ಮೈಸೂರು

ರೈತ ಸಂಜೀವಿನಿ ಯೋಜನೆಯಲ್ಲಿ ನೆರವು

Published On :

ಹುಣಸೂರು: ಸರ್ಕಾರದ ಯೋಜನೆಗಳನ್ನು ಅಧಿಕಾರಿಗಳು ಕಾರ್ಯರೂಪಕ್ಕೆ ತರುವ ಮೂಲಕ ಕೃಷಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಿ, ರೈತರ ಆರ್ಥಿಕ ಮಟ್ಟ ಸುಧಾರಿಸಲು ಯೋಜನೆಗಳ ಬಗ್ಗೆ ಅರಿವು ಮೂಡಿಸುವಂತೆ ಎಪಿಎಂಸಿ ಅಧ್ಯಕ್ಷ ಈರಣ್ಣ ಕರೆ ನೀಡಿದರು. ದನಗಳನ್ನು ತೊಳೆಯುವಾಗ ಆಕಸ್ಮಿಕವಾಗಿ ಕೆರೆಯ ನೀರಿನಲ್ಲಿ ಮುಳುಗಿ ಮೃತಪಟ್ಟ ತಾಲೂಕಿನ ಶ್ಯಾನುಭೋಗನಹಳ್ಳಿ ಗ್ರಾಮದ ಎಸ್.ಆರ್. ಯೋಗೇಶ್ ಅವರ ಪತ್ನಿ ಸವಿತಾ ಅವರಿಗೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ರೈತ ಸಂಜೀವಿನಿ ಯೋಜನೆಯಡಿ 50 ಸಾವಿರ ಪರಿಹಾರದ ಚೆಕ್ ವಿತರಿಸಿ ಮಾತನಾಡಿದರು. ಎಪಿಎಂಸಿ ಕಾರ್ಯದರ್ಶಿ ಸುರೇಶ್‌ಬಾಬು, ಸದಸ್ಯರಾದ ಕಲ್ಕುಣಿಕೆ ಮಹದೇವ್, ಮಹದೇವ್, ಮುಖಂಡ ಶೇಖರೇಗೌಡ ಹಾಗೂ ಗ್ರಾಮಸ್ಥರು ಇದ್ದರು.

ಶಿಕ್ಷಣದಿಂದ ದೇಶದ ಪ್ರಗತಿ: ರಾಜಶೇಖರ್
ಹುಣಸೂರು:
ಪ್ರಸ್ತುತ ವ್ಯವಸ್ಥೆಯಲ್ಲಿ ಸಮಾಜದ ಪ್ರತಿಯೊಬ್ಬರು ಶಿಕ್ಷಣ ಪಡೆದಾಗ ಮಾತ್ರ ಗ್ರಾಮೀಣಾಭಿವೃದ್ಧಿ ಮೂಲಕ ದೇಶದ ಪ್ರಗತಿ ಕಾಣಲು ಸಾಧ್ಯ ಎಂದು ರೋಟರಿ ಕ್ಲಬ್ ಅಧ್ಯಕ್ಷ ರಾಜಶೇಖರ್ ಅಭಿಪ್ರಾಯಪಟ್ಟರು. ತಾಲೂಕಿನ ವಡ್ಡಂಬಾಳು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಕೆ.ಎಂ. ವಾಡಿಯ ಮಾರಿಸ್ಪೀನ್ನರ್, ಕರ್ಣಾಟಕ ಬ್ಯಾಂಕ್ ಹುಣಸೂರು ಶಾಖೆಯ ಸಹಕಾರದೊಂದಿಗೆ ರೋಟರಿ ಸಂಸ್ಥೆ ವತಿಯಿಂದ ಉಚಿತವಾಗಿ ನೋಟ್ ಪುಸ್ತಕ ವಿತರಣೆ ಮಾಡಿ ಮಾತನಾಡಿದರು. ರೋಟರಿ ಮಾಜಿ ಅಧ್ಯಕ್ಷೆ ಡಾ. ಸರೋಜಿನಿ ವಿಕ್ರಂ, ಪುರಸಭೆ ಸದಸ್ಯೆ ಸುನೀತಾ ಜಯರಾಮೇಗೌಡ ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜು ಅಧ್ಯಕ್ಷತೆ ವಹಿಸಿದ್ದರು. ಕರ್ಣಾಟಕ ಬ್ಯಾಂಕ್ ಶಾಖೆಯ ವ್ಯವಸ್ಥಾಪಕ ಸುಧಾಕರ್, ರೋಟರಿ ಸಂಸ್ಥೆ ಸದಸ್ಯರಾದ ಸ್ವಾಮಿಗೌಡ, ಅನಂತರಾಜೇ ಅರಸ್, ಪಾಂಡುಕುಮಾರ್, ಗ್ರಾಪಂ ಸದಸ್ಯ ಕೃಷ್ಣಚಾರ್, ಹನುಮಂತ್ ಇದ್ದರು. ಮುಖ್ಯ ಶಿಕ್ಷಕಿ ಉಮಾ ಸ್ವಾಗತಿಸಿದರು. ಶಿಕ್ಷಕಿ ಚೈತ್ರ ನಿರೂಪಿಸಿದರು.

ಹಕ್ಕುಪತ್ರಕ್ಕೆ ಮನವಿ
ಹುಣಸೂರು:
ಜಿಲ್ಲೆಯ ಆದಿವಾಸಿ ಹಾಡಿಗಳಿಗೆ ಅನುಸೂಚಿತ ಬುಡಕಟ್ಟುಗಳ ಹಾಗೂ ಇತರೆ ಪಾರಂಪರಿಕ ಅರಣ್ಯವಾಸಿಗಳ ಅರಣ್ಯ ಹಕ್ಕುಗಳ ಮಾನ್ಯತಾ ಕಾಯಿದೆ 2006ರ ಅನ್ವಯ ಹಕ್ಕುಪತ್ರ ನೀಡುವಂತೆ ಗಿರಿಜನ ಕ್ರಿಯಾಕೂಟ, ರಾಜ್ಯ ಮೂಲನಿವಾಸಿಗಳ ವೇದಿಕೆ ಜಿಲ್ಲಾಧಿಕಾರಿ ಅವರಲ್ಲಿ ಮನವಿ ಮಾಡಿದೆ. ಜಿಲ್ಲಾಧಿಕಾರಿಗಳು ತಮ್ಮ ಅವಧಿಯಲ್ಲಿ ಜಿಲ್ಲೆಯ 215 ಹಾಡಿಗಳಿಗೂ ಸಾಮೂಹಿಕ ಅರಣ್ಯ ಹಕ್ಕುಪತ್ರಗಳನ್ನು ಅರಣ್ಯ ಹಕ್ಕುಗಳ ಸಮಿತಿಯು ಮೂಲಕ ನೀಡಬೇಕು. ಈ ಸಂಬಂಧ ಹಕ್ಕುಪತ್ರಗಳಿಗೆ ಪ್ರಸ್ತಾವನೆ ಸಲ್ಲಿಸಿ 3 ವರ್ಷಗಳೇ ಕಳೆದಿವೆ. ಕೇವಲ 19 ಹಾಡಿಗಳಿಗೆ ಮಾತ್ರ ಸಾಮೂಹಿಕ ಅರಣ್ಯ ಹಕ್ಕುಗಳಿಗೆ ಹಕ್ಕುಪತ್ರ ನೀಡಲಾಗಿದೆ. ಮಿಕ್ಕ ಎಲ್ಲಾ ಪ್ರಸ್ತಾವನೆಗಳೂ ಹಾಗೆ ಉಳಿದಿವೆ ಎಂದು ಡೀಡ್ ಶ್ರೀಕಾಂತ್ ತಿಳಿಸಿದ್ದಾರೆ.

ನಿವೇಶನ ಅತಿಕ್ರಮ
ಹುಣಸೂರು:
ತಾಲೂಕಿನ ಹರಳಹಳ್ಳಿ ಹಾಡಿಗೆ ಹೊಂದಿಕೊಂಡಂತೆ ಹಾಡಿಯಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ಗ್ರಾಪಂನಿಂದ ನಿವೇಶನ ಪಡೆದುಕೊಳ್ಳಲಾಗಿದೆ. ಆದರೆ, ಅದೇ ಗ್ರಾಮದ ಜೇನುಕುರುಬ ಮುಖಂಡರು ನಮಗೆ ತೊಂದರೆ ನೀಡುತ್ತಿದ್ದಾರೆ ಎಂದು ಸದಸ್ಯರು ಆರೋಪಿಸಿದ್ದಾರೆ. ಈ ನಿವೇಶನ ಹಕ್ಕಿನ ಬಗ್ಗೆ ನ್ಯಾಯಾಲಯ ಸ್ಪಷ್ಟ ಆದೇಶ ನೀಡಿದೆ. ಇಷ್ಟಾದರೂ ಜೇನುಕುರುಬ ಮುಖಂಡರಾದ ಬಸವಯ್ಯ ಗುಂಪು ಕಟ್ಟಿಕೊಂಡು ಬಂದು ಕಿರುಕುಳ ನೀಡಿ ನಿವೇಶನ ಅತಿಕ್ರಮಿಸಿಕೊಂಡಿದ್ದಾರೆ. ಈ ಬಗ್ಗೆ ಕೇಳಿದರೆ ಜಾತಿನಿಂದನೆ ಕೇಸು ದಾಖಲಿಸುವುದಾಗಿ ಹೆದರಿಸುತ್ತಾರೆ. ಇವರ ಕಿರುಕುಳ ಅತಿಯಾಗಿದೆ. ಆದ್ದರಿಂದ ತಮಗೆ ರಕ್ಷಣ ನೀಡುವಂತೆ ಪಿ. ಮಾದೇಗೌಡ, ರವಿಗೌಡ, ಜಡಿಯಯ್ಯ, ಬೊಳ್ಳಯ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಲ್ಲಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.