ತಂಬಾಕು ಬೆಳೆಗಾರರಿಗೆ ಸಾಲನೀಡಿ: ವಿಶ್ವನಾಥ್
ಮೈಸೂರು: ಪಿರಿಯಾಪಟ್ಟಣ, ಹುಣಸೂರು, ಕೆ.ಆರ್. ನಗರ, ಎಚ್.ಡಿ. ಕೋಟೆ, ರಾಮನಾಥಪುರ ಭಾಗದ ತಂಬಾಕು ಬೆಳೆಗಾರರಿಗೆ ತಕ್ಷಣ ಸಾಲ ನೀಡುವಂತೆ ಸಂಸದ ಎಚ್. ವಿಶ್ವನಾಥ್ ಅವರು ವಿವಿಧ ಬ್ಯಾಂಕುಗಳ ವ್ಯವಸ್ಥಾಪಕರು, ಅಧೀನ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ. ಈಗಾಗಲೇ ಹೊಗೆಸೊಪ್ಪಿನ ಕ್ಯೂರಿಂಗ್ ಪ್ರಾರಂಭವಾಗಿದೆ. ಈ ಬಾರಿ ಒಳ್ಳೆಯ ಬೆಳೆಯಾಗಿದೆ. ರೈತರು ಒಳ್ಳೆಯ ಬೆಲೆ ನಿರೀಕ್ಷೆಯಲ್ಲಿದ್ದಾರೆ. ರೈತರಿಗೆ ಉತ್ತಮ ಬೆಲೆ ಕೊಡಿಸುವ ಪ್ರಯತ್ನದಲ್ಲಿ ಚಾಮರಾಜನಗರ ಸಂಸದ ಆರ್. ಧ್ರುವನಾರಾಯಣ್ ಜತೆಗೂಡಿ ರೈತರ ಹಿತ ಕಾಪಾಡಲು ಪ್ರಯತ್ನಿಸುತ್ತೇನೆ. ರೈತರು ತಾವು ಬೆಳೆದಿರುವ ಹೊಗೆಸೊಪ್ಪನ್ನು ಹದ ಮಾಡಲು ಸೌದೆ, ಗ್ರೇಡಿಂಗ್ ಮಾಡಲು, ಕಾರ್ಮಿಕರಿಗೆ ನೀಡಲು ಸಂಬಳವಿಲ್ಲದೆ ಸಂಕಷ್ಟದಲ್ಲಿದ್ದಾರೆ. ಬ್ಯಾಂಕುಗಳು ನೀಡುವ ಸಾಲವನ್ನು ಮರುಪಾವತಿಸುತ್ತಾರೆ ಎಂದಿದ್ದಾರೆ.
ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
ಮೈಸೂರು: ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ವೀರಶೈವ ಮಠಾಧಿಪತಿಗಳ ಗೋಷ್ಠಿಯು ಉಭಯ ಜಿಲ್ಲೆಯ ಪ್ರತಿಭಾವಂತ ವೀರಶೈವ ಬಡ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲು ಅರ್ಜಿ ಆಹ್ವಾನಿಸಿದೆ. 2012-13ನೇ ಶೈಕ್ಷಣಿಕ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿ ತೇರ್ಗಡೆಯಾದ ಪ್ರತಿಭಾವಂತ ವೀರಶೈವ ಬಡ ವಿದ್ಯಾರ್ಥಿಗಳು ಆಗಸ್ಟ್ 10ರೊಳಗೆ ಅರ್ಜಿಯನ್ನು ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ವೀರಶೈವ ಮಠಾಧಿಪತಿಗಳ ಗೋಷ್ಠಿ, ಜೆಎಸ್ಎಸ್ ಮಹಾವಿದ್ಯಾಪೀಠ, ಜಗದ್ಗುರು ಡಾ. ಶ್ರೀ ಶಿವರಾತ್ರಿರಾಜೇಂದ್ರ ವೃತ್ತ, ಮೈಸೂರು- 18 ಇಲ್ಲಿಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗೆ ದೂ. 2548211 ಸಂಪರ್ಕಿಸಬಹುದು.
ಜಿಲ್ಲಾ ಮಟ್ಟದ ಖೋ ಖೋ
ಮೈಸೂರು: ಮೈಸೂರು ಜಿಲ್ಲಾ ಖೋ ಖೋ ಸಂಘವು ಜು.27 ಮತ್ತು 28ರಂದು ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾವಳಿಯನ್ನು ನಗರದ ಲಕ್ಷ್ಮೀಪುರಂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಏರ್ಪಡಿಸಿದೆ. ಅಂದು 14 ಮತ್ತು 17 ವರ್ಷದೊಳಗಿನ ಬಾಲಕ, ಬಾಲಕಿಯರ ಖೋ ಖೋ ಪಂದ್ಯಾವಳಿ ಆಯೋಜಿಸಿದೆ. ಹೆಚ್ಚಿನ ಮಾಹಿತಿಗೆ ಮೊ. 9731930620 ಸಂಪರ್ಕಿಸಬಹುದು ಎಂದು ಸಂಚಾಲಕ ಪಿ. ಚಂದ್ರಶೇಖರ ತಿಳಿಸಿದ್ದಾರೆ.
ಸೇತುವೆ ಪುನರ್ ನಿರ್ಮಾಣಕ್ಕೆ ಆಕ್ಷೇಪ
ಕಿತ್ತೂರು: ಗ್ರಾಮದ ಶಾಸಕರ ನಿವಾಸಕ್ಕೆ ತೆರಳುವ ರಸ್ತೆಯಲ್ಲಿ ಸುಸ್ಥಿತಿಯಲ್ಲಿದ್ದ ಸೇತುವೆಯನ್ನು ಯಾವುದೆ ಅನುಮತಿಯಿಲ್ಲದೆ ಶಾಸಕರು ಹೇಳಿದ್ದಾರೆ ಎಂದು ಗುತ್ತಿಗೆದಾರ ಒಡೆದು ಹಾಕಿ, ಪುನರ್ ನಿರ್ಮಾಣ ಮಾಡುತ್ತಿರುವುದು ಸರಿಯಲ್ಲ ಎಂದು ಬಿಜೆಪಿ ಹಿರಿಯ ಮುಖಂಡ ಕೆ.ಎಂ. ನಾಗರಾಜ್ ಹೇಳಿದ್ದಾರೆ. ಗ್ರಾಪಂ, ತಾಪಂ, ಜಿಪಂ ಹಾಗೂ ಇಲಾಖೆಗೆ ತಿಳಿಸದೆ ಅನುಮತಿ ಪಡೆಯದೆ ಏಕಾಏಕಿ ಚೆನ್ನಾಗಿರುವ ಸೇತುವೆಯನ್ನು ಕೆಡವಿ ಸಾರ್ವಜನಿಕರಿಗೆ ತಿರುಗಾಡಲು ತೊಂದರೆ ನೀಡುವುದರ ಜತೆಗೆ, ಸಾರ್ವಜನಿಕರ ಹಣವನ್ನು ಪೋಲು ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಈಗಾಗಲೇ ಮುಖ್ಯಮಂತ್ರಿಗಳು, ಗೃಹ ಸಚಿವರು, ಎಸ್ಪಿ ಎಲ್ಲರಿಗೂ ದೂರು ನೀಡಲಾಗಿದೆ. ಆದ್ದರಿಂದ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಿದ್ದಾರೆ.
ಎಸ್ಡಿಎಂಸಿಗೆ ಆಯ್ಕೆ
ಕೆ.ಆರ್. ನಗರ: ಇಲ್ಲಿನ ಶ್ರೀಕೃಷ್ಣರಾಜೇಂದ್ರ ಬಾಲಕರ ಸರ್ಕಾರಿ ಕಿರಿಯ ಕಾಲೇಜಿನ ಪ್ರೌಢಶಾಲಾ ವಿಭಾಗದ 2013-14ನೇ ಸಾಲಿನ ನೂತನ ಶಾಲಾಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿ ರಚನೆ ಮಾಡಲಾಗಿದೆ. ಎಂ.ಜೆ. ರಮೇಶ್ (ಅಧ್ಯಕ್ಷರು), ಬಿ.ಎನ್. ಮಹದೇವ್ (ಉಪಾಧ್ಯಕ್ಷರು), ವೀರಪ್ಪಾಚಾರ್, ಉಮೇಶ್, ವೆಂಕಟೇಶ್, ಕಲಾವತಿ, ಮೇರಿ, ತಬಸಂ ಮತ್ತು ಮಂಜುಳಾ (ಸದಸ್ಯರು), ಪ್ರೌಢಶಾಲೆಯ ಉಪಪ್ರಾಂಶುಪಾಲರು ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.
ಪಿಜಿ ಪ್ರವೇಶಕ್ಕೆ ಅರ್ಜಿ
ಕೆ.ಆರ್. ನಗರ: ಕೆ.ಆರ್. ನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2013-14ನೇ ಸಾಲಿನ ಕನ್ನಡ ಎಂಎ ಹಾಗೂ ಎಂಎಸ್ಡಬ್ಲ್ಯೂ ಸ್ನಾತಕೋತ್ತರ ಕೋರ್ಸುಗಳ ಪ್ರವೇಶಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಭರ್ತಿ ಮಾಡಿದ ಅರ್ಜಿಗಳನ್ನು ಆ.5 ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂ. 08223- 2262334, 99026 35069, 94497 76387 ಸಂಪರ್ಕಿಸಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

