ಮೈಸೂರು

ಕಾಂಗ್ರೆಸ್ ನೀಡಿದ ಆಶ್ವಾಸನೆ ಈಡೇರಿಸಲಿ

Published On :

ಕ.ಪ್ರ.ವಾರ್ತೆ   ಮೈಸೂರು   ಜೂ. 18
ಚುನಾವಣೆ ಸಂದರ್ಭದಲ್ಲಿ ವಿಶ್ವಕರ್ಮ ಸಮುದಾಯಕ್ಕೆ ನೀಡಿದ್ದ ಆಶ್ವಾಸನೆಯನ್ನು ಕಾಂಗ್ರೆಸ್ ಈಡೇರಿಸಬೇಕು ಎಂದು ಕರ್ನಾಟಕ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಕೆ.ಪಿ. ನಂಜುಂಡಿ ವಿಶ್ವಕರ್ಮ ಆಗ್ರಹಿಸಿದರು.
ಜಗನ್ಮೋಹನ ಅರಮನೆಯಲ್ಲಿ ಮಂಗಳವಾರ ವಿಶ್ವಕರ್ಮ ಯುವ ಸೇನೆಯ ಮೈಸೂರು ಹಾಗೂ ಮಂಡ್ಯ ಕಾರ್ಯಕರ್ತರು ಆಯೋಜಿಸಿದ್ದ ವಿಶ್ವಕರ್ಮ ಜಯಂತ್ಯುತ್ಸವ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಳೆದ ವಿಧಾನಸಭಾ ಚುನಾವಣೆ ವೇಳೆ ವಿಶ್ವಕರ್ಮ ಸಮುದಾಯ ಕಾಂಗ್ರೆಸ್ಗೆ ಬೆಂಬಲ ನೀಡಿದರೆ, ಅವರ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿಯ ಮೇಲೆ ಅಣೆ ಮಾಡಿ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಆಶ್ವಾಸನೆ ನೀಡಿದ್ದರು. ಅದರಂತೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದರಿಂದ ಈ ಸಮಾಜದ ಬೇಡಿಕೆ ಈಡೇರಿಸಬೇಕು ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿದ್ದು, ಪ್ರಣಾಳಿಕೆಯಲ್ಲಿ ತಿಳಿಸಿರುವಂತೆ ವಿಶ್ವಕರ್ಮ ಪ್ರಾಧಿಕಾರ ರಚಿಸಬೇಕು. ವಿಶ್ವಕರ್ಮ ಜಯಂತಿಯನ್ನು ಸರ್ಕಾರ ಹಬ್ಬವಾಗಿ ಆಚರಿಸಬೇಕು ಹಾಗೂ ಆ ದಿನ ರಜಾ ಘೋಷಿಸಬೇಕು. ಸಮಾಜದ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಪ್ಪಿಸಬೇಕು. ಅಲ್ಲದೆ ಹಿಂದುಳಿದ ವರ್ಗಗಳಿಗೆ ನೀಡಿರುವ ಶೇ. 15 ಮೀಸಲಾತಿಯಲ್ಲಿ ಈ ಜನಾಂಗಕ್ಕೆ ಪ್ರತ್ಯೇಕ ಶೇ. 3 ಮೀಸಲಾತಿ ನಿಗದಿ ಪಡಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ಅವರು ಆಗ್ರಹಿಸಿದರು.    
ಕೀಳರಿಮೆ ಬಿಡಿ: ಸಮಾಜದ ಎಲ್ಲಾ ರಂಗಗಳಲ್ಲಿಯೂ ಹಿಂದುಳಿದಿರುವ ವಿಶ್ವಕರ್ಮ ಜನಾಂಗ ರಾಜಕೀಯವಾಗಿ ಮುಂದೆ ಬರಬೇಕಿದೆ. ನಾವು ವಿಶ್ವಕರ್ಮ ಎಂದು ಹೇಳಿಕೊಳ್ಳಲು ಕೀಳರಿಮೆ ತೋರಬಾರದು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಅವರನ್ನು ಇತರರಂತೆ ಮುಖ್ಯ ವಾಹಿನಿಗೆ ತರಬೇಕು. ಇದರ ಜತೆಗೆ ತಮ್ಮ ಕುಲಕಸುಬನ್ನು ರೂಢಿಸಬೇಕು ಎಂದರು.
ನಾಡಿನ ವಿವಿಧ ಭಾಗಗಳಲ್ಲಿ 35 ಲಕ್ಷ ಮಂದಿ ವಿಶ್ವಕರ್ಮ ಜನರಿದ್ದು, ಅವರನ್ನು ಸಂಘಟಿಸುವ ಸಲುವಾಗಿ ಪ್ರತಿ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿಯೂ ಯುವಶಕ್ತಿ ಶಿಬಿರವನ್ನು ನಡೆಸಬೇಕು. ಸಮಾಜ ಹಾಗೂ ಸಂಘಟನೆಯ ಬಗ್ಗೆ ತಿಳಿಸಿಕೊಡಬೇಕು. ನಾನು ಸಹಾ ನಿಮ್ಮ ಬೆಂಬಲಕ್ಕೆ ಇರುತ್ತೇನೆ. ಯುವ ಸೇನೆ ಸಮಾಜದ ಪ್ರಗತಿಗೆ ಶ್ರಮಿಸಲಿ ಎಂದು ಅವರು ಕರೆ ನೀಡಿದರು.
ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎನ್. ಚಂದ್ರು ವಿಶ್ವಕರ್ಮ, ಯುವಸೇನೆ ರಾಜ್ಯಾಧ್ಯಕ್ಷ ಶಿವಶಂಕರ್ ಎ. ವಿಶ್ವಕರ್ಮ, ಉಪಾಧ್ಯಕ್ಷ ಉದಯ ಬಡಿಗೇರ, ಪ್ರಧಾನ ಕಾರ್ಯದರ್ಶಿ ಎಚ್. ರವಿ, ಖಜಾಂಚಿ ಎಸ್.ಡಿ. ಜಯಚಂದು, ಸಹಕಾರ್ಯದರ್ಶಿ ಎಸ್. ರವಿಕುಮಾರ್, ಸಂಚಾಲಕ ಎಚ್.ಪಿ. ಪರಮೇಶ್, ಮುಖಂಡರಾದ ಗಣೇಶ್ ಮಾಯಾಚಾರಿ, ವಿಜಯಾನಂದ ಕಮ್ಮಾರ್, ಶಿವಾನಂದ ಬಡಗೇರ, ಪ್ರಕಾಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.