ಒಳಾಂಗಣ ಕ್ರೀಡಾಂಗಣಕ್ಕೆ 1,50 ಕೋಟಿ
ಕ.ಪ್ರ. ವಾರ್ತೆ, ಮೈಸೂರು, ಜು.13
ಮೈಸೂರು ವಿವಿಯಿಂದ ಒಳಾಂಗಣ ಕ್ರೀಡಾಂಗಣ ನಿರ್ಮಿಸಲು ಯೋಜನೆ ರೂಪಿಸಿ ಒಂದೂವರೆ ಕೋಟಿ ರು. ಮೀಸಲಿಡಲಾಗಿದ್ದು, ಇನ್ನುಳಿದ ಒಂದೂವರೆ ಕೋಟಿಯನ್ನು ಸರ್ಕಾರ, ಶಾಸಕರು, ಸಂಸದರ ನಿಧಿಯಿಂದ ಕೊಡಿಸಿಕೊಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಭರವಸೆ ನೀಡಿದರು.
ಶನಿವಾರ ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳು ಮತ್ತು ಸ್ನೇಹಿತರ ಬಳಗವು ಏರ್ಪಡಿಸಿದ್ದ ಕ್ರೀಡಾಸಕ್ತ ಶಾಸಕರಿಗೆ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಬೇಕಾದ ಎಲ್ಲ ಸಹಕಾರ ನೀಡಲಾಗುವುದು. ಮುಂದಿನ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಮೈವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಸಿ. ಕೃಷ್ಣ ಅವರಿಗೆ ವಾಗ್ದಾನ ನೀಡಿದರು.
ನಾನು ಮೂಲತಃ ಕ್ರೀಡಾಪಟುವಾಗಿದ್ದೆ. ರಾಜಕೀಯಕ್ಕೆ ಅತ್ಯಂತ ಕಿರಿಯ ವಯಸ್ಸಿನಲ್ಲೇ ಅನಿವಾರ್ಯವಾಗಿ ಬಂದೆ. ಈಗ 12ನೇ ಚುನಾವಣೆ ಎದುರಿಸಿದ್ದೇನೆ. 8 ಬಾರಿ ಲೋಕಸಭೆ, 4 ಬಾರಿ ವಿಧಾನಸಭೆಗೆ ಸ್ಪರ್ಧಿಸಿದ್ದೇನೆ. ಆದರೂ ರಾಜಕೀಯದಲ್ಲಿ ರಾಜಿ ಮಾಡಿಕೊಳ್ಳಲು ಆಗುತ್ತಿಲ್ಲ. ಈ ಕ್ಷೇತ್ರದ ಜಾಯಮಾನವೆ ಹೊಂದಾಣಿಕೆಯಾಗಿರುವುದರಿಂದ ನಮ್ಮಂಥವರಿಗೆ ಕಷ್ಟವಾಗುತ್ತಿದೆ. ಬಹುಶಃ ಇದು ನನ್ನ ಕೊನೆ ಚುನಾವಣೆಯಾಗಲಿದೆ. ನನ್ನ ಆರೋಗ್ಯವೂ ಸರಿ ಇಲ್ಲದಿರುವುದು ಇದಕ್ಕೆ ಕಾರಣ ಎಂದು ಅಂತರಾಳ ಬಿಚ್ಚಿಟ್ಟರು.
ಕ್ರೀಡೆ ಬೇಕು: ಯಾವ ದೇಶ ಕ್ಷುಲ್ಲಕ ವಿಚಾರಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲವೋ ಅದು ಜಾಗತಿಕವಾಗಿ ಸಮೃದ್ಧಿಯಾಗಿ ಬೆಳೆಯುತ್ತದೆ. ನಮ್ಮ ದೇಶದಲ್ಲಿ ಎಲ್ಲದಕ್ಕೂ ಕೊಂಕು ತೆಗೆಯಲಾಗುತ್ತದೆ. ಸಮಾಜದಲ್ಲಿ ಅನಿಷ್ಟ, ದರಿದ್ರ ಪದ್ಧತಿಗಳು ತಾಂಡವವಾಡುತ್ತಿವೆ. ಒಂದು ವೇಳೆ ದೇಶದ ಬಹುತೇಕ ಮಂದಿ ಕ್ರೀಡೆಯಲ್ಲಿ ತೊಡಗಿದ್ದರೆ ಏಕತೆ ರೂಪುಗೊಳ್ಳುತ್ತಿತ್ತು. ಪ್ರತಿಯೊಬ್ಬರಲ್ಲಿಯೂ ರಾಷ್ಟ್ರಪ್ರೇಮ ಬೆಳೆಯುತ್ತಿತ್ತು. ಕ್ರೀಡೆಗೆ ಹೆಚ್ಚಿನ ಮಹತ್ವ ನೀಡಬೇಕಿದೆ ಎಂದು ಅಭಿಪ್ರಾಯಪಟ್ಟರು. ಅಭಿನಂದನಾ ಭಾಷಣ ಮಾಡಿದ ಸಂಸದ ಎಚ್. ವಿಶ್ವನಾಥ್, ಒಂದು ಕಾಲದಲ್ಲಿ ರಾಣೆಬೆನ್ನೂರಿನ ಕುಸ್ತಿ, ಮಂಡ್ಯದ ಕಬಡ್ಡಿ, ಮೈಸೂರು ಖೋಖೋಗೆ ಒಳ್ಳೆಯ ಹೆಸರಿತ್ತು. ವೀರಪ್ಪ ಮೊಯ್ಲಿ ಕಾಲದಲ್ಲಿ ಕ್ರೀಡಾ ಸಚಿವನಾಗಿದ್ದ ನಾನು 3ನೇ ರಾಷ್ಟ್ರೀಯ ಕ್ರೀಡೆಯನ್ನು ರಾಜ್ಯದಲ್ಲಿ ನಡೆಸಿದೆ. ಆಗ ಕ್ರೀಡೆಗೆ ಮತ್ತಷ್ಟು ಮಹತ್ವ ದೊರಕಿತು. ಕ್ರೀಡಾ ಮನೋಭಾವ ಮಹತ್ವದ್ದಾಗಿದ್ದು, ಅದರಿಂದ ಸಾಕಷ್ಟು ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂದರು. ಇದೇ ವೇಳೆ ಕ್ರೀಡಾಸಕ್ತರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಇತರೆ ಸಮಾರಂಭಗಳಿಗಿಂತ ಭಿನ್ನವಾಗಿತ್ತು. ಗಣ್ಯರ ಅಭಿನಂದನೆಗೆ ತಗಲುತ್ತಿದ್ದ 2 ಲಕ್ಷ ವೆಚ್ಚವನ್ನು ಉತ್ತರಾಖಂಡ್ ನೆರೆ ಸಂತ್ರಸ್ತರಿಗೆ ಪ್ರಧಾನಮಂತ್ರಿಗಳ ನೆರೆ ಪರಿಹಾರ ನಿಧಿಗೆ ನೀಡುವ ಮೂಲಕ ಮೈಸೂರಿನ ಕ್ರೀಡಾ ಬಳಗ ಮಾನವೀಯತೆ ಮೆರೆಯಿತು.
ಫುಟ್ಬಾಲ್ ಆಟಗಾರರಾದ ಕಂದಾಯ ಸಚಿವ ವಿ. ಶ್ರೀನಿವಾಸಪ್ರಸಾದ್, ಕಬಡ್ಡಿ, ವಾಲಿಬಾಲ್ ಆಟಗಾರರಾದ ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಹಾಗೂ ಕ್ರೀಡಾ ಪ್ರೋತ್ಸಾಹಕರಾದ ಶಾಸಕ ವಾಸು ಅವರನ್ನು ಅಭಿನಂದಿಸಲಾಯಿತು. ಮೈಸೂರು ವಿವಿ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ರಾಷ್ಟ್ರೀಯ ಕ್ರೀಡಾಪಟು ಯು.ಎನ್. ಪದ್ಮನಾಭರಾವ್, ಸ್ವಾಗತ ಸಮಿತಿ ಅಧ್ಯಕ್ಷ ಚಂದ್ರಶೇಖರಯ್ಯ ಇದ್ದರು. ಅಭಿನಂದನಾ ಸಮಿತಿ ಸದಸ್ಯ ಡಾ.ಸಿ. ಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಜ್ ನಿರೂಪಿಸಿದರು. ಅತಿಶಯ ಜೈನ್ ಪ್ರಾರ್ಥಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

