ಕೈಕೊಟ್ಟ ಕಬ್ಬು; ಕೈ ಹಿಡಿದ ಬಾಳೆ ಬೆಳೆ
ಕ.ಪ್ರ.ವಾರ್ತೆ , ಮೈಸೂರು , ಜು. 6
ಕಬ್ಬು ಬೆಳೆದ ನಷ್ಟ ಮಾಡಿಕೊಂಡಿದ್ದ ರೈತ ಮಹಿಳೆಯೊಬ್ಬರು ಅಂಗಾಂಶ ಬಾಳೆ ಬೆಳೆದು ಬಂಪರ್ ಲಾಭದ ನಿರೀಕ್ಷೆಯಲ್ಲಿದ್ದಾರೆ.
ಮೈಸೂರು ಸ್ಥಳೀಯ ಸಾಂಪ್ರದಾಯಿಕ ಹಿನ್ನೆಯುಳ್ಳ ಬೆಳೆಯಾದ ನಂಜನಗೂಡು ರಸಬಾಳೆ ವಿಶಿಷ್ಟ ಗುಣಗಳಿಂದ ಪ್ರಖ್ಯಾತಿ ಪಡೆದಿದೆ.
ಆದರೆ, ರೋಗ ಮತ್ತಿತರ ಕಾರಣಗಳಿಂದಾಗಿ ಬಾಳೆ ಬೆಳೆಯುವುದು ಕಡಿಮೆಯಾಗಿದೆ. ಹೇಗಾದರೂ ಮಾಡಿ ಈ ತಳಿ ಉಳಿಸಬೇಕು ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಜಿಲ್ಲೆಯ ಪ್ರತಿ ತಾಲೂಕಿನಲ್ಲೂ ಅಂಗಾಂಶ ಬಾಳೆ ಬೆಳೆ (ಜಿ 9 ತಳಿ) ಬೆಳೆಯುವಂತೆ ರೈತರನ್ನು ಮನವೊಲಿಸುತ್ತಿದ್ದಾರೆ. ಸುಧಾರಿತ ಬೇಸಾಯ ಪದ್ಧತಿ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.
ಸುವರ್ಣ ಭೂಮಿ ಯೋಜನೆ, ರಾಷ್ಟ್ರೀಯ ತೋಟಗಾರಿಕೆ ಮಿಷನ್, ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆಯಡಿ ಬೆಳೆಗಾರರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ.
ಇದರ ಪರಿಣಾಮ ನಂಜನಗೂಡು ರಾಂಪುರ, ಕಾರ್ಯ, ಕೆ.ಆರ್. ನಗರ ತಾಲೂಕಿನ ಗುಮ್ಮನಹಳ್ಳಿ, ಬಟಿಗನಹಳ್ಳಿ, ಟಿ. ನರಸೀಪುರ ತಾಲೂಕಿನ ವಾಟಾಳು, ದೊಡ್ಡೆಬಾಗಿಲು, ಎಚ್.ಡಿ. ಕೋಟೆ ಕಾಲೂಕಿನ ಪಡುಕೋಟೆ ಮತ್ತು ಸರಗೂರು, ಪಿರಿಯಾಪಟ್ಟಣ ತಾಲೂಕಿನ ಬೆಟ್ಟದತುಂಗ, ನಂದಿನಾಥಿಪುರ ಗುಚ್ಛಗಳಲ್ಲಿ ರೈತರು ಬಾಳೆ ಬೆಳೆದಿದ್ದಾರೆ.
ಟಿ. ನರಸೀಪುರ ತಾಲೂಕು ವಾಟಾಳು ಗ್ರಾಮದ ದಿ. ವಿ.ಬಿ. ಗವಿನಾಯಕ- ಚಂದ್ರಕಾಂತಮ್ಮ ದಂಪತಿಗೆ ಐವರು ಪುತ್ರಿಯರು ಹಾಗೂ ಓರ್ವ ಪುತ್ರ. ತಮಗಿದ್ದ ಜಮೀನನ್ನು ಈ ದಂಪತಿ ಮಕ್ಕಳಿಗೆ ಹಂಚಿದ್ದಾರೆ. ಪುತ್ರಿಯರ ಪೈಕಿ ಸಾಕಮ್ಮ ಎಂಬವರಿಗೆ 1.2 ಎಕರೆ ಜಮೀನು ಬಂದಿದೆ. ಈ ಜಮೀನಿನ ಉಸ್ತುವಾರಿ ನೋಡಿಕೊಳ್ಳುವುದು ಸಾಕಮ್ಮ ಅವರ ಸಹೋದರ ರಘು ನಾಯಕ. ಕಳೆದ 20 ವರ್ಷಗಳಿಂದ ವ್ಯವಸಾಯದಲ್ಲಿ ತೊಡಗಿರುವ ಇವರು ಎಸ್ಸೆಸ್ಸೆಲ್ಸಿವರೆಗೆ ಓದಿದ್ದಾರೆ. ಇವರು ಮೊದಲು ಕೊಳವೆ ಬಾವಿ ಕೊರೆಸಿದ್ದರು. ಅದರಿಂದ ನೀರು ಪಡೆದು, ಕಬ್ಬು ಬೆಳೆದಿದ್ದರು. ಆದರೆ, ಇಳುವರಿ ಕಡಿಮೆಯಾದ್ದರಿಂದ ನಷ್ಟವಾಯಿತು.
ಹೀಗಿರುವಾಗ ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರನ್ನು ಭೇಟಿ ಮಾಡಿ, ಸಮಗ್ರ ತೋಟಗಾರಿಕೆ ಅಭಿವೃದ್ಧಿ ಕಾರ್ಯಕ್ರಮದಡಿ ಸಲಹೆ- ಸಹಕಾರ- ಸಹಾಯಧನ ನೀಡಲಿದ್ದು, ತೋಟಗಾರಿಕೆ ಬೆಳೆ ಬೆಳೆಯುವಂತೆ ಮನವೊಲಿಸಿದರು.
ಹನಿ ನೀರಾವರಿ: ಕಬ್ಬಿನ ಕೂಳೆ ತೆಗೆದ ಇವರು ಜಮೀನನ್ನು ಸಿದ್ಧ ಮಾಡಿ, 2್ಢ1.5 ಮೀಟರ್ ಅಳತೆಯ ಗುಂಡಿಗಳನ್ನು ತೆಗೆಸಿದರು. ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು, 2000 ಗಿಡಗಳನ್ನು ಹಾಕಿದರು. ಹನಿ ನೀರಾವರಿ ಮೂಲಕವೇ ಬಾಳೆಗೆ ಯೂರಿಯಾ ಹೊರತುಪಡಿಸಿ ಡಿಎಪಿ, ಪೊಟ್ಯಾಷ್, ಅಮೋನಿಯಂ ಸಲ್ಫೇಟ್ ರಾಸಾಯನಿಕ ಗೊಬ್ಬರ ನೀಡಿದರು. ನಂತರ ಲಘು ಪೋಷಕಾಂಶ ನೀಡಿದರು. ಕೊಟ್ಟಿಗೆ ಗೊಬ್ಬರವನ್ನು ನೀಡಿದರು.
ಇದೀಗ ಒಂದು ಗೊನೆಯಲ್ಲಿ 12 ರಿಂದ 18 ಚಿಪ್ಪುಗಳು ಬಂದಿವೆ. ಪ್ರತಿಗೊನೆ ಸುಮಾರು 50 ಕೆಜಿ ತೂಗುತ್ತಿವೆ. ಸುಮಾರು 90 ಟನ್ ಇಳುವರಿಯ ನಿರೀಕ್ಷೆ ಇದೆ. ಪ್ರತಿ ಟನ್ಗೆ 1000 ಇದ್ದು, 9 ಲಕ್ಷ ಆದಾಯ ಬರುವ ನಿರೀಕ್ಷೆ ಇದೆ. ಇವರು ಮಾಡಿರುವ ವೆಚ್ಚ 1.90 ಲಕ್ಷ. ತೋಟಗಾರಿಕೆ ಇಲಾಖೆಯು 83,199 ಸಹಾಯಧನ ನೀಡಿದೆ. ಹೀಗಾಗಿ ಖರ್ಚು ಕಳೆದು 7.10 ಲಕ್ಷ ಲಾಭ ಬರುವ ನಿರೀಕ್ಷೆ ಇದೆ.
ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡರೆ ರೈತರು ತೋಟಗಾರಿಕೆ ಬೆಳೆಗಳನ್ನು ಬೆಳೆದು ಆರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಬಹುದು ಎಂಬುದಕ್ಕೆ ಸಾಕಮ್ಮ ಅವರ ಸಾಧನೆಯ ಸಾಕ್ಷಿ.
ಟಿ.ಎಸ್. ರಮೇಶ್, ಸಹಾಯಕ ತೋಟಗಾರಿಕೆ ನಿರ್ದೇಶಕರು, ಟಿ. ನರಸೀಪುರ
ನಾವು ಮೊದಲು ಕಬ್ಬು ಬೆಳೆದು ನಷ್ಟ ಮಾಡಿಕೊಂಡಿದ್ದವು. ಯಾಲಕ್ಕಿ ಬಾಳೆಯನ್ನು ಕೂಡ ಬೆಳೆದಿದ್ದವು. ಆದರೆ ಈಗ ಅಂಗಾಂಶ ಕೃಷಿಯಲ್ಲಿ ಬೆಳೆದಿರುವ ಬಾಳೆ ಇಳುವರಿಯ ತುಂಬಾ ಚೆನ್ನಾಗಿ ಬಂದಿದೆ. ಬಾಳೆ ಬೆಳೆಯಿಂದ ಕೈತುಂಬ ಲಾಭ ನಿರೀಕ್ಷೆಯಲ್ಲಿದ್ದೇವೆ. ಇದಕ್ಕೆ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಎಸ್. ರಮೇಶ್ ಹಾಗೂ ಅಧಿಕಾರಿ ಸೋಮಣ್ಣ ಸೇರಿದಂತೆ ಎಲ್ಲಾ ಸಿಬ್ಬಂದಿ ನೀಡಿದ ಮಾರ್ಗದರ್ಶನ ಕಾರಣ.
-ರಘುನಾಯಕ, ವಾಟಾಳು
-ಅಂಶಿ ಪ್ರಸನ್ನಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

