ಜಾನಪದ ಕಲೆಗಳಲ್ಲಿ ಕನ್ನಡ ಉಳಿದಿದೆ: ಹಂಸಲೇಖ
ಘನಲಿಂಗಿ ಶಿವಯೋಗಿ ವೇದಿಕೆ (ನಂಜನಗೂಡು)
ಇಂಗ್ಲಿಷ್ನಿಂದ ಕನ್ನಡಕ್ಕೆ ಕುತ್ತು ಬಂದಿದೆ ಎಂಬುದು ಸರಿಯಲ್ಲ. ಅದು ಶಿಕ್ಷಣದ ಸಮಸ್ಯೆಯಾಗಿದೆ. ಆದರೆ, ಜಾನಪದ ಸೊಗಡಿನಲ್ಲಿ ಕನ್ನಡ ಉಳಿದಿದೆ ಎಂದು ಚಲನಚಿತ್ರ ಸಂಗೀತ ನಿರ್ದೇಶಕ ಹಂಸಲೇಖ ಹೇಳಿದರು.
ಪಟ್ಟಣದ ಶ್ರೀಕಂಠೇಶ್ವರ ಕಲಾಮಂದಿರದ ಘನಲಿಂಗಿ ಶಿವಯೋಗಿ ವೇದಿಕೆಯಲ್ಲಿ ನಡೆದ ಮೈಸೂರು ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದ ಅವರು, ಸಾಹಿತಿ ದೇವನೂರ ಮಹಾದೇವ ಅವರನ್ನು ಪಡೆದ ನಂಜನಗೂಡಿನ ಜನತೆ ಪುಣ್ಯವಂತರು ಎಂದರು.
ಟರ್ನಿಂಗ್ ಪಾಯಿಂಟ್: ನಾನು ರಂಗಭೂಮಿಗೆ ಪ್ರವೇಶ ಪಡೆದ ನಂಜನಗೂಡಿನಲ್ಲಿ ನಾಟಕದ ಟೆಂಟ್ ಹಾಕಿದ್ದೆ. ಒಂದು ದಿನ ಯಾರೋ ಕಿಡಿಗೇಡಿಗಳು ಟೆಂಟಿಗೆ ಬೆಂಕಿ ಹಾಕಿಬಿಟ್ಟರು. ನಾಟಕ ಟೆಂಟ್ ಕಳೆದುಕೊಂಡು ಕಂಗಾಲಾಗಿದ್ದ ನನಗೆ ನಂಜನಗೂಡಿನವರೇ ಹಿತೈಷಿಯೊಬ್ಬರು ಸಿನೆಮಾ ರಂಗಕ್ಕೆ ಪ್ರವೇಶ ಮಾಡು ಎಂದು ಸಲಹೆ ನೀಡಿದರು. ಅವರ ಮಾತಿನಿಂದ ಉತ್ತೇಜಿತನಾಗಿ ಸಿನೆಮಾಗೆ ಪದಾರ್ಪಣೆ ಮಾಡಿದೆ. ಇಂದು ಈ ಮಟ್ಟಕ್ಕೆ ಬೆಳೆದೆ. ಹೀಗಾಗಿ ನನ್ನ ಸಿನೆಮಾ ಜೀವನಕ್ಕೆ ನಂಜನಗೂಡು ಟರ್ನಿಂಗ್ ಪಾಯಿಂಟ್ ಎಂದು ಸ್ಮರಿಸಿದರು.
ಇದೇ ವೇಳೆ ಸಭಾಂಗಣದಲ್ಲಿ ನೆರೆದಿದ್ದ ಸಾಹಿತ್ಯಾಸಕ್ತರು ಆಕಸ್ಮಿಕ ಚಿತ್ರದ ಡಾ.ರಾಜ್ಕುಮಾರ್ ಹಾಡಿರುವ 'ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು' ಗೀತೆಯನ್ನು ಹಾಡುವಂತೆ ಬೇಡಿಕೆ ಇಟ್ಟರು. ಇದಕ್ಕೆ ಸ್ಪಂದಿಸಿದ ಹಂಸಲೇಖ ಅವರು ಹಾಡಿದರು. ನಂತರ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿದರು.
ಸಂಸದ ಆರ್. ಧ್ರುವನಾರಾಯಣ್ ಮಾತನಾಡಿ, ಕರ್ನಾಟಕ- ತಮಿಳುನಾಡಿನ ಗಡಿ ಪ್ರದೇಶವಾದ ಹೊಗೇನಕಲ್ ಜಲಪಾತದ ಗಡಿಯ ಸಮೀಕ್ಷೆ ಬ್ರಿಟಿಷರ ಕಾಲದಲ್ಲಿ ಆಗಿತ್ತು. ಇದೀಗ ನಮ್ಮ ರಾಜ್ಯದ 20 ಮಂದಿ ಸಂಸದರು ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಅವರನ್ನು ಭೇಟಿ ಮಾಡಿ ಮತ್ತೆ ಸಮೀಕ್ಷೆ ಮಾಡಿಸುವಂತೆ ಒತ್ತಾಯಿಸಿದ್ದೇವೆ ಎಂದರು.
ಸುತ್ತೂರು ಶ್ರೀಕ್ಷೇತ್ರದ ಶ್ರಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಪುಂಡಲೀಕ ಹಾಲಂಬಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಎಂ. ಮಹದೇವ್, ಶಾಸಕ ವಾಸು, ಕಸಾಪ ಜಿಲ್ಲಾಧ್ಯಕ್ಷ ಎಂ. ಚಂದ್ರಶೇಖರ್, ಮಾಜಿ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ತಾಲೂಕು ಅಧ್ಯಕ್ಷ ಮಹೇಶ್ ಅತ್ತಿಖಾನೆ, ಡಾ.ಮಳಲಿ ವಸಂತಕುಮಾರ್, ಡಿಡಿಪಿಐ ಬಿ.ಕೆ. ಬಸವರಾಜು, ರಾಜಶೇಖರ ಕದಂಬ, ಮೂಗೂರು ನಂಜುಂಡಸ್ವಾಮಿ, ಕೆ.ಎಸ್. ಶಿವರಾಂ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

