ಮೈಸೂರು

ಹಳ್ಳಿ ಕೆಲಸ ಮಾಡದ ವೈದ್ಯರಿಂದ 9 ಕೋಟಿ ದಂಡ

Published On :

ಕ.ಪ್ರ. ವಾರ್ತೆ, ಮೈಸೂರು, ಜು.9
ಗ್ರಾಮೀಣ ಸೇವೆ ಪೂರೈಸದ ವೈದ್ಯರಿಗೆ ವಿಧಿಸುತ್ತಿರುವ ದಂಡದ ಪ್ರಮಾಣವನ್ನು ಹೆಚ್ಚಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಹೇಳಿದರು.
ಮೈಸೂರು ಜಿಪಂ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಮೈಸೂರು ವಿಭಾಗೀಯ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, 5 ವರ್ಷಗಳ ವೈದ್ಯಕೀಯ ಶಿಕ್ಷಣ ಮುಗಿಸಿದವರು 1 ವರ್ಷ ಗ್ರಾಮೀಣ ಪ್ರದೇಶದಲ್ಲಿ ಕಾರ್ಯನಿರ್ವಹಿಸಬೇಕು ಎಂಬ ಕಾನೂನು ಇದೆ. ಆದರೆ, ಕೆಲವು ಮಂದಿ ಗ್ರಾಮೀಣ ಭಾಗಕ್ಕೆ ತೆರಳಲಾಗದೆ ದಂಡ ಕಟ್ಟುತ್ತಿದ್ದಾರೆ. ಈಗ 9 ಕೋಟಿ ದಂಡ ಕಟ್ಟಿದ್ದಾರೆ. ಮುಂದೆಯೂ ಈ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ ಎಂದರು.
ಗ್ರಾಮೀಣ ಪ್ರದೇಶದಲ್ಲಿ ವೈದ್ಯಕೀಯ ಸೇವೆ ನೀಡಲು ಹಿಂಜರಿಯಬಾರದು. ನಾವೆಲ್ಲ ಗ್ರಾಮಾಂತರ ಭಾಗದಿಂದ ಬಂದವರೆ ಆಗಿದ್ದೇವೆ. ಗ್ರಾಮೀಣರು ಅಸಹಾಯಕರಾಗಿದ್ದು, ಅವರ ಸೇವೆ ನಮ್ಮೆಲ್ಲರ ಹೊಣೆ ಎಂದು ಭಾವಿಸಬೇಕು. ಆದ್ದರಿಂದ ಮುಂದಿನ ದಿನಗಳಲ್ಲಿ ವೈದ್ಯಕೀಯ ಶಿಕ್ಷಣ ಮುಗಿಸಿದವರು ಗ್ರಾಮಾಂತರದಲ್ಲಿ ಸೇವೆ ನೀಡಲು ಉತ್ತೇಜಿಸಲಾಗುವುದು. ಹೆಚ್ಚು- ಹೆಚ್ಚು ಆಸ್ಪತ್ರೆ ನಿರ್ಮಿಸುವುದು ನಮ್ಮ ಉದ್ದೇಶವಲ್ಲ. ಅಂದರೆ ರೋಗಗಳಿಗೆ ಮದ್ದು ನೀಡುವ ಬದಲು ಅದನ್ನು ನಿಯಂತ್ರಿಸುವುದೆ ನಮ್ಮ ಗುರಿಯಾಗಿದೆ ಎಂದರು.
2013- 14ನೇ ಸಾಲಿನ ಆಯವ್ಯಯದಲ್ಲಿ ಆರೋಗ್ಯಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ಕೆಲವು ಈಡೇರುವ ಭರವಸೆ ಸಿಕ್ಕಿದೆ. ಕೇಂದ್ರ ಸರ್ಕಾರ ಎನ್ಆರ್ಎಚ್ಎಂ ಯೋಜನೆಯಡಿ 650 ಕೋಟಿ ಅನುದಾನ ನೀಡಿದೆ. ಬೆಂಗಳೂರು, ಮೈಸೂರು ಹಾಗೂ ಉಲ್ಲಾಳದಲ್ಲಿ ವಿಶೇಷ ಆಸ್ಪತ್ರೆ ಕಟ್ಟಲು ಉದ್ದೇಶಿಸಲಾಗಿದೆ. ಪ್ರತಿ 50 ಸಾವಿರ ಜನಸಂಖ್ಯೆ ಸಾಂದ್ರತೆಯುಳ್ಳ ಪ್ರದೇಶದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಿಸಲಾಗುವುದು ಎಂದು ತಿಳಿಸಿದರು.
ಸಿಬ್ಬಂದಿ ನೇಮಕ: ಆರೋಗ್ಯ ಇಲಾಖೆಯಿಂದ 2300 ಡಿ ಗ್ರೂಪ್ ನೌಕರರು, 700 ಎಎನ್ಎಂ ನೇಮಕ ಪೂಣಗೊಂಡಿದೆ. ಹಾಗೆ 300 ಮಂದಿ ಕಿರಿಯ ವೈದ್ಯರು, 150 ಮಂದಿ ಲ್ಯಾಬ್ ಟೆಕ್ನಿಷಿಯನ್ಸ್, 100 ಎಎನ್ಎಂಎಸ್ ನೇಮಕಕ್ಕೆ ಹಣಕಾಸು ಇಲಾಖೆ ಅನುಮತಿ ನೀಡಿದೆ ಎಂದರು.
ಮಕ್ಕಳಿಗೆ ಮಾತ್ರೆ: ಮಕ್ಕಳಲ್ಲಿ ಕಂಡುಬರುವ ಅನಿಮಿಯಾ ರೋಗ ತಡೆಗಟ್ಟಲು 1 ರಿಂದ 6ನೇ ತರಗತಿ ಹಾಗೂ 7 ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ ವಯಸ್ಸಿಗೆ ಅನುಗುಣವಾದ ಡೋಸ್ ಪ್ರಕಾರ ಅಯೋನ್ ಫೋಲಿಕ್ ಮಾತ್ರೆ ನೀಡಲಾಗುತ್ತದೆ. ಇದರಿಂದ ಮುಂದಿನ 10 ವರ್ಷಗಳಲ್ಲಿ ಅನಿಮಿಯಾ ರೋಗವನ್ನು ತಡೆಗಟ್ಟಬಹುದು ಎಂದು ಮಾಹಿತಿ ನೀಡಿದರು.
ಬಳಿಕ ನಡೆದ ಸಭೆಯಲ್ಲಿ ಮೈಸೂರು ವಿಭಾಗೀಯ ಮಟ್ಟದ ಜಿಲ್ಲೆಗಳಾದ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿನ ಪ್ರಗತಿಯ ಮಾಹಿತಿ ಪಡೆದರು. ಮೈಸೂರು, ಮಂಡ್ಯ, ಚಾಮರಾಜನಗರದಲ್ಲಿ ಮಗು ಹುಟ್ಟಿದ ತಕ್ಷಣ ತಾಯಿ ಮರಣ ಹೊಂದಿರುವ ಪ್ರಕರಣ ಹೆಚ್ಚಾಗಿರುವ ಅಂಶವನ್ನು ಆರೋಗ್ಯಾಧಿಕಾರಿ ತಿಳಿಸಿದರು. ಉತ್ತಮ ಆರೋಗ್ಯ ಸೇವೆ ನೀಡುತ್ತಿರುವ ಕರ್ನಾಟಕ ರಾಜ್ಯಕ್ಕೆ 3 ಪ್ರಶಸ್ತಿಗಳು ಲಭಿಸಿದೆ ಎಂಬ ಮಾಹಿತಿಯನ್ನೂ ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು.
ಜಿಲ್ಲೆಗಳ ಪ್ರಗತಿ: 2012- 13ನೇ ಸಾಲಿನ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನ ಬಳಸಿಕೊಂಡು ಜೂನ್ನಲ್ಲಿ ಸಾಧಿಸಿರುವ ಪ್ರಗತಿಯಂತೆ ಉಡುಪಿ 1, ಚಿಕ್ಕಮಗಳೂರು 2, ದಕ್ಷಿಣ ಕನ್ನಡ 8, ಮಂಡ್ಯ 13, ಮೈಸೂರು 14, ಚಾಮರಾಜನಗರ 16, ಹಾಸನ 17, ಕೊಡಗು 30ನೇ ರ್ಯಾಂಕ್ ಪಡೆದುಕೊಂಡಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮದನಗೋಪಾಲ್, ಆಯುಕ್ತ ಬಿ.ಬಿ. ಪಾಟೀಲ್, ನಿರ್ದೇಶಕ ಡಾ. ಧನ್ಯಕುಮಾರ್, ಆರ್ಎನ್ಎಚ್ಎಂ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಕೆ. ಮಹಾಮಠ್, ಪಿಡಿ ಆರ್ಸಿಎಚ್ ಗೀತಾ ಎನ್. ಗೌಡರ್, ಮೈಸೂರು ವಿಭಾಗೀಯ ಮಟ್ಟದ ಎಲ್ಲಾ ಜಿಲ್ಲೆಗಳ ಆರೋಗ್ಯಾಧಿಕಾರಿಗಳು ಭಾಗವಹಿಸಿದ್ದರು.



ಖಾಲಿ ಹುದ್ದೆ ಭರ್ತಿಗೆ ಚಿಕ್ಕಮಾದು ಮನವಿ
ಮೈಸೂರು: ಎಚ್.ಡಿ. ಕೋಟೆ ತಾಲೂಕಿನಲ್ಲಿ ಖಾಲಿ ಇರುವ ವೈದ್ಯರು ಹಾಗೂ ಇತರೆ ಆರೋಗ್ಯ ಸಹಾಯಕಿಯರ ಹುದ್ದೆಯನ್ನು ಭರ್ತಿ ಮಾಡುವಂತೆ ಶಾಸಕ ಎಸ್. ಚಿಕ್ಕಮಾದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರಿಗೆ ಮನವಿ ಸಲ್ಲಿಸಿದರು.
ತಾಲೂಕಿನ ಕೇಂದ್ರ ಸ್ಥಾನದಲ್ಲಿ ಒಂದು ಸಾರ್ವಜನಿಕ ಆಸ್ಪತ್ರೆ ಇದ್ದು, ಗ್ರಾಮಾಂತರದಲ್ಲಿ ಒಟ್ಟು 18 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಈ ಕೇಂದ್ರಗಳಲ್ಲಿ ಕೇವಲ 14 ಜನ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಆರೋಗ್ಯ ಸಹಾಯಕಿಯರ ಮಂಜೂರಾತಿ ಹುದ್ದೆಯು ಒಟ್ಟು 89 ಇದ್ದು, ಕೇವಲ 57 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದ 32 ಹುದ್ದೆಗಳು ಖಾಲಿ ಇವೆ. ಈ ತಾಲೂಕು ರಾಜ್ಯದಲ್ಲಿ ಅತ್ಯಂತ ಹಿಂದುಳಿದಿದ್ದು, ಇದರ ಬೆಳವಣಿಗೆಗೆ ಸಹಕರಿಸುವಂತೆ ಕೋರಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.