ಮೈಸೂರು

ಸಹಾಯಧನ ವಿತರಣೆ

Published On :

ಕೆ.ಆರ್. ನಗರ: ತಾಲೂಕಿನ ಬಸವರಾಜಪುರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ 30 ಸಾವಿರ ಸಹಾಯಧನದ ಚೆಕ್‌ಅನ್ನು ತಾಲೂಕು ಯೋಜನಾಧಿಕಾರಿ ಬಿ. ಅಶೋಕ್ ನೀಡಿದರು. ವಲಯ ಮೇಲ್ವಿಚಾರಕಿ ಜಯಶ್ರೀ, ಸೇವಾಪ್ರತಿನಿಧಿ ಮಹಾದೇವಿ, ಸಮಿತಿಯ ಅಧ್ಯಕ್ಷ ಸೋಮಣ್ಣ, ಕಾರ್ಯದರ್ಶಿ ಸಿದ್ದರಾಮೇಗೌಡ, ಮುಖಂಡರಾದ ಕಾಳೇಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಬಿ.ಎಂ. ಸತೀಶ್, ಸದಸ್ಯರಾದ ಬಿ.ಎಂ. ಗಿರೀಶ್, ಮಾದಯ್ಯ, ಸುಮಿತ್ರ ಇದ್ದರು.
ಸಹಾಯಧನ: ಇದೇ ವೇಳೆ ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡ ತಾಲೂಕಿನ ಬಸವರಾಜಪುರ ಗ್ರಾಮದ ವೀಣಾ ಶಿವೇಗೌಡ ಅವರಿಗೆ ಸಂಸ್ಥೆಯ ವತಿಯಿಂದ 5 ಸಾವಿರ ಸಹಾಯಧನದ ಚೆಕ್ ವಿತರಿಸಲಾಯಿತು.

'ಬಾಗಿನ ಕಾರ್ಯಕ್ರಮ ಕಾಂಗ್ರೆಸ್‌ಮಯ'
ಎಚ್.ಡಿ. ಕೋಟೆ: ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಲು ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯಕ್ರಮ ಸಂಪೂರ್ಣ ಕಾಂಗ್ರೆಸ್‌ಮಯವಾಗಿತ್ತು ಎಂದು ಶಾಸಕ ಎಸ್. ಚಿಕ್ಕಮಾದು ಆರೋಪಿಸಿದ್ದಾರೆ. ಜಲಾಶಯದ ಮುಖ್ಯ ದ್ವಾರದಿಂದ ಹಿಡಿದು ಜಲಾಶಯದ ಎರಡೂ ಕಡೆಗಳಲ್ಲಿ ಕಾಂಗ್ರಸ್ ಪಕ್ಷದ ಬಾವುಟ ಹಾಗು ಫ್ಲೆಕ್ಸುಗಳು ರಾರಾಜಿಸುತ್ತಿದ್ದವು. ಜಲಾಶಯದಲ್ಲಿ ಈ ರೀತಿಯಾಗಿ ಕಾಂಗ್ರಸ್ ಪಕ್ಷದವರು ನಡೆದುಕೊಂಡಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಇದು ಪಕ್ಷದ ಕಾರ್ಯಕ್ರಮವಾಗಿರದೆ ಸರ್ಕಾರಿ ಕಾರ್ಯಕ್ರಮವಾಗಿರುತ್ತದೆ ಎಂಬುದನ್ನು ಮರೆತಿದ್ದಾರೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಮರಳು ವಶ
ಹುಣಸೂರು: ತಾಲೂಕಿನ ರತ್ನಪುರಿ ಸಮೀಪದ ದೇವಿಕೆರೆಯಲ್ಲಿ ಕೆರೆಯಲ್ಲಿ ಮರಳನ್ನು ಸಂಗ್ರಹಿಸುತ್ತಿದ್ದ ತಾಣವನ್ನು ಕಂದಾಯ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿ 25ಕ್ಕೂ ಹೆಚ್ಚು ಲೋಡ್‌ನಷ್ಟು ಗೋಡು ಮಿಶ್ರಿತ ಮರಳನ್ನು ವಶಪಡಿಸಿಕೊಂಡಿದ್ದಾರೆ. ಹಲವಾರು ದಿನಗಳಿಂದ ಕೆರೆಯ ಅಂಗಳದ ಎರಡು ಅಡಿಯಷ್ಟು ಗೋಡು ಮಣ್ಣನ್ನು ಯಂತ್ರಗಳ ಸಹಾಯದಿಂದ ತೆಗೆದು ಆದರೊಳಗಿರುವ ಮರಳನ್ನು ಮೇಲೆತ್ತಲಾಗುತ್ತಿರುವ ಬಗ್ಗೆ ಉಪವಿಭಾಗಾಧಿಕಾರಿಗಳಿಗೆ ದೂರು ಬಂದ ಹಿನ್ನೆಲೆ ಶುಕ್ರವಾರ ಸಂಜೆ ಆರ್‌ಐ ಚೌಡನಾಯ್ಕ, ಗ್ರಾಮಲೆಕ್ಕಿಗ ವಸಂತಕುಮಾರ್, ಜಯರಾಮು ಮತ್ತು ಸಿಬ್ಬಂದಿ ಕೆರೆಗೆ ಭೇಟಿ ಇತ್ತ ವೇಳೆ ಮರಳು ಸಿಕ್ಕಿತೆ ವಿನಃ, ಜೆಸಿಬಿ ಯಂತ್ರ ಹಾಗೂ ಮರಳು ಸಾಗಿಸುವ ಟ್ರ್ಯಾಕ್ಟರ್‌ಗಳು ಸ್ಥಳದಲ್ಲಿರಲಿಲ್ಲ. ಈ ಮರಳನ್ನು ಗ್ರಾಮದ ವೆಂಕಟೇಶ್ ಎಂಬಾತ ತೆಗೆಸುತ್ತಿದ್ದಾರೆಂಬ ದೂರಿನ ಹಿನ್ನೆಲೆ ಆತನ ಮನೆಯ ಬಳಿ ನಾಲ್ಕು ಟ್ರ್ಯಾಕ್ಟರ್‌ನಷ್ಟು ಮರಳು ಸಿಕ್ಕಿದೆ ಎಂದು ಚೌಡನಾಯ್ಕ ತಿಳಿಸಿದರು. ಈ ಕೆರೆಯೂ ಹಾರಂಗಿ ವ್ಯಾಪ್ತಿಗೆ ಬರಲಿದ್ದು, ಅಕ್ರಮವಾಗಿ ಮರಳು ತೆಗೆಯುತ್ತಿರುವ ಬಗ್ಗೆ ಮಾಹಿತಿ ನೀಡಲಾಗಿದೆ. ಕೆರೆಯಿಂದ ಈಗಾಗಲೇ 200ಕ್ಕೂ ಹೆಚ್ಚು ಲೋಡ್ ಮರಳನ್ನು ಸಾಗಿಸಿದ್ದು ಕಂಡು ಬಂದಿದೆ. ಮತ್ತೊಮ್ಮೆ ತನಿಖೆ ನಡೆಸಿ ಸಂಬಂಧಿಸಿದ ಮರಳು ದಂಧೆ ನಡೆಸುವವರ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಕಂದಾಯ ಅಧಿಕಾರಿಗಳು ತಿಳಿಸಿದರು.

ಶಕುಂತಲಾಗೆ ಚಿನ್ನದ ಪದಕ
ಮೈಸೂರು: 2012- 13ನೇ ಸಾಲಿನ ಎಂಎ ಹಿಂದ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಾನಸಗಂಗೋತ್ರಿಯ ಹಿಂದಿ ಅಧ್ಯಯನ ವಿಭಾಗದ ಶಕುಂತಲಾ ಅವರು ಪ್ರೊ. ನಾಗಪ್ಪ ಚಿನ್ನದ ಪದಕ, ಕೆ.ವಿ. ಶ್ರೀನಿವಾಸ್ ಸ್ಮರಣಾರ್ಥ ಹಿಂದಿ ಎಂಎ ಚಿನ್ನದ ಪದಕ ಹಾಗೂ ಶ್ರೀಮತಿ ಮಾರ್ಲೆಚಾ ಇಂದಿರಾ ಕನ್ವರ್ ಕಿಶನ್‌ಲಾಲ್ ಜೈನ್ ದತ್ತಿ ಚಿನ್ನದ ಪದಕ ಪಡೆದುಕೊಂಡರು.

ಯತೀಶ್ವರ್‌ಗೆ ಡಾಕ್ಟರೇಟ್
ಮೈಸೂರು: ಡಾ. ವಿಶ್ವನಾಥ್ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಸಾದರಪಡಿಸಿದ ಎಸ್.ಸಿ. ಯತೀಶ್ವರ ಅವರ ಮಹಾಪ್ರಬಂಧವನ್ನು ಮೈಸೂರು ವಿವಿ ಅಂಗೀಕರಿಸಿ ಅವರಿಗೆ ಕನ್ನಡ ವಿಷಯದಲ್ಲಿ ಪಿಎಚ್.ಡಿ ನೀಡಿದೆ. ಯತೀಶ್ವರ ಅವರು ಪ್ರಸ್ತುತ ಹಾಸನದ ಎ.ವಿ. ಕಾಂತಮ್ಮ ಮಹಿಳಾ ಕಾಲೇಜಿನಲ್ಲಿ ಹಿರಿಯ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
7ನೇ ವಾರ್ಡ್ ಅಧ್ಯಕ್ಷರಾಗಿ ನೇಮಕ
ಮೈಸೂರು: ಬಿಜೆಪಿ ಕೆ.ಆರ್. ಕ್ಷೇತ್ರದ 7ನೇ ವಾರ್ಡಿನ ಅಧ್ಯಕ್ಷರಾಗಿ ನಾಗರಾಜ್ ನೇಮಕವಾಗಿದ್ದಾರೆ.

ಅಂಗನವಾಡಿ ನೌಕರರ ಪ್ರತಿಭಟನೆ
ಮೈಸೂರು: ಸಮಗ್ರ ಶಿಶು ಅಭಿವೃದ್ಧಿ ಯೋಜನೆಯನ್ನು (ಐಸಿಡಿಎಸ್) ಸರ್ಕಾರಿ ಖಾಸಗಿ ಪಾಲುದಾರಿಕೆಯ ಹೆಸರಿನಲ್ಲಿ ಖಾಸಗೀಕರಣ ವಿರೋಧಿಸಿ, ಅಂಗನವಾಡಿ ನೌಕರರ ಕಾಯಂ ಮತ್ತು ಕನಿಷ್ಠ ಕೂಲಿಗಾಗಿ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದವರು ಜು.10 ರಂದು ದೇಶವ್ಯಾಪಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಅಂದು ಬೆಳಗ್ಗೆ 11ಕ್ಕೆ ಮೈಸೂರಿನ ಗನ್‌ಹೌಸ್‌ನಿಂದ ಅಂಗನವಾಡಿ ನೌಕರರು ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತಲುಪಿ ಮನವಿ ಸಲ್ಲಿಸಲಿದ್ದಾರೆ. ಜಿಲ್ಲೆಯ ಎಲ್ಲಾ ಅಂಗನವಾಡಿ ನೌಕರರು ಭಾಗವಹಿಸುವಂತೆ ಸಂಘದ ಅಧ್ಯಕ್ಷೆ ಕಾವೇರಮ್ಮ, ಖಜಾಂಚಿ ಜಿ. ಶಕುಂತಲ, ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಸುನಂದ ಕೋರಿದ್ದಾರೆ.

ಪಟ್ಟಿಯಿಂದ ಕೈ ಬಿಡಲು ಒತ್ತಾಯ
ಮೈಸೂರು: ಪರಿಶಿಷ್ಟ ಜಾತಿ ಪಟ್ಟಿಯಿಂದ ಲಂಬಾಣಿ, ಬಂಜಾರ, ಕೊರಚ ಹಾಗೂ ಕೊರಮ ಮುಂತಾದ ಸ್ಪೃಶ್ಯ ಜನಾಂಗವನ್ನು ಕೈ ಬಿಡಬೇಕು ಎಂದು ಈಶ್ವರ್ ತೊರೆಮಾವು ಒತ್ತಾಯಿಸಿದ್ದಾರೆ. ಕೆಲವು ರಾಜಕೀಯ ಪಕ್ಷಗಳ ನೀತಿಯಿಂದಾಗಿ ಸ್ಪೃಶ್ಯ ಸಮಾಜವು ಪರಿಶಿಷ್ಟ ಜಾತಿಯೊಳಗೆ ಸೇರಿದೆ. ಆದ್ದರಿಂದ ಹೈಕೋರ್ಟ್ ಆದೇಶದಂತೆ ಪರಿಶಿಷ್ಟ ಜಾತಿ ಆಯೋಗವು ಲಂಬಾಣಿ, ಬಂಜಾರ, ಕೊರಚ, ಕೊರಮ ಮತ್ತು ಬೇಡ ಜಂಗಮ, ಬುಡುಗ ಜಂಗಮ ಜಾತಿಗಳನ್ನು ಕೈ ಬಿಡಬೇಕು. ಆದಿ ಕರ್ನಾಟಕ, ಆದಿ ಜಾಂಬವ, ಆದಿ ದ್ರಾವಿಡರು ಮಾತ್ರ ಪರಿಶಿಷ್ಟ ಜಾತಿಯವರು ಎಂದು ಹೇಳಲು ಸಂಸತ್ತಿನಲ್ಲಿ ಕಾಯಿದೆ ಜಾರಿಗೆ ತಂದು ನೈಜ ಮೀಸಲಾತಿ ದೊರಕುವಂತೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಬಸ್ ಮಾರ್ಗ ಬದಲಿಗೆ ಒತ್ತಾಯ
ಮೈಸೂರು: ಚಾಮುಂಡಿಬೆಟ್ಟ ಮತ್ತು ಜ್ವಾಲಾಮುಖಿ ತ್ರಿಪುರ ಸುಂದರಿ ದೇವಸ್ಥಾನಕ್ಕೆ ತೆರಳುವ ಬಸ್‌ನ ಮಾರ್ಗ ಬದಲಾಯಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ. ನಗರ ಬಸ್ ನಿಲ್ದಾಣದಿಂದ ಗಣಪತಿ ಸಚ್ಚಿದಾನಂದ ಆಶ್ರಮದ ಮೂಲಕ ಜ್ವಾಲಾಮುಖಿ ತ್ರಿಪುರ ಸುಂದರಿ ದೇವಸ್ಥಾನಕ್ಕೆ ಸಂಚರಿಸುವ ಬಸ್‌ಗಳು, ನಗರ ಬಸ್ ನಿಲ್ದಾಣ, ಗ್ರಾಮಾಂತರ ಬಸ್ ನಿಲ್ದಾಣ, ರೇಲ್ವೆ ನಿಲ್ದಾಣ, ಆರ್‌ಟಿಒ, ಚಾಮುಂಡಿಪುರಂ ವೃತ್ತ, ಸೆಂಟ್‌ಮೇರಿಸ್ ಶಾಲೆ, ಆಶ್ರಮ, ಜ್ವಾಲಾಮುಖಿ ತ್ರಿಪುರ ಸುಂದರಿ ದೇವಸ್ಥಾನಕ್ಕೆ ಸಂಚರಿಸುವಂತೆ ಮಾಡಬೇಕು. ಆಗ ಭಕ್ತರಿಗೆ ಚಾಮುಂಡಿಬೆಟ್ಟ ಮತ್ತು ಜ್ವಾಲಾಮುಖಿ ತ್ರಿಪುರ ಸುಂದರಿ ದೇವಸ್ಥಾನಕ್ಕೆ ತೆರಳಲು ಅನುಕೂಲವಾಗುತ್ತದೆ. ಆಷಾಢ ಮಾಸ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಾಂತರ, ರೇಲ್ವೆ ನಿಲ್ದಾಣದಿಂದಲೂ ಭಕ್ತರಿಗೆ ಬಸ್ ಸೌಲಭ್ಯ ಕಲ್ಪಿಸಿದಂತೆ ಆಗುತ್ತದೆ ಎಂದು ದೇವಸ್ಥಾನದ ಭಕ್ತಾದಿಗಳು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.