ಮೈಸೂರು

ಇಂದು ಡಿಸಿ ಡಾ.ರಾಮೇಗೌಡ ಅಧಿಕಾರ ಸ್ವೀಕಾರ

Published On :

ಮೈಸೂರು: ಮೈಸೂರು ಜಿಲ್ಲಾಧಿಕಾರಿಯಾಗಿ ಡಾ.ರಾಮೇಗೌಡ ಮಂಗಳವಾರ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ವಿಧಾನಸಭಾ ಚುನಾವಣೆಗೂ ಮುನ್ನ ರಾಮೇಗೌಡರು ಮೈಸೂರು ಜಿಲ್ಲಾಧಿಕಾರಿಯಾಗಿದ್ದರು. ಆದರೆ, ಚುನಾವಣಾ ಆಯೋಗದ ಶಿಫಾರಸ್ಸಿನ ಮೇರೆಗೆ ರಾಜ್ಯ ಸರ್ಕಾರ ಅವರೂ ಸೇರಿದಂತೆ 10 ಮಂದಿ ಜಿಲ್ಲಾಧಿಕಾರಿಗಳ ವರ್ಗಾಯಿಸಿತ್ತು. ಇದರ ವಿರುದ್ಧ ಜಿಲ್ಲಾಧಿಕಾರಿಗಳು ಸಿಎಟಿ ಮೊರೆ ಹೋಗಿದ್ದರು. ಚುನಾವಣೆ ನಂತರ ಅವರನ್ನು ಆಯಾ ಜಿಲ್ಲೆಗಳಿಗೆ ವರ್ಗಾಯಿಸುವಂತೆ ಆದೇಶ ನೀಡಿತ್ತು. ಈವರೆಗೆ ಸಿ. ಸಿಖಾ ಅವರು ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಬಿವಿಬಿ ಅಧ್ಯಕ್ಷರ ಕಾರು ಪತ್ತೆ
ಮೈಸೂರು: ಭಾರತೀಯ ವಿದ್ಯಾಭವನ ಅಧ್ಯಕ್ಷ ಎನ್. ರಾಮಾನುಜ ಅವರ ಕಾರು ಸೋಮವಾರ ಪತ್ತೆಯಾಗಿದೆ. ನಗರದ ಲಷ್ಕರ್ ಮೊಹಲ್ಲಾದಲ್ಲಿ ಭಾನುವಾರ ಬೆಳಗ್ಗೆ ರಾಮಾನುಜ ಅವರು ಪುರೋಹಿತ್ ರೆಸ್ಟೋರೆಂಟ್ಗೆ ತಿಂಡಿಗೆ ಹೋಗಿದ್ದ ವೇಳೆ ಅವರ ಕಾರು ಮಾರುತಿ- 800 ಕಾರು ನಾಪತ್ತೆಯಾಗಿದ್ದು, ಈ ಸಂಬಂಧ ಲಷ್ಕರ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಿಸಿದ್ದರು. ನಗರಪಾಲಿಕೆ ಮಾಜಿ ಸದಸ್ಯ ಎಂ.ಡಿ. ಪಾರ್ಥಸಾರಥಿ ಅವರು ಸಂಗಮ್ ಚಿತ್ರಮಂದಿರ ಹಿಂಭಾಗದಲ್ಲಿರುವ ಅನ್ನಪೂರ್ಣ ಹೊಟೇಲ್ನಲ್ಲಿ ತಿಂಡಿ ತಿನ್ನಲು ತಮ್ಮ ಮಾರುತಿ- 800 ಕಾರಿನಲ್ಲಿ ಹೋಗಿದ್ದರು. ವಾಪಸ್ ಹೊರಡುವಾಗ ಪೆಟ್ರೋಲ್ ಖಾಲಿಯಾಗಿದ್ದು, ಹೀಗಾಗಿ ಕಾರನ್ನು ಅಲ್ಲೆ ಬಿಟ್ಟು ಸ್ನೇಹಿತರ ವಾಹನದಲ್ಲಿ ಹೋಗಿದ್ದಾರೆ. ತಮ್ಮ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿರುವ ಶಿವು ಎಂಬವರಿಗೆ ಹಣ ನೀಡಿ, ಪೆಟ್ರೋಲ್ ಹಾಕಿಸಿ ಕಾರನ್ನು ತೆಗೆದುಕೊಂಡು ಬರುವಂತೆ ಕಳುಹಿಸಿದ್ದರು. ರಾಮಾನುಜ ಮತ್ತು ಪಾರ್ಥಸಾರಥಿ ಅವರ ಎರಡೂ ಕಾರುಗಳು ಬಿಳಿ ಬಣ್ಣದಾಗಿದ್ದು, ರಾಮಾನುಜ ಅವರ ಕಾರನ್ನು ಶಿವು ತೆಗೆದುಕೊಂಡು ಹೋಗಿದ್ದರು. ರಾತ್ರಿ ಪಾರ್ಥಸಾರಥಿ ಮನೆಗೆ ಬಂದ ವೇಳೆ ಬೇರೆ ಕಾರು ನಿಂತಿದ್ದನ್ನು ನೋಡಿದರು. ಬಳಿಕ ಸ್ಥಳಕ್ಕೆ ಹೋದಾಗ ತಮ್ಮ ಕಾರು ಅದೇ ಜಾಗದಲ್ಲಿ ನಿಂತಿತ್ತು. ಹೀಗಾಗಿ, ರಾಮಾನುಜ ಕಾರನ್ನು ಲಷ್ಕರ್ ಠಾಣೆಗೆ ಒಪ್ಪಿಸಿದ್ದಾರೆ.
ವ್ಯಕ್ತಿ ಮೇಲೆ ಹಲ್ಲೆ
ಮೈಸೂರು: ಕಂಠಪೂರ್ತಿ ಕುಡಿದ ವ್ಯಕ್ತಿಯೊಬ್ಬ ಬಿಲ್ ಕೊಡದೇ ಬಾರ್ ವ್ಯವಸ್ಥಾಪಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಇತ್ತೀಚೆಗೆ ನಡೆದಿದೆ. ಆಲನಹಳ್ಳಿಯಲ್ಲಿರುವ ರಾಘವೇಂದ್ರ ಬಾರ್ ವ್ಯವಸ್ಥಾಪಕ ನಾಗರಾಜ್ ತೀವ್ರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಮೇಲೆ ಚೋರನಹಳ್ಳಿ ನಿವಾಸಿ ಅಶೋಕ್ ಎಂಬಾತನು ಹಲ್ಲೆ ನಡೆಸಿದ್ದು, ಈ ಸಂಬಂಧ ನಜರ್ಬಾದ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಯುವತಿ ನಾಪತ್ತೆ
ಮೈಸೂರು: ಲಗ್ನಪತ್ರಿಕೆ ನೀಡಲು ಹೋದ ಯುವತಿ ನಾಪತ್ತೆಯಾದ ಘಟನೆ ವಿನಾಯಕನಗರದಲ್ಲಿ ನಡೆದಿದೆ. ವಿನಾಯಕನಗರ ನಿವಾಸಿ ಮಹದೇವು ಎಂಬವರ ಪುತ್ರಿ ಎಂ. ಮಹಾಲಕ್ಷ್ಮೀ (22) ನಾಪತ್ತೆಯಾದವರು. ಈಕೆಗೆ ಮೇ 31ರಂದು ಮದುವೆ ನಿಶ್ಚಯವಾಗಿತ್ತು. ಆದರೆ, ಮೇ 25ರಂದು ತನ್ನ ಗೆಳತಿಯರಿಗೆ ಲಗ್ನಪತ್ರಿಕೆ ನೀಡುವುದಾಗಿ ಹೇಳಿ ಹೋದ ಮಹಾಲಕ್ಷ್ಮೀ ನಾಪತ್ತೆಯಾಗಿದ್ದಾರೆ. ಆಕೆ ಶಿವಪ್ರಸಾದ್ ಎಂಬಾತನೊಂದಿಗೆ ಹೋಗಿರಬಹುದು ಎಂದು ಸಂಶಯ ವ್ಯಕ್ತಪಡಿಸಿ ಆಕೆಯ ತಂದೆ ಮಹದೇವು ಜಯಲಕ್ಷ್ಮೀಪುರಂ ಪೊಲೀಸರಿಗೆ ದೂರು ನೀಡಿದ್ದಾರೆ. ಕಾಣೆಯಾದ ಯುವತಿಯು ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಬಣ್ಣ, ಕೋಲುಮುಖ, 5.4 ಅಡಿ ಎತ್ತರ ಇರುವ ಈಕೆ ಕನ್ನಡ ಮತ್ತು ಇಂಗ್ಲಿಷ್ ಮಾತನಾಡುತ್ತಾಳೆ. ಈಕೆಯ ಸುಳಿವು ದೊರೆತರೆ ದೂ. 2418339 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.