ಮೃತ ಯೋಧರ ಕುಟುಂಬಕ್ಕೆ ಪುನರ್ವಸತಿ
ಬಿ. ಶೇಖರ್ ಗೋಪಿನಾಥಂ
ಕ.ಪ್ರ.ವಾರ್ತೆ ಮೈಸೂರು ಜು. 26
ಮೈಸೂರು ಜಿಲ್ಲಾ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯು ಮಾಜಿ ಸೈನಿಕರ ಕುಟುಂಬಗಳ ಕಲ್ಯಾಣ ಮತ್ತು ಪುನರ್ಸತಿಗಾಗಿ ಶ್ರಮಿಸುತ್ತಿದೆ. ಮೈಸೂರು ಕಚೇರಿ ವ್ಯಾಪ್ತಿಯಲ್ಲಿ ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳ ಮಾಜಿ ಸೈನಿಕರು ಸೇರುತ್ತಾರೆ. ಈ ಮೂರು ಜಿಲ್ಲೆಗಳ ಮಾಜಿ ಸೈನಿಕರಿಗೆ ಇಲಾಖೆಯು ಅಗತ್ಯ ಸೌಲಭ್ಯ ಕಲ್ಪಿಸುತ್ತಿದೆ.
ಈ ಇಲಾಖೆಯು ಭೂಸೇನೆ, ನೌಕಾಪಡೆ, ವಾಯುಪಡೆಗಳಲ್ಲಿ ಕಾರ್ಯನಿರ್ವಹಿಸಿದ ಮಾಜಿ ಸೈನಿಕರು, ಯುದ್ಧದಲ್ಲಿ ಮೃತರಾದ ಸೈನಿಕರ ಪತ್ನಿಯರು (ವಿಧವೆಯರು) ಹಾಗೂ ಮಕ್ಕಳ ಕಲ್ಯಾಣ ಮತ್ತು ಪುನರ್ವಸತಿಗಾಗಿ ಕಾರ್ಯನಿರ್ವಹಿಸುತ್ತಿದೆ. ಜತೆಗೆ ಮಾಜಿ ಸೈನಿಕರಿಗೆ ಉದ್ಯೋಗ ಕಲ್ಪಿಸುವುದು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಮೈಸೂರು ಜಿಲ್ಲೆಯಲ್ಲಿ ಭೂಸೇನೆ 2055, ನೌಕಾಪಡೆ 100, ವಾಯುಪಡೆ 227 ಮಂದಿ ಸೇರಿದಂತೆ ಒಟ್ಟು 2495 ಮಂದಿ ಮಾಜಿ ಸೈನಿಕರು ಮತ್ತು ಅಧಿಕಾರಿಗಳು ಇದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಭೂಸೇನೆ 328, ನೌಕಾಪಡೆ 4, ವಾಯುಪಡೆ 13 ಸೇರಿ ಒಟ್ಟು 345 ಮಾಜಿ ಸೈನಿಕರಿದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲಿ ಭೂಸೇನೆಯಲ್ಲಿ 133, ನೌಕಾಪಡೆಯಲ್ಲಿ 3, ವಾಯುಪಡೆಯಲ್ಲಿ 10 ಮಂದಿ ಸೇರಿ ಒಟ್ಟು 146 ಮಂದಿ ಮಾಜಿ ಸೈನಿಕರಿದ್ದಾರೆ. ಈ ಮೂರೂ ಜಿಲ್ಲೆಗಳಿಂದ ಭಾರತೀಯ ಸೇನೆಯಲ್ಲಿ 2013, ಜೂ.30ರವರೆಗೆ ಒಟ್ಟಾರೆ 2983 ಮಂದಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದು, ಇವರೆಲ್ಲರು ಜಿಲ್ಲಾ ಸೈನಿಕ ಪುನರ್ವಸತಿ ಕಚೇರಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ.
ಯುದ್ಧದಲ್ಲಿ ಮೃತಪಟ್ಟ ಸೈನಿಕರ ಪತ್ನಿಯರು ಮೂರು ಜಿಲ್ಲೆಗಳಿಂದ ಒಟ್ಟು 1019 ಮಂದಿ ಇದ್ದಾರೆ. ಮೈಸೂರು ಜಿಲ್ಲೆಯಲ್ಲಿ 887, ಮಂಡ್ಯ ಜಿಲ್ಲೆಯಲ್ಲಿ 83 ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ 49 ಮಂದಿ ಮಹಿಳೆಯದ್ದಾರೆ. ಈ ಕುಟುಂಬಗಳಿಗೆ ಅಗತ್ಯ ಸೌಲಭ್ಯ ಹಾಗೂ ಸಹಕಾರ ನೀಡಲಾಗುತ್ತಿದೆ ಎಂದು ಸೈನಿಕ ಕಲ್ಯಾಣ ಮತ್ತು ಪುನರ್ಸತಿ ಇಲಾಖೆಯ ಉಪ ನಿರ್ದೇಶಕ ಡಾ.ಜೆ.ಆರ್. ಬಾಲಸುಬ್ರಹ್ಮಣ್ಯಂ ತಿಳಿಸಿದ್ದಾರೆ.
ನೌಕಾದಳದ ಭಟ್ಟರು
ಡಿ.ಎನ್. ಮಹೇಂದ್ರ
ಮೈಸೂರು: ದೇಶ ಕಾಯುವಲ್ಲಿ ಗಡಿ ಪ್ರದೇಶ ಎಷ್ಟು ಮುಖ್ಯವೊ, ಸಮುದ್ರದ ಮೂಲಕ ನುಸುಳುವ ಮತ್ತು ಅಕ್ರಮ ಚಟುವಟಿಕೆ ತಡೆಗಟ್ಟುವ ಕೆಲಸವೂ ಅಷ್ಟೆ ಮುಖ್ಯ.
ಭಾರತೀಯ ನೌಕಾದಳ ಆ ಕೆಲಸ ಮಾಡುತ್ತಿದೆ. ನೌಕಾದಳದಲ್ಲಿ 15 ವರ್ಷಗಳ ಕಾಲ ಸೇವೆ ಸಲ್ಲಿಸಿದ ಗಜಾನನ ಭಟ್ ಅವರು ಪೆಟಿ ಅಧಿಕಾರಿಯಾಗಿ, ಅಂಡರ್ ವಾಟರ್ ಕಂಟ್ರೋಲರ್ ಗ್ರೇಡ್ 1 ಅಧಿಕಾರಿಯಾಗಿ ನಿವೃತ್ತರಾದವರು. ಅವರ ಕಾಲದಲ್ಲಿ ಭೀಕರ ಯುದ್ಧಗಳು ಸಂಭವಿಸದೆ ಇರಬಹುದು. ಆದರೆ ಪ್ರತಿನಿತ್ಯದ ಜೀವನವೂ ಯುದ್ಧವೆ ಆಗಿತ್ತು.
ಭಟ್ ಅವರು 17 ವರ್ಷವಿದ್ದಾಗಲೆ ನೌಕಾದಳ ಸೇರಿದವರು. ಜುಲೈ 1982ರಲ್ಲಿ ನೌಕಾದಳ ಸೇರಿ, ಜುಲೈ 1997ರಲ್ಲಿ ನಿವೃತ್ತಿ ಪಡೆದರು. ಮುಂಬೈ, ಗೋವಾ, ವಿಶಾಖಪಟ್ಟಣಂ ಮತ್ತು ಒಡಿಶಾ ನೌಕಾದಳದಲ್ಲಿ ಕೆಲಸ ಮಾಡಿರುವ ಭಟ್ ಅವರಿಗೆ ಸಮುದ್ರ ಕಳ್ಳತನ, ಹಡಗುಗಳ ಹೈಜಾಕ್ನ್ನು ನಿಯಂತ್ರಿಸುವುದು ಸೇರಿದಂತೆ ಉಗ್ರರು ನುಸುಳದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿಯೂ ಇತ್ತು. ಇಷ್ಟೆಲ್ಲಾ ಜವಾಬ್ದಾರಿ ಇರುವ ನೌಕಾದಳದ ಅಧಿಕಾರಿಗಳ ಕೆಲಸ ಅಷ್ಟು ಸುಲಭದ್ದಲ್ಲ. ನಿತ್ಯ ಬೆಳಗಾದರೆ ಸಮುದ್ರದಲ್ಲಿಯೆ ಕಾಲ ಕಳೆಯಬೇಕು. ಕುಟುಂಬವನ್ನು ಬಿಟ್ಟು ನೂರಾರು ಕಿ.ಮೀ. ದೂರದ ಊರಿನಲ್ಲಿ ಸೇವೆ ಸಲ್ಲಿಸುವುದು ಸುಲಭದ ಮಾತಲ್ಲ.
ಸಮುದ್ರದಲ್ಲಿ ಯಾವಾಗ ಏನು ನಡೆಯುವುದೊ ಯಾರಿಗೂ ತಿಳಿದಿರುವುದಿಲ್ಲ. ಅಂಥ ಪರಿಸ್ಥಿತಿಯನ್ನು ನೌಕಾದಳದ ಸಿಬ್ಬಂದಿ ಎದುರಿಸುತ್ತಾರೆ. ಹಲವು ಸಂದರ್ಭಗಳಲ್ಲಿ ವಿವಿಧ ದೇಶದ ನೌಕಾದಳದ ಸಿಬ್ಬಂದಿ ಸಹಕಾರದೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಬೇಕಾಗುತ್ತದೆ. ಇಂಥ ಹಲವು ಕಾರ್ಯಾಚರಣೆಯಲ್ಲಿ ನಗರದ ಗಜಾನನ ಭಟ್ಟರೂ ಕಾರ್ಯ ನಿರ್ವಹಿಸಿದ್ದಾರೆ.
ಈಗ ಅವರು ನಗರದಲ್ಲಿ ನೌಕಾದಳ ಸ್ನೇಹಿತರ ಸಂಘ ಸ್ಥಾಪಿಸಿಕೊಂಡಿದ್ದಾರೆ. ನೌಕಾದಳದಲ್ಲಿ ಕಾರ್ಯ ನಿರ್ವಹಿಸಿದ ಸುಮಾರು 42 ಮಾಜಿ ಸೈನಿಕರು ಈ ಸಂಘದ ಸದಸ್ಯರಾಗಿದ್ದಾರೆ. ಇವರ ನೇತೃತ್ವದಲ್ಲಿ ನಡೆಯುತ್ತಿರುವ ಸಂಘವು ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರ, ಮಾಜಿ ಸೈನಿಕರಿಗೆ ನೆರವು, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಮಾಜಿ ಸೈನಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಬಡವರಿಗೆ ಹೊಲಿಗೆ ಯಂತ್ರ ವಿತರಣೆ, ಮಾಜಿ ಸೈನಿಕರ ಕುಟುಂಬ ವರ್ಗದವರಿಗೆ ಉದ್ಯೋಗಾವಕಾಶ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ ಈ ಸಂಘ.
ತಮ್ಮ ಸಂಘಟನೆ ಮಾತ್ರವಲ್ಲದೆ ಇತರೆ ಸಂಘಟನೆಗಳೊಂದಿಗೆ ಜನಪರ ಸೇವೆ ಸಲ್ಲಿಸುತ್ತ ಮತ್ತು ಮಾಜಿ ಸೈನಿಕರ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಮೈಸೂರಿನ ಲಲಿತಮಹಲ್ನಲ್ಲಿರುವ ಐಟಿಡಿಸಿಯಲ್ಲಿ ಸಹಾಯಕ ಭದ್ರತಾ ಅಧಿಕಾರಿಯಾಗಿ ಭಟ್ಟರು ಸೇವೆ ಸಲ್ಲಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

