ವೆಚ್ಚ ಜಾಸ್ತಿ ಆರ್ಥಿಕ ಮುಗ್ಗಟ್ಟಿಗೆ ಕಾರಣ
ಮೈಸೂರು: ವಿತ್ತೀಯ ಕೊರತೆ, ಡಾಲರ್ ಎದುರು ರುಪಾಯಿ ಮೌಲ್ಯದ ಕುಸಿತ ಹಾಗೂ ಹಣದುಬ್ಬರ ದೇಶದ ಆರ್ಥಿಕ ಪ್ರಗತಿಗೆ ಹಿನ್ನಡೆಯುಂಟು ಮಾಡಿವೆ ಎಂದು ಬೆಂಗಳೂರು ಕೃಷಿ ವಿವಿಯ ವಿಶ್ರಾಂತ ಕುಲಪತಿ ಪ್ರೊ.ಎಸ್. ಬಿಸಲಯ್ಯ ಅಭಿಪ್ರಾಯಪಟ್ಟರು.
ಮೈಸೂರು ವಿವಿ ಅರ್ಥಶಾಸ್ತ್ರ ಮತ್ತು ಸಹಕಾರ ಅಧ್ಯಯನ ವಿಭಾಗವು ಮಾನಸಗಂಗೋತ್ರಿಯ ಇಎಂಎಂಆರ್‌ಸಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಭಾರತದಲ್ಲಿ ಪ್ರಸ್ತುತ ಬೃಹತ್ ಆರ್ಥಿಕ ಸಮಸ್ಯೆಗಳು ಮತ್ತು ಆರ್ಥಿಕ ನೀತಿಗಳು ಎಂಬ ವಿಷಯ ಕುರಿತು ಅವರು ಮಾತನಾಡಿದರು.
ಆರ್ಥಿಕ ಬಿಕ್ಕಟ್ಟಿನಿಂದ ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳು ಸಂಕಷ್ಟದ ದಿನಗಳನ್ನು ಎದುರಿಸುತ್ತಿವೆ. ಇದೇ ವೇಳೆ ನಮ್ಮ ದೇಶದ ಉತ್ಪನ್ನಗಳಿಗೆ ಬೇಡಿಕೆ ಕಡಿಮೆಯಾಗಿದೆ. ಬಂಡವಾಳ ಹೂಡಿಕೆಯಲ್ಲಿ ಸೋಲು, ಸಾರ್ವಜನಿಕ ವಲಯದಲ್ಲಿ ಉಳಿತಾಯ ಮಾಡಲು ವಿಫಲ, ಕೈಗಾರಿಕೆಗಳಲ್ಲಿ ಯಶಸ್ಸು ಕಾಣದ ದಿನಗಳು ಹಾಗೂ ಹೆಚ್ಚಿನ ಬಡ್ಡಿ ದರ ಹಣದುಬ್ಬರಕ್ಕೆ ಕಾರಣವಾಗುತ್ತಿದೆ. ಸರ್ಕಾರಕ್ಕೆ ಬರುವ ಆದಾಯ ಕಡಿಮೆಯಾಗಿದ್ದು, ಸರ್ಕಾರಿ ವಲಯದ ವೆಚ್ಚವೇ ಜಾಸ್ತಿಯಾಗಿರುವುದರಿಂದ ದೇಶ ಹಣಕಾಸಿನ ಕೊರತೆ ಅನುಭವಿಸುವಂತಾಗಿದೆ ಎಂದರು. ಇತ್ತೀಚೆಗೆ ನಮಗೆ ಲಭಿಸಿದ ಮಾಹಿತಿ ಪ್ರಕಾರ ಪೆಟ್ರೋಲಿಯಂ ಉತ್ಪನ್ನಗಳು- 17 ಸಾವಿರ ಕೋಟಿ, ರಸಗೊಬ್ಬರಗಳು- 61 ಸಾವಿರ ಕೋಟಿ, ಆಹಾರ ವಲಯ- 73 ಸಾವಿರ ಕೋಟಿಯಷ್ಟು ಸಬ್ಸಿಡಿ ನೀಡುತ್ತಿರುವುದರಿಂದ ಚಾಲ್ತಿ ಲೆಕ್ಕದಲ್ಲಿ ಹಣಕಾಸಿನ ಕೊರತೆ ಎದುರಾಗಿದೆ. ನಮ್ಮ ಜನಜೀವನವನ್ನು ಮಾರುಕಟ್ಟೆ ಮತ್ತು ದರಗಳು ಆವರಿಸಿಕೊಂಡಿವೆ. ಎಷ್ಟೇ ದುಬಾರಿಯಾದರೂ ನಮ್ಮಲ್ಲಿ ಚಿನ್ನ ಕೊಳ್ಳುವ ಸಂಸ್ಕೃತಿಗೆ ಮಾತ್ರ ಧಕ್ಕೆ ಬಂದಿಲ್ಲ. ಎಷ್ಟೇ ಅಬಕಾರಿ ಸುಂಕ ವಿಧಿಸಿದರೂ ದೇಶಕ್ಕೆ ಅಪಾರ ಪ್ರಮಾಣದಲ್ಲಿ ಚಿನ್ನ ಆಮದಾಗುತ್ತಿದೆ ಎಂದು ಅವರು ತಿಳಿಸಿದರು.
22 ಲಕ್ಷ ಟನ್‌ನಷ್ಟು ಚಿನ್ನವಿದೆ: ನಮ್ಮ ದೇಶಕ್ಕೆ ಹೊರದೇಶಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಚಿನ್ನ ಆಮದಾಗುತ್ತಿದೆ. ಆದರೆ, ಆಶ್ಚರ್ಯದ ವಿಷಯವೆಂದರೆ ನಮ್ಮಲ್ಲಿಯೇ ಸುಮಾರು 22 ಲಕ್ಷ ಟನ್‌ನಷ್ಟು ಚಿನ್ನ ಧೂಳು ತಿನ್ನುತ್ತಿದೆ. ಆದ್ದರಿಂದ ಆಮದಾಗುತ್ತಿರುವ ಚಿನ್ನದ ನಿಯಂತ್ರಣಕ್ಕೆ ಉಪಾಯ ಮಾರ್ಗ ಹುಡುಕಬೇಕು. ಇದರಿಂದ ಹಣದುಬ್ಬರ ನಿಯಂತ್ರಿಸಬಹುದು ಎಂದರು.ವಿಭಾಗದ ಮುಖ್ಯಸ್ಥೆ ಡಾ.ಡಿ.ಎಸ್. ಸಾವಿತ್ರಿ ಅಧ್ಯಕ್ಷತೆ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

