ಮೈಸೂರು

ಬೇಡಿಕೆ ಈಡೇರಿಕೆಗೆ ಇಂದಿನಿಂದ ರೈತರ ಪ್ರತಿಭಟನೆ

Published On :

ಕ.ಪ್ರ.ವಾರ್ತೆ   ಮೈಸೂರು   ಜು. 15
ರೈತರಿಗೆ ಕಬ್ಬಿನ ಬಾಕಿ ಹಣವನ್ನು ಕೂಡಲೇ ನೀಡಬೇಕು ಮತ್ತು ಈ ಸಾಲಿಗೆ ಪ್ರತಿ ಟನ್ ಕಬ್ಬಿಗೆ 3 ಸಾವಿರ ಬೆಲೆ ನಿಗದಿಪಡಿಸಬೇಕು ಎಂದು ಒತ್ತಾಯಿಸಿ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯ ಎಲ್ಲಾ ಶಾಖಾ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನಿರ್ಧರಿಸಿದೆ.
ನಂಜನಗೂಡು ತಾಲೂಕು ಅಳಗಂಚಿ ಸಮೀಪದ ಕಾರ್ಖಾನೆ ಆವರಣದಲ್ಲಿ ಸೋಮವಾರ ಸಭೆ ನಡೆಸಿದ ರೈತ ಮುಖಂಡರು ಈ ತೀರ್ಮಾನ ಕೈಗೊಂಡಿದ್ದಾರೆ.
2011-12 ಮತ್ತು 2012-13ನೇ ಸಾಲಿನಲ್ಲಿ ಬಣ್ಣಾರಿ ಸಕ್ಕರೆ ಕಾರ್ಖಾನೆಯು ಅರೆದ ಕಬ್ಬಿಗೆ ಇಳುವರಿ ಆಧಾರದ ಮೇಲೆ ಲೆಕ್ಕಹಾಕಿ ಬಾಕಿ ನೀಡಬೇಕು. 2013-14ನೇ ಸಾಲಿನಲ್ಲಿ ಅರೆಯುವ ಕಬ್ಬಿಗೆ ಟನ್ ಒಂದಕ್ಕೆ 3 ಸಾವಿರ ಮುಂಗಡ ಹಣ ನಿಗದಿಪಡಿಸಬೇಕು. ಈ ಎಲ್ಲಾ ಬೇಡಿಕೆ ಈಡೇರುವವರೆಗೆ ಜು.16ರಿಂದಲೆ ಕಾರ್ಖಾನೆಯ ಎಲ್ಲಾ ಶಾಖಾ ಕಚೇರಿಗೆ ಬೀಗ ಹಾಕಿ ಧರಣಿ ನಡೆಸುವುದು ಮತ್ತು ಕಾರ್ಖಾನೆ ಮುಂದೆ ಸತ್ಯಾಗ್ರಹ ನಡೆಸಲು ಸಭೆ ತೀರ್ಮಾನಿಸಿದೆ.
ಕಾರ್ಖಾನೆ ಇರುವ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳೂ ಆದ ಸಿದ್ದರಾಮಯ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಶ್ರೀನಿವಾಸಪ್ರಸಾದ್ ಅವರು ಕೂಡಲೇ ಮಧ್ಯೆ ಪ್ರವೇಶಿಸಿ ಹಳೆ ಬಾಕಿ ಪಾವತಿಯನ್ನು ಕೂಡಿಸಲು ಮತ್ತು ಈ ಸಾಲಿನಲ್ಲಿ ಅರೆಯುವ ಕಬ್ಬಿಗೆ ಟನ್ ಒಂದಕ್ಕೆ 3 ಸಾವಿರ ನಿಗದಿಮಾಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಮುಂದೆ ಉತ್ತರ ಕರ್ನಾಟಕ ಮಾದರಿಯಲ್ಲಿ ಬೆಲೆ ನಿಗದಿ ಮಾಡಬೇಕು. ಸಕ್ಕರೆ ಕಾರ್ಖಾನೆಯು ಏಕಪಕ್ಷೀಯವಾಗಿ ಮುದ್ರಿಸಿಕೊಂಡ ಕರಾರನ್ನು ಕೈಬಿಟ್ಟು ದ್ವಿಪಕ್ಷೀಯ ಒಪ್ಪಂದ ಮಾಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಭೆ ಒತ್ತಾಯಿಸಿದೆ.
ಸಭೆಯಲ್ಲಿ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ, ಮುಖಂಡರಾದ ಎಂ.ಎಸ್. ಅಶ್ವಥ ನಾರಾಯಣರಾಜೇ ಅರಸ್, ಕೆ.ಎಂ. ಪುಟ್ಟಸ್ವಾಮಿ, ಹೊಸಕೋಟೆ ಬಸವರಾಜು, ಎ.ಎಂ. ಮಹೇಶ್, ಪ್ರಭು, ಸಿದ್ದರಾಜ್, ಬೂದಿತಿಟ್ಟು ಗುರುಸ್ವಾಮಿ, ಗುರುಲಿಂಗೇಗೌಡ, ವಿದ್ಯಾಸಾಗರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.