ತವರು ಜಿಲ್ಲೆ ಮೇಲೆ ಸಿದ್ದುಗೆ ಮಮಕಾರ
ಅಂಶಿ ಪ್ರಸನ್ನಕುಮಾರ್
ಕ.ಪ್ರ.ವಾರ್ತೆ ಮೈಸೂರು ಜು. 12
ನಾನು ಮುಖ್ಯಮಂತ್ರಿಯಾಗಿ ದೈಹಿಕವಾಗಿ ಬೆಂಗಳೂರಿನಲ್ಲಿದ್ದರೂ ಮನಸ್ಸೆಲ್ಲಾ ಮೈಸೂರಿನಲ್ಲಿಯೇ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಇದನ್ನು ಸಾಬೀತುಪಡಿಸುವಂತೆ ಮುಖ್ಯಮಂತ್ರಿಯಾದ ಬಳಿಕ ಮಂಡಿಸಿದ ಚೊಚ್ಚಲ ಬಟೆಟ್ನಲ್ಲಿ ಭರಪೂರ ಕೊಡುಗೆ ನೀಡಿದ್ದಾರೆ.
ಜಿಲ್ಲೆಯ ಸಿದ್ದರಾಮನಹುಂಡಿಯವರಾದ ಸಿದ್ದರಾಮಯ್ಯ ಅವರು ಪ್ರೌಢಶಿಕ್ಷಣದಿಂದ ಪದವಿ ಮತ್ತು ಕಾನೂನು ಪದವಿವರೆಗೆ ಓದಿದ್ದು, ಅರೆಕಾಲಿಕ ಉಪನ್ಯಾಸಕ ವೃತ್ತಿ, ವಕೀಲಿಗಾರಿಕೆ ಮಾಡಿದ್ದು ಮೈಸೂರಿನಲ್ಲಿಯೇ. 1983 ರಿಂದ ಇಲ್ಲಿಯವೆರೆಗೆ ಚಾಮುಂಡೇಶ್ವರಿ ಕ್ಷೇತ್ರದಿಂದ ಐದು ಬಾರಿ ಗೆದ್ದು, ಎರಡು ಬಾರಿ ಸೋತು, ವರುಣದಿಂದ ಸತತ ಎರಡು ಬಾರಿ ಗೆದ್ದು ಸಿಎಂ ಗಾದಿಗೇರಿದ ಸಿದ್ದರಾಮಯ್ಯ ಅವರಿಗೆ ಬಜೆಟ್ ಮಂಡನೆ ಹೊಸತಲ್ಲ. ಎಚ್.ಡಿ. ದೇವೇಗೌಡ- ಜೆ.ಎಚ್. ಪಟೇಲ್- ಎನ್. ಧರಂಸಿಂಗ್ ಸಂಪುಟದಲ್ಲಿ ಹಣಕಾಸು ಖಾತೆಯ ಸಚಿವರಾಗಿ 7 ಬಾರಿ ಬಜೆಟ್ ಮಂಡಿಸಿದ್ದರು. ಇದೀಗ ಸಿಎಂ ಆಗಿ ಚೊಚ್ಚಲ ಹಾಗೂ ಒಟ್ಟಾರೆಯಾಗಿ 8ನೇ ಬಾರಿಗೆ ಮಂಡಿಸಿರುವ ಬಜೆಟ್ನಲ್ಲಿ ತಮ್ಮ ತವರಿನ ಪ್ರೀತಿಯನ್ನು ಹೆಚ್ಚಾಗಿ ತೋರಿಸಿಕೊಂಡಿದ್ದಾರೆ.
ನಗರದ ಪೊಲೀಸ್ ಪಬ್ಲಿಕ್ ಶಾಲೆ ಬಿಜಾಪುರ ಸೈನಿಕ ಶಾಲೆಯ ಮಾದರಿಯಲ್ಲಿ ಉನ್ನತೀಕರಣ, ಸಶಸ್ತ್ರ ಮೀಸಲು ಪಡೆ ಪೊಲೀಸ್ ಠಾಣೆಗಳ ಉನ್ನತೀಕರಣ, ನಗರದ ಕೆಲವು ಬಡಾವಣೆಗಳಲ್ಲಿ ಜಾರಿಯಾಗಿರುವ 24್ಗ7 ನೀರು ಸರಬರಾಜು ಇಡೀ ನಗರಕ್ಕೆ ವಿಸ್ತರಣೆ, ಪಾರಂಪರಿಕ ನಗರವಾದ ಮೈಸೂರಿನ ಮೂಲ ಸೌಕರ್ಯಕ್ಕೆ 100 ಕೋಟಿ ಅನುದಾನ ಘೋಷಿಸಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರದಲ್ಲೂ ಯಡಿಯೂರಪ್ಪ ಅವರ ಕಾಲದಿಂದಲೂ ಪ್ರತಿವರ್ಷ 100 ಕೋಟಿ ನೀಡಲಾಗುತ್ತಿತ್ತು.ಅಧ್ಯಯನ ಪೀಠ ಹಳೆಯದು: ಮೈಮುಲ್ನಲ್ಲಿ ತಯಾರಿಸುವ ಹಾಲಿನ ಉತ್ಪನ್ನವಾದ ಹಾಲಿನ ಪುಡಿ ತಯಾರಿಸಲು ಮೆಗಾ ಡೇರಿ ಸ್ಥಾಪಿಸುವ ಬಗ್ಗೆ ಘೋಷಿಸಿದ್ದಾರೆ. ಆದರೆ, ಮೆಗಾ ಡೈರಿ ಸ್ಥಾಪಿಸುವ ಬಗ್ಗೆ ಬಿ.ಎಸ್. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗಲೇ ಘೋಷಣೆಯಾಗಿತ್ತು.
ಮೈಸೂರು ವಿವಿಯಲ್ಲಿ ವಿವಿ ಹಾಗೂ ರಾಜ್ಯ ಸರ್ಕಾರದ ನೆರವಿನಿಂದ ಈಗಾಗಲೇ ನಾಲ್ವಡಿ ಕೃಷ್ಣರಾಜ ಒಡೆಯರ್ ಅಧ್ಯಯನ ಪೀಠ ಆರಂಭವಾಗಿದೆ. ಈ ಬಾರಿಯ ಬಜೆಟ್ನಲ್ಲಿ ಮತ್ತೆ ಘೋಷಣೆಯಾಗಿದೆ.
ವಕೀಲರ ಸಂಘ ಮರೆತಿಲ್ಲ
ಸಿದ್ದರಾಮಯ್ಯ ಆರಂಭದಲ್ಲಿ ವಕೀಲರಾಗಿ ಕಾರ್ಯನಿರ್ವಹಿಸಿದ್ದರು. ತಮ್ಮ ಗ್ರಾಮದ ಪಕ್ಕದ ಕುಪ್ಪೇಗಾಲದ ಯಾಲಕ್ಕಿಗೌಡರ ಮೂಲಕ ಪ್ರೊ. ಪಿ.ಎಂ. ಚಿಕ್ಕಬೋರಯ್ಯ ಅವರ ಬಳಿ ಕಿರಿಯ ವಕೀಲರಾಗಿ ಸೇವೆ ಸಲ್ಲಿಸಿದ್ದರು. ಆಗಿನಿಂದಲೂ ಅವರು ಮೈಸೂರು ವಕೀಲರ ಸಂಘದ ಸದಸ್ಯರು. ಶಾಸಕನಿಂದ ಉಪ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕನ ಸ್ಥಾನದವರೆಗೆ ಹೋಗಿದ್ದರೂ ವಕೀಲರ ಸಂಘದ ಚುನಾವಣೆಗೆ ಬಂದು ಮತ ಚಲಾಯಿಸುತ್ತಿದ್ದರು. ಇದೀಗ ಸಿಎಂ ಆದರೂ ಮರೆಯದೆ ಸಂಘದ ಸುಸಜ್ಜಿತ ಭವನ ನಿರ್ಮಾಣಕ್ಕೆ 2 ಕೋಟಿ ನೀಡಿದ್ದಾರೆ.
ನಾಲೆಗಳ ಅಧುನೀಕರಣ
ಕಾವೇರಿ ಅಚ್ಚುಕಟ್ಟು ಪ್ರದೇಶದ ನಾಲೆಗಳ ಆಧುನೀಕರಣಕ್ಕೆ 1000 ಕೋಟಿ ಘೋಷಿಸಲಾಗಿದೆ. ಇದರಲ್ಲಿ ಕಬಿನಿ, ಹೇಮಾವತಿ, ಹುಲ್ಲಹಳ್ಳಿ, ರಾಂಪುರಂ, ರಾಮಸ್ವಾಮಿ, ರಾಜಪರಮೇಶ್ವರಿ, ಶ್ರೀರಾಮದೇವ, ಎಚ್.ಡಿ. ಕೋಟೆಯ ಚಿಕ್ಕನಂದಿ ನಾಲೆಗಳು ಸೇರಿವೆ.
ಅವಿಭಜಿತ ಜಿಲ್ಲೆಗೂ ಕೊಡುಗೆ
1997ರಲ್ಲಿ ಹೊಸದಾಗಿ ಚಾಮರಾಜನಗರ ಜಿಲ್ಲೆ ರಚಿಸಲಾಯಿತು. ಅಲ್ಲಿಯವರೆಗೆ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆ ಒಂದೇ ಆಗಿದ್ದವು. ಹೊಸ ಜಿಲ್ಲೆ ರಚನೆಯಾಗಿ ಇಷ್ಟು ವರ್ಷ ಕಳೆದಿದ್ದರೂ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ಹಾಗೂ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಪ್ರತ್ಯೇಕವಾಗಿಲ್ಲ. ಉಭಯ ಜಿಲ್ಲೆಗಳಿಗೂ ಒಂದೇ ಮೈಮುಲ್ ಹಾಗೂ ಒಂದೇ ಡಿಸಿಸಿ ಬ್ಯಾಂಕ್ ಕಾರ್ಯನಿರ್ವಹಿಸುತ್ತಿವೆ.
ಸಮಗ್ರ, ಅಭಿವೃದ್ಧಿಪೂರ್ವಕ ಬಜೆಟ್ಅನ್ನು ಸಿದ್ದರಾಮಯ್ಯ ಅವರು ಮಂಡಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸ್ ಅವರ ಛಾಯೆ ಬಜೆಟ್ನಲ್ಲಿ ಕಾಣುತ್ತಿದೆ. ಹಿಂದುಳಿದ, ಅಲ್ಪಸಂಖ್ಯಾತ, ರೈತ, ಕಾರ್ಮಿಕರ ಕಲ್ಯಾಣದ ಗುರಿಯ ಬಜೆಟ್ ಆಗಿ, ರಾಜ್ಯ ಬಜೆಟ್ ಮಂಡಿಸಿರುವುದು ಸ್ವಾಗತಾರ್ಹ.
- ಸುರೇಶ್ಕುಮಾರ್ ಜೈನ್, ಪ್ರಧಾನ ಕಾರ್ಯದರ್ಶಿ, ಮೈಸೂರು ಕೈಗಾರಿಕೆಗಳ ಸಂಘ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

