ಕುಲಪತಿ ನೇಮಕ: ರಾಜ್ಯಪಾಲರ ನಿರ್ಧಾರ ಏಕಪಕ್ಷೀಯ: ಆರೋಪ
ಕ.ಪ್ರ.ವಾರ್ತೆ ಮೈಸೂರು ಜು. 4
ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಮೈಸೂರು ವಿಶ್ವವಿದ್ಯಾನಿಲಯ ಕುಲಪತಿ ಹುದ್ದೆಗೆ ಪ್ರೊ. ಕೆ.ಎಸ್. ರಂಗಪ್ಪ ಅವರನ್ನು ನೇಮಿಸುವಾಗ ಸರ್ಕಾರದ ಸಮ್ಮತಿ ಇಲ್ಲದೆ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದಾರೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಶೇಖರ್ ಎಸ್. ಅಯ್ಯರ್ ಆರೋಪಿಸಿದರು.
ರಂಗಪ್ಪ ಅವರನ್ನು ನೇಮಿಸಿ ಹೊರಡಿಸಿದ ಆದೇಶ ಪ್ರತಿಯಲ್ಲಿ ಹಲವು ಸುಳ್ಳುಗಳನ್ನು ದಾಖಲಿಸಿದ್ದಾರೆ. ರಾಜ್ಯಪಾಲರು ಇಂತಹ ನಿರ್ಧಾರ ಕೈಗೊಳ್ಳುವ ಮೂಲಕ ಕಾನೂನು ಉಲ್ಲಂಘಿಸಿದ್ದಾರೆ. ಪ್ರೊ. ಕೆ.ಎಸ್. ರಂಗಪ್ಪ ನೇಮಕ ವಿಚಾರವಾಗಿ ಆಗಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ಅವರ ಒಪ್ಪಿಗೆ ಇರಲಿಲ್ಲ ಎಂಬುದು ದಾಖಲಾತಿಯಲ್ಲಿ ಪತ್ತೆಯಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಕಳೆದ ಜ. 11 ರಂದು ಮೈಸೂರು ವಿವಿ ಕುಲಪತಿ ಹುದ್ದೆಗೆ ಪ್ರೊ. ಕೆ.ಎಸ್. ರಂಗಪ್ಪ ಅವರನ್ನು ನೇಮಿಸಲಾಯಿತು. ಅದರ ಹಿಂದಿನ ದಿನ ಅಂದರೆ ಜ. 10 ರಂದು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ್ದೆ ಎಂದು ಸುಳ್ಳು ಹೇಳಿಕೆ ನೀಡಿದ್ದಾರೆ. ವಾಸ್ತವವಾಗಿ ಈ ಭೇಟಿಯೇ ಆಗಿಲ್ಲ. ಜ. 10ರ ರಾಜ್ಯಪಾಲ ಹಾಗೂ ಮುಖ್ಯಮಂತ್ರಿಯವರ ಕಾರ್ಯಕ್ರಮದ ಪಟ್ಟಿಯಲ್ಲಿ ಭೇಟಿಗೆ ಸಮಯವೇ ನಿಗದಿಯಾಗಿರಲಿಲ್ಲ. ಹೀಗಾಗಿ ತರಾತುರಿಯಲ್ಲಿ ರಂಗಪ್ಪ ಅವರನ್ನು ನೇಮಿಸಿ ಗಾಢವಾದ ಪ್ರೀತಿ ತೋರಿಸಿದ್ದಾರೆ ಎಂದರು.
ಕಪ್ಪು ಪಟ್ಟಿ ಪ್ರದರ್ಶನ: ಮೈಸೂರು ವಿವಿ ಕುಲಪತಿ ಸಂಶೋಧನಾ ಸಮಿತಿಯ ಒಬ್ಬ ಸದಸ್ಯರು ರಂಗಪ್ಪ ಅವರ ಹೆಸರನ್ನು ತಿರಸ್ಕರಿಸಿದ್ದರೂ ರಾಜ್ಯಪಾಲರು ಅದ್ಯಾವುದನ್ನು ಲೆಕ್ಕಿಸದೆ ರಂಗಪ್ಪ ಅವರನ್ನು ನೇಮಿಸಿದರು. ಇದರ ಹಿಂದಿನ ಉದ್ದೇಶವೇನು ಏನು ಎಂಬುದನ್ನು ರಾಜ್ಯಪಾಲರೆ ತಿಳಿಸಬೇಕು. ಆರೋಪವಿರುವ ವ್ಯಕ್ತಿಯನ್ನು ಕುಲಪತಿಯನ್ನಾಗಿ ನೇಮಿಸಿರುವ ರಾಜ್ಯಪಾಲರಿಂದ ಮೈಸೂರು ವಿವಿ ವಿದ್ಯಾರ್ಥಿಗಳು ಪದವಿ ಸ್ವೀಕರಿಸಬಾರದು. ಆದ್ದರಿಂದ ಜು. 5 ರಂದು ನಡೆಯುವ ಮೈಸೂರು ವಿವಿ ಘಟಿಕೋತ್ಸವದಲ್ಲಿ ರಾಜ್ಯಪಾಲರ ವಿರುದ್ಧ ಕಪ್ಪು ಪಟ್ಟಿ ಪ್ರದರ್ಶಿಸುತ್ತೇವೆ ಎಂದು ಶೇಖರ್ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

