ಆಷಾಢ ಶುಕ್ರವಾರಕ್ಕೆ ಚಾಮುಂಡಿಬೆಟ್ಟ ಸಜ್ಜು
ಕ.ಪ್ರ.ವಾರ್ತೆ ಮೈಸೂರು ಜು. 11
ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ನಡೆಯುವ ವಿಶೇಷ ಪೂಜೆಗೆ ಜಿಲ್ಲಾಡಳಿತ ಮತ್ತು ಮುಜರಾಯಿ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಕಳೆದ ಬಾರಿಯಂತೆಯೇ ಲಲಿತಮಹಲ್ ಹೆಲಿಪ್ಯಾಡ್ನಿಂದ ಸಾರಿಗೆ ಬಸ್ನ ಉಚಿತ ಸೇವೆ ಕಲ್ಪಿಸಲು ತೀರ್ಮಾನಿಸಲಾಗಿದೆ.
ಮೊದಲಿಗೆ ಲಲಿತಮಹಲ್ ಹೆಲಿಪ್ಯಾಡ್ಗೆ ತೆರಳಿದ ಶಾಸಕರಾದ ಜಿ.ಟಿ. ದೇವೇಗೌಡ, ಎಂ.ಕೆ. ಸೋಮಶೇಖರ್ ಮತ್ತು ಜಿಲ್ಲಾಧಿಕಾರಿ ಡಾ.ರಾಮೇಗೌಡ ಅವರು ಅಲ್ಲಿನ ಸಿದ್ಧತೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ವೇಳೆ ಮುಜರಾಯಿ ಇಲಾಖೆ ಅಧಿಕಾರಿಗಳು ಬಸ್ ಶೆಲ್ಟರ್ಗಳು, ದೇವರ ದರ್ಶನದ ಟಿಕೆಟ್ ಕೌಂಟರ್, ಕುಡಿಯುವ ನೀರಿನ ವ್ಯವಸ್ಥೆ, ತಾತ್ಕಾಲಿಕ ಶೌಚಾಲಯ ವ್ಯವಸ್ಥೆ ಮಾಡಿರುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಅಲ್ಲದೆ ಪೊಲೀಸ್ ಇಲಾಖೆಗೆ 150 ಪಾಸ್ಗಳನ್ನು ವಿತರಿಸಲಾಗಿದ್ದು, ಸ್ಥಳೀಯ ಶಾಸಕರು ಮತ್ತು ನಗರ ಪಾಲಿಕೆ ಅಧಿಕಾರಿಗಳು ಪಾಸ್ಗಳಿಗೆ ಮನವಿ ಸಲ್ಲಿಸಿದರೆ ನೀಡುವುದಾಗಿ ನಗರ ಪೊಲೀಸ್ ಆಯುಕ್ತ ಡಾ. ಎಂ.ಎ. ಸಲೀಂ ತಿಳಿಸಿದರು.
ಬಳಿಕ ಚಾಮುಂಡಿಬೆಟ್ಟಕ್ಕೆ ತೆರಳಿ ದೇವರ ದರ್ಶನ ಪಡೆದು, ದರ್ಶನಕ್ಕೆ ತೆರಳುವ ಮತ್ತು ಹಿಂದಿರುಗುವ ಮಾರ್ಗಗಳು, ಪ್ರಸಾದ ತಯಾರಿಕೆ, ವಿತರಣಾ ವ್ಯವಸ್ಥೆಯನ್ನು ಪರಿಶೀಲಿಸಿದರು.
ಉಚಿತ ಬಸ್ ಸೇವೆ: ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ರಾಮೇಗೌಡ ಅವರು, ದೇವಸ್ಥಾನಕ್ಕೆ ಬರುವ ಭಕ್ತರಿಗೆ ಉಚಿತ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ನಗರ ಬಸ್ ನಿಲ್ದಾಣದಲ್ಲಿ ಸಂಚರಿಸುವ ಬಸ್ಗಳ ಜತೆಗೆ ಹೆಚ್ಚುವರಿಯಾಗಿ 50 ಬಸ್ಗಳನ್ನು ಬಿಡಲಾಗಿದೆ. ಬೆಳಗಿನ ಜಾವ 3 ಗಂಟೆಯಿಂದಲೆ ಬಸ್ ಸೇವೆ ಲಭ್ಯವಿರುತ್ತದೆ. ಆದರೆ ಬೆಳಗ್ಗೆ 5.30 ರಿಂದ ರಾತ್ರಿ 10ರವರೆಗೆ ದೇವರ ದರ್ಶನಕ್ಕೆ ಅವಕಾಶ ಇದೆ. ಗಣ್ಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ಮಾತನಾಡಿ, ಗಣ್ಯರ ವಾಹನಕ್ಕೆ ಪಾಸ್ಗಳನ್ನು ನೀಡಲಾಗಿದೆ. ಸುಗಮ ಸಂಚಾರದ ದೃಷ್ಟಿಯಿಂದ ಸಾರಿಗೆ ಬಸ್ ಹೊರತುಪಡಿಸಿ ಉಳಿದ ಎಲ್ಲಾ ವಾಹನಗಳನ್ನು ದೇವಿಕೆರೆ ಬಳಿಯೆ ನಿಲ್ಲಿಸಬೇಕು. 150 ಮಂದಿ ಹೋಂ ಗಾರ್ಡ್ಸ್ಗಳು, 240 ಮಂದಿ ಪೊಲೀಸರು, 4 ಕೆಎಸ್ಆರ್ಪಿ ತುಕಡಿ ನಿಯೋಜಿಸಲಾಗಿದ್ದು, ಮಾಹಿತಿ ಕೇಂದ್ರ ತೆರೆಯಲಾಗಿದೆ ಎಂದರು.
ಶಾಸಕ ಜಿ.ಟಿ. ದೇವೇಗೌಡ ಮಾತನಾಡಿ, ಜಿಲ್ಲಾಡಳಿತವು ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟಕ್ಕೆ ವಿಶೇಷ ಸೌಲಭ್ಯ ಕಲ್ಪಿಸಿದೆ. ಭಕ್ತಾದಿಗಳ ಅನುಕೂಲಕ್ಕೆ ಕುಡಿಯುವ ನೀರಿನ ಕೇಂದ್ರ, ಮಾಹಿತಿ ಕೇಂದ್ರ, ದೇವರ ದರ್ಶನದ ಟಿಕೆಟ್ ಕೌಂಟರ್ಗಳು, ತಾತ್ಕಾಲಿಕ ಶೌಚಾಲಯ ವ್ಯವಸ್ಥೆ ಮಾಡಿದೆ. ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಈ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ದೇವಸ್ಥಾನದ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್ ಮಾತನಾಡಿ, ಬೆಳಗಿನ ಜಾವ 3 ಗಂಟೆಯಿಂದಲೆ ದೇವಸ್ಥಾನದಲ್ಲಿ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಹೂವಿನ ಅಲಂಕಾರ, ಸಹಸ್ರನಾಮಾರ್ಚನೆ ನಡೆಯಲಿದ್ದು, ಬೆಳಗ್ಗೆ 5.30ಕ್ಕೆ ನಡೆಯುವ ಮಹಾಮಂಗಳಾರತಿ ವೇಳೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ ಎಂದರು.
ವಿಶೇಷ ಅಲಂಕಾರ: ದೇವಸ್ಥಾನ ಒಳ ಆವರಣದಲ್ಲಿ ದಾಳಿಂಬೆ ಹಣ್ಣಿನ ಅಲಂಕಾರ ಮಾಡಲಾಗುತ್ತಿದೆ. ವಿವಿಧ ಹೂವುಗಳಿಂದ ದೇವಸ್ಥಾನದ ಪ್ರಾಂಗಣವನ್ನು ಅಲಂಕರಿಸುವುದಲ್ಲದೆ, ಗರ್ಭಗುಡಿಯ ಮುಂದಿನ ಹಜಾರದಲ್ಲಿ ಹಸಿರು ಸೊಪ್ಪು ಹಾಕಿ ಅಲ್ಲಿಯೇ ಬಿಟ್ಟ ದಾಳಿಂಬೆಯಂತೆ ಅಲಂಕರಿಸುವ ಮೂಲಕ ವಿಶೇಷ ಕಳೆ ತರಲಾಗುತ್ತಿದೆ. ದೇವಸ್ಥಾನ ಹಿಂಭಾಗದಲ್ಲಿ ಬರುವ ಭಕ್ತರಿಗೆ ದಾಸೋಹಕ್ಕಾಗಿ ಪ್ರಸಾದ ತಯಾರಿಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಸ್.ಎ. ರಾಮದಾಸ್ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಆಸರೆ ಫೌಂಡೇಷನ್ ಮೂಲಕ ಸಾರಿಗೆ ಬಸ್ನ ಉಚಿತ ಸೇವೆಯನ್ನು ಜಾರಿಗೆ ತರಲಾಗಿತ್ತು. ಆಗ ಎಂ.ಕೆ. ಸೋಮಶೇಖರ್ ಸೇರಿದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ನ ಹಲವು ಮಂದಿ ವಿರೋಧಿಸಿ ರಸ್ತೆ ತಡೆ ನಡೆಸಿದ್ದರು. ಸಾರ್ವಜನಿಕರ ವಾಹನವನ್ನು ಬೆಟ್ಟಕ್ಕೆ ಬಿಡಬೇಕು ಎಂದು ಒತ್ತಾಯಿಸಿದ್ದರು.
ಆದರೆ ಈಗ ಕಾಂಗ್ರೆಸ್ ಶಾಸಕ ಎಂ.ಕೆ. ಸೋಮಶೇಖರ್ ಮತ್ತು ಜೆಡಿಎಸ್ನ ಜಿ.ಟಿ. ದೇವೇಗೌಡರೆ ಮುಂದೆ ನಿಂತು ಈ ಸೌಲಭ್ಯದ ಉಸ್ತುವಾರಿ ವಹಿಸಿದ್ದಾರೆ. ಅಲ್ಲದೆ ಚಾಮುಂಡಿ ಬೆಟ್ಟದ ಮಹಿಷಾಸುರ ಪ್ರತಿಮೆಯಿಂದ ದೇವಸ್ಥಾನದ ಕಡೆಗೆ ತೆರಳುವ ಮಾರ್ಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎರಡು ದೊಡ್ಡ ಕಟೌಟ್ ನಿಲ್ಲಿಸಲಾಗಿದೆ. ಇದುವರೆಗೂ ಚಾಮುಂಡಿ ಬೆಟ್ಟದಲ್ಲಿ ಕಟೌಟ್ ಅಬ್ಬರ ಇರಲಿಲ್ಲ. ಶಾಸಕ ಡಿಸಿಪಿ ಭೀಮಯ್ಯ, ಎಸಿಪಿ ವಿಷ್ಣುವರ್ಧನ್, ಅಗ್ನಿಶಾಮಕ ದಳದ ಅಧಿಕಾರಿ ಬಸವಣ್ಣ, ಮುಜರಾಯಿ ಇಲಾಖೆ ತಹಸೀಲ್ದಾರ್ ಯತಿರಾಜ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

