂಟ್ ಯೋಜನೆಯಡಿ ವಲಸಿಗರಿಗೆ ಏಡ್ಸ್ ಹರಡುವಿಕೆಯ ಬಗ್ಗೆ ತಿಳಿವಳಿಕೆ ಮೂಡಿಸಲಾಯಿತು.
ಬುಧವಾರ ಮಾನಸಗಂಗೋತ್ರಿಯ ಮುಕ್ತ ವಿವಿ ಕ್ಯಾಂಪಸ್ನಲ್ಲಿ ಬಿಎಸ್ಆರ್ ಇನ್ಫ್ರಾಟೆಕ್ ಇಂಡಿಯಾ ಲಿ. ಸಂಸ್ಥೆಯು ನಿರ್ಮಿಸುತ್ತಿರುವ ಕಟ್ಟಡದಲ್ಲಿ ನಡೆದ ಈ ಕಾರ್ಯಕ್ರಮವನ್ನು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಎಂ. ಮಾಲೇಗೌಡ ಉದ್ಘಾಟಿಸಿದರು. ನಂತರ ಮಾತನಾಡಿ, ಎಚ್ಐವಿ ಗುಣಪಡಿಸಲು ಔಷಧಗಳಿಲ್ಲ. ಆದರೆ, ಅದನ್ನು ತಡೆಗಟ್ಟುವುದೇ ದೊಡ್ಡ ಔಷಧವಾಗಿದೆ. ಈ ನಿಟ್ಟಿನಲ್ಲಿ 15 ರಿಂದ 60 ವರ್ಷದೊಳಗಿನವರು ಏಡ್ಸ್ನಿಂದ ದೂರವಿರಲು ಅಗತ್ಯವಾದ ತಿಳಿವಳಿಕೆ ನೀಡುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು. ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಸಂಸ್ಥೆಯು ಜಿಲ್ಲಾದ್ಯಂತ ಸಮೀಕ್ಷೆ ಕೈಗೊಂಡು ಸುಮಾರು 5000 ಮಂದಿ ವಲಸಿಗರನ್ನು ಗುರುತಿಸಿದೆ. ಅವರಿಗೆ ವರ್ಷಪೂರ್ತಿ ಕಾರ್ಯಕ್ರಮ ಹಮ್ಮಿಕೊಂಡು ತಿಳಿವಳಿಕೆ ನೀಡಿ ಎಚ್ಐವಿ ಸೋಂಕಿತರು ಕಂಡುಬಂದಲ್ಲಿ ಅವರಿಗೆ ಅಗತ್ಯ ಚಿಕಿತ್ಸೆ, ಮಾನಸಿಕ ಸ್ಥೈರ್ಯ ತುಂಬಲು ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಉಚಿತವಾಗಿ ರಕ್ತಪರೀಕ್ಷೆ ಮಾಡಲಾಗುವುದು. ಈ ಸೇವೆಯನ್ನು ಕಾರ್ಮಿಕರು, ಕೊಳಚೆ ಪ್ರದೇಶದ ನಿವಾಸಿಗಳು, ನಗರವಾಸಿಗಳಿಗೆ ವಿಸ್ತರಿಸಲಾಗುವುದು ಎಂದರು.
5000 ಮಂದಿ ವಲಸಿಗರು: ಟಿಐ ಮೈಗ್ರೆಂಟ್ ಯೋಜನೆಯ ನಿರ್ದೇಶಕ ಮನೋಜ್ ಸೆಬಾಸ್ಟಿನ್ ಮಾತನಾಡಿ, ನಮ್ಮ ಸಂಸ್ಥೆಯಿಂದ ಸಮೀಕ್ಷೆ ಕೈಗೊಂಡು 5000 ಮಂದಿ ವಲಸಿಗರನ್ನು ಗುರುತಿಸಿದ್ದೇವೆ. ಅವರಿಗೆ ಎಚ್ಐವಿ ಬಗ್ಗೆ ತಿಳಿವಳಿಕೆ ನೀಡಿ ಜೀವನ ಶೈಲಿ ಬದಲಾಯಿಸಲು ಪ್ರಯತ್ನಿಸಲಾಗುವುದು. ಟಿಐ ಯೋಜನೆಯು 5 ವರ್ಷದ ಅವಧಿಯದ್ದಾಗಿದ್ದು, ಕಳೆದ ಡಿಸೆಂಬರ್ನಿಂದ ಆರಂಭವಾಗಿದೆ. ಡಿಸೆಂಬರ್ನಲ್ಲಿ 2, ಜನವರಿಯಲ್ಲಿ 3 ಹಾಗೂ ಈ ತಿಂಗಳಲ್ಲಿ 5 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮುಂಬರುವ ಪ್ರತಿ ತಿಂಗಳು 10 ರಿಂದ 15 ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಟಿ. ರಘುಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಡಾ.ಲಕ್ಷ್ಮೀನಾರಾಯಣ್, ಬಿಎಸ್ಆರ್ ಇನ್ಫ್ರಾಟೆಕ್ ಇಂಡಿಯಾ ಲಿ.ನ ಪ್ರತಿನಿಧಿ ಸಂತೋಷ್ ಇದ್ದರು. ಸುಮಾರು 150ಕ್ಕೂ ಹೆಚ್ಚು ಮಂದಿ ವಲಸಿಗರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

