ರಂಗಾಯಣ ಬೆಳವಣಿಗೆಗೆ ಬೇಕಿದೆ ಸ್ವಾಯತ್ತತೆ
ಕ.ಪ್ರ.ವಾರ್ತೆ ಮೈಸೂರು ಜೂ. 2
ರಂಗಾಯಣದ ಸಮಗ್ರ ಬೆಳವಣಿಗೆಗೆ ಪೂರಕವಾದ ಸ್ವಾಯತ್ತತೆಯನ್ನು ಸರ್ಕಾರ ನೀಡಬೇಕು ಎಂದು ಸಾಹಿತಿಗಳು ಹಾಗೂ ಕಲಾವಿದರು ಒಕ್ಕೊರಲಿನಿಂದ ಆಗ್ರಹಿಸಿದರು.
ಮೈಸೂರಿನ ಸಾಹಿತಿ ಕಲಾವಿದರ ಒಕ್ಕೂಟವು ಭಾನುವಾರ ರಂಗಾಯಣದ ಶ್ರೀರಂಗದಲ್ಲಿ ರಂಗಾಯಣದ ಮುಂದಿನ ಬೆಳವಣಿಗೆ ಕುರಿತು ಏರ್ಪಡಿಸಿದ್ದ ಸಮೂಹ ಚಿಂತನೆಯಲ್ಲಿ ಮಾತನಾಡಿದ ಅನೇಕ ಗಣ್ಯರು ಈ ಅಭಿಪ್ರಾಯ ವ್ಯಕ್ತಪಡಿಸಿದರು.
ರಂಗಭೂಮಿ- ಸಾಂಸ್ಕೃತಿಕ ಬಿಕ್ಕಟ್ಟು ಎಂಬ ವಿಷಯ ಕುರಿತು ನಡೆದ ಮೊದಲ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ನಾಟಕ ಅಕಾಡಮಿ ಮಾಜಿ ಅಧ್ಯಕ್ಷ ಕೆ. ಮರುಳಸಿದ್ದಪ್ಪ, ಕಳೆದ 25 ವರ್ಷಗಳ ಹಿಂದೆ ಬಿ.ವಿ. ಕಾರಂತರು ರಂಗಭೂಮಿಯ ನಿರಂತರ ಚಲನಶೀಲತೆಗೆ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ರಂಗಾಯಣ ಸ್ಥಾಪಿಸಿದರು. ಆ ಸಂದರ್ಭದಲ್ಲಿ ನಾಡಿನ ವಿವಿಧ ಭಾಗಗಳಿಂದ ಉದಯೋನ್ಮಖ ಕಲಾವಿದರನ್ನು ಆಯ್ಕೆ ಮಾಡಿ, ಆ ಮೂಲಕ ಇದನ್ನೊಂದು ಪ್ರಖ್ಯಾತ ರಿಫೆಟರಿ ಸಂಸ್ಥೆಯಾಗಿ ರೂಪಿಸಿದರು. ಆದರೆ ಅವರ ಆಶಯಗಳು ಇನ್ನೂ ಪರಿಪೂರ್ಣವಾಗಿಲ್ಲ ಎಂದು ತಿಳಿಸಿದರು.
ನಂತರ ರಂಗಾಯಣದ ಬೆಳವಣಿಗೆಯಲ್ಲಿ ಅನೇಕ ಅಡೆತಡೆಗಳು ಬಂದವು. ಅನೇಕ ವಿವಾದಗಳು ಹುಟ್ಟಿಕೊಂಡವು. ಇದನ್ನೆಲ್ಲಾ ಮೀರಿದ ರಂಗಾಯಣ, ರಂಗಕಲೆಯ ಉಳಿಸುವಲ್ಲಿ ಹಾಗೂ ರಂಗಪ್ರಿಯರನ್ನು ಸೆಳೆಯುವಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಇದಕ್ಕೆ ಕಲಾವಿದರ ಪರಿಶ್ರಮ ಮೆರೆಯಲಾಗದು. ಈ ನಡುವೆ ಸರ್ಕಾರ ಇಲ್ಲಿನ ಕಲಾವಿದರನ್ನು ಮೂರು ಗುಂಪು ಮಾಡಿ, ರಂಗಾಯಣದ ಇತರೆ ಶಾಖೆಗಳಿಗೆ ವರ್ಗಾವಣೆ ಮಾಡಿರುವುದು ಸಂಸ್ಥೆಯ ಬೆಳವಣಿಗೆಗೆ ಅಡ್ಡಿಯಾಗಿದೆ ಎಂದು ವಿಷಾದಿಸಿದರು.
ರಂಗಾಯಣ ಇಂದು ರಾಜಕೀಯ ಪ್ರಭಾವದಲ್ಲಿ ಸಿಲುಕಿ ತನ್ನತನ ಕಳೆದುಕೊಳ್ಳುತ್ತಿದೆ. ರಂಗಾಯಣದ ಕ್ರಿಯಾಶೀಲ ಪ್ರಗತಿಗೆ ಪೂರಕವಾದ ಆರ್ಥಿಕ ಮತ್ತು ಆಡಳಿತಾತ್ಮಕ ಸ್ವಾಯತ್ತತೆ ನೀಡಬೇಕು. ರಂಗಾಯಣಕ್ಕೆ, ರಂಗಸಮಾಜಕ್ಕೆ ಹಾಗೂ ಕನ್ನಡ ರಂಗಭೂಮಿಗೆ ಹೊಸ ಚೈತ್ಯನ ತುಂಬುವಂತಹ ಯೋಜನೆಗಳನ್ನು ಸರ್ಕಾರ ಹಮ್ಮಿಕೊಳ್ಳಬೇಕು ಎಂದು ರಂಗಕರ್ಮಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ರಂಗಾಯಣ- ಹೊಸ ಅಸ್ತಿತ್ವದ ಹುಡುಕಾಟ, ರಂಗಾಯಣದ ಮಾನವ ಸಂಪನ್ಮೂಲ ಬಳಕೆ ಹೊಣೆಗಾರಿಕೆ ಹಾಗೂ ಭವಿಷ್ಯದ ಪರಿಕಲ್ಪನೆಯಲ್ಲಿ ರಂಗಾಯಣ ಎಂಬ ವಿಷಯಗಳ ಕುರಿತು ತಜ್ಞರು ಚರ್ಚಿಸಿದರು.
ಹಿರಿಯ ರಂಗಕರ್ಮಿಗಳಾದ ಡಾ.ನ. ರತ್ನ, ಚಿದಂಬರರಾವ್ ಜಂಬೆ, ಶ್ರೀನಿವಾಸ ಕಪ್ಪಣ್ಣ, ಶಶಿಧರ ಭಾರಿಘಾಟ್, ಜಯಪ್ರಕಾಶ್ ಗೌಡ, ಶಂಕರ ಘಂಟಿ, ಪ್ರಕಾಶ್ ಗರುಡ, ಕೆ.ಆರ್. ಸುಮತಿ, ಜೆ. ಲೋಕೇಶ್, ನಾಗೇಶ್, ಜನಾರ್ಧನ್, ಚಂದ್ರಕಾಂತ್, ಇಳೇಗಾರ್, ಡಾ. ಕೃಷ್ಣಮೂರ್ತಿ ಹನೂರು, ಪ್ರಕಾಶ್ ರಕ್ಷದಿ, ರಾಮದಾಸ್ ಆಡ್ಯಾಂತಾಯ ಭಾಗವಹಿಸಿದ್ದರು.
ಒಕ್ಕೂಟದ ಕೆ. ಮುದ್ದುಕೃಷ್ಣ, ಪ್ರೊ.ಎಚ್.ಎಸ್. ಉಮೇಶ್, ಜಯರಾಂ ಪಾಟೀಲ್, ರಾಜಶೇಖರ ಕದಂಬ
ಪ್ರೊ.ಎಸ್.ಆರ್. ರಮೇಶ್, ಗಂಗಾಧರಸ್ವಾಮಿ, ಕಿಕ್ಕೇರಿ ನಾರಾಯಣ, ಜೆ.ಪಿ. ಬಸವರಾಜು, ಹೊರೆಯಾಲ ದೊರೆಸ್ವಾಮಿ, ನಂದಾ ಹಳೆಮನೆ ಹಾಗೂ ರಂಗಾಯಣ ಕಲಾವಿದರು ಇದ್ದರು.
ನಿರ್ಣಯ: ಹಿರಿಯ ರಂಗಕರ್ಮಿ ಡಾ. ನ. ರತ್ನ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಚಿಂತನಾ ಶಿಬಿರದ ಸಮಾರೋಪದಲ್ಲಿ ರಂಗಾಯಣದ ಸ್ವಾಯತ್ತತೆಗೆ ಆಗ್ರಹಿಸಿ ಕೈಗೊಳ್ಳಲಾದ ನಿರ್ಣಯವನ್ನು ಮುಖ್ಯಮಂತ್ರಿ, ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಚಿವರು ಹಾಗೂ ಅಧಿಕಾರಿಗಳಿಗೆ ಸಲ್ಲಿಸಲು ನಿರ್ಧರಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

