'ನಂಜು'ನಗೂಡು ಗ್ರಂಥಾಲಯಕ್ಕೆ ನಿವೇಶನ ನಿರ್ಭಾಗ್ಯ
ಕ.ಪ್ರ.ವಾರ್ತೆ ಮೈಸೂರು ಜೂ. 19
ಮೈಸೂರು ಜಿಲ್ಲೆಯಲ್ಲಿ ನಂಜನಗೂಡು ತಾಲೂಕಿಗೆ ವಿಶಿಷ್ಟ ಸ್ಥಾನವಿದೆ. ಕೇವಲ ಸಾಮಾಜಿಕವಾಗಿ ಮಾತ್ರವಲ್ಲದೆ, ಕೈಗಾರಿಕಾ, ಶೈಕ್ಷಣಿಕ, ಆರ್ಥಿಕ ಅಭಿವೃದ್ಧಿ ಮತ್ತು ಪ್ರವಾಸೋದ್ಯಮ ಕ್ಷೇತ್ರದ ಕಾರಣದಿಂದಲೂ ಪ್ರಸಿದ್ಧವಾಗಿದೆ.
ಜಿಲ್ಲಾ ಕೇಂದ್ರಕ್ಕೆ ಅತಿ ಸಮೀಪದಲ್ಲಿರುವ ತಾಲೂಕು ಕೇಂದ್ರಗಳಲ್ಲಿ ನಂಜನಗೂಡು ಮುಂಚೂಣಿಯಲ್ಲಿರುವುದರಿಂದ ಇಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ.
ಇಷ್ಟೊಂದು ಅಭಿವೃದ್ಧಿ ಹೊಂದಿದ ನಂಜನಗೂಡಿನ ಪುರಸಭೆಗೆ ಆದಾಯಕ್ಕಾಗಲಿ ಅಥವಾ ಸ್ಥಳಕ್ಕಾಗಲಿ ಕೊರತೆ ಇಲ್ಲ. ಆದರೂ ಇಲ್ಲಿನ ಶಾಖಾ ಗ್ರಂಥಾಲಯಕ್ಕೆ ನಿವೇಶನ ನೀಡಿಲ್ಲ.
ಗ್ರಾಮೀಣ ಅಭಿವೃದ್ಧಿ ಮತ್ತು ಶಿಕ್ಷಣಕ್ಕೆ ಮಹತ್ವ ನೀಡಬೇಕು ಎಂದು ಹೇಳಿದ ಮಹಾತ್ಮ ಗಾಂಧೀಜಿ ಬಂದು ಹೋದ ಇಲ್ಲಿ ಗ್ರಂಥಾಲಯಕ್ಕಾಗಿ ಒಂದಿಂಚೂ ಜಾಗ ನೀಡಿಲ್ಲದ ಅಪಕೀರ್ತಿಯೂ ಇದೆ. ಈ ಮುಂಚೆ ಪುರಸಭಾ ಕಚೇರಿ ಹಿಂಬದಿಯ ಕೊಠಡಿಯೊಂದರಲ್ಲಿ ಇಲ್ಲಿನ ಶಾಖಾ ಗ್ರಂಥಾಲಯ ನಡೆಯುತ್ತಿತ್ತು. ಸಾಕಷ್ಟು ಮಂದಿ ಇಲ್ಲಿಗೆ ಭೇಟಿ ನೀಡುತ್ತಿದ್ದರು. ತೀರ ಹಳೆಯದಾದ ಈ ಕೊಠಡಿ ಮಳೆಗೆ ಸೋರಲಾರಂಭಿಸಿತು. ಮಳೆ ನೀರು ಬಿದ್ದು ನೂರಾರು ಪುಸ್ತಕಗಳು ಹಾಳಾಯಿತು. 2009-10ನೇ ಸಾಲಿನಲ್ಲಿ ಈ ಪುಸ್ತಕಗಳನ್ನೆಲ್ಲಾ ವಿಲೇವಾರಿ ಮಾಡಲಾಯಿತು.
ಬೆಳಕಿಲ್ಲದ ಕಿರು ಕೊಠಡಿ: ನಂತರ ಈ ಕಟ್ಟಡದಲ್ಲಿ ಗ್ರಂಥಾಲಯ ನಡೆಸುವುದೆ ಕಷ್ಟ ಎಂದಾದಾಗ ಗ್ರಂಥಾಲಯಕ್ಕೆ ತಕ್ಕದಾದ ಕಟ್ಟಡದ ಅನ್ವೇಷಣೆ ಆರಂಭವಾಯಿತು. ಆಗ ಕಲಾಮಂದಿರದ ಕೆಳ ಅಂತಸ್ತಿನ ಕೊಠಡಿಯೊಂದನ್ನು ಬಾಡಿಗೆ ರಹಿತವಾಗಿ ಪಡೆಯಲು ತೀರ್ಮಾನಿಸಲಾಯಿತು.
ಆದರೆ ಆ ಕೊಠಡಿ ಕಿರಿದಾಗಿದ್ದು, ಬೆಳಕು ಕಡಿಮೆ ಇದೆ. ಆದ್ದರಿಂದ ತಾತ್ಕಾಲಿಕವಾಗಿ ಆ ಕಟ್ಟಡ ಬಳಸಿಕೊಳ್ಳಬಹುದೆ ಹೊರತು ಶಾಶ್ವತ ಬಳಕೆ ಸಾಧ್ಯವಿಲ್ಲ ಎಂಬುದು ಇಲಾಖೆಗೆ ನಿಶ್ಚಿತವಾಯಿತು. ಈ ಮಧ್ಯೆ ನಂಜನಗೂಡಿನ ನಾಗಮ್ಮ ಶಾಲೆ ಆವರಣದಲ್ಲಿ ಗಾಂಧಿಭವನ ನಿರ್ಮಿಸಲು ಉದ್ದೇಶಿಸಿ ಕಟ್ಟಡ ಕಾಮಗಾರಿ ಆರಂಭಗೊಂಡಿದೆ. ಆದರೆ ಪಟ್ಟಣದಲ್ಲಿ ಆರಂಭಗೊಂಡು ಅಂತ್ಯ ಕಾಣದ ಅನೇಕ ಕಾಮಗಾರಿಯಂತೆ ಇದೂ ಸಹ ಅರ್ಧಕ್ಕೆ ನಿಂತಿದೆ.
ಎಂದೋ ಆಗೊಮ್ಮೆ ಈಗೊಮ್ಮೆ ಬಿಡುಗಡೆಯಾಗುವ ಅಲ್ಪಸಲ್ಪ ಅನುದಾನದೊಂದಿಗೆ ಕಾಮಗಾರಿ ನಡೆಯಬೇಕಿದೆ. ಇಲ್ಲಿ ಗಾಂಧಿಭವನಕ್ಕೆ ಸೇರಿದ ಗ್ರಂಥಾಲಯ ನಿರ್ಮಿಸುವ ಉದ್ದೇಶ ಇದೆ. ಇದನ್ನು ಅರಿತು ಒಂದೊಮ್ಮೆ ಇದೇ ಗ್ರಂಥಾಲಯಕ್ಕೆ ಸಾರ್ವಜನಿಕ ಗ್ರಂಥಾಲಯ ಸ್ಥಳಾಂತರಿಸಲು ತೀರ್ಮಾನಿಸಲಾಗಿತ್ತು. ಆದರೆ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರವು ಗಾಂಧಿಭವನದ ಹೆಸರಿನಲ್ಲಿ ನಿರ್ಮಿಸುತ್ತಿರುವ ಗ್ರಂಥಾಲಯ ಸಾರ್ವಜನಿಕ ಗ್ರಂಥಾಲಯವಾಗಲು ಸಾಧ್ಯವಿಲ್ಲ. ಮುಂದೊಂದು ದಿನ ಗ್ರಂಥಾಲಯ ವಿಸ್ತರಣೆಗೆ ಅವಕಾಶ ಆಗುವುದಿಲ್ಲ ಎಂಬ ಕಾರಣಕ್ಕೆ ಗ್ರಂಥಾಲಯ ಇಲಾಖೆಗೆ ಪ್ರತ್ಯೇಕ ನಿವೇಶನ ನೀಡುವಂತೆ ಪುರಸಭೆ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಗೆ ಪತ್ರ ಬರೆದಿದ್ದಾರೆ.
ಈ ಪತ್ರಕ್ಕೆ ಇನ್ನೆಷ್ಟು ದಿನದಲ್ಲಿ ಕಿಮ್ಮತ್ತಿನ ಬೆಲೆ ಸಿಗುವುದೋ, ನಿವೇಶನ ದೊರಕಿ ಕಟ್ಟಡ ನಿರ್ಮಾಣವಾಗುವುದೋ ಕಾದು ನೋಡಬೇಕು.
ಡಿ.ಎನ್. ಮಹೇಂದ್ರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

