ಮೈಸೂರು

ದುರಸ್ತಿ ನೆಪ: ನಾಲೆಗಳಿಗೆ ಹರಿಯದ ನೀರು

Published On :

ಕೆ.ಆರ್. ನಗರ: ನಾಲೆಗಳ ದುರಸ್ತಿಯ ನೆಪವೊಡ್ಡಿ ನೀರು ಹರಿಸದೆ ಕೇವಲ ಪೂಜೆ ಮಾಡಿ ನೀರು ಹರಿಸುವುದನ್ನು ಮುಂದೂಡಿದ್ದ ಪ್ರಸಂಗ ಸೋಮವಾರ ನಡೆದಿದೆ.
ಜು.22 ರಂದು ತಾಲೂಕು ವ್ಯಾಪ್ತಿಯ ರಾಮಸಮುದ್ರ, ಚಾಮರಾಜ ಮತ್ತು ಮಿರ್ಲೆ ಶ್ರೇಣಿ ನಾಲೆಗಳಿಗೆ ಕಾವೇರಿ ನದಿಯಿಂದ ನೀರು ಹರಿಸಲಾಗುತ್ತದೆ ಎಂದು ಎರಡು ದಿನಗಳ ಹಿಂದೆಯೇ ಶಾಸಕ ಸಾ.ರಾ. ಮಹೇಶ್ ಪ್ರಕಟಿಸಿದ್ದರು. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಶಾಸಕರು ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಲು ಆಗಮಿಸಲಿರಲಿಲ್ಲ. ಆದ್ದರಿಂದ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳೆ ಸೋಮವಾರ ಬೆಳಗ್ಗೆ ತಾಲೂಕಿನ ಬಳ್ಳೂರು ಅಣೆಕಟ್ಟೆಯ ಬಳಿ ನೀರು ಹರಿಸುವ ಕಾರ್ಯಕ್ಕೆ ಪೂಜೆ ಸಲ್ಲಿಸಿದರಾದರೂ ನೀರು ಹರಿಸಲಿಲ್ಲ.
ತಿಂಗಳ ಹಿಂದೆಯೇ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಸಭೆ ಕರೆದಿದ್ದ ಶಾಸಕರು ಜು.20ರಂದು ನಾಲೆಗಳಿಗೆ ನೀರು ಹರಿಸಬೇಕಿರುವುದರಿಂದ ಹೊಸದಾಗಿ ಕಾಮಗಾರಿ ಆರಂಭಿಸದೆ ಈಗ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಿ ಎಂದು ಸೂಚನೆ ನೀಡಿದ್ದರು.
ಪೂಜೆ ಅವಶ್ಯಕತೆ ಇತ್ತೆ?: ಶಾಸಕರ ಮಾತನ್ನು ದಿಕ್ಕರಿಸಿ ಕಾಮಗಾರಿ ಮುಂದುವರಿಸಿದ್ದ ಗುತ್ತಿಗೆದಾರ ಮತ್ತು ಅಧಿಕಾರಿಗಳ ಅಸಡ್ಡೆಯಿಂದ ನಾಲೆಗಳಿಗೆ ನೀರು ಹರಿಯದೆ ತೊಂದರೆಯಾಗಿದ್ದು, ಕಾವೇರಿ ನದಿ ತುಂಬಿ ಹರಿಯುತ್ತಿದ್ದರೂ ರೈತರ ಜಮೀನುಗಳಿಗೆ ನೀರು ಇಲ್ಲದಂತಾಗಿದೆ. ನೀರು ಹರಿಸದ ಮೇಲೆ ಪೂಜೆ ಸಲ್ಲಿಸುವ ಅವಶ್ಯಕತೆಯಿತ್ತೆ ಎಂಬುದು  ಪ್ರಶ್ನೆಯಾಗಿದೆ.
ಈ ಬಗ್ಗೆ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಇನ್ನೂ ಸಣ್ಣಪುಟ್ಟ ಕಾಮಗಾರಿಗಳು  ಮುಗಿದಿಲ್ಲ. ಇನ್ನು ನಾಲ್ಕು ದಿನಗಳ ನಂತರ ನಾಲೆಗಳಿಗೆ ನೀರು ಹರಿಸಲಾಗುತ್ತದೆ ಎಂಬ ಹಾರಿಕೆ ಉತ್ತರ ನೀಡಿದರು.
ರೈತ ಮುಖಂಡರ ಖಂಡನೆ: ಈಗಾಗಲೇ ನಾಲೆಗಳಿಗೆ ನೀರು ಹರಿಸುವ ಕಾರ್ಯ ವಿಳಂಬವಾಗಿದ್ದು, ಇದರಿಂದ ರೈತರಿಗೆ ತೊಂದರೆಯಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಬಾರಿಯು ಬತ್ತದ ಬೆಳೆಗೆ ತೊಂದರೆಯಾಗಲಿದ್ದು, ನೀರು ಹರಿಸದೆ ಪೂಜೆ ಸಲ್ಲಿಸಿರುವುದು ಮೂರ್ಖತನದ ಪರಮಾವಧಿ ಎಂದು ತಾಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಸುನಯ್‌ಗೌಡ ಆರೋಪಿಸಿದ್ದಾರೆ.
ರೈತರು ನಾಲೆಗಳಿಗೆ ನೀರು ಬರುತ್ತದೆ ಎಂಬ ನಿರೀಕ್ಷೆಯಲ್ಲಿ ಬತ್ತದ ಸಸಿ ಮಡಿಗಳನ್ನು ಮಾಡಿಕೊಂಡಿದ್ದು, ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಆದರೆ ಅಧಿಕಾರಿಗಳ ಈ  ಹೊಣೆಗೇಡಿತನದಿಂದ ಮತ್ತಷ್ಟು ಸಂಕಷ್ಟ ಎದುರಾಗಿದ್ದು, ಚುನಾಯಿತ ಜನಪ್ರತಿನಿಧಿಗಳ ಅಸಡ್ಡೆಯೆ ಇದಕ್ಕೆ ಕಾರಣ ಎಂದು ದೂರಿದರು.
ಕೂಡಲೇ ನಾಲೆಗಳಿಗೆ ನೀರು ಹರಿಸದಿದ್ದಲ್ಲಿ ಅಧಿಕಾರಿಗಳ ರೈತ ವಿರೋಧಿ ನೀತಿಯನ್ನು ಖಂಡಿಸಿ ಜಲಸಂಪನ್ಮೂಲ ಇಲಾಖೆಯ ಕಚೇರಿಗೆ ರೈತರೊಡಗೂಡಿ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.