ಪತ್ರಕರ್ತರ ಸುರಕ್ಷಾನಿಧಿಗೆ 10001 ದೇಣಿಗೆ
ಕ.ಪ್ರ.ವಾರ್ತೆ ಮೈಸೂರು ಜು. 14
ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದಿಂದ ಮೈಸೂರು ಜಿಲ್ಲಾ ಪತ್ರಕರ್ತರ ಸುರಕ್ಷಾ ನಿಧಿಗೆ 10001 ದೇಣಿಗೆ ನೀಡುವುದಾಗಿ ವಿಭಾಗದ ನಿರ್ದೇಶಕ ಡಾ.ಸಿ. ಕೃಷ್ಣ ಹೇಳಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ನಗರದ ಓವಲ್ ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ ಪತ್ರಕರ್ತರ ಕ್ರೀಡಾಕೂಟ ಸಮಾರೋಪ ಸಮಾರಂಭದಲ್ಲಿ ಅತಿಥಿಯಾಗಿ ಮಾತನಾಡಿ, ದಿನನಿತ್ಯ ಸುದ್ದಿ ಸಂಗ್ರಹಿಸುವಲ್ಲೆ ಕಾರ್ಯನಿರತರಾಗಿರುವ ಪತ್ರಕರ್ತರಿಗೆ ಸುರಕ್ಷತೆ ಎಂಬುದು ಇರುವುದಿಲ್ಲ. ಒಂದು ವೇಳೆ ಏನಾದರೂ ಅವಘಡ ಸಂಭವಿಸಿದರೆ ವೆಚ್ಚ ಭರಿಸಲಾರದಷ್ಟು ಅಸಹಾಯಕರಾಗಿರುತ್ತಾರೆ. ಅಂತಹ ಪತ್ರಕರ್ತರಿಗೆ ಅನುಕೂಲವಾಗುವಂತೆ ಈ ದೇಣಿಗೆ ನೀಡಲಾಗುವುದು ಎಂದರು.
ಇಂದಿನ ದಿನಗಳಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ಕ್ರೀಡಾಕೂಟವನ್ನು ವಾರ್ಷಿಕವಾಗಿ ನಡೆಸುವ ಸಂಪ್ರದಾಯ ಕೊನೆಯಾಗಬೇಕು. ಪ್ರತಿದಿನ ಕ್ರೀಡಾ ಚಟುವಟಿಕೆ ಏರ್ಪಡಿಸಿ ಶಾರೀರಿಕ ಆರೋಗ್ಯ ಹೊಂದಬೇಕು. ಮಕ್ಕಳು ಶಿಕ್ಷಣ ಜತೆಗೆ ಕ್ರೀಡೆಯಲ್ಲಿಯೂ ತೊಡಗುವಂತೆ ಪೋಷಕರು ನೋಡಿಕೊಳ್ಳಬೇಕು. ಪಾಠದೊಂದಿಗೆ ಶಿಸ್ತನ್ನು ಮೈಗೂಡಿಸಿಕೊಳ್ಳಲು ತಿಳಿ ಹೇಳಬೇಕು ಎಂದು ಸಲಹೆ ಮಾಡಿದರು. ಕೃಷ್ಣರಾಜ ಕ್ಷೇತ್ರದ ಶಾಸಕ ಎಂ.ಕೆ. ಸೋಮಶೇಖರ್ ಮಾತನಾಡಿ, ಪತ್ರಕರ್ತರಿಗೆ ಉಚಿತ ಬಸ್ ಪಾಸ್ ವ್ಯವಸ್ಥೆ, ಆರೋಗ್ಯ ವಿಮೆ ಮಾಡಿಸಿಕೊಡುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುತ್ತೇನೆ ಎಂದು ಭರವಸೆ ನೀಡಿದರು.
ಇದೇ ವೇಳೆ ಅಂತಾರಾಷ್ಟ್ರೀಯ ಟೆನ್ನಿಸ್ ರೆಫರಿ ಸಾಗರ್ ಕಶ್ಶಪ್ ಹಾಗೂ ರಾಷ್ಟ್ರೀಯ ಅಥ್ಲೀಟ್ ಬಿ.ಬಿ. ಸುಮಯ ಅವರನ್ನು ಸನ್ಮಾನಿಸಲಾಯಿತು. ಹಾಗೆ ಎರಡು ದಿನಗಳಲ್ಲಿ ನಡೆದ ವಿವಿಧ ಕ್ರೀಡೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ. ಮಹೇಂದ್ರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ಪ್ರಗತಿ ಗೋಪಾಲಕೃಷ್ಣ, ಭೇರ್ಯ ಮಹೇಶ್, ಕಾರ್ಯದರ್ಶಿಗಳಾದ ಎಂ. ಸುಬ್ರಹ್ಮಣ್ಯ, ಕೆ.ಪಿ. ಮಹದೇವಸ್ವಾಮಿ, ಪ್ರಧಾನ ಕಾರ್ಯದರ್ಶಿ ಕೆ. ದೀಪಕ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

