ಮಾನವೀಯ ನೆಲೆಯಲ್ಲಿ ನೆರವು ಕಲ್ಪಿಸಿ
ಕ.ಪ್ರ.ವಾರ್ತೆ ಮೈಸೂರು ಜು. 26
ಅಂಗವಿಕಲರಿಗೆ ಮಾನವೀಯ ನೆಲೆಯಲ್ಲಿ ನೆರವು ಕಲ್ಪಿಸುವುದು ಅಗತ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮೋಹನ್ ಶ್ರೀಪಾದ ಸಂಕೊಳ್ಳಿ ಹೇಳಿದರು.
ಮೈಸೂರು ನಗರ ಪಾಲಿಕೆ ಹಾಗೂ ಜೆಎಸ್‌ಎಸ್ ಅಂಗವಿಕಲರ ಪಾಲಿಟೆಕ್ನಿಕ್ ಸಂಯುಕ್ತಾಶ್ರಯದಲ್ಲಿ ಎಸ್‌ಜೆಸಿಇ ಆವರಣದಲ್ಲಿರುವ ಸಂಸ್ಥೆಯ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಅಂಗವಿಕಲ ವ್ಯಕ್ತಿಗಳ (ಸಮಾನ ಅವಕಾಶ, ಹಕ್ಕುಗಳ ಸಂರಕ್ಷಣೆ ಮತ್ತು ಪೂರ್ಣ ಭಾಗವಹಿಸುವಿಕೆ) ಅಧಿನಿಯಮ 1995 ಕುರಿತ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾನೂನು ಪ್ರಾಧಿಕಾರ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳು ಅಂಗವಿಕಲರಿಗೆ ಕಾನೂನು ಅರಿವಿನ ಜತೆಗೆ ಆರ್ಥಿಕ ಹಾಗೂ ಸಾಮಾಜಿಕ ನೆರವು ನೀಡುವ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಯಾವುದೇ ಅಂಗವಿಕಲರಿಗೆ ಕಾನೂನು ಹೊರತಾಗಿ ಮಾನವೀಯ ನೆಲೆಯಲ್ಲಿ ಸಹಾಯ ಮಾಡುವ ಅಗತ್ಯವಿದೆ. ಹೀಗಾಗಿ ಸಮಾಜ ಅವರಿಗೆ ಸಬಲತೆ ತಂದುಕೊಡಬೇಕು ಎಂದರು.
ಪ್ರತಿಭೆ ಮೆರೆದಿದ್ದಾರೆ: ಅಂಗವೈಕಲ್ಯ ಎಂಬುದು ಇತರರಿಗಿಂತ ಭಿನ್ನವಾಗಿದ್ದರೂ ಸಹ ಬಹುಸಾಧನೆ ಮಾಡಿದವರು ಅನೇಕ ಮಂದಿ ಇದ್ದಾರೆ. ಜ್ಞಾನಾರ್ಜನೆಯಲ್ಲೂ ಸಹ ತಮ್ಮ ಪ್ರತಿಭೆಯನ್ನು ಮೆರೆದವರಿದ್ದಾರೆ. ಇಂಥವರಲ್ಲಿ ಇರುವುದು ಕೇವಲ ಅಂಗವೈಕಲ್ಯ ಹೊರತು ಬೇರೇನೂ ಅಲ್ಲ ಎಂದು ತಿಳಿಸಿದರು.
ಹಿಮಾಲಯ ಪರ್ವತ ಏರಿದ ಮಹಿಳೆ ಹಾಗೂ ಪ್ಯಾರಾ ಒಲಿಂಪಿಕ್ಸ್‌ನ ಕ್ರೀಡೆಯಲ್ಲಿ ಸಾಧನೆ ಮಾಡಿರುವ ಅಂಗವಿಕಲ ಕ್ರೀಡಾ ಪಟುಗಳನ್ನು ಈ ಸಂದರ್ಭದಲ್ಲಿ ಸ್ಮರಿಸಬೇಕು. ಅಂಗವಿಕಲರು ದುರ್ಬಲರಲ್ಲ, ಅವರು ಸಬಲರು. ತಮಗೆ ದೊರಕುವ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು, ನಾವು ಯಾರಿಗಿಂತ ಕಡಿಮೆಯಿಲ್ಲ ಎಂಬ ಮನೋಭಾವದಿಂದ ಸ್ವಾವಲಂಬಿಗಳಾಗಿ ಮುನ್ನಡೆಯಬೇಕು ಎಂದು ಆಶಿಸಿದರು.
ಅಂಗವಿಕಲರ ಕಲ್ಯಾಣ ಆಯುಕ್ತ ಕೆ.ವಿ. ರಾಜಣ್ಣ ಪ್ರಾಸ್ತಾವಿಕ ಮಾತುಗಳಾಡಿದರು. ನಗರ ಪಾಲಿಕೆ ಉಪ ಆಯುಕ್ತ ಸಿ.ರಾಜು ಮುಖ್ಯ ಅತಿಥಿಯಾಗಿದ್ದರು. ಜೆಎಸ್‌ಎಸ್ ಮಹಾವಿದ್ಯಾಪೀಠದ ಯೋಜನೆಗಳು ವಿಭಾಗದ ಮುಖ್ಯ ಕಾರ್ಯನಿರ್ವಾಹಕ ಬಿ.ಆರ್. ಉಮಾಕಾಂತ್ ಅಧ್ಯಕ್ಷತೆ ವಹಿಸಿದ್ದರು. ಪಾಲಿಟೆಕ್ನಿಕ್ ಪ್ರಾಂಶುಪಾಲ ನಂಜುಂಡಸ್ವಾಮಿ ಸ್ವಾಗತಿಸಿದರು. ಉಪನ್ಯಾಸಕ ಡಾ.ಪಳನಿಸ್ವಾಮಿ ಮುಡುಗೂರು ನಿರೂಪಿಸಿದರು. ಗುರುಶಾಂತಪ್ಪ ನಿಡಾವಣಿ ವಂದಿಸಿದರು.
ಅಂಗವಿಕಲರಿಗಾಗಿ ಮೀಸಲಿರುವ ಶೇ.3ರಷ್ಟು ಹಣವನ್ನು ಕೆಲವು ಇಲಾಖೆಗಳು ಸದ್ಬಳಕೆ ಮಾಡಬೇಕು. ಅವರ ಸಂಚಾರಕ್ಕೆ ರ್ಯಾಂಪ್ ನಿರ್ಮಿಸಬೇಕು. ಸರ್ವ ಶಿಕ್ಷಣ ಅಭಿಯಾನದಡಿ ಅಂಗವಿಕಲರಿಗೆ ವಿತರಿಸುವ ಸಾಧನ ಸಲಕರಣೆಗಳ ಗುಣಮಟ್ಟ ಹೆಚ್ಚಿಸಬೇಕು.
-ಕೆ.ವಿ. ರಾಜಣ್ಣ , ಅಂಗವಿಕಲರ ಕಲ್ಯಾಣ ಆಯುಕ್ತ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

