ಮೈಸೂರು

ಐತಿಹಾಸಿಕ ಪ್ರವಾಸಿ ತಾಣ ಅಭಿವೃದ್ಧಿ

Published On :

ಕ.ಪ್ರ.ವಾರ್ತೆ ಟಿ.ನರಸೀಪುರ ಜು. 4
ಐತಿಹಾಸಿಕ ಹಿನ್ನೆಲೆಯುಳ್ಳ ದೇವಾಲಯಗಳು ಹಾಗೂ ಪ್ರೇಕ್ಷಣೀಯ ಸ್ಥಳಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ಪ್ರವಾಸೋದ್ಯಮ ವ್ಯಾಪ್ತಿಯನ್ನು ವಿಶಾಲಗೊಳಿಸಲಾಗುವುದು ಎಂದು ಸಂಸದ ಆರ್. ಧ್ರುವನಾರಾಯಣ ಹೇಳಿದರು.
ತಾಲೂಕಿನ ತಲಕಾಡಿನಲ್ಲಿ ಗುರುವಾರ ಭಾರತೀಯ ಪ್ರಾಚೀನ ಪುರಾತತ್ವ ಸರ್ವೇಕ್ಷಣಾ ಇಲಾಖೆ ವತಿಯಿಂದ ಕೈಗೊಂಡಿರುವ ಕೀರ್ತಿ ನಾರಾಯಣಸ್ವಾಮಿ ದೇವಾಲಯದ ಪುನರುತ್ಥಾನ ಕಾಮಗಾರಿ ಪರಿಶೀಲಿಸಿ ಮಾತನಾಡಿ, ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಪ್ರವಾಸಿ ತಾಣಗಳ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಪ್ರವಾಸೋದ್ಯಮಕ್ಕೆ ಉತ್ತಮ ಅವಕಾಶವಿರುವುದರಿಂದ ಈ ದೇವಾಲಯಕ್ಕೆ ಕಾಯಕಲ್ಪ ನೀಡಲಾಗುತ್ತಿದೆ ಎಂದರು.
7 ಕೋಟಿ ಅನುದಾನ: ಗಂಗರು ಹಾಗೂ ಹೊಯ್ಸಳರ ಕಾಲದಲ್ಲಿಯೇ ನಿರ್ಮಾಣವಾಗಿರುವ ಕೀರ್ತಿ ನಾರಾಯಣಸ್ವಾಮಿಯ ದೇವಾಲಯದ ಪುನರುತ್ಥಾನಕ್ಕಾಗಿ ಕೇಂದ್ರ ಸರ್ಕಾರ ಭಾರತೀಯ ಪ್ರಾಚೀನ ಪುರಾತತ್ವ ಇಲಾಖೆಯ ಮೂಲಕ 7 ಕೋಟಿ ಅನುದಾನ ನೀಡಿದೆ. ದೇವಾಲಯ ಕಾಮಗಾರಿ ಪ್ರಗತಿಯಲ್ಲಿದೆ. ಮೂಲ ಸ್ವರೂಪ ಹೇಗಿತ್ತೋ ಅದೇ ವಿನ್ಯಾಸದಲ್ಲಿ ದೇವಾಲಯ ಕಾಮಗಾರಿ ಇನ್ನೇರಡು ವರ್ಷದೊಳಗೆ ಪೂರ್ಣಗೊಳ್ಳಲಿದೆ. ಸುತ್ತಲಿನ ಮರಳು ರಾಶಿ ದೇವಾಲಯವನ್ನು ಮುಚ್ಚದಂತೆ ತಡೆಗೋಡೆ ನಿರ್ಮಾಣ ಮಾಡಿ, ಕಟ್ಟಡಕ್ಕೆ ಧಕ್ಕೆಯಾಗದಂತೆ ಅಕ್ಕಪಕ್ಕದಲ್ಲಿರುವ ಮರಗಳನ್ನು ತೆರವುಗೊಳಿಸಲಾಗುತ್ತದೆ ಎಂದು ಹೇಳಿದರು.
ಪ್ರಸ್ತಾವನೆ ಸಲ್ಲಿಸಿದರೆ ಅನುದಾನ: ಡಿಸೆಂಬರ್‌ನಲ್ಲಿ ನಡೆಯುವ ತಲಕಾಡು ಪಂಚಲಿಂಗ ದರ್ಶನಕ್ಕೆ ರಾಜ್ಯ ಸರ್ಕಾರ ಅನುದಾನ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರೆ ಉತ್ಸವಕ್ಕೆ ಅನುದಾನ ಬಿಡುಗಡೆಯಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ವಸ್ತು ಸಂಗ್ರಹಾಲಯ: ತಲಕಾಡಿನಲ್ಲಿ ಪ್ರಾಚ್ಯ ವಸ್ತು ಇಲಾಖೆಯಿಂದ ನಡೆಯುತ್ತಿರುವ ಉತ್ಖನನದಲ್ಲಿ ದೊರೆತ ಅಮೂಲ್ಯ ವಸ್ತುಗಳನ್ನು ಸ್ಥಳೀಯವಾಗಿ ವೀಕ್ಷಣೆ ಮಾಡಲು ತಲಕಾಡಿನಲ್ಲಿ ವಸ್ತು ಸಂಗ್ರಹಾಲಯವನ್ನು ನಿರ್ಮಾಣ ಮಾಡಬೇಕೆಂದು ಸ್ಥಳೀಯರು ಸಂಸದರಲ್ಲಿ ಮನವಿ ಮಾಡಿಕೊಂಡರು. ತಲಕಾಡಿನಲ್ಲಿ ದೊರೆತ ನೂರಾರು ವರ್ಷಗಳ ಹಿಂದಿನ ವಸ್ತುಗಳನ್ನು ನೋಡಲು ಮೈಸೂರಿಗೆ ಹೋಗಿ, ಭಾವಚಿತ್ರದಲ್ಲಷ್ಟೆ ವೀಕ್ಷಣೆ ಮಾಡಬೇಕು. ಸ್ಥಳೀಯವಾಗಿ ವಸ್ತು ಸಂಗ್ರಹಾಲಯ ನಿರ್ಮಾಣವಾದರೆ ಬರುವ ಪ್ರವಾಸಿಗರಿಗೂ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.
ಪುರಾತತ್ಮ ಇಲಾಖೆಯ ಸಹಾಯಕ ಸಂರಕ್ಷಣಾಧಿಕಾರಿ ಭಾಷ್ಯಂ ಮಾತನಾಡಿದರು. ಭಾರತೀಯ ಪ್ರಾಚೀನ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧೀಕ್ಷಕ ಡಾ. ನಂಬಿರಾಜನ್ ಹಾಗೂ ಹಿರಿಯ ಸಹಾಯಕ ಸಂರಕ್ಷಣಾಧಿಕಾರಿ ಚಂದ್ರಕಾಂತ್ ಅವರು ಸಂಸದರಿಗೆ ನಾರಾಯಣಸ್ವಾಮಿ ದೇವಾಲಯದ ಪುನರುತ್ಥಾನ ಕಾಮಗಾರಿಯ ವಿವರ ನೀಡಿದರು.
ಚಾಮರಾಜನಗರ ಎಪಿಎಂಸಿ ಅಧ್ಯಕ್ಷ ಆಲ್ದೂರ್ ಸಿ. ರಾಜಶೇಖರ್, ಜಿಪಂ ಮಾಜಿ ಸದಸ್ಯ ಬಾಲಚಂದ್ರ, ಗ್ರಾಪಂ ಅಧ್ಯಕ್ಷ ಚಿಕ್ಕಮಾದನಾಯಕ, ತಾಪಂ ಸದಸ್ಯೆ ಮಲ್ಲಾಜಮ್ಮ, ಮಾಜಿ ಅಧ್ಯಕ್ಷ ಎಂ. ಮಲ್ಲಿಕಾರ್ಜುನಸ್ವಾಮಿ, ಮಾಜಿ ಉಪಾಧ್ಯಕ್ಷ ಪ್ರಸನ್ನ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ಎಚ್. ಮಂಜುನಾಥ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.