ನಾಲಾ ಆಧುನೀಕರಣ ಕಾಮಗಾರಿ ತ್ವರಿತಗೊಳಿಸಿ
ಕ.ಪ್ರ.ವಾರ್ತೆ ಕೆ.ಆರ್. ನಗರ ಜೂ. 18
ತಾಲೂಕು ವ್ಯಾಪ್ತಿಯ ಚಾಮರಾಜ, ರಾಮಸಮುದ್ರ ಮತ್ತು ಕಟ್ಟೆಪುರ ನಾಲೆಗಳಿಗೆ ಜು. 15 ರಂದು ಪ್ರಸಕ್ತ ಹಂಗಾಮಿಗೆ ನೀರು ಹರಿಸಬೇಕಾಗಿರುವುದರಿಂದ, ಈ ಅವಧಿಯೊಳಗೆ ಈಗ ಕೈಗೊಂಡಿರುವ ಆಧುನೀಕರಣ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಶಾಸಕ ಸಾ.ರಾ. ಮಹೇಶ್ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ತಾಪಂ ಸಭಾಂಗಣದಲ್ಲಿ ನಡೆದ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ನಾಲಾ ಆಧುನೀಕರಣ ಕಾಮಗಾರಿಯ ಸಂದರ್ಭದಲ್ಲಿ ರೈತರ ಜಮೀನಿನಲ್ಲಿ ಹಾಕಿರುವ ಕಲ್ಲು ಮತ್ತು ಮಣ್ಣಿನ ರಾಶಿಯನ್ನು ತೆರವುಗೊಳಿಸಿ ಎರಡು ಕಡೆಗಳಲ್ಲಿ ಸಂಚಾರಕ್ಕೆ ಅನುಕೂಲವಾಗುವಂತೆ ಏರಿ ನಿರ್ಮಾಣ ಮಾಡಬೇಕು ಎಂದು ತಾಕೀತು ಮಾಡಿದರು.
ನಾಲೆಗಳ ಆಧುನೀಕರಣ ಕಾಮಗಾರಿಗೆ 300 ಕೋಟಿ ರು. ವೆಚ್ಚ ಮಾಡುತ್ತಿದ್ದು, ಅಧಿಕಾರಿ ವರ್ಗದವರು, ಸಾರ್ವಜನಿಕರು ಮತ್ತು ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಸಲಹೆ ಸೂಚನೆಗಳನ್ನು ಪರಿಗಣಿಸಿ ಕೆಲಸ ಮಾಡಬೇಕು. ನಾಲೆಗೆ ನೀರು ಹರಿಸಿದ ನಂತರ ಏರಿ ಒಡೆದರೆ, ಇತರೆ ತೊಂದರೆಯಾದರೆ ಸಂಬಂಧಿಸಿದ ವಿಭಾಗದ ಎಂಜಿನಿಯರುಗಳೆ ಜವಾಬ್ದಾರರಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಶ್ರೀರಾಮಪುರ ಗ್ರಾಮದ ಬಳಿ ಉಪನಾಲೆಯ ಕಾಮಗಾರಿಯ ಲೈನಿಂಗ್ ಕಳಪೆಯಾಗಿದ್ದು, ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಲಾಗಿದೆ. ಕೂಡಲೆ ಅದನ್ನು ತೆರವುಗೊಳಿಸಿ ಹೊಸದಾಗಿ ಲೈನಿಂಗ್ ಕಾಮಗಾರಿ ನಿರ್ವಹಿಸಬೇಕು, ನಾನು ಮತ್ತೆ ಬಂದು ಪರಿಶೀಲನೆ ನಡೆಸಿ ಅನುಮತಿ ನೀಡಿದ ನಂತರವೆ ಕಾಮಗಾರಿ ಆರಂಭಿಸಬೇಕು ಮತ್ತು ಅಂಕನಹಳ್ಳಿ ಕೆರೆ ಒತ್ತುವರಿ ತೆರವುಗೊಳಿಸಿ ಎಂದು ಅವರು ಸೂಚಿಸಿದರು.
ನಾಲಾ ಕಾಮಗಾರಿ ನಡೆಯುವಾಗ ಸಂಬಂಧಿತ ವಿಭಾಗದ ಎಂಜಿನಿಯರ್ಗಳು ಸ್ಥಳದಲ್ಲಿ ಹಾಜರಿದ್ದು, ಗುಣಮಟ್ಟದ ಕಾಮಗಾರಿ ನಿರ್ವಹಿಸುವಂತೆ ಕ್ರಮವಹಿಸಬೇಕು ಮತ್ತು ಕಾಲ ಕಾಲಕ್ಕೆ ತಮಗೆ ವರದಿ ಸಲ್ಲಿಸಬೇಕು ಎಂದರಲ್ಲದೆ, ಕಾಮಗಾರಿ ನಿರ್ವಹಣೆಯ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬಂದರೆ, ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದರು.
ರೈತರಿಂದ ಅಹವಾಲು ಸ್ವೀಕರಿಸಿದ ಶಾಸಕರು, ಅಗತ್ಯವಿರುವೆಡೆ ಕಾಮಗಾರಿ ನಿರ್ವಹಿಸಿ ರೈತರಿಗೆ ಅನುಕೂಲ ಕಲ್ಪಿಸುವುದರ ಜತೆಗೆ, ನಾಲಾ ಏರಿಗಳ ಮೇಲೆ ಸಂಚರಿಸಿ ಅಗತ್ಯ ಕಾಮಗರಿಗಳಿಗೆ ಆದ್ಯತೆ ನೀಡಿ ಈಗ ಆರಂಭಿಸಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಮತ್ತು ನನ್ನ ಗಮನಕ್ಕೆ ತಾರದೆ ಹೊಸ ಕಾಮಗಾರಿಗಳನ್ನು ಆರಂಭಿಸಬಾರದು ಎಂದು ಆದೇಶಿಸಿದರು.
ಹಾರಂಗಿ ವೃತ್ತ ಎಂಜಿನಿಯರ್ ಸತ್ಯನಾರಾಯಣ, ಸಾಲಿಗ್ರಾಮ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಲಕ್ಷ್ಮೀಶ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾದಿಕ್ಖಾನ್, ಮಾಜಿ ಅಧ್ಯಕ್ಷೆ ಹೇಮಾವತಿ ಅಶೋಕ್, ಮಾಜಿ ಉಪಾಧ್ಯಕ್ಷರಾದ ಮೇಲೂರು ಕೃಷ್ಣೇಗೌಡ, ಹಾಡ್ಯ ಮಹದೇವಸ್ವಾಮಿ, ಪುರಸಭಾ ಸದಸ್ಯ ಪಿ. ವಿನಯ್, ಹಾರಂಗಿ ನೀರು ಬಳಕೆದಾರರ ಸಹಕಾರ ಸಂಘದ ಉಪಾಧ್ಯಕ್ಷ ಹಾಡ್ಯಮಹದೇವಪ್ಪ, ಮೈಮುಲ್ ಮಾಜಿ ಅಧ್ಯಕ್ಷ ಎ.ಟಿ. ಸೋಮಶೇಖರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

