ಮೈಸೂರು

ಕೋರ್ಟ್ ಮೆಟ್ಟಿಲೇರಿದರೂ ಸಿಕ್ಕಿಲ್ಲ ಕಟ್ಟಡ

Published On :

ಡಿ.ಎನ್. ಮಹೇಂದ್ರ
ಕ.ಪ್ರ.ವಾರ್ತೆ    ಮೈಸೂರು    ಜೂ. 17
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ಹಿರಿಯ ನಾಗರಿಕರೊಬ್ಬರು ನಿರ್ಮಿಸಿದ ವಾಚನಾಲಯ ಕಟ್ಟಡದಲ್ಲಿ ಈಗ ಕೆ.ಆರ್.ನಗರ ಗ್ರಂಥಾಲಯ ನಡೆಯುತ್ತಿದೆ.
ಕೃಷ್ಣರಾಜ ಸಾಗರ ನಿರ್ಮಾಣದ ವೇಳೆ ಹಳೆ ಎಡತೊರೆಯನ್ನು ಸ್ಥಳಾಂತರಿಸಿ, ಕೆ.ಆರ್. ನಗರ ನಿರ್ಮಿಸಲಾಯಿತು. ಹೀಗೆ ಸ್ಥಳಾಂತರಗೊಂಡವರ ಪೈಕಿ ಎಡತೊರೆಯ ದೇವೋಜಿರಾವ್ ಎಂಬವರಿಗೆ ಮಹಾರಾಜರು ಒಂದು ನಿವೇಶನ ನೀಡಿದ್ದರು. ಹಿರಿಯರು ಮತ್ತು ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದ ದೇವೋಜಿರಾವ್ ಅವರಿಗೆ ನಿವೇಶನ ಅಗತ್ಯ ಇರಲಿಲ್ಲ. ಸುಮಾರು 120್ಢ110 ಅಳತೆಯ ಆ ನಿವೇಶನದ ಮಧ್ಯದಲ್ಲಿ ಜರ್ಮನ್ ದೇಶದ ವಾಸ್ತುಶಿಲ್ಪಿ ಕ್ರಂಬಿಜಲ್ ನೆರವಿನಿಂದ ಒಂದು ವಾಚನಾಲಯವನ್ನು ನಿರ್ಮಿಸಿ 16-9-1930 ರಲ್ಲಿ ಅಂದಿನ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಅವರಿಂದ ಉದ್ಘಾಟಿಸಿಸಿದ್ದರು.
ಈ ವಾಚನಾಲಯದ ದಾಖಲಾತಿ 2007ರವರೆಗೂ ಪುರಸಭೆಯ ಅಧೀನದಲ್ಲಿಯೇ ಇತ್ತು. 1965 ರಲ್ಲಿ ಅಂದರೆ ಗ್ರಂಥಾಲಯ ಇಲಾಖೆ ಆರಂಭವಾದ ಮೇಲೆ ಎಲ್ಲಾ ವಾಚನಾಲಯಗಳೂ ಪುರಸಭೆ ಅಧೀನಕ್ಕೆ ಬಂದವು. ಆದರೆ ಕೆ.ಆರ್. ನಗರ ವಾಚನಾಲಯ ಮಾತ್ರ ಪುರಸಭೆಯ ವಶದಲ್ಲಿಯೇ ಇತ್ತು. ಆ ಬಳಿಕ ಕಂದಾಯ ಇಲಾಖೆಗೆ ಸೇರಿದ ಕಟ್ಟಡವೊಂದರಲ್ಲಿ ಗ್ರಂಥಾಲಯ ನಡೆಯುತ್ತಿತ್ತು. ಆದರೆ ಕಂದಾಯ ಇಲಾಖೆಯವರು ತಮಗೆ ಆ ಕಟ್ಟಡದ ಅಗತ್ಯವಿದೆ ಎಂದು ಹೇಳಿ ಗ್ರಂಥಾಲಯ ತೆರವುಗೊಳಿಸಿದ್ದರಿಂದ ಗ್ರಂಥಾಲಯವು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿತ್ತು.
ವಾಣಿಜ್ಯ ಮಳಿಗೆ ನಿರ್ಮಾಣ: ಕೆ.ಆರ್. ನಗರ ವಾಚನಾಲಯದ ಸುತ್ತಲಿನ ಜಾಗದಲ್ಲಿ ಮುಖ್ಯರಸ್ತೆಗೆ ಹೊಂದಿಕೊಂಡಂತೆ ಇಂಗ್ಲಿಷ್ ಅಕ್ಷರದ ಎಲ್ ಮಾದರಿಯಲ್ಲಿ 18 ವಾಣಿಜ್ಯ ಮಳಿಗೆ ನಿರ್ಮಿಸಿದರು. ಸಾಲದು ಎಂಬಂತೆ ವಾಚನಾಲಯ ಸಮೀಪ ಮಾಂಸದ ಅಂಗಡಿಯ ಮಳಿಗೆ ನಿರ್ಮಿಸಲು ಮತ್ತು ಸ್ವಲ್ಪ ಜಾಗವನ್ನು ತಾಲೂಕು ಪತ್ರಕರ್ತರ ಸಂಘಕ್ಕೆ ನೀಡಲು ಪುರಸಭೆ ಮುಂದಾದಾಗ ಸ್ವಾತಂತ್ರ್ಯ ಹೋರಾಟಗಾರ ಸೋಮಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಟಿ.ಕೆ. ಚಿನ್ನಸ್ವಾಮಿ ಮತ್ತು ಅವರ ಬೆಂಬಲಿಗರು ಇದರ ವಿರುದ್ಧ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಿಂದ ತಡೆಯಾಜ್ಞೆ ತಂದರು.
ಬಳಿಕ ಈ ಬಗ್ಗೆ ಮಣಿವಣ್ಣನ್ ಜಿಲ್ಲಾಧಿಕಾರಿಯಾಗಿದ್ದ ವೇಳೆ ಸಭೆ ನಡೆಸಿ 11 ಮಳಿಗೆಯನ್ನು ಪುರಸಭೆಗೆ ಬಿಟ್ಟುಕೊಟ್ಟು, ಉಳಿದ 7 ಮಳಿಗೆ ಮತ್ತು ಉಳಿದ ಜಾಗವನ್ನು ಗ್ರಂಥಾಲಯಕ್ಕೆ ಬಿಟ್ಟುಕೊಡುವಂತೆಯು ಮತ್ತು ತಾಲೂಕು ಪತ್ರಕರ್ತರ ಸಂಘಕ್ಕೆ ಬೇರೆಡೆ ನಿವೇಶನ ನೀಡಲು ತೀರ್ಮಾನಿಸಲಾಗಿತ್ತು. ಆದರೆ ಅಧಿಕಾರಿಗಳು ಇದನ್ನು ಜಾರಿಗೊಳಿಸಲಿಲ್ಲ.
ಇದರಿಂದ ಬೇಸತ್ತ ಹೋರಾಟಗಾರರು ಹೈಕೋರ್ಟ್ನಲ್ಲಿ ದಾವೆ ಹೂಡಿದರು. ಆದರೆ ಕೋರ್ಟ್ ಮಳಿಗೆಯನ್ನು ಪೂರ್ಣವಾಗಿ ಬಿಟ್ಟುಕೊಟ್ಟು, ಉಳಿದ ಜಾಗವನ್ನು ಗ್ರಂಥಾಲಯಕ್ಕೆ ಬಿಟ್ಟುಕೊಡುವಂತೆ ಆದೇಶಿಸಿದೆ. ಅದರಂತೆ ಈಗ ವಾಚನಾಲಯ ಕಟ್ಟಡದ ಹಿಂದಿನ ಸ್ಥಳದಲ್ಲಿ ಗ್ರಂಥಾಲಯ ನಿರ್ಮಿಸಲು 30 ಲಕ್ಷ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.
ಗ್ರಂಥಾಲಯ ನಿರ್ಮಾಣಗೊಂಡರೆ ಇಲ್ಲಿನ ಬಹುತೇಕ ಸಮಸ್ಯೆ ನಿವಾರಣೆಯಾಗುತ್ತದೆ. ಈಗ ಕೆ.ಆರ್. ನಗರ ಶಾಖೆಯಲ್ಲಿ 2,285 ಮಂದಿ ಸದಸ್ಯರಿದ್ದು, 16 ಸಾವಿರ ಪುಸ್ತಕ ಇದೆ. ತಾಲೂಕಿನ 31 ಗ್ರಾಪಂಗಳಲ್ಲಿ 17 ಗ್ರಾಪಂ ಮಾತ್ರ ಗ್ರಂಥಾಲಯ ಸೆಸ್ ಪಾವತಿಸಿವೆ. ಕಳೆದ ಆರ್ಥಿಕ ವರ್ಷದವರೆಗೆ ಪುರಸಭೆ ಸಹ ಸೆಸ್ ಪಾವತಿಸಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.